ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿಸಂಸ್ಥೆ ಪಿಟಿಐ ಜತೆ ನಡೆಸಿದ ಸಂದರ್ಶನವನ್ನು ಕಾಂಗ್ರೆಸ್ ಟೀಕಿಸಿದೆ. “ಇದು ಸಂದರ್ಶನವಲ್ಲ. ಇದು ಎಚ್ಚರಿಕೆಯಿಂದ ಸಿದ್ಧಪಡಿಸಿದ ‘ಸ್ಕ್ರಿಪ್ಟ್’ ಮತ್ತು ಹತಾಶೆಯ ಪಿಆರ್ ಕಸರತ್ತು” ಎಂದು ಹೇಳಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಅಮೆರಿಕಾದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತ ಶರಣಾಗಿದೆ. ಇದೀಗ ರೈತರ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿ ಅವರು ‘ಹೆಡ್‌ಲೈನ್ ಮ್ಯಾನೇಜ್‌ಮೆಂಟ್’ ತಂತ್ರವನ್ನು ಬಳಸುತ್ತಿದ್ದಾರೆ” ಎಂದು ರಮೇಶ್ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ‘ದೇವಮಾನವ’ನಿಂದ ಮರಳಿ ‘ಮಾನವ’ನಾದ ಪ್ರಧಾನಿ ಮೋದಿ
“ಈ ವರ್ಷದ ಕೇಂದ್ರ ಬಜೆಟ್ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಮಾರುಕಟ್ಟೆಗಳು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ. ಬಜೆಟ್ ಮೇಲಿನ ಟೀಕೆಗಳನ್ನು ಮರೆಮಾಚಲು ಸಂಸತ್ತಿನ ಅಧಿವೇಶನದ ಬೆನ್ನಲ್ಲೇ ಈ ಸಂದರ್ಶನ ನೀಡಲಾಗಿದೆ” ಎಂದು ದೂರಿದ್ದಾರೆ. “ಪ್ರಧಾನಿಗಳು ಈಗ ತಲೆತಗ್ಗಿಸಿದ್ದಾರೆ ಮತ್ತು ದಣಿದಿದ್ದಾರೆ” ಎಂದು ವ್ಯಂಗ್ಯವಾಡಿದರು.
ಇನ್ನು ತೃಣಮೂಲ ಕಾಂಗ್ರೆಸ್ (TMC) ಪ್ರಧಾನಿಯವರ ಮಾತುಗಳನ್ನು “ಟೊಳ್ಳು ಮಾತುಗಳು” ಎಂದು ಟೀಕಿಸಿದರೆ, ಎಡಪಕ್ಷಗಳು ಪ್ರಧಾನಿಯವರ ಹೇಳಿಕೆಗಳು ಭಾರತೀಯ ಆರ್ಥಿಕತೆಯ ವಾಸ್ತವಕ್ಕೆ ದೂರವಾಗಿವೆ ಎಂದು ಹೇಳಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದರೂ ಈವರೆಗೆ ಒಂದೇ ಒಂದೂ ಪೂರ್ಣಪ್ರಮಾಣದ ಮುಕ್ತ ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಪಿಟಿಐ, ಎಎನ್‌ಐ ಸೇರಿದಂತೆ ಕೆಲವು ಬೆರಳೆಣಿಗೆ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಆದರೆ ಅವೆಲ್ಲವೂ ಪೂರ್ವಯೋಜಿತ, ಮೊದಲೇ ಸಿದ್ಧಪಡಿಸಿ ಪ್ರಶ್ನೆಗಳನ್ನು ನೀಡಲಾಗುವ ಸಂದರ್ಶನ. ಪ್ರಧಾನಿ ಮೋದಿ ಕಚೇರಿಯೇ ಈ ಪ್ರಶ್ನೆಗಳನ್ನು ನೀಡುತ್ತದೆ ಎಂಬುದು ವಿಪಕ್ಷಗಳ ಆರೋಪ.





