ಡಿಸೆಂಬರ್ 6ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ‘ಬಾಬರಿ ಮಸೀದಿ’ಗೆ ಶಂಕುಸ್ಥಾಪನೆ ನೆರವೇರಿಸುವುದಾಗಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಶಾಸಕ ಹುಮಾಯೂನ್ ಕಬೀರ್ ಘೋಷಿಸಿದ್ದಾರೆ. ಈ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡು 33 ವರ್ಷಗಳಾಗಲಿದೆ. ಇದೇ ದಿನ ಬೆಲ್ದಂಗಾದಲ್ಲಿ ‘ಬಾಬರಿ ಮಸೀದಿ’ಗೆ ಶಂಕುಸ್ಥಾಪನೆ ಮಾಡುವುದಾಗಿ ಕಬೀರ್ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬಾಬರಿ ಮಸೀದಿ ಧ್ವಂಸ ಸಮರ್ಥನೆ; ಮಹಾ ವಿಕಾಸ್ ಅಘಾಡಿಯಿಂದ ಹೊರನಡೆದ ಎಸ್‌ಪಿ
“ನಾವು ಡಿಸೆಂಬರ್ 6ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಪಾಯ ಹಾಕುತ್ತೇವೆ. ಇದು ಪೂರ್ಣಗೊಳ್ಳಲು ಮೂರು ವರ್ಷಗಳು ಬೇಕಾಗುತ್ತದೆ. ಆ ಕಾರ್ಯಕ್ರಮದಲ್ಲಿ ವಿವಿಧ ಮುಸ್ಲಿಂ ನಾಯಕರು ಭಾಗವಹಿಸುತ್ತಾರೆ” ಎಂದು ಘೋಷಿಸಿದ್ದಾರೆ.
ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ವಕ್ತಾರ ಯಾಸರ್ ಜಿಲಾನಿ ಶಾಸಕರು ಚುನಾವಣಾ ಲಾಭಕ್ಕಾಗಿ ಉದ್ದೇಶಪೂರ್ವಕ ಕೋಮು ಪ್ರಚೋದನೆಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಟಿಎಂಸಿ ನಾಯಕರು, ವಿಶೇಷವಾಗಿ ಶಾಸಕ ಹುಮಾಯೂನ್ ಕಬೀರ್, ದ್ವೇಷದ ರಾಜಕೀಯಕ್ಕೆ ಹೆಸರುವಾಸಿಯಾಗಿದ್ದಾರೆ” ಎಂದು ದೂರಿದ್ದಾರೆ.
“ಕಬೀರ್ ಅವರು ಬಂಗಾಳದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರು ಟಿಎಂಸಿಯನ್ನು ತಿರಸ್ಕರಿಸುತ್ತಾರೆ ಮತ್ತು ಅಲ್ಲಿ ರಾಜಕೀಯ ಬದಲಾವಣೆಯ ಅಲೆ ಏರುತ್ತಿದೆ ಎಂಬುದು ಅವರಿಗೆ ತಿಳಿದಿದೆ. ಈ ಅಶಾಂತಿ ಸೃಷ್ಟಿಸಿ, ಹುಮಾಯೂನ್ ಕಬೀರ್ ಮತ್ತು ಹಿರಿಯ ಟಿಎಂಸಿ ನಾಯಕರು ತಮ್ಮ ಮತಬ್ಯಾಂಕ್ ರಕ್ಷಿಸಲು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಮಿಶ್ರ ಮತ್ತು ಸೂಕ್ಷ್ಮ ಪ್ರತಿಕ್ರಿಯೆಯನ್ನು ನೀಡಿದೆ. “ಯಾರಾದರೂ ಮಸೀದಿಯನ್ನು ನಿರ್ಮಿಸಬಹುದು, ಅದಕ್ಕೂ ಬಾಬರಿಗೂ ಏನು ಸಂಬಂಧವಿದೆ? ಅವರು ಮಸೀದಿಯನ್ನು ನಿರ್ಮಿಸಲು ಬಯಸಿದರೆ ನಿರ್ಮಿಸಬಹುದು” ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಋತಂಭರಗೆ ಪದ್ಮಭೂಷಣ ಪ್ರಶಸ್ತಿ
ಇನ್ನು ಕಾಂಗ್ರೆಸ್ ಸಂಸದ ಸುರೇಂದ್ರ ರಜಪೂತ್, “ಯಾರಾದರೂ ಮಸೀದಿ, ದೇವಾಲಯಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳನ್ನು ನಿರ್ಮಿಸುವುದಾದರೆ ಅದರಲ್ಲಿ ವಿವಾದ ಏನಿದೆ? ಇದನ್ನು ವಿವಾದದ ವಿಷಯವನ್ನಾಗಿ ಏಕೆ ಮಾಡಲಾಗುತ್ತಿದೆ? ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಪೂಜಾ ಸ್ಥಳಗಳನ್ನು ನಿರ್ಮಿಸುವ ಹಕ್ಕಿದೆ” ಎಂದು ಹೇಳಿದ್ದಾರೆ.
ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಟಿಎಂಸಿ ನಾಯಕರ ಹೇಳಿಕೆಯನ್ನು ಖಂಡಿಸಿದೆ. “ಒಂದು ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಿದ ನಂತರ, ಅದು ಕೊನೆಯವರೆಗೂ ಮಸೀದಿಯಾಗಿ ಉಳಿಯುತ್ತದೆ ಎಂಬುದನ್ನು ಅವರು ಅರಿಯಬೇಕು. ಬಾಬರಿ ಮಸೀದಿಯ ಹೆಸರಿನಲ್ಲಿ ಭಾರತದಲ್ಲಿ ನೂರಾರು ಮಸೀದಿಗಳನ್ನು ನಿರ್ಮಿಸಿದರೂ, ಅಯೋಧ್ಯೆಯಲ್ಲಿರುವ ಮೂಲ ಬಾಬರಿ ಮಸೀದಿಯ ಮಹತ್ವವನ್ನು ಎಂದಿಗೂ ಅಳಿಸಲಾಗದು” ಎಂದು ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಹೇಳಿದ್ದಾರೆ.





