ಕಮಿಷನ್ ದುಪ್ಪಟ್ಟಾಗಿದೆ, ಭಷ್ಟಾಚಾರ ಹೆಚ್ಚಾಗಿದೆ. ಹಣ ಬಿಡುಗಡೆ ಮಾಡಲು ಕಮಿಷನ್ ನೀಡಬೇಕಾಗಿದೆ ಎಂದು ಆರೋಪಿಸುತ್ತಿರುವ ಗುತ್ತಿಗೆದಾರರ ಸಂಘವು ಈ ಸಂಬಂಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯಲು ಮುಂದಾಗಿದೆ. ಈ ಸಂಬಂಧ ಗುರುವಾರ ಸುದ್ದಿಗೋಷ್ಠಿ ನಡೆಸಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಎಂ ನಂದಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ಈ ಕಮಿಷನ್ ಹಾವಳಿ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಜೆಪಿ ಸರ್ಕಾರವನ್ನು ಶೇ.40ರಷ್ಟು ಕಮಿಷನ್ ಸರ್ಕಾರ ಎಂದು ಆರೋಪಿಸಿತ್ತು. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ್ದ ಅಭಿಯಾನವು ಹಲವು ಜನರ ಬಾಯಲ್ಲಿ ‘40% ಸರ್ಕಾರ’ ಎಂಬ ಮಾತು ಬರುವಂತೆ ಮಾಡಿತ್ತು. ಗುತ್ತಿಗೆದಾರರ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಮಾಡಿದ್ದ ಆರೋಪ ಕಾಂಗ್ರೆಸ್‌ಗೆ ಬಲ ನೀಡಿತ್ತು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಹೆಚ್ಚಳ: ಗುತ್ತಿಗೆದಾರರ ಸಂಘ ಆರೋಪ
ಇದೀಗ ಸರ್ಕಾರ ಬದಲಾಗಿದೆ. ಆದರೂ ಈ ಕಮಿಷನ್ ಹಾವಳಿ ನಿಂತಿಲ್ಲ, ಬದಲಾಗಿ ದುಪ್ಪಟ್ಟಾಗಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಅದಕ್ಕೆ ಬಿಜೆಪಿಯು ಜತೆ ಸೇರಿದೆ. “ಸಿಎಂ ಸಭೆ ಕರೆದರೆ ನಾವು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡುತ್ತೇವೆ. ಮೂರು ವರ್ಷಗಳಿಂದ ಬಿಲ್ ಬಾಕಿ ಬಿಡುಗಡೆಯಾಗದೆ ನಾವು ಸಂಕಷ್ಟದಲ್ಲಿದ್ದೇವೆ. ಸಿಎಂ ಒಮ್ಮೆ ನಮ್ಮ ಸ್ಥಾನದಲ್ಲಿ ನಿಂತು ನೋಡಬೇಕು” ಎಂದು ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಒತ್ತಾಯಿಸಿದ್ದಾರೆ.
“ಈ ಹಿಂದಿನ ಸರ್ಕಾರ ನಮ್ಮ ಬಾಕಿ ಹಣ ಪಾವತಿಸಿಲ್ಲ. ಆದರೆ ಈಗ ಇರುವ ಸರ್ಕಾರವೂ ಅದೇ ಮಾಡುತ್ತಿದೆ. ಸಿಎಂ ನಮ್ಮನ್ನು ಔಪಚಾರಿಕವಾಗಿ ಭೇಟಿ ಮಾಡಿದ್ದಾರೆ. ಆದರೆ ಅಧಿಕೃತ ಸಭೆ ಕರೆದಿಲ್ಲ. ನಾವು ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇವೆ. ಕೊನೆಯದಾಗಿ ನಮಗೆ ಹೋರಾಟದ ದಾರಿ ಮಾತ್ರ ಉಳಿದಿರುವುದು” ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಮಾರ್ಚ್ 5ರ ಒಳಗಾಗಿ ಬಾಕಿ ಇರುವ 37 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ನಾವು ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತೇವೆ. ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದೂ ಸಂಘ ಎಚ್ಚರಿಕೆ ನೀಡಿದೆ.





