ಇಂಡಿಗೋ ವಿಮಾನ ಸಂಸ್ಥೆ ಎದುರಿಸುತ್ತಿರುವ ಕಾರ್ಯಾಚರಣೆಗೆ ಬಿಟ್ಟಿಗೆ ಕೇಂದ್ರ ಸರ್ಕಾರದ ‘ಏಕಸ್ವಾಮ್ಯ ನೀತಿ’ಯೇ ಕಾರಣ. ದೇಶದಲ್ಲಿ ‘ಮ್ಯಾಚ್ ಫಿಕ್ಸಿಂಗ್’ ನಡೆಯುತ್ತಿದೆ. ಕೇಂದ್ರ ಸರ್ಕಾರವು ಇದರ ರೂವಾರಿಯಾಗಿದೆ. ಭಾರತವು ‘ಮ್ಯಾಚ್ ಫಿಕ್ಸಿಂಗ್ ಏಕಸ್ವಾಮ್ಯ’ಕ್ಕೆ ಮಿಗಿಲಾಗಿ ಪ್ರತಿಯೊಂದು ವಲಯದಲ್ಲೂ ನ್ಯಾಯಯುತ ಸ್ಪರ್ಧೆಯಲ್ಲಿ ಮುನ್ನಡೆಯುವ ಅರ್ಹತೆ ಹೊಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ವಿಮಾನಯಾನ ಸಂಸ್ಥೆ ಇಂಡಿಗೋ ಗುರುವಾರ 550 ಮತ್ತು ಶುಕ್ರವಾರ 400 ವಿಮಾನಗಳನ್ನು ರದ್ದುಗೊಳಿಸಿದೆ. ಪರಿಣಾಮ, ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಇಷ್ಟು ಪ್ರಮಾಣದ ವಿಮಾನ ಸಂಚಾರವು ಸ್ಥಗಿತಗೊಂಡ ಬೆನ್ನಲ್ಲೇ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಇಂತಹ ಬಿಕ್ಕಟ್ಟಿನಿಂದ ಪ್ರಯಾಣಿಕರು ಅಸಹಾಯಕತೆಯ ಹೊರೆ ಹೊರುವಂತಾಗಿದೆ ಎಂದಿದ್ದಾರೆ.
“ಇಂಡಿಗೋ ಬಿಕ್ಕಟ್ಟಿಗೆ ಸರ್ಕಾರದ ಏಕಸ್ವಾಮ್ಯ ನೀತಿಯೇ ಕಾರಣ. ಮತ್ತೊಮ್ಮೆ, ವಿಳಂಬ, ರದ್ದತಿ ಮತ್ತು ಅಸಹಾಯಕತೆಗೆ ಸಾಮಾನ್ಯ ಭಾರತೀಯರು ಬೆಲೆ ತೆರಬೇಕಾಗಿದೆ” ಎಂದಿದ್ದಾರೆ.
ಇತ್ತೀಚೆಗೆ, ಕೇಂದ್ರ ಸರ್ಕಾರವು ಜಾರಿಗೊಳಿಸಿದ ವಿಮಾನ ಸಿಬ್ಬಂದಿಗಳ ವಿರಾಮ ಅವಧಿ ಕುರಿತಾದ FDTL ಮಾನದಂಡಗಳಿಂದ ಇಂಡಿಗೋ ಸಂಸ್ಥೆಯು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಸಿಬ್ಬಂದಿಗಳಿಗೆ ನಿಗದಿತ ಸಮಯಗಳಷ್ಟು ವಿರಾಮ ನೀಡಬೇಕಿರುವುದರಿಂದ ಎಲ್ಲ ವಿಮಾನಗಳ ಹಾರಾಟವನ್ನು ನಿರ್ವಹಿಸಲು ಇಂಡಿಗೋ ಹೆಣಗಾಡುತ್ತಿದೆ. ಪರಿಣಾಮವಾಗಿ, ನೂರಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.
2026ರ ಫೆಬ್ರವರಿ 10ರ ವೇಳೆಗೆ ಇಂಡಿಗೋ ಸ್ಥರತೆ ಕಾಣಬಹುದಾದ ನಿರೀಕ್ಷೆಗಳಿವೆ ಎಂದು ಹೇಳಲಾಗಿದೆ.




