ಕೇರಳದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಬಾರಿ ಮತ್ತೆ ಎಲ್‌ಡಿಎಫ್ ಅಧಿಕಾರ ಪಡೆಯಬಹುದೇ ಅಥವಾ ಯುಡಿಎಫ್ ಗೆಲ್ಲಬಹುದೇ ಎಂಬ ಕಾತುರವಿದೆ. ಸಿಎಂ ಗದ್ದುಗೆಯನ್ನು ಎಲ್‌ಡಿಎಫ್‌ನಿಂದ ಕಸಿದುಕೊಳ್ಳುವ ವಿಶ್ವಾಸವನ್ನು ಯುಡಿಎಫ್ ಹೊಂದಿದೆ. ಈ ನಡುವೆಯೇ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ನೀಡಿರುವ ಹೇಳಿಕೆಯು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕೇರಳ ರಾಜ್ಯ ಯೋಜನಾ ಮಂಡಳಿಯು ಭಾನುವಾರ ತಿರುವನಂತಪುರದಲ್ಲಿ ಆಯೋಜಿಸಿದ್ದ ‘ವಿಷನ್ 2031: ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಅಂತಾರಾಷ್ಟ್ರೀಯ ಸಮ್ಮೇಳನ’ದಲ್ಲಿ ಮಾತನಾಡಿದ ಅಯ್ಯರ್, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಹಾಡಿಹೊಗಳಿದ್ದಾರೆ. “ಪಿಣರಾಯಿ ವಿಜಯನ್ ಮತ್ತೆ ಕೇರಳ ಮುಖ್ಯಮಂತ್ರಿಯಾಗುವುದು ಖಚಿತ” ಎಂದೂ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕೇರಳದ ಅಸಲಿ ಕಥೆಯೇ ಬೇರೆ : ಪಿಣರಾಯಿ ವಿಜಯನ್
ಪಂಚಾಯತ್ ರಾಜ್‌ನಲ್ಲಿ ಕೇರಳ ಭಾರತದ ನಾಯಕ ಎಂದಿರುವ ಅಯ್ಯರ್, ಈ ಕಾರ್ಯಕ್ರಮದಲ್ಲಿ ಇತರೆ ಕಾಂಗ್ರೆಸ್ ನಾಯಕರ ಅನುಪಸ್ಥಿತಿಯನ್ನು ಟೀಕಿಸಿದ್ದಾರೆ. “ದೇಶದಲ್ಲಿ ಪಂಚಾಯತಿ ರಾಜ್‌ಗೆ ಯಾವುದೇ ಪ್ರತಿಪಾದಕರು ಉಳಿದಿಲ್ಲ ಎಂದು ನನಗೆ ಭಯವಾಗಿದೆ. ಆದ್ದರಿಂದ, ಪಿಣರಾಯಿ ವಿಜಯನ್, ನಾನು ನಿಮ್ಮ ಪಾದಗಳಿಗೆ ಬಿದ್ದು ಕೇಳುತ್ತೇನೆ. ದಯವಿಟ್ಟು, ಸರ್, ಕಾಂಗ್ರೆಸ್ ಬೀಳಿಸಿದ ಲಾಠಿಯನ್ನು ಎತ್ತಿಕೊಳ್ಳಿ” ಎಂದು ಕಾಂಗ್ರೆಸ್ ಅನ್ನು ಅಯ್ಯರ್ ಟೀಕಿಸಿದ್ದಾರೆ.
“ಪಂಚಾಯತಿ ರಾಜ್‌ನಲ್ಲಿ ಕೇರಳ ಭಾರತದ ನಾಯಕ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ನಿರೀಕ್ಷೆಗಳನ್ನು ನೋಡಿದಾಗ ರಾಜ್ಯವು ಬೇರೆ ರಾಜ್ಯಗಳಿಗಿಂತ ಹೆಚ್ಚಿನದನ್ನು ಸಾಧಿಸುತ್ತಿದೆ. ಬಡವರು ರಾಷ್ಟ್ರದ ಅಭಿವೃದ್ಧಿಯಲ್ಲಿ ಧ್ವನಿ ಹೊಂದಿರಬೇಕು ಎಂಬ ಮಹಾತ್ಮ ಗಾಂಧೀಜಿಯವರ ನಿರ್ದೇಶನದಲ್ಲಿ ಪ್ರಗತಿ ಸಾಧಿಸಿದ ಏಕೈಕ ರಾಜ್ಯವೆಂದರೆ ಮಾರ್ಕ್ಸ್‌ವಾದಿ-ಲೆನಿನ್‌ವಾದ ಪಕ್ಷಗಳು ಆಳುವ ಕೇರಳ” ಎಂದೂ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೋಮುವಾದ ಹರಡುವ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ: ಪಿಣರಾಯಿ ವಿಜಯನ್ ಆಕ್ರೋಶ
ಕಾಂಗ್ರೆಸ್ ನಾಯಕರ ಹೇಳಿಕೆ ರಾಜಕೀಯವಾಗಿ ತೀವ್ರ ಚರ್ಚೆಗೆ ಒಳಗಾಗುತ್ತಿದ್ದಂತೆ, “ಕಳೆದ ಕೆಲವು ವರ್ಷಗಳಿಂದ ಅಯ್ಯರ್ ಅವರಿಗೆ ಕಾಂಗ್ರೆಸ್ ಜತೆ ಯಾವುದೇ ಸಂಬಂಧ ಹೊಂದಿಲ್ಲ” ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಅಯ್ಯರ್ ಅವರು ಸಂಪೂರ್ಣವಾಗಿ ತಮ್ಮ ವೈಯಕ್ತಿಕ ವಿಚಾರವನ್ನು ಮಾತನಾಡುವುದು, ಬರೆಯುವುದು. ಅವರು ಈಗ ಕಾಂಗ್ರೆಸ್‌ನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ” ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ, “ಇದು ಚುನಾವಣಾ ಪೂರ್ವ ಪ್ರಚಾರ ಕಾರ್ಯಕ್ರಮ. ಅಯ್ಯರ್ ಮತ್ತು ಅಮರ್ತ್ಯ ಸೇನ್ ಅವರಂತಹ ಇತರ ಗಣ್ಯ ವ್ಯಕ್ತಿಗಳನ್ನು ಈ ಕಾರ್ಯಕ್ರಮದಿಂದ ದೂರವಿರಬೇಕು” ಎಂದು ಒತ್ತಾಯಿಸಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ವಿಜಯನ್ ಅವರನ್ನು ಕಾಂಗ್ರೆಸ್ ನಾಯಕರೇ ಹೊಗಳಿರುವುದು, ವಿಜಯನ್ ಅಧಿಕಾರವನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳಿರುವುದು ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿದೆ.





