ಹರಿಯಾಣದ ದಲಿತ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಅವರ ಆತ್ಮಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ (ಸಿಪಿಐಎಂ) ಒತ್ತಾಯಿಸಿದೆ. ಮೃತ ಅಧಿಕಾರಿಯ ಕುಟುಂಬವನ್ನು ಭೇಟಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಪತ್ರ ಬರೆದಿದ್ದಾರೆ. ಸಿಪಿಎಂ ನಿಯೋಗವು ಐಪಿಎಸ್ ಅಧಿಕಾರಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದೆ.
“ನ್ಯಾಯಯುತ ಮತ್ತು ಪಾರದರ್ಶಕ ನ್ಯಾಯಾಂಗ ತನಿಖೆಯು ದೇಶದ ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧತೆಯನ್ನು ಮತ್ತು ಯಾವುದೇ ರೀತಿಯ ತಾರತಮ್ಯದಿಂದ ತನ್ನ ಅಧಿಕಾರಿಗಳನ್ನು ರಕ್ಷಿಸುವುದನ್ನು ಪುನರುಚ್ಚರಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ | ಮೃತ ಐಪಿಎಸ್ ಪೂರಣ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ
ಈ ಘಟನೆಯ ಬಗ್ಗೆ ತೀವ್ರ ಕಳವಳ ಮತ್ತು ದುಃಖವನ್ನು ವ್ಯಕ್ತಪಡಿಸಿದ ಬೇಬಿ, “ಇದು ದೇಶಾದ್ಯಂತ ಆಘಾತವನ್ನು ಉಂಟು ಮಾಡಿದೆ. ಪೊಲೀಸ್ ಸೇವೆಯಲ್ಲಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಅಧಿಕಾರಿಗಳಿಗೆ ಇರುವ ಹೊಣೆಗಾರಿಕೆ ಮತ್ತು ರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ.
“ಪೂರಣ್ ಕುಮಾರ್ ಅವರ ಸಾವಿಗೆ ಕಾರಣದ ಬಗ್ಗೆ ತನಿಖೆಗಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ತಂಡವನ್ನು ರಚಿಸಿ ತಕ್ಷಣವೇ ನ್ಯಾಯಾಂಗ ತನಿಖೆಯನ್ನು ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ. ಹಾಗೆಯೇ ಮೃತ ಅಧಿಕಾರಿ ಹೆಸರಿಸಿದ ಎಲ್ಲಾ ಅಧಿಕಾರಿಗಳನ್ನು ನ್ಯಾಯಾಂಗ ವಿಚಾರಣೆ ಮುಗಿಯುವವರೆಗೂ ಅಮಾನತುಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ತನಿಖೆಯ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರದಂತೆ ಅಥವಾ ಯಾವುದೇ ರಾಜಿ ನಡೆಯದಂತೆ ನೋಡಿಕೊಳ್ಳಲು ಇದು ಅತ್ಯಗತ್ಯ” ಎಂದು ಹೇಳಿದ್ದಾರೆ.
“ಈ ಪ್ರಕರಣವನ್ನು ತುರ್ತು ಮತ್ತು ಗಂಭೀರತೆಯಿಂದ ಪರಿಗಣಿಸಲಾಗುತ್ತದೆ ಎಂದು ನಾವು ನಂಬುತ್ತೇವೆ. ನ್ಯಾಯಯುತ ಮತ್ತು ಪಾರದರ್ಶಕ ನ್ಯಾಯಾಂಗ ತನಿಖೆಯು ದುಃಖಿತ ಕುಟುಂಬಕ್ಕೆ ಸಾಂತ್ವನ ನೀಡುವುದಲ್ಲದೆ, ಸಾಂವಿಧಾನಿಕ ಮೌಲ್ಯಗಳಿಗೆ ದೇಶದ ಬದ್ಧತೆಯನ್ನು ಮತ್ತು ಯಾವುದೇ ರೀತಿಯ ತಾರತಮ್ಯದಿಂದ ಅಧಿಕಾರಿಗಳ ರಕ್ಷಣೆಯನ್ನು ಪುನರುಚ್ಚರಿಸುತ್ತದೆ” ಎಂದೂ ಬೇಬಿ ಬರೆದಿದ್ದಾರೆ.
ಐಪಿಎಸ್ ಅಧಿಕಾರಿಯ ಸಾವಿನ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು ಘಟನೆಗೆ ಆಘಾತಕಾರಿ ತಿರುವು ನೀಡಿದೆ. ರೋಹ್ಟಕ್‌ನ ಸೈಬರ್ ಸೆಲ್‌ನಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದ ಸಂದೀಪ್ ಕುಮಾರ್, ಮೃತ ಅಧಿಕಾರಿ ಪೂರಣ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು ಆತ್ಮಹತ್ಯೆ ಮಾಡಿದ್ದಾರೆ.





