ಕಳೆದ ಮೂರೂವರೆ ವರ್ಷಗಳಿಂದ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು ಭೂಸ್ವಾಧೀನದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದಾಗ್ಯೂ, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯು (KIADB) ಈ ಪ್ರದೇಶದಲ್ಲಿ 1,770 ಎಕರೆ ಕೃಷಿ ಭೂಮಿಯನ್ನು ವಶಕ್ಕೆ ಪಡೆಯಲು ಮುಂದಾಗಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಸರ್ಕಾರವೂ ಹಿಂದೇಟು ಹಾಕುತ್ತಿದೆ. ಜುಲೈ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಮುಖಂಡರ ಸಭೆ ಕರೆದಿದ್ದಾರೆ.
ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಅವರ ಭೇಟಿಯಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನದ ಬಗ್ಗೆಯೂ ಚರ್ಚೆ ನಡೆದಿದೆ. ಉದ್ದೇಶಿತ ಭೂಮಿಯನ್ನೇ ಸ್ವಾಧೀನಕ್ಕೆ ಪಡೆಯುವ ಬಗ್ಗೆ ಚರ್ಚೆಗಳಾಗಿವೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ಕೆಐಎಡಿಬಿ ಸ್ವಾಧೀನಕ್ಕೆ ಪಡೆಯಲು ಉದ್ದೇಶಿಸಿರುವ ಚನ್ನರಾಯಪಟ್ಟಣ ಹೋಬಳಿಯ ಭೂಮಿಯಲ್ಲಿ ‘ದೇವನಹಳ್ಳಿ ಬಿಸಿನೆಸ್ ಪಾರ್ಕ್’ (Devanahalli Business Park) ನಿರ್ಮಾಣ ಮಾಡಲು ಸರ್ಕಾರ ಯೋಜಿಸಿದೆ. ಇಲ್ಲಿ, ಎರಡು ಐಟಿ ಪಾರ್ಕ್‌ಗಳು, ಏರೋಸ್ಪೇಸ್ ಪಾರ್ಕ್, ರಕ್ಷಣಾ ಕಾರಿಡಾರ್, ಸೈನ್ಸ್ ಪಾರ್ಕ್ ಹಾಗೂ ಫೈನಾನ್ಶಿಯಲ್ ಸಿಟಿ ಸೇರಿದಂತೆ ಬಹುಕೋಟಿ ರೂ. ಮೊತ್ತದ ನಿರ್ಮಾಣ ಯೋಜನೆಗಳನ್ನು ರೂಪಿಸಲಾಗಿದೆ. ಏರೋಸ್ಪೇಸ್ ಪಾರ್ಕ್ ಮತ್ತು ಸೈನ್ಸ್ ಪಾರ್ಕ್‌ಗಳು ಮುಖ್ಯವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿದ್ದು, ಅದರಲ್ಲೂ ಏರೋಸ್ಪೇಸ್ ಪಾರ್ಕ್ ಮತ್ತು ರಕ್ಷಣಾ ಕಾರಿಡಾರ್‌ಗಳು ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುತ್ತದೆ. ಹೀಗಾಗಿ, ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತ, ರದ್ದು ಅಥವಾ ಉದ್ದೇಶಿತ ಬಿಸಿಸೆನ್ ಪಾರ್ಕ್ ಸ್ಥಳಾಂತರಕ್ಕೆ ರಕ್ಷಣಾ ಇಲಾಖೆಯ ಒಪ್ಪಿಗೆ ಅಗತ್ಯವಾಗಿದೆ.
ಸಿದ್ದರಾಮಯ್ಯ ಅವರು ರಾಜ್‌ನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಗಮನಾರ್ಹವಾಗಿ, ದೆಹಲಿ ಭೇಟಿಯ ಸಮಯದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಕೈಗಾರಿಕಾ ಮಂತ್ರಿ ಎಂ.ಬಿ ಪಾಟೀಲ್ ಕೂಡ ಇದ್ದರು. ಡಿ.ಕೆ ಶಿವಕುಮಾರ್ ಅವರು ಎಲ್ಲ ಅಭಿವೃದ್ಧಿಗಳೂ ಬೆಂಗಳೂರು ಹೆಸರಿನ ಜೊತೆಯೇ ನಡೆಯಬೇಕು ಎಂದು ಬಯಸುವವರು. ಎಂ.ಬಿ ಪಾಟೀಲ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ‘ಬಿಸಿನೆಸ್ ಪಾರ್ಕ್’ ಇರಬೇಕು. ಬಂಡವಾಳಿಗರಿಗೆ ಎಲ್ಲದಕ್ಕೂ ಅನುಕೂಲ ಎಂಬ ಧೋರಣೆಯೊಂದಿಗೆ ಬಂಡವಾಳಶಾಹಿಗಳ ಪರ ನಿಲುವು ಹೊಂದಿರುವವರು. ಈ ಇಬ್ಬರ ಒತ್ತಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣಿದಿರಬಹುದು. ಚನ್ನರಾಯಪಟ್ಟಣ ಹೋಬಳಿಯ ಭೂಮಿಯನ್ನೇ ಸ್ವಾಧೀನಕ್ಕೆ ಪಡೆದು, ಕೈಗಾರಿಕೆ ನೀಡಬೇಕೆಂದು ಹೊರಟಿರಬಹುದು ಎಂಬ ಅಭಿಪ್ರಾಯಗಳಿವೆ.
ಆದಾಗ್ಯೂ, ರಾಜ್‌ನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ”ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ ಪ್ರದರ್ಶನ (Air Show) ಹಾಗೂ ಬೆಂಗಳೂರಿನಲ್ಲಿ ರಕ್ಷಣಾ ಕಾರಿಡಾರ್ (Defence Corridor) ಸ್ಥಾಪನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದವೆ. ರಾಜ್ಯದ ಅಭಿವೃದ್ಧಿ ಯೋಜನೆಗಾಗಿ ಕೆಲವೆಡೆ ರಕ್ಷಣಾ ಇಲಾಖೆಗೆ ಸೇರಿದ ಜಮೀನನ್ನು ಬಿಟ್ಟುಕೊಡುವಂತೆ ಮನವಿ ಮಾಡಿದ್ದೇವೆ. ಮೈಸೂರು ದಸರಾದಲ್ಲಿ ‘ಏರ್ ಶೋ’ ನಡೆಸಲು ಒಪ್ಪಿಗೆ ಕೋರಲಾಗಿದೆ” ಎಂದು ಹೇಳಿದ್ದಾರೆ. ಆದರೆ, ಚನ್ನರಾಯಪಟ್ಟಣ ಭೂಸ್ವಾಧೀನದ ಬಗ್ಗೆ ಯಾವುದೇ ಪ್ರಕ್ರಿಯೆ ನೀಡಿಲ್ಲ.
ಆದರೆ, ರಕ್ಷಣಾ ಇಲಾಖೆಯ ಒಪ್ಪಿಗೆ ಇಲ್ಲದೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಬಲವಾಗಿವೆ.
ಈ ಲೇಖನ ಓದಿದ್ದೀರಾ?: ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸರ್ಕಾರ ಬಳಸಿಕೊಂಡಿದ್ದೆಷ್ಟು? ಇಲ್ಲಿದೆ ನೋಡಿ…
ಅದೇನೇ ಇರಲಿ, ‘ಭಾರತದ ಭೂಸ್ವಾಧೀನ, ಪುನರ್ವಸತಿ ಮತ್ತು ಪರಿಹಾರ ಕಾಯ್ದೆ-2013’ (Land Acquisition, Rehabilitation and Resettlement Act, 2013) ಹೇಳುವಂತೆ- ಭೂಸ್ವಾಧೀನ ಸಂದರ್ಭದಲ್ಲಿ ರೈತರಿಗೆ ಯೋಗ್ಯವಾದ ಪರಿಹಾರ ಮತ್ತು ಪುನರ್ವಸತಿಯನ್ನು ಒದಗಿಸಬೇಕು ಎನ್ನುತ್ತದೆ. ಮಾತ್ರವಲ್ಲದೆ, ರೈತರ ಒಪ್ಪಿಗೆ ಇಲ್ಲದೆ ಯಾವುದೇ ಕಾರಣಕ್ಕೂ ಭೂಮಿಯನ್ನು ಸರ್ಕಾರಗಳು ಸ್ವಾಧೀನಕ್ಕೆ ಪಡೆಯಲು ಅವಕಾಶವಿಲ್ಲ ಎಂದೂ ವಿವರಿಸಿದೆ. ಹೀಗಾಗಿ, ರೈತರು ತಮ್ಮ ಕೃಷಿ ಭೂಮಿಯನ್ನು ಬಿಟ್ಟುಕೊಡಲು ಸಿದ್ದರಿಲ್ಲದಿದ್ದಾಗ, ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವಂತಿಲ್ಲ.
ಚನ್ನರಾಯಪಟ್ಟಣ ರೈತರು ತಮ್ಮ ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡಲು ಸಿದ್ದರಿಲ್ಲ. ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಗುರುತಿಸಿ, ಅಲ್ಲಿ ‘ಬಿಸಿನೆಸ್ ಪಾರ್ಕ್’ ನಿರ್ಮಾಣ ಮಾಡಿ. ಫಲವತ್ತಾದ ಕೃಷಿ ಭೂಮಿಯಲ್ಲಿ ಕೈಗಾರಿಕೆ ಸಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ.
ಆದರೂ, ಚನ್ನರಾಯಪಟ್ಟಣ ಹೋಬಳಿಯ ಭೂಮಿಯನ್ನೇ ಸ್ವಾಧೀನಕ್ಕೆ ಪಡೆದು, ವಿವಿಧ ಕೈಗಾರಿಕೆಗಳಿಗೆ ನೀಡಬೇಕೆಂದು ಸರ್ಕಾರ ಹಠಕ್ಕೆ ಬಿದ್ದಿದೆ. ಇದರ ಹಿಂದೆ, ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ, ಸ್ವ-ಹಿತಾಸಕ್ತಿ ಸಾಧಿಸಿಕೊಳ್ಳುವ, ರಿಯಲ್ ಎಸ್ಟೇಟ್‌ಗೆ ಮತ್ತಷ್ಟು ಅವಕಾಶ ತೆರೆಯುವ ಹಾಗೂ ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಮಾತ್ರವೇ ಅಭಿವೃದ್ಧಿ ಎಂಬ ಧೋರಣೆಯೇ ಕಾರಣವೆಂದು ಹೇಳಲಾಗುತ್ತಿದೆ.
ಯಾವುದೇ ರಾಜ್ಯದ ಆರ್ಥಿಕ ಬೆಳವಣಿಗೆಗಳಿಗೆ ಕೈಗಾರಿಕೆಗಳು ಬೇಕು. ಆದರೆ, ಆ ರಾಜ್ಯದ ಅಭಿವೃದ್ಧಿಯನ್ನು ಒಂದು ಪ್ರದೇಶಕ್ಕೆ ಸೀಮಿತವಾಗುವ ಅಥವಾ ಎಲ್ಲ ಕೈಗಾರಿಕೆಗಳೂ ಒಂದೇ ಪ್ರದೇಶದಲ್ಲಿ ಕೇಂದ್ರೀಕರಣಗೊಳ್ಳುವುದರಿಂದ ಪ್ರಯೋಜನವಿಲ್ಲ. ಇದು, ಜನ ದಟ್ಟಣೆ, ಸಂಚಾರ ದಟ್ಟಣೆ, ಮಾಲಿನ್ಯ, ಮೂಲ ಸೌಕರ್ಯಗಳ ಅಭಾವ ಸೇರಿದಂತೆ ನಾನಾ ಸಮಸ್ಯೆ-ಸವಾಲುಗಳನ್ನು ತದ್ದೊಡ್ಡುತ್ತದೆ. ಇದರ ಬದಲಾಗಿ, ರಾಜ್ಯದ ಉದ್ದಗಲಕ್ಕೂ ನಾನಾ ಪ್ರದೇಶಗಳನ್ನು ಅದರಕ್ಕೂ ಕೃಷಿಯೋಗ್ಯವಲ್ಲದ ಭೂಮಿಯನ್ನು ಗುರುತಿಸಿ, ಅಂತಹ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ತೆರೆಯುವುದು ಬೆಂಗಳೂರಿನ ಮೇಲಿನ ಹೊರೆಯನ್ನು ತಗ್ಗಿಸುತ್ತದೆ. ರಾಜ್ಯದ ನಾನಾ ಜಿಲ್ಲೆಗಳ ವಲಸೆಯನ್ನು ಕಡಿಮೆ ಮಾಡುತ್ತದೆ. ಇಂತಹ ವಿಕೇಂದ್ರೀಕೃತ ಕೈಗಾರಿಕೀಕರಣಕ್ಕೆ ತಮಿಳುನಾಡು ಉತ್ತಮ ಉದಾಹರಣೆಯಾಗಿದೆ. ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ಸರ್ಕಾರ ಯೋಚಿಸಬೇಕು. ಯೋಜನೆಗಳನ್ನು ರೂಪಿಸಬೇಕು.




