ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿದಿದೆ. ಅಧಿವೇಶನ ಕೊನೆಗೊಂಡ ಶುಕ್ರವಾರ (ಡಿ.19) ಸಂಜೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಾಂಪ್ರದಾಯಿಕ ಚಹಾ ಕೂಟ ಏರ್ಪಡಿಸಿದ್ದರು. ಕೂಟದಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿಪಕ್ಷಗಳ ಹಲವು ನಾಯಕರು ಭಾಗಿಯಾಗಿದ್ದರು. ಚಹಾ ಕೂಟವು ಅಪರೂಪದ ರಾಜಕೀಯ ಕ್ಷಣವನ್ನು ಸೃಷ್ಟಿಸಿತು. ಆಡಳಿತ ಮತ್ತು ವಿಪಕ್ಷ ನಾಯಕರ ದೃಷ್ಟಿಯು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರತ್ತ ಕೇಂದ್ರೀಕೃತವಾಗಿತ್ತು. ವೈರಲ್ ಆಗಿರುವ ಆ ಚಿತ್ರದಲ್ಲಿ ಪ್ರಿಯಾಂಕಾ ಅವರ ಶಾಂತ ನಗುಮೊಗ ಮತ್ತು ಸೌಹಾರ್ದಪೂರ್ಣ ಹಾವಭಾವಗಳು ರಾಜಕಾರಣದಲ್ಲಿ ಹೊಸ ನಾಯಕಿಯ ಉದಯವನ್ನು ಸೂಚಿಸುತ್ತಿತ್ತು.
ಅಧಿವೇಶನದ ಸಮಯದಲ್ಲಿ ಲೋಕಸಭೆಯು ಮನರೇಗಾ ರದ್ದತಿ, ವಿಬಿ-ಜಿ ರಾಮ್ ಜಿ ಮಸೂದೆ, ಅಣು ವಿದ್ಯುತ್ ಕ್ಷೇತ್ರದ ಖಾಸಗೀಕರಣ, ಉನ್ನತ ಶಿಕ್ಷಣವನ್ನು ಹೈಜಾಕ್ ಮಾಡುತ್ತಿರುವ ಕೇಂದ್ರ ಸರ್ಕಾರ, ವಂದೇ ಮಾತರಂ ಚರ್ಚೆಗಳು ವಿರೋಧ, ವಾಗ್ದಾಳಿ, ಆರೋಪ-ಪ್ರತ್ಯಾರೋಪಗಳು ಹಾಗೂ ಗದ್ದಲದಲ್ಲಿ ಮುಳುಗಿತ್ತು. ಅಧಿವೇಶನ ಮುಗಿದ ಬಳಿಕ, ನಡೆದ ಸ್ಪೀಕರ್ ಓಂ ಬಿರ್ಲಾ ನೇತೃತ್ವದ ಚಹಾ ಕೂಟವು ರಾಜಕೀಯ ಎದುರಾಳಿಗಳನ್ನು ಒಂದೇ ವೇದಿಕೆಗೆ ತಂದಿತ್ತು. ಪ್ರಿಯಾಂಕಾ ಅವರು ರಾಜನಾಥ್ ಸಿಂಗ್ ಅವರ ಪಕ್ಕದಲ್ಲಿ, ಪ್ರಧಾನಿ ಮೋದಿ ಮತ್ತು ಬಿರ್ಲಾ ಅವರ ಎದುರಾಗಿ ಕುಳಿತಿದ್ದರು. ಆತ್ಮೀಯತೆಯಿಂದ ಸಂಭಾಷಣೆ ನಡೆಸಿದ್ದರು. ಪ್ರಿಯಾಂಕಾ ಅವರು ವಯನಾಡಿನ ಒಂದು ಗಿಡಮೂಲಿಕೆ ಬಗ್ಗೆ ಹೇಳಿದ ಕಥೆಯು ಸಭೆಯಲ್ಲಿದ್ದವರನ್ನು ರಂಜಿಸಿತು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್‌ನಿಂದ ಮೊದಲ ಬಾರಿಗೆ ಸಂಸದರಾಗಿ ಲೋಕಸಭೆಗೆ ಪ್ರವೇಶಿಸಿದ ಬಳಿಕ, ಅಧಿವೇಶನದಲ್ಲೇ ತಮ್ಮ ಮಾತುಗಾರಿಕೆಯಿಂದ ಸಹೋದ್ಯೋಗಿ ಸಂಸದರ ಗಮನ ಸೆಳೆದಿದ್ದಾರೆ. ಅವರ ಭಾಷಣಗಳು ಸಂರಚಿತ, ತರ್ಕಬದ್ಧ ಹಾಗೂ ಶಾಂತಚಿತ್ತದಿಂದ ಕೂಡಿವೆ. ಕೇಳುಗರ ಗಮನ ಸೆಳೆದಿವೆ. ವಂದೇ ಮಾತರಂ, ಮನಗೇರಾ, ಅಣು ವಿದ್ಯುತ್ ಖಾಸಗೀಕರಣ, ದೆಹಲಿ ವಾಯು ಮಾಲಿನ್ಯ ಹಾಗೂ ವಯನಾಡು ಹೆದ್ದಾರಿ ಸಮಸ್ಯೆ ಕುರಿತ ಚರ್ಚೆಯಲ್ಲಿ ಅವರ ಮಾತುಗಳು ಹೆಚ್ಚು ಪ್ರಭಾವಯುತವಾಗಿದ್ದವೆಂದು ಸಂಸದರೇ ಮೆಚ್ಚಿದರು. ಇದು ರಾಹುಲ್ ಗಾಂಧಿ ಅವರ ಆಕ್ರಮಣಕಾರಿ ಶೈಲಿಗೆ ಭಿನ್ನವಾಗಿ, ಹೆಚ್ಚು ಸೌಮ್ಯ ಮತ್ತು ಆಕರ್ಷಣೀಯವಾಗಿ ಕಂಡುಬಂದಿದೆ.
ಲೋಕಸಭೆಯಲ್ಲಿ VB-G RAM G ಮಸೂದೆಯನ್ನು ವಿರೋಧಿಸಿದ ಪ್ರಿಯಾಂಕಾ ಗಾಂಧಿ, ”ಗ್ರಾಮೀಣ ಭಾರತಕ್ಕೆ ಜೀವನೋಪಾಯವನ್ನು ಒದಗಿಸುವಲ್ಲಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ 20 ವರ್ಷಗಳಿಂದ ಮನರೇಗಾ ಯಶಸ್ವಿಯಾಗಿದೆ. ಇದು ಎಷ್ಟು ಕ್ರಾಂತಿಕಾರಿ ಕಾನೂನೆಂದರೆ, ಇದನ್ನು ತಂದಾಗ, ಸಂಸತ್ತಿನಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಒಮ್ಮತದಿಂದ ಇದನ್ನು ಬೆಂಬಲಿಸಿದ್ದವು. ಆದರೆ, ಈಗ ಮನರೇಗಾವನ್ನು ಬುಡಮೇಲು ಮಾಡಲಾಗುತ್ತಿದೆ. ಗ್ರಾಮೀಣ ಜನರ ಉದ್ಯೋಗ ಕಸಿದುಕೊಳ್ಳಲಾಗುತ್ತಿದೆ. ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೇರಲಾಗುತ್ತಿದೆ. ಪ್ರತಿಯೊಂದು ಯೋಜನೆಯ ಹೆಸರನ್ನು ಬದಲಾಯಿಸುವ ‘ಹುಚ್ಚು’ ಕೇಂದ್ರ ಸರ್ಕಾರಕ್ಕಿದೆ. ಇಂತಹ ಕ್ರಮಗಳು ಜನರ ಹಣವನ್ನು ವ್ಯರ್ಥ ಮಾಡುತ್ತವೆ. ಚರ್ಚೆಯಿಲ್ಲದೆ, ಸದನದ ಸಲಹೆಯನ್ನು ಪಡೆಯದೆ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಬಾರದು. ಈ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು. ಮಹಾತ್ಮ ಗಾಂಧಿ ನನ್ನ ಕುಟುಂಬದವರಲ್ಲ. ಆದರೆ, ಅವರು ನನ್ನ ಕುಟುಂಬದ ಸದಸ್ಯರಿದ್ದಂತೆ. ಗಾಂಧಿ ಅವರನ್ನು ಇಡೀ ದೇಶವು ಅದೇ ರೀತಿ ಭಾವಿಸುತ್ತದೆ” ಎಂದು ಮಾರ್ಮಿಕವಾಗಿ ಹೇಳಿದ್ದರು.
ವಂದೇ ಮಾತರಂ ಚರ್ಚೆಯ ವೇಳೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಿಯಾಂಕಾ ಗಾಂಧಿ, ”ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದಿರುವಾಗ, ಚರ್ಚಿಸಲು ಅನೇಕ ಮಹತ್ವದ ವಿಷಯಗಳಿವೆ. ಆದರೆ, ಸದನವು ರಾಷ್ಟ್ರೀಯ ಗೀತೆಯ ಬಗ್ಗೆ ಏಕೆ ಚರ್ಚೆ ನಡೆಸುತ್ತಿದೆ. ನಾವು ಚರ್ಚಿಸುತ್ತಿರುವ ವಿಷಯವು ದೇಶದ ಆತ್ಮದ ಭಾಗವಾಗಿದೆ. ನಾವು ‘ವಂದೇ ಮಾತರಂ’ ಹೇಳಿದಾಗ ಅದು ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸುತ್ತದೆ. ಈ ಹಾಡು ಜನರ ಹೃದಯದಲ್ಲಿ ಸ್ಥಾನ ಪಡೆದಿದೆ. ಹೀಗಿರುವಾಗ ಈ ಚರ್ಚೆಯ ಅಗತ್ಯವೇನು? ಚರ್ಚೆಯಾಗಬೇಕಿರುವುದು, ದೇಶದ ಅಭಿವೃದ್ಧಿಗಾಗಿ ನಮ್ಮ ಯೋಜನೆಯೇನು? ಜನರ ಬಗ್ಗೆ ನಮ್ಮ ಹೊಣೆಗಾರಿಕೆ ಏನು? ನಾವು ಅದನ್ನು ಹೇಗೆ ಪೂರೈಸುತ್ತಿದ್ದೇವೆ ಎಂಬುದರ ಬಗ್ಗೆ ಚರ್ಚೆಯಾಗಬೇಕು. ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ವಂದೇ ಮಾತರಂ ಕುರಿತು ಚರ್ಚೆ ನಡೆಸುತ್ತಿದೆ. ವರ್ತಮಾನ ಮತ್ತು ಭವಿಷ್ಯವನ್ನು ನೋಡಲು ಬಯಸದ ಕಾರಣ ಭೂತಕಾಲದ ಬಗ್ಗೆ ಅಧ್ಯಯನ ಮಾಡಲು ಮುಂದಾಗಿದೆ” ಎಂದು ವಾಗ್ದಾಳಿ ನಡೆಸಿದ್ದರು.
ಈ ಲೇಖನ ಓದಿದ್ದೀರಾ?: ದೇಶದ ಮುಸ್ಲಿಮರ ಮೇಲೆ ಇಲ್ಲದ ಪ್ರೀತಿ, ವಿದೇಶಿ ಮುಸ್ಲಿಮರ ಮೇಲ್ಯಾಕೆ ಮೋದೀಜಿ?
ಅಧಿವೇಶನಕ್ಕೂ ಮುನ್ನ, ‘ಸದನ ಇರುವುದು ಗದ್ದಲ ಸೃಷ್ಟಿಸಲು ಅಲ್ಲ. ನಾಟಕ ಮಾಡಲು ಸಾಕಷ್ಟು ಸ್ಥಳಗಳಿವೆ’ ಎಂದಿದ್ದ ಮೋದಿ ಅವರಿಗೆ ತೀಕ್ಷ್ಣವಾಗಿ ಉತ್ತರಿಸಿದ್ದ ಪ್ರಿಯಾಂಕಾ ಗಾಂಧಿ, ”ಸಂಸತ್ತಿನಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧಿವೇಶನದಿಂದ ಓಡಿ ಹೋಗುವುದು, ಚರ್ಚೆಯನ್ನು ತಪ್ಪಿಸುವುದು ನಿಜವಾದ ನಾಟಕ. ಹಣದುಬ್ಬರ ಮತ್ತು ಮಾಲಿನ್ಯದಂತಹ ಸಾರ್ವಜನಿಕ ವಿಷಯಗಳ ಕುರಿತು ಚರ್ಚೆಗಳನ್ನು ತಪ್ಪಿಸುವುದು ನಿಜವಾದ ನಾಟಕ. ಸಂಸತ್ತಿನಲ್ಲಿ ಸಮಸ್ಯೆಗಳನ್ನು ಎತ್ತುವುದು ನಾಟಕವಲ್ಲ. ಚುನಾವಣಾ ಪರಿಸ್ಥಿತಿ, ಮಾಲಿನ್ಯವು ದೇಶದ ಪ್ರಮುಖ ವಿಷಯವಾಗಿದೆ. ಅದನ್ನು ಚರ್ಚಿಸೋಣ. ಸಂಸತ್ತು ಇರುವುದು ಯಾವುದಕ್ಕಾಗಿ? ಇದು ನಾಟಕವಲ್ಲ. ಸಮಸ್ಯೆಗಳ ಕುರಿತು ಮಾತನಾಡುವುದು ಮತ್ತು ಪ್ರಶ್ನೆಗಳನ್ನು ಎತ್ತುವುದು ನಾಟಕವಲ್ಲ. ಪ್ರಜಾಪ್ರಭುತ್ವದ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡದಿರುವುದು ಮತ್ತು ಅವುಗಳನ್ನು ಚರ್ಚಿಸದಿರುವುದು ನಾಟಕ” ಎಂದು ಗುಡುಗಿದ್ದರು.
ಹೀಗೆ, ಅಧಿವೇಶನದ ಉದ್ದಕ್ಕೂ ಸದನ ಮತ್ತು ದೇಶದ ಗಮನ ಸೆಳೆದಿದ್ದರು. ನಿರಂತರವಾಗಿ ಸದನದಲ್ಲಿನ ಅವರ ಉಪಸ್ಥಿತಿ ಮತ್ತು ಮಾತುಗಾರಿಕೆಯನ್ನು ಕಂಡ ನೆಟ್ಟಿಗರು ಮತ್ತು ರಾಜಕೀಯ ವಿಶ್ಲೇಷಕರು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಮೊನಚಾದ, ನೇರ-ನಿಷ್ಠುರ ಹಾಗೂ ಆಕ್ರಮಣಕಾರಿ ಶೈಲಿಯೊಂದಿಗೆ ಹೋಲಿಸಿದ್ದಾರೆ. ರಾಹುಲ್ ಅವರು ಕಟು ವಾಸ್ತವಗಳನ್ನು ಆಕ್ರೋಶಪೂರ್ಣ ಭಾಷಣದೊಂದಿಗೆ ಸದನದ ಮುಂದಿಡುತ್ತಿದ್ದರು. ಅವರಂತೆಯೇ, ಪ್ರಿಯಾಂಕಾ ಅವರು ವಸ್ತುನಿಷ್ಠವಾಗಿ ಮಾತನಾಡುತ್ತಿದ್ದಾರೆ. ಪ್ರಿಯಾಂಕಾ ಅವರ ಶಾಂತ, ಸೌಮ್ಯ ಮತ್ತು ಆಕರ್ಷಣೀಯ ಮಾತುಗಳು ರಾಹುಲ್ ಅವರ ಭಾಷಣವನ್ನೂ ಮೀರಿಸುವಂತೆ ಭಾಸವಾಗಿವೆ. ಇಬ್ಬರ ಮಾತುಗಾರಿಕೆಯೂ ಹೆಚ್ಚು ವಸ್ತುನಿಷ್ಠವಾಗಿವೆ ಎಂಬ ಅಭಿಪ್ರಾಯಗಳು ಮೂಡಿವೆ.
ರಾಹುಲ್ ಗಾಂಧಿ ಅವರು ಜರ್ಮನಿ ಪ್ರವಾಸಕ್ಕೆ ತೆರಳಿದ ಬಳಿಕ, ಸದನದಲ್ಲಿ ಕಾಂಗ್ರೆಸ್ ಅನ್ನು ಪ್ರಿಯಾಂಕಾ ಗಾಂಧಿ ಮುನ್ನಡೆಸಿದರು. ರಾಹುಲ್ ಅವರ ಅನುಪಸ್ಥಿತಿಯಲ್ಲಿ ವಿಪಕ್ಷದ ನಾಯಕಿಯಾಗಿ ಕಾಣಿಸಿಕೊಂಡರು. ಆದ್ದರಿಂದಲೇ, ಈ ಹಿಂದಿನ ಅಧಿವೇಶನದಲ್ಲಿ, ಸಂಸದೆಯಾಗಿ ಸದನದಲ್ಲಿ ಮೊದಲ ಬಾರಿಗೆ ಮಾತನಾಡಿದ್ದ ಪ್ರಿಯಾಂಕಾ ಅವರ ಭಾಷಣವನ್ನು ಮೆಚ್ಚಿದ್ದ ರಾಹುಲ್ ಗಾಂಧಿ, ‘ಪ್ರಿಯಾಂಕಾ ಅವರ ಭಾಷಣ ನನ್ನ ಮೊದಲ ಭಾಷಣಕ್ಕಿಂತ ಅತ್ಯುತ್ತಮವಾಗಿದೆ’ ಎಂದು ಅಭಿನಂದಿಸಿದ್ದರು.
ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ರಾಜಕೀಯವು ಕಾಂಗ್ರೆಸ್‌ಗೆ ಹೊಸ ಶಕ್ತಿ ನೀಡಿದೆ. ಅವರ ಪ್ರಭಾವಿ ಭಾಷಣಗಳು ರಾಹುಲ್ ಅವರ ಶೈಲಿಗೆ ಪೂರಕವಾಗಿ, ವಿರೋಧ ಪಕ್ಷದ ಧ್ವನಿಯನ್ನು ಬಲಪಡಿಸಿವೆ. ರಾಹುಲ್ ಮತ್ತು ಪ್ರಿಯಾಂಕಾ ಅವರ ಸಂಯೋಜಿತ ಹೋರಾಟವು ಭಾರತೀಯ ರಾಜಕಾರಣದಲ್ಲಿ ಕಾಂಗ್ರೆಸ್ ಹೊಸ ಅಧ್ಯಾಯವನ್ನು ತೆರೆಯುವ ಭರವಸೆಯಾಗಿ ಕಾಣುತ್ತಿದೆ.




