ಯಾವುದಾದರೂ ಕ್ಷೇತ್ರದಲ್ಲಿ ಅಲ್ಲಿನ ಶಾಸಕರು ನಿಧನ ಹೊಂದಿದ ಬಳಿಕ ಆ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡುವುದು ಕಾಂಗ್ರೆಸ್‌ನ ಸಂಪ್ರದಾಯವೆಂಬಂತೆ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ದೃಷ್ಟಿಯಲ್ಲಿ ಕ್ಷೇತ್ರಕ್ಕೆ ಮಾಜಿ ಶಾಸಕರ ಕೊಡುಗೆಯನ್ನು ಅಲ್ಲಗಳೆಯುವುದಕ್ಕೆ ಆಗದಿದ್ದರೂ, ಪಕ್ಷಕ್ಕಾಗಿ ದುಡಿದ, ಪಕ್ಷದ ಗೆಲುವಿಗಾಗಿ ಓಡಾಡಿದ ಅಹಿಂದ ಸಮುದಾಯಕ್ಕೆ ಟಿಕೆಟ್ ಕೊಡುವುದಕ್ಕೆ ಇಷ್ಟೆಲ್ಲಾ ಅಳೆದು ತೂಗಿದ್ದು ಕಾಂಗ್ರೆಸ್ ರಾಜಕೀಯ ಇತಿಹಾಸಕ್ಕೆ ಕಳಂಕವೇ ಸರಿ.
ದಾವಣಗೆರೆ ಕ್ಷೇತ್ರವು 2008ರಲ್ಲಿ ಮರುವಿಂಗಡಣೆಯಾಗಿ ದಾವಣಗೆರೆ ಎಂಬ ಹೊಸ ಕ್ಷೇತ್ರ ರಚನೆಯಾಯಿತು. 2008ರಿಂದ 2023ರವರೆಗೆ ಒಟ್ಟು ನಾಲ್ಕು ಬಾರಿ ವಿಧಾನಸಭಾ ಚುನಾವಣೆಗಳು ನಡೆದಿದ್ದು, ನಾಲ್ಕು ಬಾರಿಯೂ ಕಾಂಗ್ರೆಸ್‌ನ ಮಾಜಿ ಸಚಿವ, ದಿವಂಗತ ಶಾಮನೂರು ಶಿವಶಂಕರಪ್ಪ ಅವರೇ ಗೆಲುವು ಸಾಧಿಸಿದ್ದಾರೆ. ದಾವಣಗೆರೆ ಕ್ಷೇತ್ರ ಮರುವಿಂಗಡೆನೆಯ ಬಳಿಕ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಏನೂ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದೆ ಇದ್ದರೂ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ಎದುರಾಳಿಯಾಗಿ ಬೆಳೆಯಿತು. ಅತ್ಯಂತ ಕಡಿಮೆ ಅಂತರದಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿತ್ತು ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.
ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತ್ತೆ ʼತಮ್ಮ ಕುಟುಂಬದ ಪಾರುಪತ್ಯʼವನ್ನೇ ಮುಂದುವರಿಸುವುದಕ್ಕೆ ಶಾಮನೂರು ಕುಟಂಬ ಸಜ್ಜಾಗಿದ್ದು, ಕ್ಷೇತ್ರದಲ್ಲಿ ಸ್ವಪಕ್ಷೀಯರ ಭಿನ್ನಮತಕ್ಕೆ ಕಾರಣವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ದಾವಣಗೆರೆಯ ʼಧಣಿʼ, ʼಅಪ್ಪಾಜಿʼ ಎಂದು ಅಲ್ಲಿನ ಜನರಲ್ಲಿ ವಿಶ್ವಾಸ ಗಳಿಸಿದ ಶಂಕರಪ್ಪ ಅವರು, ದಾವಣಗೆರೆಯಲ್ಲಿ ವಿದ್ಯಾಸಂಸ್ಥೆಗಳು, ಜವಳಿ ಉದ್ಯಮ ಸೇರಿದಂತೆ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದರು. ಈಗ ಅವುಗಳನ್ನು ಅವರ ಕುಟುಂಬದವರು ಮುಂದುವರಿಸುತ್ತಿದ್ದಾರೆ. ಅವರ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ನೀಡಿದ ವಿದ್ಯಾರ್ಜನೆ, ಸಹಾಯ ಹಸ್ತ, ಉದ್ಯಮ ಕ್ಷೇತ್ರದಲ್ಲಿ ಆ ಭಾಗದ ಜನರಿಗೆ ನೀಡಿದ ಉದ್ಯೋಗವಕಾಶಗಳು ಶಾಮನೂರುರ ಶಿವಶಂಕರಪ್ಪ ಅವರನ್ನು ಸದಾ ಅಧಿಕಾರದಲ್ಲಿ ಕೂರಿಸುತ್ತಲೇ ಬಂದಿದೆ. ಹಾಗಾಗಿ ಕುಂಟುಂಬ ರಾಜಕಾರಣವನ್ನು ಕಾಂಗ್ರೆಸ್ ದಾವಣಗೆರೆಯಲ್ಲಿ ಪೊರೆಯುತ್ತಲೇ ಬಂದಿದೆ. ಈ ಬಾರಿ ಶಿವಶಂಕರಪ್ಪ ಅವರ ನಿಧನದ ಕಾರಣದಿಂದ ಉಪಚುನಾವಣೆ ಎದುರಾಗಿದ್ದು, ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಕಾಂಗ್ರೆಸ್ ದೊಡ್ಡ ಸವಾಲನ್ನೇ ಎದುರಿಸಿದೆ.
1957ರಿಂದ 2004ರವರೆಗೆ ದಾವಣಗೆರೆ ವಿಧಾನಸಭಾ ಕ್ಷೇತ್ರ 11 ಬಾರಿ ಚುನಾವಣೆಯನ್ನು ಎದುರಿಸಿದರೆ, ಕ್ಷೇತ್ರ ಮರುವಿಂಗಡನೆಯಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೆಂದಾಗಿ 2008ರಿಂದ 2023ರವರೆಗೆ 4 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ನಾಲ್ಕಕ್ಕೆ ನಾಲ್ಕೂ ಬಾರಿ ಕಾಂಗ್ರೆಸ್ ಗೆದ್ದಿದೆ.
1957ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ (ಪಿಎಸ್‌ಪಿ) ಕಾಂಗ್ರೆಸ್ ಪಕ್ಷದ ಎದುರು ಗೆಲುವು ಸಾಧಿಸಿತ್ತು. ಕೆ.ಟಿ ಜಂಬಣ್ಣ ಪಿ.ಎಸ್.ಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಗಂಜಿ ವೀರಣ್ಣ ಅವರನ್ನು ಸೋಲಿಸಿದ್ದರು. 1962ರಿಂದ 1972ರವರೆಗೆ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕ್ರಮವಾಗಿ 1962, 1967ರಲ್ಲಿ ಕೊಂಡಜ್ಜಿ ಬಸಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 1972ರಲ್ಲಿ ಕಾಂಗ್ರೆಸ್‌ನಿಂದ ನಾಗಮ್ಮ ಕೇಶವಮೂರ್ತಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. ಕಾಂಗ್ರೆಸ್ ಇಲ್ಲಿ ತನ್ನ ಹಿಡಿತ ಕಳೆದುಕೊಂಡಿತ್ತು, 1978ರಿಂದ 1985ರವರೆಗೆ ಭಾರತ ಕಮ್ಯುನಿಸ್ಟ್ ಪಕ್ಷಕ್ಕೆ (ಸಿಪಿಐ) ಜನಬೆಂಬಲ ದಕ್ಕಿತ್ತು. ಪಂಪಾಪತಿ ಸತತ ಮೂರು ಚುನಾವಣೆಗಳಲ್ಲಿ ಸಿಪಿಐನಿಂದ ಸ್ಪರ್ಧಿಸಿ ಕ್ಷೇತ್ರದ ಶಾಸಕರಾಗಿದ್ದರು. 1989ರಲ್ಲಿ ವೈ.ಎಂ. ವೀರಣ್ಣ ಕಾಂಗ್ರೆಸ್‌ನಿಂದ ಗೆದ್ದರು. 1944ರಲ್ಲಿ ವೈ. ಎಂ ವೀರಣ್ಣ ಅವರಿಗೆ ಬದಲಾಗಿ ಶಾಮನೂರು ಶಿವಶಂಕರಪ್ಪ ಅವರನ್ನು ಕಾಂಗ್ರೆಸ್ ಚುನಾವಣೆಗೆ ಇಳಿಸಿತ್ತು. ಆ ಬಳಿಕ ಕ್ಷೇತ್ರ ಸಂಪೂರ್ಣ ಕಾಂಗ್ರೆಸ್ ಹಿಡಿತಕ್ಕೆ ಸಿಲುಕಿತ್ತು ಅಥವಾ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಹಿಡಿತಕ್ಕೆ ಎಂದರೆ ಅದು ಹೆಚ್ಚು ಸೂಕ್ತ.
ಶಾಮನೂರು ಶಿವಶಂಕರಪ್ಪ ಚುನಾವಣಾ ರಾಜಕೀಯಕ್ಕೆ ಇಳಿದ ಮೇಲೆ ಚುನಾವಣೆಯಿಂದ ಚುನಾವಣೆಗೆ ಮತಗಳ ಅಂತರ ಏರಿಳಿತವಾಗಿರಬಹುದು ವಿನಃ ಸೋಲು ಅನುಭವಿಸಿಲ್ಲ. ಇದಕ್ಕೆ ಅಹಿಂದ ಮತಗಳ ಪಾತ್ರ ಬಹಳ ದೊಡ್ಡದಿದೆ. ಒಟ್ಟು 2,31,674 ಮತದಾರರಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವೂ ಅಲ್ಪಸಂಖ್ಯಾತ ಮತದಾರರದ್ದೇ ಆಗಿದೆ. 64,246 ಮುಸ್ಲೀಮರು, 37,845 ಲಿಂಗಾಯತರು, 31,729 ಎಸ್.ಟಿ ನಾಯಕ ಸಮುದಾಯದವರು, 21, 106 ಎಸ್.ಸಿ ಸಮುದಾಯದವರು, 16,854 ಕುರುಬ ಸಮುದಾಯದವರು, 14,868 ಮರಾಠ ಸಮುದಾಯದವರು, 8,352 ಉಪ್ಪಾರ ಸಮುದಾಯದವರು, 5,386 ಜೈನ ಸಮುದಾಯದವರು ಹಾಗೂ 23,300 ಇತರೆ ಸಮುದಾಯಕ್ಕೆ ಸೇರಿದವರಿದ್ದಾರೆ. ಲಿಂಗಾಯತ ಸಮುದಾಯ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹೆಚ್ಚಾಗಿ ಈವರೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನೇ ಗೆಲ್ಲಿಸುತ್ತಾ ಬಂದಿದ್ದಾರೆ. ಆದರೆ ಈಗ ಶಾಮನೂರು ನಿಧನದ ಬಳಿಕ ನಮಗೂ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಈ ಕ್ಷೇತ್ರದ ಚುನಾವಣೆಗಾಗಿ ನಮ್ಮನ್ನೂ ಪರಿಗಣಿಸಬೇಕು ಎಂದು ಅಹಿಂದ ವರ್ಗದ ಪ್ರಮುಖ ನಾಯಕರು ಪತ್ರಿಕಾಗೋಷ್ಠಿ ಕರೆದು ಬೇಡಿಕೆ ಮುಂದಿಟ್ಟಿದ್ದರು. ಆ ಮೂಲಕ ನಮ್ಮ ಸಮುದಾಯಕ್ಕೆ ರಾಜಕೀಯ ಶಕ್ತಿ ಮತ್ತು ನ್ಯಾಯವನ್ನು ನೀಡಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.
ಇದನ್ನೂ ಓದಿ : ಪ್ರೀಮಿಯಂ ಲೇಖನ | ದೇವೇಗೌಡರು ಪತ್ರ ಬರೆಯಬೇಕಿರೋದು ಪ್ರಧಾನಿ ಮೋದಿಯವರಿಗೆ
ಸಾಮಾಜಿಕ ನ್ಯಾಯ ಕೊಡುವುದೇ ನಮ್ಮ ಪ್ರಮುಖ ಗುರಿ ಎಂದು ರಾಜಕೀಯ ಮಾಡುವ ಕಾಂಗ್ರೆಸ್, ಈ ಚುನಾವಣೆಯ ವಿಷಯದಲ್ಲಿ ಮೀನಮೇಷ ಎಣಿಸಿದೆ. ʼನಮ್ಮದು ಅಹಿಂದ ವರ್ಗಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಟ್ಟ ಪಕ್ಷʼ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರ ʼರಾಜಕೀಯ ಹೇಳಿಕೆಗಳುʼ ಬರಿ ಬಾಯ್ಮಾತಿಗೆ ಆಗಿದೆಯೇ ಎನ್ನುವ ಚರ್ಚೆ ಕೂಡ ರಾಜಕೀಯ ವಲಯದಲ್ಲಿದೆ. ಇನ್ನು, ಯಾವುದಾದರೂ ಕ್ಷೇತ್ರದಲ್ಲಿ ಅಲ್ಲಿನ ಶಾಸಕರು ನಿಧನ ಹೊಂದಿದ ಬಳಿಕ ಆ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡುವುದು ಕಾಂಗ್ರೆಸ್‌ನ ಸಂಪ್ರದಾಯವೆಂಬಂತೆ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ದೃಷ್ಟಿಯಲ್ಲಿ ಕ್ಷೇತ್ರಕ್ಕೆ ಮಾಜಿ ಶಾಸಕರ ಕೊಡುಗೆಯನ್ನು ಅಲ್ಲಗಳೆಯುವುದಕ್ಕೆ ಆಗದಿದ್ದರೂ, ಪಕ್ಷಕ್ಕಾಗಿ ದುಡಿದ, ಪಕ್ಷದ ಗೆಲುವಿಗಾಗಿ ಓಡಾಡಿದ ಅಹಿಂದ ಸಮುದಾಯಕ್ಕೆ ಟಿಕೆಟ್ ಕೊಡುವುದಕ್ಕೆ ಇಷ್ಟೆಲ್ಲಾ ಅಳೆದು ತೂಗಿದ್ದು ಕಾಂಗ್ರೆಸ್ ರಾಜಕೀಯ ಇತಿಹಾಸಕ್ಕೆ ಕಳಂಕವೆ ಸರಿ. ಕಾಂಗ್ರೆಸ್‌ನ ಇಂತಹ ನಡೆ ಕೂಡ ಅಹಿಂದ ಮತಗಳು ಆ ಪಕ್ಷದಿಂದ ವಿಮುಖವಾಗುವ ಹಾಗೆ ಮಾಡಬಹುದು ಎನ್ನುವುದರಲ್ಲಿ ಸಂಶಯವಿಲ್ಲ.




