ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿ ಅವಮಾನಿಸಿದ ರಾಕೇಶ್ ಕಿಶೋರ್ನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಮುಖಂಡರು, ಕಾರ್ಯಕರ್ತರು ನಗರದ ಜಯದೇವ ವೃತ್ತದಿಂದ ಡಾ. ಬಿಆರ್ ಅಂಬೇಡ್ಕರ್ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮನುವಾದಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಕಾಂಗ್ರೆಸ್ ಮುಖಂಡ ವಕೀಲ ಅನೀಸ್ ಪಾಷಾ ಮಾತನಾಡಿ “ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಅಂಬೇಡ್ಕರ್ ಈ ದೇಶದ ಎಲ್ಲರಿಗೂ ಸಮಾನ ಹಕ್ಕು ನೀಡಿದ್ದಾರೆ. ಇದನ್ನು ಹಾಳು ಮಾಡಿ ಕೋಮುದ್ವೇಷ ಹೊರಡಿಸಲು ಮತೀಯ ಶಕ್ತಿಗಳು ಈ ರೀತಿಯ ದುರ್ವರ್ತನೆ ತೋರಿಸುತ್ತಿವೆ. ಮುಖ್ಯ ನ್ಯಾಯಾಧೀಶ ಬಿ ಆರ್ ಗವಾಯಿಗಳು ಅಂಬೇಡ್ಕರ್ ವಾದಿಗಳು. ಅವರು ನ್ಯಾಯಪರ ತೀರ್ಪು ನೀಡುತ್ತಿರುವುದು ಕೋಮುವಾದಿ, ಮನುವಾದಿಗಳು ನುಂಗಲಾರದ ತುತ್ತಾಗಿದೆ. ಅವರ ಲೆಕ್ಕಾಚಾರದಂತೆ ಮುಖ್ಯ ನ್ಯಾಯಾಧೀಶರು ಇಲ್ಲದೆ, ನ್ಯಾಯ ಮತ್ತು ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತಿರುವುದೇ ಈ ಹಲ್ಲೆ ಯತ್ನಕ್ಕೆ ಮುಂದಾಗಿದೆ” ಎಂದು ಅಭಿಪ್ರಾಯಪಟ್ಟರು.

“ಮನುವಾದಿಗಳು ಅಂಬೇಡ್ಕರರ ವಿರೋಧಿಗಳು. ದೇಶವಿರೋಧಿಗಳು. ಅವರ ಮೇಲೆ ಶೂ ಎಸೆತ ಯತ್ನ ದೇಶಕ್ಕೆ ಮಾಡಿದ ಅವಮಾನವಾಗಿದ್ದು. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಮುಖಂಡ ಹಲಗೇರಿ ಮಂಜಪ್ಪ ಮಾತನಾಡಿ, “ಮನುವಾದಿಗಳು ಅಂಬೇಡ್ಕರ್ ವಿರೋಧಿಗಳು. ಹಾಗಾಗಿ ಅಂಬೇಡ್ಕರ್ ವಾದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದು ಕೇವಲ ಮುಖ್ಯ ನ್ಯಾಯಾಧೀಶರ ಮೇಲಿನ ಹಲ್ಲೆ, ಅವಮಾನ ಮಾತ್ರವಲ್ಲ, ಅಂಬೇಡ್ಕರ್ ಮತ್ತು ಸಂವಿಧಾನ ಮೇಲೆ ನಡೆದ ಕೃತ್ಯ. 3% ಪುರೋಹಿತಶಾಹಿ ಈ ದೇಶ ಆಳುತ್ತಿದೆ. ಈ ದೇಶದ ಬಹುಸಂಖ್ಯಾತರು ಪಂಜಿನ ಮೆರವಣಿಗೆ ಹೋರಾಟ ಮಾಡುತ್ತಿರುವುದು ದುರಂತ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಿರಾಶ್ರಿತರಿಗೆ ಮನೆ ನಿರ್ಮಾಣಕ್ಕೆ ಸೌಕರ್ಯ ಒದಗಿಸಿ: ಪ್ರಗತಿಪರ ಸಂಘಟನೆಗಳ ಒತ್ತಾಯ
ಪಂಜಿನ ಮೆರವಣಿಗೆ ಮತ್ತು ಪ್ರತಿಭಟನೆಯಲ್ಲಿ ಆಪ್ ಮುಖಂಡ ಆದಿಲ್ ಖಾನ್, ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಮುಖಂಡ ಲಿಂಗರಾಜು ಗಾಂಧಿನಗರ, ಕಾಂಗ್ರೆಸ್ ಯುವ ಘಟಕದ ಮುಖಂಡ ವರುಣ್ ಬೆನ್ನಳ್ಳಿ, ವಕೀಲ ರಾಕೇಶ್, ಮಂಜುನಾಥ್, ಅರುಣ್, ಹಂಚಿನ ಮನೆ ದಯಾನಂದ, ಮಂಜುನಾಥ್ ಆರ್ ಶಾಂತಿನಗರ, ಶಿವಶಂಕರ್ ಎಸ್ಎಂ, ಸೇರಿದಂತೆ ಕಾರ್ಯಕರ್ತರು ವಿದ್ಯಾರ್ಥಿಗಳು ಹಾಜರಿದ್ದರು.





