ಬಿಹಾರ ವಿಧಾಸನಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮಾಜಿ ಸಚಿವರು ಸೇರಿದಂತೆ 43 ನಾಯಕರಿಗೆ ಕಾಂಗ್ರೆಸ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಪಕ್ಷಕ್ಕೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಶಿಸ್ತು ಸಮಿತಿಯು ನಾಯಕರಿಗೆ ಶೋಕಾಸ್ ನೋಟಿಸ್ ಕಳುಹಿಸಿದೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಎಸ್‌ಐಆರ್ ವಿರುದ್ಧ ರಾಜಕೀಯವಾಗಿ, ಕಾನೂನುಬದ್ಧವಾಗಿ ಕಾಂಗ್ರೆಸ್ ಹೋರಾಡಲಿದೆ: ರಾಹುಲ್ ಗಾಂಧಿ
ಈ 43 ನಾಯಕರಲ್ಲಿ ಮಾಜಿ ಸಚಿವೆ ವೀಣಾ ಶಾಹಿ, ಕಾಂಗ್ರೆಸ್ ನಾಯಕ ಮಧುರೇಂದ್ರ ಕುಮಾರ್ ಸಿಂಗ್, ರಾಜ್ಯ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಕೈಸರ್ ಖಾನ್, ಮಾಜಿ ಶಾಸಕ ಸುಧೀರ್ ಕುಮಾರ್ ಮತ್ತು ಮಾಜಿ ಎಂಎಲ್‌ಸಿ ಅಜಯ್ ಕುಮಾರ್ ಸಿಂಗ್ ಸೇರಿದ್ದಾರೆ.
ಇನ್ನು ಕಾಂಗ್ರೆಸ್‌ನ ಶಿಸ್ತು ಸಮಿತಿಯ ಅಧ್ಯಕ್ಷ ಕಪಿಲ್ ದೇವ್ ಪ್ರಸಾದ್ ಯಾದವ್ ಈ ಬಗ್ಗೆ ಮಾಹಿತಿ ನೀಡಿದ್ದು, “ನವೆಂಬರ್ 21ರಂದು ಮಧ್ಯಾಹ್ನದೊಳಗೆ ಎಲ್ಲಾ ನಾಯಕರು ಸಮಿತಿಯ ಮುಂದೆ ಲಿಖಿತ ಸ್ಪಷ್ಟೀಕರಣವನ್ನು ಮಂಡಿಸಲು ನಿರ್ದೇಶಿಸಲಾಗಿದೆ” ಎಂದು ತಿಳಿಸಿದ್ದಾರೆ.
“ನಿಗದಿತ ಸಮಯದೊಳಗೆ ಉತ್ತರ ಸಿಗದಿದ್ದರೆ, ಸಮಿತಿಯು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಕಠಿಣ ಕ್ರಮಗಳಲ್ಲಿ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಗಿಡುವುದೂ ಸೇರಿದೆ. ಶಿಸ್ತು ಮತ್ತು ಏಕತೆ ಪಕ್ಷಕ್ಕೆ ಹೆಚ್ಚಿನ ಆದ್ಯತೆಗಳಾಗಿದ್ದು, ಇವುಗಳಿಗೆ ಹಾನಿ ಮಾಡುವ ಯಾವುದೇ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದೂ ಹೇಳಿದ್ದಾರೆ.
243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗೆದ್ದುಕೊಂಡಿದೆ. ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷ ಮಹಾಘಟಬಂಧನ್ 35 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ. ಈ ಪೈಕಿ ಆರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಅಸಾದುದ್ದೀನ್ ಓವೈಸಿ ಅವರ AIMIM ಐದು ಸ್ಥಾನಗಳನ್ನು ಗೆದ್ದರೆ, ಮುಖೇಶ್ ಸಹಾನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷ (VIP) ಯಾವುದೇ ಕ್ಷೇತ್ರದಲ್ಲಿ ಗೆಲುವು ಕಂಡಿಲ್ಲ.
ಈ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಎಸ್ಐಆರ್ ಮತ್ತು ಚುನಾವಣಾ ಪ್ರಕ್ರಿಯೆ ಬಗ್ಗೆ ಪ್ರಶ್ನೆ ಎತ್ತಿವೆ. ಮತಗಳ್ಳತನದ ವಿಚಾರವೂ ಮುನ್ನೆಲೆಗೆ ಬಂದಿದೆ. ಈ ನಡುವೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧವೂ ಕಾಂಗ್ರೆಸ್ ಕ್ರಮಕ್ಕೆ ಮುಂದಾಗಿದೆ.





