ಗೋವಾದ ನೈಟ್‌ಕ್ಲಬ್ ಅಗ್ನಿ ಅವಘಡದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಭಾನುವಾರ ಒತ್ತಾಯಿಸಿದೆ. ಹಾಗೆಯೇ ಈ ಘಟನೆಯು ಸುರಕ್ಷತೆ ಮತ್ತು ಆಡಳಿತದ ಕ್ರಿಮಿನಲ್ ವೈಫಲ್ಯ ಎಂದು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಸದ್ಯ ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ಜನಪ್ರಿಯ ನೈಟ್‌ಕ್ಲಬ್ ಬಿರ್ಚ್ ಬೈ ರೋಮಿಯೋ ಲೇನ್‌ನಲ್ಲಿ ಭಾನುವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು ನಾಲ್ವರು ಪ್ರವಾಸಿಗರು ಮತ್ತು 14 ಸಿಬ್ಬಂದಿ ಸೇರಿದಂತೆ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಗೋವಾ ನೈಟ್ ಕ್ಲಬ್‌ನಲ್ಲಿ ಭೀಕರ ಬೆಂಕಿ ದುರಂತ: 23 ಮಂದಿ ಜೀವಂತ ದಹನ
ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಈ ದುರಂತವು ಅತಿ ದೊಡ್ಡ ನಷ್ಟವಾಗಿದೆ. ಮೃತರ ಕುಟುಂಬಸ್ಥರು ಮತ್ತು ಪ್ರೀತಿಪಾತ್ರರಿಗೆ ನನ್ನ ತೀವ್ರ ಸಂತಾಪಗಳು. ಮೊದಲೇ ತಡೆಗಟ್ಟಬಹುದಾದ ಅವಘಡ ಇದಾಗಿದೆ. ಈ ದುರಂತದಲ್ಲಿ ಸರಿದೂಗಿಸಲಾಗದ ನಷ್ಟವಾಗಿದೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
“ಇಂತಹ ದುರಂತಗಳು ಸಮಗ್ರ ತನಿಖೆಗೆ ಒಳಗಾಗಬೇಕು. ಎಲ್ಲಾ ಅಗ್ನಿ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮಗಳ ಅಗತ್ಯವಿದೆ. ಇದರಿಂದಾಗಿ ಇಂತಹ ವಿನಾಶಕಾರಿ ಘಟನೆಗಳು ಪುನರಾವರ್ತನೆಯಾಗುವುದಿಲ್ಲ. ಈ ಪ್ರದೇಶದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ಸಹಾಯವನ್ನು ನೀಡಬೇಕೆಂದು ಮತ್ತು ಇಂತಹ ಸಮಯದಲ್ಲಿ ಅವರೊಂದಿಗೆ ನಿಲ್ಲಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಗೋವಾದ ಅರ್ಪೋರಾದಲ್ಲಿ 20ಕ್ಕೂ ಹೆಚ್ಚು ಜೀವಗಳನ್ನು ಭೀಕರ ಬೆಂಕಿ ದುರಂತ ಬಲಿ ಪಡೆದುಕೊಂಡಿದೆ. ಈ ಘಟನೆ ತೀವ್ರ ನೋವುಂಟು ಮಾಡಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.
“ಇದು ಕೇವಲ ಅಪಘಾತವಲ್ಲ, ಸುರಕ್ಷತೆ ಮತ್ತು ಆಡಳಿತದ ಕ್ರಿಮಿನಲ್ ವೈಫಲ್ಯ. ಸಂಪೂರ್ಣ, ಪಾರದರ್ಶಕ ತನಿಖೆ ನಡೆಯಬೇಕು. ಅಂತಹ ತಡೆಗಟ್ಟಬಹುದಾದ ದುರಂತಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.





