ವಿಬಿ-ಜಿ ರಾಮ್ ಜಿ ಕಾಯ್ದೆಯ ವಿರುದ್ಧವಾಗಿ ಮತ್ತು ಮನರೇಗಾ ರದ್ಧತಿ ವಿರುದ್ಧವಾಗಿ ಕಾಂಗ್ರೆಸ್ ಶನಿವಾರ ಜನವರಿ 8ರಿಂದ ರಾಷ್ಟ್ರವ್ಯಾಪಿ ಆಂದೋಲನವನ್ನು ಘೋಷಿಸಿದೆ. ವಿಬಿ-ಜಿ ರಾಮ್ ಜಿ ಕಾಯ್ದೆ ಮನರೇಗಾವನ್ನು ಮೌನವಾಗಿ ಕೊಲ್ಲುತ್ತದೆ ಎಂದು ಹೇಳಿರುವ ಕಾಂಗ್ರೆಸ್ ‘ಮನರೇಗಾ ಬಚಾವೋ ಅಭಿಯಾನ’ ನಡೆಸುವುದಾಗಿ ಘೋಷಿಸಿದೆ.
ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ಜೈರಾಮ್ ರಮೇಶ್ ಈ ಘೋಷಣೆ ಮಾಡಿದ್ದಾರೆ. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವೇಣುಗೋಪಾಲ್, “ಕೇಂದ್ರ ಸರ್ಕಾರ ಜಾರಿಗೆ ತಂದ ವಿಬಿ ಜಿ ರಾಮ್‌ಜಿ ಕಾನೂನಿಗ ಬಗ್ಗೆ ಗಂಭೀರ ಚರ್ಚೆ ನಡೆಸಿ ನಾವು ಈ ಅಭಿಯಾನ ನಡೆಸುವ ನಿರ್ಧಾರ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮನರೇಗಾ ಹೆಸರು ಬದಲಾವಣೆ ವಿರುದ್ಧ ಅಭಿಯಾನ: ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಘೋಷಣೆ
ಈ ಹೊಸ ಕಾನೂನನ್ನು ಹಾನಿಕಾರಕ ಎಂದು ಕರೆದ ವೇಣುಗೋಪಾಲ್, “ಈ ಕಾನೂನು ಮನರೇಗಾವನ್ನು ಕೊಲ್ಲುತ್ತದೆ. ಮನರೇಗಾದಿಂದ ವಲಸೆ ಕಡಿಮೆಯಾಗಿತ್ತು. ರಸ್ತೆಗಳು, ಕಾಲುವೆಗಳು, ಅಣೆಕಟ್ಟುಗಳು ಸೃಷ್ಟಿಯಾಗಿದ್ದವು. ಕೋವಿಡ್ ಸಂದರ್ಭದಲ್ಲಿ, ಆರ್ಥಿಕ ಬಿಕ್ಕಟ್ಟಿನಲ್ಲಿ ಮನರೇಗಾ ದೇಶದ ಜನರಿಗೆ ರಕ್ಷಣೆಯಾಗಿತ್ತು” ಎಂದು ಹೇಳಿದ್ದಾರೆ.
“ಉದ್ಯೋಗವು ಇನ್ನು ಖಾತರಿಯಲ್ಲ. ಸರ್ಕಾರದ ಬದಲಾಗಿ ಪಂಚಾಯತ್‌ಗಳ ಮೂಲಕ ಮಾತ್ರ ಕೆಲಸ ಒದಗಿಸಲಾಗುತ್ತದೆ. ಬಜೆಟ್ ಮಿತಿಯನ್ನೂ ಒಳಗೊಂಡಿದೆ. ಇದು ಕೆಲಸ ಮಾಡುವ ಕಾನೂನುಬದ್ಧ ಹಕ್ಕನ್ನು ಮೌನವಾಗಿ ಕೊಲ್ಲುತ್ತದೆ” ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.
“ಮನರೇಗಾ ಒಂದು ವಿಕೇಂದ್ರೀಕೃತ ಯೋಜನೆಯಾಗಿತ್ತು. ಈಗ ಎಲ್ಲವೂ ದೆಹಲಿಯಲ್ಲಿರುವ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ, ಹಳ್ಳಿಗಳು ಬಳಲುತ್ತವೆ. ಅನೇಕ ಪಂಚಾಯತ್‌ಗಳಿಗೆ ಹಣ ಸಿಗುವುದಿಲ್ಲ. ಈ ಕಾಯ್ದೆಯು ಸಂವಿಧಾನವನ್ನು ಉಲ್ಲಂಘಿಸುತ್ತದೆ” ಎಂದು ದೂರಿದ್ದಾರೆ.
ರೈತರ ಆಂದೋಲನವನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಮೂರು ಕೃಷಿ ಕಾನೂನುಗಳ ಪ್ರತಿಭಟನೆಯು ದೆಹಲಿ ಕೇಂದ್ರಿತವಾಗಿತ್ತು. ಆದರೆ ಮನರೇಗಾ ಬಚಾವೊ ಅಭಿಯಾನವು ದೆಹಲಿ ಕೇಂದ್ರಿತವಾಗಿರುವುದಿಲ್ಲ. ಇದು ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಪಂಚಾಯತ್ ಮಟ್ಟದಲ್ಲಿ ನಡೆಯುತ್ತದೆ” ಎಂದು ತಿಳಿಸಿದರು.
ಇನ್ನು “ಅಭಿಯಾನವು ಜನವರಿ 8ರಂದು ಪ್ರಾರಂಭವಾಗಿ 45 ದಿನಗಳವರೆಗೆ ನಡೆಯಲಿದೆ. ಇದು ರಾಷ್ಟ್ರೀಯ ಚಳುವಳಿಯಾಗಿರುತ್ತದೆ. ಅಗತ್ಯವಿದ್ದರೆ, ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ರೈತರ ಹೋರಾಟದಿಂದಾಗಿ ಮೂರು ಕರಾಳ ಕೃಷಿ ಕಾನೂನು ಏನಾಯಿತೋ ಅದೇ ರೀತಿಯ ಫಲಿತಾಂಶ ಈ ಅಭಿಯಾನದಿಂದ ಹೊರಹೊಮ್ಮಲಿದೆ” ಎಂದು ಭರವಸೆ ವ್ಯಕ್ತಪಡಿಸಿದರು.





