ಚಿಕ್ಕಮಗಳೂರು ಜಿಲ್ಲೆ ಎನ್. ಆರ್ ಪುರ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಕೂಲಿ ಕಾರ್ಮಿಕ ಯಲ್ಲಪ್ಪ ಕಾಡಾನೆ ದಾಳಿ ನಡೆಸಿ ಹತ್ಯೆ ಮಾಡಿತ್ತು ಈ ಕುರಿತು ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದಂತೆ, ಈ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಮೂರು ಕಾಡಾನೆಗಳ ಪೈಕಿ ಒಂದು ಕಾಡಾನೆಯನ್ನು ಸೆರೆಹಿಡಿಯುವುದು ಮತ್ತು ಮತ್ತೊಂದಕ್ಕೆ ರೇಡಿಯೋ ಕಾಲರ್ ಅಳವಡಿಸುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ. ಈ ಮಹತ್ವದ ಕಾರ್ಯಾಚರಣೆಗಾಗಿ ನಾಗರಹೊಳೆ, ಮತ್ತಿಗೋಡು, ದುಬಾರೆ ಮತ್ತು ಸಕ್ರೆಬೈಲು ಆನೆ ಬಿಡಾರಗಳಿಂದ ಒಟ್ಟು ಏಳು ಸಾಕಾನೆಗಳನ್ನು ಕರೆತರಲಾಗಿದ್ದು, ಅವುಗಳ ನೆರವಿನೊಂದಿಗೆ ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಿಶ್ವ ಸಾಮಾಜಿಕ ನ್ಯಾಯ ದಿನ; ಕಾನೂನು ಅರಿವು ಕಾರ್ಯಕ್ರಮ
ಈ ಕುರಿತು ಕೊಪ್ಪ ತಾಲೂಕಿನ ಡಿಎಫ್‌ಒ ಶಿವಶಂಕರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ, ನಾಗರಹೊಳೆಯ ಪಶುವೈದ್ಯ ಡಾ. ರಮೇಶ್, ಮಂಗಳೂರು ವೃತ್ತದ ಡಾ. ಯಶಸ್ವಿ ಮತ್ತು ಶಾರ್ಪ್ ಶೂಟರ್ ರಂಜನ್ ಸೇರಿದಂತೆ ನುರಿತ ತಜ್ಞರ ತಂಡ ಪಾಲ್ಗೊಂಡಿದೆ. ಬಾಳೆಹೊನ್ನೂರು ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಶೃಂಗೇರಿ ಹಾಗೂ ಎನ್.ಆರ್. ಪುರ ವಲಯದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ. ಆಲ್ಲೂರು ಮತ್ತು ಮೂಡಿಗೆರೆ ಭಾಗದ ಆನೆ ಕಾರ್ಯಪಡೆ (ETF) ಸಿಬ್ಬಂದಿ ಸೇರಿದಂತೆ ಸುಮಾರು 50 ರಿಂದ 75 ಮಂದಿ ಅರಣ್ಯ ಸಿಬ್ಬಂದಿ ಸೇರಿ ಕಾರ್ಯಾಚರಣೆ ಆರಂಭಿಸಿದ್ದಾರೆ.





