ಸರ್ಕಾರಿ ಶಾಲೆ ಮಕ್ಕಳಿಗೆ ಶೂ ವಿತರಣೆ ಮಾಡದಿರುವುದನ್ನು ವಿರೋಧಿಸಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿನೂತನವಾಗಿ ಕರುನಾಡ ವಿಜಯಸೇನೆ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದಿಂದ ಬರಿಗಾಲಿನಲ್ಲಿ ಶ್ವಾನಗಳೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.
ಬೀದಿ ನಾಯಿಗಳಿಗೆ ಬಿರಿಯಾನಿ ತಿನಿಸಲು ಹೊರಟಿರುವ ರಾಜ್ಯ ಸರ್ಕಾರ, ಮಕ್ಕಳಿಗೆ ಶೂ ವಿತರಣೆ ಮಾಡದ ಶಿಕ್ಷಣ ಸಚಿವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
ಸರ್ಕಾರಿ ಶಾಲೆಗಳು ಪ್ರಾರಂಭವಾಗಿ ಎರಡು ತಿಂಗಳಾಗಿದ್ದರೂ, ಮಕ್ಕಳಿಗೆ ಶೂ ವಿತರಿಸಿಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ರಮ ಕೈಗೊಂಡಿಲ್ಲ. ಮಕ್ಕಳಿಗೆ ಶೂ ಕೊಡುವವರೆಗೂ ಸಚಿವ ಮಧು ಬಂಗಾರಪ್ಪ ಪಾದರಕ್ಷೆ ಧರಿಸದೆ ಬರಿಗಾಲಿನಲ್ಲಿ ಓಡಾಡಬೇಕು. ಸರ್ಕಾರಿ ವಾಹನ ಬಳಸಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ “ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಒಂದು ನಾಯಿಗೆ 27 ರೂ.ಗಳನ್ನು ವೆಚ್ಚ ಮಾಡುತ್ತಿರುವುದು ಯಾವ ನ್ಯಾಯ?
ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಕ್ಕಳಿಗೆ ಶೂ, ಟೈ ಬೆಲ್ಟ್, ಸಮವಸ್ತ್ರಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಾಲೆಗಳನ್ನು ಪರಿವರ್ತಿಸಬೇಕು. ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳ ಎದುರು ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಸಿದರು.
ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಡಿ ಗ್ರೂಪ್ ನೌಕರರಿಲ್ಲ. ಶಿಕ್ಷಕರ ಕೊರತೆಯಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಸರ್ಕಾರದ ಯೋಜನೆಗಳೆಲ್ಲಾ ಹಳ್ಳ ಹಿಡಿಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ರಾಜ್ಯಾದ್ಯಂತ 500 ಕೋಟಿ ಮಹಿಳೆಯರ ಪ್ರಯಾಣ: ಕಾರ್ಮಿಕರಿಗೆ ಸುಲಭ ಸಂಚಾರ, ಆರ್ಥಿಕ ಬಲ
ಪ್ರತಿಭಟನೆಯಲ್ಲಿ ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ರಾಜ್ಯ ಸಮಿತಿ ಸದಸ್ಯನಿಸಾರ್ ಅಹಮದ್, ಉಪಾಧ್ಯಕ್ಷರುಗಳಾದ ರತ್ನಮ್ಮ, ಮುಜಾಹಿದ್, ಜಿಲ್ಲಾ ಸಂಚಾಲಕ ನಾಗೇಶ್, ಅಖಿಲೇಶ್, ಶಶಿ, ಜಗದೀಶ್ ಸಿ. ವಿಜಯ್‌ಬಾಬು, ಹರೀಶ್‌ಕುಮಾರ್ ಪಿ.ಆರ್. ಅವಿನಾಶ್ ಇತರರು ಭಾಗವಹಿಸಿದ್ದರು.





