ಕುಷ್ಠರೋಗಿಗಳ ಆರೈಕೆ ಮಾಡುತ್ತಿದ್ದ ಗ್ರಹಾಂ ಸ್ಟೈನ್ಸ್ ಮತ್ತು ಅವರ ಇಬ್ಬರು ಪುಟ್ಟ ಮಕ್ಕಳನ್ನು ಜೀವಂತವಾಗಿ ಸುಟ್ಟ ಪ್ರಕರಣದಲ್ಲಿ ದೋಷಿಯಾಗಿರುವ ಬಜರಂಗದಳದ ಕಾರ್ಯಕರ್ತ ದಾರಾ ಸಿಂಗ್ ಬಿಡುಗಡೆ ಮಾಡುವಂತೆ ಆಗ್ರಹಿಸಿ ನಡೆದ ಹೋರಾಟಕ್ಕೆ ಕೈಜೋಡಿಸಿದವರು ಒಡಿಶಾ ಮುಖ್ಯಮಂತ್ರಿ. ಇಂತಹ ನಾಯಕರುಗಳ ಆಡಳಿತದಲ್ಲಿ ನ್ಯಾಯವನ್ನು, ಸುರಕ್ಷತೆಯನ್ನು ನಿರೀಕ್ಷಿಸುವುದಾದರೂ ಹೇಗೆ?
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಅಲ್ಪಸಂಖ್ಯಾತರೇ ಮೊದಲ ಗುರಿಯಾಗಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಂತೂ ಸರ್ಕಾರದ ಬೆಂಬಲವಿದೆ ಎಂಬ ಭರವಸೆಯಲ್ಲೇ ಮುಸ್ಲಿಂ, ಕ್ರೈಸ್ತ ಸಮುದಾಯದವರ ಮೇಲೆ ಬಜರಂಗದಳದ ಪುಢಾರಿಗಳು ದಾಳಿ ನಡೆಸುತ್ತಿದ್ದಾರೆ. ‘ಜೈಶ್ರೀರಾಮ್’ ಎಂದು ಕೂಗಿಸುವುದು, ಸೆಗಣಿ ತಿನ್ನಿಸುವುದು, ಕೊನೆಗೆ ಜೀವಂತ ಸುಡುವುದು- ಹೀಗೆ ಹಲವು ಭೀಕರ ದಾಳಿಗಳು ಈ ದೇಶದಲ್ಲಿ ಕ್ರೈಸ್ತ, ಮುಸ್ಲಿಂ ಸಮುದಾಯದ ಜನರ ಮೇಲೆ ನಡೆದಿದೆ. ಅಂತಹ ಕ್ರೂರ, ಅಮಾನವೀಯ ಘಟನೆಗಳಲ್ಲಿ ಒಡಿಶಾದಲ್ಲಿ ಇತ್ತೀಚೆಗೆ ಕ್ರೈಸ್ತ್ರ ಪಾದ್ರಿ ಬಿಪಿನ್ ಬಿಹಾರಿ ನಾಯಕ್ ಎಂಬುವವರ ಮೇಲೆ ನಡೆದ ಹಲ್ಲೆಯೂ ಒಂದು.
ಒಡಿಶಾದಲ್ಲಿ 2024ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅದಾದ ಬಳಿಕ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳ ಪ್ರಮಾಣವೂ ಹೆಚ್ಚಾಗಿದೆ. ಮುಸ್ಲಿಮರ ಮೇಲೆ ಸುಳ್ಳು ದನ ಸಾಗಾಟ ಆರೋಪ ಮಾಡಿದರೆ, ಕ್ರೈಸ್ತರ ಮೇಲೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಆರ್‌ಎಸ್‌ಎಸ್‌ನ ಈ ಅಂಗಸಂಸ್ಥೆಗಳದ್ದು. ಬಿಜೆಪಿಗೆ ಇದು ರಾಜಕೀಯ ಅಸ್ತ್ರ. ಜನವರಿ 4ರಂದು ಒಡಿಶಾದ ಧೆಂಕನಲ್ ಜಿಲ್ಲೆಯ ಪರ್ಜಾಂಗ್ ಗ್ರಾಮದಲ್ಲಿ ಪಾದ್ರಿ ಬಿಪಿನ್ ಬಿಹಾರಿ ನಾಯಕ್ ಎಂಬುವವರ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ನಂತರ ಕ್ರೈಸ್ತರು… ಆನಂತರ?
ಪ್ರಾರ್ಥನಾ ಸಭೆಯಲ್ಲಿದ್ದ ಪಾದ್ರಿಯನ್ನು ಎಳೆದುಕೊಂಡು ಹೋಗಿ, ಕೋಲುಗಳಿಂದ ಹೊಡೆದು, ಮುಖಕ್ಕೆ ಸಿಂಧೂರ ಹಚ್ಚಿ, ಚಪ್ಪಲಿ ಹಾರ ಹಾಕಿ ಗ್ರಾಮದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿದೆ, ಥಳಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಬಲವಂತವಾಗಿ ಸಗಣಿ ತಿನ್ನಿಸಿ, ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವಂತೆ ಪೀಡಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸದ್ಯ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಅಷ್ಟಕ್ಕೂ ಒಡಿಶಾದಲ್ಲಿ ಬಿಜೆಪಿ ಆಡಳಿತ ಬಂದ ಬಳಿಕ ಕ್ರೈಸ್ತರ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. 1999ರಲ್ಲಿ ಗ್ರಹಾಂ ಸ್ಟೈನ್ಸ್ ಹತ್ಯೆಯಿಂದ ಹಿಡಿದು, ಕಂಧಮಾಲ್ ಹಿಂಸಾಚಾರದವರೆಗೆ ಒಡಿಶಾದಲ್ಲಿ ಹಲವು ಭೀಕರ ಕೋಮು ಹಿಂಸಾಚಾರ ಘಟನೆಗಳು ನಡೆದಿವೆ. ಅದರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮತ್ತು ಬಿಜೆಪಿ ಮೈತ್ರಿ ಸರ್ಕಾರವಿರುವಾಗ ಉರಿಯುವ ಕೆಂಡಕ್ಕೆ ತುಪ್ಪ ಸುರಿಯುವ ಕೆಲಸ ಯಥೇಚ್ಛವಾಗಿ ನಡೆಯುತ್ತಿದೆ. ಅಂತಹ ಘಟನೆಗಳ ವಿವರ ಈ ಕೆಳಗಿದೆ.
ಗ್ರಹಾಂ ಸ್ಟೈನ್ಸ್ ಹತ್ಯೆ (1999)
1999ರ ಜನವರಿ 22-23ರ ಮಧ್ಯರಾತ್ರಿ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಮನೋಹರಪುರ ಗ್ರಾಮದಲ್ಲಿ ನಡೆದ ಗ್ರಾಹಂ ಸ್ಟೈನ್ಸ್ ಭೀಕರ ಹತ್ಯೆ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿತ್ತು. ಗ್ರಹಾಂ ಸ್ಟೈನ್ಸ್ 1965ರಿಂದ ಒಡಿಶಾದಲ್ಲಿ ಕುಷ್ಠರೋಗಿಗಳ ಸೇವೆ ಮಾಡುತ್ತಿದ್ದರು. ಆದರೆ ಅವರು ಮತಾಂತರ ಮಾಡುತ್ತಿದ್ದಾರೆ ಎಂದು ಬಜರಂಗದಳ ಆರೋಪಿಸಿತ್ತು. ಆಸ್ಟ್ರೇಲಿಯಾದ ಕ್ರೈಸ್ತ ಮಿಷನರಿಯ ಗ್ರಹಾಂ ಸ್ಟೈನ್ಸ್ ಅವರು ತಮ್ಮ ಇಬ್ಬರು ಪುಟ್ಟ ಮಕ್ಕಳಾದ ಫಿಲಿಪ್ (10 ವರ್ಷ) ಮತ್ತು ತಿಮೋತಿ (6 ವರ್ಷ) ಜತೆ ಕಾರಿನಲ್ಲಿ ಮಲಗಿದ್ದಾಗ ದುಷ್ಕರ್ಮಿಗಳ ಗುಂಪು ವಾಹನಕ್ಕೆ ಬೆಂಕಿ ಹಚ್ಚಿತು. ಮೂವರೂ ಜೀವಂತವಾಗಿ ದಹನವಾಗಿದ್ದರು.

ಈ ಪ್ರಕರಣದ ಅಪರಾಧಿ ಬಜರಂಗದಳದ ಕಾರ್ಯಕರ್ತ ದಾರಾ ಸಿಂಗ್. ಈತನಿಗೆ 2003ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಆದರೆ 2005ರಲ್ಲಿ ಒಡಿಶಾ ಹೈಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ. ತಮ್ಮ ಕುಟುಂಬವನ್ನೇ ಬಜರಂಗದಳ ಕಾರ್ಯಕರ್ತರು ನಾಶ ಮಾಡಿದ್ದರೂ ಗ್ರಹಾಂ ಸ್ಟೈನ್ಸ್ ಪತ್ನಿ ಗ್ಲ್ಯಾಡಿಸ್ ಸ್ಟೈನ್ಸ್ ಹಂತಕರನ್ನು ಕ್ಷಮಿಸುವುದಾಗಿ ಘೋಷಿಸಿದ್ದು ಇದು ಜಗತ್ತಿನಾದ್ಯಂತ ಸಂಚಲನ ಮೂಡಿಸಿತ್ತು. 2005ರಲ್ಲಿ ಭಾರತ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು.
ಕಂಧಮಾಲ್ ಹಿಂಸಾಚಾರ (2008)
2008ರಲ್ಲಿ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರವು ಭಾರತದ ಇತಿಹಾಸದಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆದ ಅತಿದೊಡ್ಡ ಕೋಮು ಸಂಘರ್ಷಗಳಲ್ಲಿ ಒಂದಾಗಿದೆ. 2008ರ ಆಗಸ್ಟ್ 23ರಂದು ಹಿಂದೂ ಧಾರ್ಮಿಕ ಮುಖಂಡ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮತ್ತು ಅವರ ನಾಲ್ವರು ಸಹಚರರನ್ನು ಕಂಧಮಾಲ್‌ನ ಜಲಸ್ಪೇಟಾ ಆಶ್ರಮದಲ್ಲಿ ಹತ್ಯೆ ಮಾಡಲಾಗಿದೆ. ಈ ಹತ್ಯೆಯನ್ನು ಮಾವೋವಾದಿ ನಾಯಕರುಗಳು ಮಾಡಿದ್ದಾಗಿ ಒಪ್ಪಿಕೊಂಡಿದ್ದರೂ ಸ್ಥಳೀಯವಾಗಿ ಇದು ಕ್ರೈಸ್ತ ಸಮುದಾಯದ ಸಂಚು ಎಂದು ವದಂತಿ ಹರಡಿತ್ತು. ಈ ವದಂತಿ ಭೀಕರ ಹಿಂಸಾಚಾರಕ್ಕೆ ನಾಂದಿಯಾಯಿತು.
ಈ ಹಿಂಸಾಚಾರದಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ನಾಗರಿಕ ಹಕ್ಕುಗಳ ಸಂಘಟನೆಗಳ ಪ್ರಕಾರ ಸಾವಿನ ಸಂಖ್ಯೆ 100ಕ್ಕೂ ಹೆಚ್ಚಿದೆ. ಸುಮಾರು 600 ಹಳ್ಳಿಗಳಲ್ಲಿ 5,600ಕ್ಕೂ ಹೆಚ್ಚು ಮನೆಗಳಲ್ಲಿ ಲೂಟಿ ನಡೆದಿತ್ತು, ಮನೆಗಳನ್ನು ಸುಟ್ಟು ಹಾಕಲಾಗಿತ್ತು. 300ಕ್ಕೂ ಹೆಚ್ಚು ಚರ್ಚ್‌ಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿ ನಡೆದಿತ್ತು. ಸುಮಾರು 50,000ಕ್ಕೂ ಹೆಚ್ಚು ಕ್ರೈಸ್ತರು ಪ್ರಾಣಭಯದಿಂದ ಕಾಡುಗಳಿಗೆ ಓಡಿಹೋಗಿದ್ದರು, ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರು. ಈ ಘಟನೆಯು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕೋಮು ಸೌಹಾರ್ದತೆಯ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತು. ಈ ಸಂದರ್ಭದಲ್ಲಿ ಬಿಜು ಜನತಾ ದಳ (BJD) ಮತ್ತು ಭಾರತೀಯ ಜನತಾ ಪಕ್ಷ (BJP) ಮೈತ್ರಿ ಸರ್ಕಾರದ ಅಧಿಕಾರದಲ್ಲಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ನೂರಾರು ಪ್ರಕರಣಗಳು ದಾಖಲಾದವು. ಅನೇಕ ಮಂದಿ ಶಿಕ್ಷೆಯಾಯಿತು. ಆದರೆ ಪುರಾವೆಗಳ ಕೊರತೆಯಿಂದಾಗಿ ಹಲವರು ಖುಲಾಸೆಗೊಂಡರು. ಅದಾದ ಬಳಿಕ 2016ರಲ್ಲಿ ಸುಪ್ರೀಂ ಕೋರ್ಟ್ ಸಂತ್ರಸ್ತರಿಗೆ ತಲಾ ₹3 ಲಕ್ಷ ಹೆಚ್ಚುವರಿ ಪರಿಹಾರ ನೀಡಲು ಆದೇಶಿಸಿತು. ಹಿಂಸಾಚಾರಕ್ಕೆ ಸಂಬಂಧಿಸಿದ ಒಟ್ಟು 827 ಪ್ರಕರಣಗಳಲ್ಲಿ 315 ಪ್ರಕರಣಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪೊಲೀಸರು ಕೈಬಿಟ್ಟಿದ್ದರು. ಈ 315 ಪ್ರಕರಣಗಳನ್ನು ಮರುತನಿಖೆ ಮಾಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚುವಂತೆ ಸುಪ್ರೀಂ ಕೋರ್ಟ್ ಒಡಿಶಾ ಸರ್ಕಾರಕ್ಕೆ ನಿರ್ದೇಶಿಸಿತ್ತು.
2024ರ ಬಳಿಕ ಬಿಜೆಪಿ ಆಡಳಿತದಲ್ಲಿ ಕ್ರೈಸ್ತರ ಮೇಲೆ ದಾಳಿ
2024ರಲ್ಲಿ ಒಡಿಶಾದಲ್ಲಿ ಬಿಜೆಪಿ ಆಡಳಿತ ಆರಂಭವಾದ ಬಳಿಕ ಕ್ರೈಸ್ತ ಸಮುದಾಯದ ಮೇಲಿನ ದಾಳಿಯೂ ಹೆಚ್ಚಾಯಿತು. 2024ರಲ್ಲಿ ಒಡಿಶಾದಲ್ಲಿ ಕ್ರೈಸ್ತ ಸಮುದಾಯದ ಜನರ ಮೇಲೆ ದಾಳಿಗೆ ಸಂಬಂಧಿಸಿದಂತೆ ಸುಮಾರು 40 ಕಿರುಕುಳದ ಪ್ರಕರಣಗಳು ದಾಖಲಾಗಿವೆ. ಗಜಪತಿ, ರಾಯಗಡ ಮತ್ತು ಜಾಜಪುರ ಜಿಲ್ಲೆಗಳಲ್ಲಿ ಚರ್ಚ್‌ಗಳ ಮೇಲೆ ದಾಳಿ ಮತ್ತು ಬೈಬಲ್‌ಗೆ ಹಾನಿ ಮಾಡಿದ ಘಟನೆಗಳು ವರದಿಯಾಗಿವೆ. 2025ರಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿವೆ.
2025ರ ಜೂನ್ 20ರಂದು ಮಟಪಾಕ ಗ್ರಾಮದಲ್ಲಿ ಕೃಷಿ ಪ್ರಾರ್ಥನಾ ಸಭೆಯ ಸಂದರ್ಭದಲ್ಲಿ ಬಜರಂಗದಳ ನಾಯಕರುಗಳ ಕೋಮುಪ್ರಚೋದನೆಗೆ ಒಳಗಾದ ಸುಮಾರು 300ರಿಂದ 400 ಜನರ ಗುಂಪು ಕೊಡಲಿ ಮತ್ತು ಕಬ್ಬಿಣದ ರಾಡ್‌ಗಳಿಂದ ದಾಳಿ ನಡೆಸಿತ್ತು. ಇದೇ ಅವಧಿಯಲ್ಲಿ ಕೋಟಮೆಟೇರು ಗ್ರಾಮದಲ್ಲೂ ದಾಳಿ ನಡೆದಿದ್ದು, ಸುಮಾರು 30 ಕ್ರೈಸ್ತರು ಗಾಯಗೊಂಡಿದ್ದರು. 2025ರ ನವೆಂಬರ್ 16ರಂದು ಮಲ್ಕನಗಿರಿಯ ನಲಿಗುಡ ಗ್ರಾಮದಲ್ಲಿ ಸುಮಾರು 35 ವರ್ಷ ಹಳೆಯದಾದ ಚರ್ಚ್ ಕಟ್ಟಡವನ್ನು ಧ್ವಂಸಗೊಳಿಸಲಾಗಿತ್ತು. ಈ ಸಂಬಂಧದ ಪ್ರಕರಣ ದಾಖಲಾಗಿದ್ದರೂ ಆರೋಪಿಗಳ ಬಂಧನ ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಡಿಸೆಂಬರ್ 16ರಂದು ಮಲ್ಕನಗಿರಿಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಸಾವಿರಾರು ಮಂದಿ ಮನೆಗಳನ್ನು ತೊರೆದು ವಲಸೆ ಹೋಗುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ನಡೆಯುವ ಈ ಹಿಂಸಾಚಾರವನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಈ ನಡುವೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಈ ದಾಳಿಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಒಡಿಶಾ ಸರ್ಕಾರಕ್ಕೆ ಸೂಚಿಸಿದೆ. ಇನ್ನು 2025ರ ಆಗಸ್ಟ್‌ನಲ್ಲಿ ಜಲೇಶ್ವರದ ಸೇಂಟ್ ಥಾಮಸ್ ಚರ್ಚ್‌ನ ಇಬ್ಬರು ಪಾದ್ರಿಗಳು ಮತ್ತು ಇಬ್ಬರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಸುಮಾರು 70 ಜನರ ಗುಂಪು ದಾಳಿ ನಡೆಸಿತ್ತು. ಇದೀಗ 2026ರ ಮೊದಲ ತಿಂಗಳಲ್ಲೇ ಮತ್ತೆ ಬಿಜೆಪಿಯ ಬಜರಂಗದಳದ ಗುಂಪಿಗೆ ಅಲ್ಪಸಂಖ್ಯಾತರು ಗುರಿಯಾಗಿದ್ದಾರೆ. ಹೀಗಿರುವಾಗ ಆಡಳಿತ ಮೇಲೆ ಅಲ್ಪಸಂಖ್ಯಾತರು ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.
ಅಷ್ಟಕ್ಕೂ ಒಡೆದು ಆಳುವ ನೀತಿ ಬಿಜೆಪಿಯದ್ದು. ಅದರಲ್ಲಿಯೂ ಕೋಮು ಆಧಾರದಲ್ಲಿ ವಿಭಜನೆಯೇ ಬಿಜೆಪಿಯ ಮೂಲಮಂತ್ರ, ರಾಜಕೀಯ ತಂತ್ರ. ಹಿಂದೂಗಳನ್ನು ಮುಸ್ಲಿಂ, ಕ್ರೈಸ್ತರ ವಿರುದ್ಧ ಎತ್ತಿಕಟ್ಟಿಯೇ ನಿರಂತರವಾಗಿ ಅಧಿಕಾರವನ್ನು ಏರುತ್ತಾ ಬಂದಿರುವುದು ಬಿಜೆಪಿ. ಅದೇ ತಂತ್ರವನ್ನು ಒಡಿಶಾದಲ್ಲಿಯೂ ನಡೆಸಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರ ಮೇಲೆ ದಾಳಿ ಹೇಗೆ ಹೆಚ್ಚಾಗಿದೆಯೋ ಅದೇ ರೀತಿ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕ್ರೈಸ್ತರ ಮೇಲೆ ದಾಳಿ ಅಧಿಕವಾಗಿದೆ.
ಸರ್ಕಾರ ಮಾತ್ರ ನೆಪ ಮಾತ್ರಕ್ಕೆ ಬಂಧನ ಮಾಡುತ್ತಿದೆ. ಇಂತಹ ಘಟನೆ ನಡೆದಾಗ ಶಾಂತಿ ಕಾಪಾಡಿ ಎಂದು ಜನರಲ್ಲಿ ಮನವಿ ಮಾಡುವ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಇದೇ ಕೋಮು ಹಿಂಸೆ ನಡೆಸಿದ ಅಪರಾಧಿಯ ಪರವಾಗಿ ನಿಂತವರು. ಕುಷ್ಠರೋಗಿಗಳ ಆರೈಕೆ ಮಾಡುತ್ತಿದ್ದ ಗ್ರಹಾಂ ಸ್ಟೈನ್ಸ್ ಮತ್ತು ಅವರ ಇಬ್ಬರು ಪುಟ್ಟ ಮಕ್ಕಳನ್ನು ಜೀವಂತವಾಗಿ ಸುಟ್ಟ ಪ್ರಕರಣದಲ್ಲಿ ದೋಷಿಯಾಗಿರುವ ಬಜರಂಗದಳದ ಕಾರ್ಯಕರ್ತ ದಾರಾ ಸಿಂಗ್ ಬಿಡುಗಡೆ ಮಾಡುವಂತೆ ಆಗ್ರಹಿಸಿ ನಡೆದ ಹೋರಾಟಕ್ಕೆ ಕೈಜೋಡಿಸಿದವರು ಒಡಿಶಾ ಮುಖ್ಯಮಂತ್ರಿ. ಇಂತಹ ನಾಯಕರುಗಳ ಆಡಳಿತದಲ್ಲಿ ನ್ಯಾಯವನ್ನು, ಸುರಕ್ಷತೆಯನ್ನು ನಿರೀಕ್ಷಿಸುವುದಾದರೂ ಹೇಗೆ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




