ಆಡಳಿತರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯಲ್ಲಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ‘ದೆಹಲಿಗೆ ಬನ್ನಿ’ ಎಂದು ಆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ಸಂಜೆ 5.15ರ ಸುಮಾರಿಗೆ ತಮಿಳುನಾಡಿನ ಗೂಡ್ಲೂರಿನಿಂದ ಹೆಲಿಕಾಪ್ಟರ್ ಮೂಲಕ ಇಲ್ಲಿನ ವಿಮಾನ ನಿಲ್ದಾಣಕ್ಕೆ ವಾಪಸಾದ ರಾಹುಲ್ ಅವರನ್ನು ಸಿದ್ದರಾಮಯ್ಯ, ಶಿವಕುಮಾರ್ ಭೇಟಿಯಾದರು.
ಏಕಕಾಲಕ್ಕೆ ಇಬ್ಬರನ್ನು ಎದುರುಗೊಂಡ ರಾಹುಲ್ ಅವರು, ಸಿದ್ದರಾಮಯ್ಯನವರ ಜತೆ ಮಾತನಾಡುತ್ತಲೇ, ಶಿವಕುಮಾರ್ ಅವರಿಂದ ಕೊಂಚ ದೂರ ಕರೆದೊಯ್ದರು. ಅವರೊಂದಿಗೆ ಕೆಲಕ್ಷಣ ಮಾತನಾಡಿದರು. ಅದಾದ ಬಳಿಕ, ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋದ ರಾಹುಲ್, ಅವರೊಂದಿಗೂ ಕೆಲ ಕ್ಷಣ ಮಾತನಾಡಿದರು. ಸೌಜನ್ಯದ ಭೇಟಿಯ ವೇಳೆ, ‘ದೆಹಲಿಗೆ ಬನ್ನಿ, ಚರ್ಚಿಸೋಣ’ ಎಂದು ರಾಹುಲ್ ಅವರು ಇಬ್ಬರು ನಾಯಕರಿಗೆ ಹೇಳಿದ್ದಾಗಿ ಗೊತ್ತಾಗಿದೆ.
ಪ್ರತ್ಯೇಕವಾಗಿ ಮಾತನಾಡಿದ ವಿಡಿಯೊ ಹಾಗೂ ಫೋಟೊಗಳು ಶಿವಕುಮಾರ್ ಅವರ ಚಟುವಟಿಕೆಗಳನ್ನು ಪ್ರಸಾರ ಮಾಡುವ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ಹರಿದಾಡಿದವು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಯ್ದೆ-ಕಾನೂನುಗಳು ಬಡವರ ವಿರುದ್ಧವೇ ಅಥವಾ ಪ್ರಭಾವಿಗಳ ಪರವೇ?
ಒಂದೇ ವಿಮಾನದಲ್ಲಿ ಸಿ.ಎಂ, ಡಿಸಿಎಂ: ಮಧ್ಯಾಹ್ನ ಒಂದೇ ವಿಮಾನದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಬೆಂಗಳೂರಿನಿಂದ ಮೈಸೂರಿಗೆ ಬಂದಿಳಿದರು. ರಾಹುಲ್ ಭೇಟಿ ಬಳಿಕ ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ತೆರಳಿದರೆ, ಶಿವಕುಮಾರ್ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದರು. ಸಂಜೆ ರಾಹುಲ್‌ರನ್ನು ಬೀಳ್ಕೊಟ್ಟ ಬಳಿಕ ಒಂದೇ ವಿಮಾನದಲ್ಲಿ ಇಬ್ಬರೂ ಬೆಂಗಳೂರಿಗೆ ವಾಪಸಾದರು.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಲ್ಲಿನ ಮಂಡಕಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದ ಮುಖ್ಯಮಂತ್ರಿ ಮೈಸೂರು ಅರಮನೆ ಮಾದರಿಯನ್ನು ಉಡುಗೊರೆಯಾಗಿ ನೀಡಿದರು. ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ಕೆ. ವೆಂಕಟೇಶ್ ಜೊತೆಗಿದ್ದರು.
ಬಳಿಕ ರಾಹುಲ್ ಗಾಂಧಿ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗೂಡ್ಲೂರಿಗೆ ತೆರಳಿದರು. ಸಂಜೆ ಅದೇ ಹೆಲಿಕಾಪ್ಟರ್‌ನಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ವಾಪಸಾಗಿ ದೆಹಲಿಗೆ ಪ್ರಯಾಣ ಬೆಳೆಸಿದರು.





