ಕಾಂಗ್ರೆಸ್ ಈ ಬಾರಿ ತನ್ನ ಸಾಮಾಜಿಕ, ರಾಜಕೀಯ ನ್ಯಾಯದ ಸಿದ್ದಾಂತವನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ತರಬೇಕಿದೆ. ನಿರ್ಲಕ್ಷಿಸಿದರೆ ತಿರುಗುಬಾಣವಾಗಬಹುದಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 80 ಸಾವಿರದಷ್ಟು ಮುಸ್ಲಿಂ ಮತದಾರರಿದ್ದಾರೆ. ಇವರು ಕಳೆದ 30-40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ, ಸತತವಾಗಿ ಗೆಲ್ಲಿಸುತ್ತ ಬಂದಿದ್ದಾರೆ. ಅವರಿಂದಾಗಿ ಕಾಂಗ್ರೆಸ್ ಮತ್ತು ಶಾಮನೂರು ಕುಟುಂಬ ನಿರಂತರವಾಗಿ ಅಧಿಕಾರ ಅನುಭವಿಸುತ್ತ ಬಂದಿದೆ. ಈಗ, ಶಾಮನೂರು ಶಿವಶಂಕರಪ್ಪನವರ ನಿಧನಾನಂತರ, ಉಪಚುನಾವಣೆ ಎದುರಾಗಿದೆ. ಈ ಬಾರಿಯಾದರೂ ಕಾಂಗ್ರೆಸ್ ಪಕ್ಷ ಹೇಳುವ ಸಾಮಾಜಿಕ ನ್ಯಾಯದ ಅಡಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ಕಲ್ಪಿಸುತ್ತಾರ ಎನ್ನುವ ಕೂಗು ಕೇಳಿಬರುತ್ತಿದೆ. ಹಾಗೆಯೇ ನಿರಂತರವಾಗಿ ಗೆಲ್ಲಿಸಿಕೊಂಡು ಬಂದ ಶಾಮನೂರು ಕುಟುಂಬ, ಉಮೇದುವಾರಿಕೆಯಿಂದ ಹಿಂದೆ ಸರಿದು ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಬಹುದಾ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ದಾವಣಗೆರೆ ದಕ್ಷಿಣದಲ್ಲಿ ಎಲ್ಲ ಸಮುದಾಯಗಳಿಂದ ಯಜಮಾನರು ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಶಾಮನೂರು ಶಿವಶಂಕರಪ್ಪನವರು, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ ಎಲ್ಲ ವರ್ಗದ ಜನರ ವಿಶ್ವಾಸ ಪ್ರೀತಿ ಗಳಿಸಿ ಜಾತಿ ಧರ್ಮವನ್ನು ಮೀರಿ ಜಾತ್ಯತೀತ ನಾಯಕರೆನ್ನಿಸಿಕೊಂಡಿದ್ದರು. ಹಿರಿಯ ಮುಸ್ಲಿಂ ನಾಯಕರೂ ಕೂಡ ಯಜಮಾನರು ಎಂದೇ ಕರೆಯುತ್ತಿದ್ದರು.

ಹಿರಿಯ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಅವರೇ ಹೇಳುವಂತೆ “ಯಜಮಾನರು ಬದುಕಿರುವವರೆಗೂ ನಾವು ಯಾರೂ ಕೂಡ ಅವರಿಗೆ ಪರ್ಯಾಯವಾಗಿ ರಾಜಕೀಯ ಮಾಡುವ ಯೋಚನೆಯನ್ನೇ ಮಾಡಿರಲಿಲ್ಲ. ಕಾರಣ ನಾವು ಅವರನ್ನು ನಮ್ಮದೇ ಸಮುದಾಯದ ನಾಯಕ ಹಾಗೂ ಯಜಮಾನರು ಎಂದೇ ಭಾವಿಸಿದ್ದೆವು. ಅವರನ್ನು 1994ರಿಂದ 6 ಬಾರಿ ಸತತವಾಗಿ ಗೆಲ್ಲಿಸುತ್ತ ಬಂದಿದ್ದೇವೆ. ಅವರ ಸಹಾಯಹಸ್ತ, ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಹಾಗೂ ಜಾತ್ಯತೀತ ಗುಣಗಳು ನಮ್ಮನ್ನು ಅವರ ಹಿಂದೆ ಬೆನ್ನಲುಬಾಗಿ ನಿಲ್ಲಿಸಿದ್ದವು” ಎಂದೇ ಅಭಿಪ್ರಾಯ ಪಡುತ್ತಾರೆ.

“ಈಗ ಅವರ ನಿಧನದಿಂದ ಕ್ಷೇತ್ರ ತೆರವಾಗಿದೆ. ಅವರಿದ್ದಿದ್ದರೆ ಬಹುಶಃ ಕೇಳುತ್ತಿರಲಿಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹಿಂದಿನಿಂದಲೂ ಬಲಿಷ್ಠ ಶಕ್ತಿಯಾಗಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಂತಿದೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಬಾರಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಮುಸ್ಲಿಮರನ್ನು ದಕ್ಷಿಣ ಕ್ಷೇತ್ರದಲ್ಲಿ ಪ್ರಮುಖವಾಗಿ, ಪ್ರಥಮವಾಗಿ ಪರಿಗಣಿಸಿ ಟಿಕೆಟ್ ನೀಡಬೇಕು ಹಾಗೂ ಗೆಲ್ಲಿಸಿಕೊಂಡು ಬರಬೇಕು. ಆ ಮೂಲಕ ನಮ್ಮ ಸಮುದಾಯಕ್ಕೆ ರಾಜಕೀಯ ಶಕ್ತಿ ಮತ್ತು ನ್ಯಾಯವನ್ನು ನೀಡಬೇಕು” ಎಂದು ಬಲವಾಗಿ ಪ್ರತಿಪಾದಿಸಿದರು.
ಈ ನಡುವೆ ಮುಸ್ಲಿಂ ಸಮುದಾಯದಂತೆ ಅಹಿಂದ ಒಕ್ಕೂಟ ಕೂಡ ಬಲವಾಗಿ ಎದ್ದು ನಿಂತಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಂದೇ ಸಮುದಾಯ ಸತತವಾಗಿ ಪ್ರಾಬಲ್ಯ ಗಳಿಸಿ ಅಧಿಕಾರ ಅನುಭವಿಸುತ್ತ ಬಂದಿದೆ. ಒಂದೇ ಸಮುದಾಯಕ್ಕೆ ಸೇರಿದ ಐದು ಜನ ಶಾಸಕರಿದ್ದು, ಒಬ್ಬರು ಸಂಪುಟ ದರ್ಜೆಯ ಸಚಿವರಾಗಿದ್ದಾರೆ. ಒಬ್ಬರು ಸಂಸದರೂ ಆಗಿದ್ದಾರೆ. ಈಗ ದಾವಣಗೆರೆ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶೇ.80ಕ್ಕೂ ಅಧಿಕ ಜನಸಂಖ್ಯೆ ಇರುವ ಅಹಿಂದ ವರ್ಗಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒಕ್ಕೂಟ ಬೇಡಿಕೆ ಇಟ್ಟಿದೆ.

ಇದರ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿರುವ ಕುರುಬ, ನಾಯಕ, ಉಪ್ಪಾರ, ಬಂಜಾರ, ಮರಾಠ, ಲಿಂಗಾಯತ ಪಂಚಮಸಾಲಿ, ದಲಿತ ಹಾಗೂ ಮುಸ್ಲಿಂ ಸಮುದಾಯ ಸೇರಿದಂತೆ ಅಹಿಂದ ಮುಖಂಡರು ‘ಕ್ಷೇತ್ರದಲ್ಲಿ ವಿವಿಧ ಸಮುದಾಯದ ಅಹಿಂದ ವರ್ಗಕ್ಕೆ ಸೇರಿದ ಶೇ.80ಕ್ಕೂ ಹೆಚ್ಚು ಮಂದಿ ಮತದಾರರಿದ್ದಾರೆ. ಅವರಿಗೆ ಈ ಬಾರಿ ಪ್ರಾತಿನಿಧ್ಯ ನೀಡಬೇಕು. ಮುಖ್ಯವಾಗಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ನಂತರದಲ್ಲಿ ಪಂಚಮಸಾಲಿ ಸಮುದಾಯ ಕೂಡ ಜಿಲ್ಲೆ ಮತ್ತು ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿದೆ. ವಾಲ್ಮೀಕಿ, ಕುರುಬರು ಹಾಗೂ ಇತರೆ ಅಹಿಂದ ವರ್ಗದ ಅಧಿಕಾರ ವಂಚಿತ ಜಾತಿಗಳ ನಾಯಕರೂ ಇದ್ದಾರೆ. ಹಾಗಾಗಿ ಈ ಬಾರಿ ಮುಸ್ಲಿಂ, ಲಿಂಗಾಯತ ಪಂಚಮಸಾಲಿ ಸೇರಿ ಅಹಿಂದ ವರ್ಗಗಳಿಗೆ ಸೇರಿದ ನಾಯಕರಿಗೆ ಟಿಕೆಟ್ ನೀಡಬೇಕು. ಅಹಿಂದ ವರ್ಗದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸುವ ಕೆಲಸ ಮಾಡುತ್ತೇವೆ’ ಎಂದು ಒತ್ತಾಯಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ವಲಯದಲ್ಲಿ ಎಸ್ಎಸ್ ಮಲ್ಲಿಕಾರ್ಜುನ ಪುತ್ರ ಸಮರ್ಥ ಶಾಮನೂರು ಹೆಸರು ಕೇಳಿ ಬರುತ್ತಿದ್ದು, ಅವರನ್ನು ಅಭ್ಯರ್ಥಿಯನ್ನಾಗಿಸುತ್ತಾರೆಂಬ ಗುಸು-ಗುಸು ಪ್ರಾರಂಭವಾಗಿದೆ. ಅಲ್ಲದೆ ಸಚಿವರ ಸಹೋದರ ಹಾಗೂ ಶಾಮನೂರು ಶಿವಶಂಕರಪ್ಪನವರ ಮಗ ಎಸ್ಎಸ್ ಗಣೇಶ್, ‘ನಾನು ಈ ಬಾರಿ ಕಣಕ್ಕೆ ಇಳಿಯಲು ಆಕಾಂಕ್ಷಿಯಿದ್ದೇನೆ. ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ನನ್ನನ್ನು ಪರಿಗಣಿಸಬೇಕು’ ಎನ್ನುವ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಬಿಜೆಪಿ ವಲಯದಲ್ಲಿ ಕೂಡ ಟಿಕೆಟ್ ಬೇಡಿಕೆ ಏರ್ಪಟ್ಟಿದ್ದು, ಹಲವು ಆಕಾಂಕ್ಷಿಗಳ ಹೆಸರುಗಳು ಓಡಾಡುತ್ತಿವೆ. ಈ ನಡುವೆ, ದಾವಣಗೆರೆ ಜಿಲ್ಲೆಯ ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಮಾಧ್ಯಮಗಳೊಂದಿಗೆ ಮಾತನಾಡಿ, ‘ಎಸ್ಎಸ್ ಗಣೇಶ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿ’ ಎಂದು ಬಹಿರಂಗವಾಗಿಯೇ ಆಹ್ವಾನಿಸಿ, ಮತದಾರರನ್ನು ಗೊಂದಲಗೊಳಿಸಲು ಯತ್ನಿಸಿದ್ದಾರೆ.

ಜೊತೆಗೆ ಶಾಮನೂರು ಪುತ್ರ ಎಸ್ಎಸ್ ಗಣೇಶ್ ಬಿಜೆಪಿ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ಸಂಬಂಧಿಯಾಗಿದ್ದು, ಅವರ ಮೂಲಕ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದಿದ್ದರೆ ಬಿಜೆಪಿಯಲ್ಲಿ ಕೊಡಲು ತಯಾರಿದ್ದಾರೆ ಎನ್ನುವ ಮಾತನ್ನು ಬಿಜೆಪಿ ನಾಯಕರೇ ತೇಲಿಬಿಟ್ಟಿದ್ದಾರೆ.
ಈ ನಡುವೆ ಕಾಂಗ್ರೆಸ್ ಟಿಕೆಟ್‌ಗಾಗಿ ದಾವಣಗೆರೆ ದಕ್ಷಿಣದಲ್ಲಿ ಹಲವು ಹೆಸರುಗಳು ಮುಖ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ಕೇಳಿಬಂದಿವೆ. ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್, ಖಾಲಿದ್ ಅಹಮದ್, ತಂಜೀಂ ಮಾಜಿ ಅಧ್ಯಕ್ಷ ಸಾದಿಕ್ ಪೈಲ್ವಾನ್, ಇಬ್ರಾಹಿಂ ಖಲೀಲುಲ್ಲಾ, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮಹಮ್ಮದ್ ಸಿರಾಜ್ ಸೇರಿದಂತೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಅದರಲ್ಲಿ ಬಹುತೇಕ ಹಿರಿಯ ನಾಯಕರ ಪರ ಸಮುದಾಯ ನಿಂತಿದ್ದು, ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಸಾಸ್ ಅವರೊಂದಿಗೆ ಅಹಿಂದ ಮುಖಂಡರು ಸಮುದಾಯವನ್ನು ಪರಿಗಣಿಸುವಂತೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಕಾಂಗ್ರೆಸ್ ಮತ್ತು ಜಿಲ್ಲಾ ನಾಯಕರು ಹೇಗೆ ನೋಡಲಿದ್ದಾರೆ ಎಂಬುದೇ ಕುತೂಹಲಕರವಾಗಿದೆ.

ಹಾಗೆಯೇ ಸಾಮಾಜಿಕ, ರಾಜಕೀಯ ನ್ಯಾಯದಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿದ್ಯ ಕೊಟ್ಟು ಗೆಲ್ಲಿಸಿಕೊಂಡು ಬರಬೇಕಾಗಿರುವುದು ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ನಾಯಕರ ಜವಾಬ್ದಾರಿ ಎನ್ನುವ ಮಾತು ಅಲ್ಪಸಂಖ್ಯಾತರ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣವೂ ಕೂಡ ಸಾಕಷ್ಟಿದೆ.
ಹಲವಾರು ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ್ದು, ಕ್ಷೇತ್ರದಲ್ಲಿ ಅಭಿವೃದ್ದಿ ಎನ್ನುವುದು ಬಹುತೇಕ ಶಾಸಕರ ಮತ್ತು ಸಚಿವರ ಬೆಂಬಲಿಗರಿಗಷ್ಟೇ ಮೀಸಲಾಗಿದೆ ಎನ್ನುವ ಆರೋಪವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬರುವ ಹಳೇ ದಾವಣಗೆರೆ ಭಾಗಗಳು ಉತ್ತಮ ರಸ್ತೆ, ಸ್ವಚ್ಛತೆ, ಮೂಲಸೌಕರ್ಯಗಳಿಲ್ಲದೆ ಸೊರಗಿದೆ. ದಾವಣಗೆರೆಯನ್ನು ಎರಡು ಭಾಗಗಳಾಗಿ ವಿಭಾಗಿಸುವ ರೈಲ್ವೆ ಮಾರ್ಗದ ಉತ್ತರ ದಿಕ್ಕಿನಲ್ಲಿರುವ ಹಳೆಯ ದಾವಣಗೆರೆಯ ದಕ್ಷಿಣ ಕ್ಷೇತ್ರದ ಆಜಾದ್ ನಗರ, ಮಂಡಕ್ಕಿ ಭಟ್ಟಿ, ಮಂಡಿಪೇಟೆ, ಎಸ್‌ಜೆಎಸ್ ನಗರ, ಬೂಧಾಳ್ ರಸ್ತೆ, ಜಾಲಿ ನಗರ, ಅಹಮದ್ ನಗರ, ಟಿಪ್ಪು ನಗರ, ಬೀಡಿ ಲೇಔಟ್, ಶಿವನಗರ ಸೇರಿದಂತೆ ಅನೇಕ ಭಾಗಗಳಲ್ಲಿ ಸೂಕ್ತ ಮೂಲಸೌಕರ್ಯಗಳೇ ಇಲ್ಲದಾಗಿದೆ. ಸ್ವಚ್ಛತೆಯನ್ನೇ ಕಾಣದೆ ಹಿಂದುಳಿದಿದೆ ಎನ್ನುತ್ತಾರೆ ಸ್ಥಳೀಯರು.
“ಶಾಸಕರಾಗಿದ್ದಾಗ ಜನರಿಗೆ ವೈಯಕ್ತಿಕವಾಗಿ ಸ್ಪಂದಿಸುತ್ತಿದ್ದರೂ ಕೂಡ, ವಯಸ್ಸಿನ ಕಾರಣದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಪರಿಶೀಲಿಸುವಲ್ಲಿ ಶಾಮನೂರು ಶಿವಶಂಕರಪ್ಪನವರಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ಅವರ ಬೆಂಬಲಿಗರು ತಮಗೆ ಬೇಕಾದ ಹಾಗೆ ಬೇಕಾಬಿಟ್ಟಿ ಕಾಮಗಾರಿ ನಡೆಸಿದ್ದಾರೆ. ಕಳಪೆ ಕಾಮಗಾರಿಗಳಿಂದ ದಕ್ಷಿಣ ಕ್ಷೇತ್ರ ಸೊರಗಿದೆ” ಎನ್ನುತ್ತಾರೆ ದಕ್ಷಿಣದ ಮತದಾರರಾದ ಅಲ್ತಾಫ್ ಮತ್ತು ರಂಗಸ್ವಾಮಿ.

‘ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಗೆಲ್ಲಲು ಮುಸ್ಲಿಂ ಮತಗಳು ಬೇಕು. ಚುನಾವಣೆಯಲ್ಲಿ ಟಿಕೆಟ್ ನೀಡಿ ಅವಕಾಶ ನೀಡಲು ಬೇಡವಾ?’ ಎನ್ನುವ ಪ್ರಶ್ನೆ ಮುಸ್ಲಿಂ ಸಮಾಜದ ಮತದಾರರಿಂದ ಎದುರಾಗಿದೆ. ಕಾಂಗ್ರೆಸ್ಸಿಗೆ ಇದು ಐತಿಹಾಸಿಕ ಅವಕಾಶವಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿದರೆ ಉತ್ತಮ, ಇಲ್ಲದಿದ್ದಲ್ಲಿ ಸಾಮಾಜಿಕ ನ್ಯಾಯ ಕೇವಲ ಅವರ ಘೋಷಣೆ ಅಷ್ಟೇ ಎನ್ನುವ ಮಾತು ಪ್ರಗತಿಪರ ವಲಯದಲ್ಲೂ ಕೇಳಿಬರತೊಡಗಿದೆ.
‘ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಸಮುದಾಯವು ಶಿಕ್ಷಣ, ಉದ್ಯೋಗ, ನಗರಾಭಿವೃದ್ಧಿ, ಸುರಕ್ಷತೆ, ಪ್ರಾತಿನಿಧ್ಯದ ಕೊರತೆ ಎದುರಿಸುತ್ತಿದ್ದು, 80 ಸಾವಿರ ಜನಸಂಖ್ಯೆ ಹೊಂದಿದ್ದರೂ, ಕ್ಷೇತ್ರದಲ್ಲಿ ರಾಜ್ಯಮಟ್ಟದ ನಾಯಕರ ಹಾಗೂ ಪ್ರಬಲ ನಾಯಕತ್ವದ ಕೊರತೆಯನ್ನೂ ಎದುರಿಸುತ್ತಿದೆ. ಸಮುದಾಯದ ನಾಯಕರು ಹಲವು ಪಕ್ಷಗಳಲ್ಲಿ ಹರಿದು ಹಂಚಿಹೋಗಿರುವುದೇ ಇದಕ್ಕೆ ಕಾರಣ. ಕಾಂಗ್ರೆಸ್, ಎಸ್‌ಡಿಪಿಐ, ಜೆಡಿಎಸ್, ಎಂಐಎಂ, ಎಎಪಿ, ಬಿಎಸ್‌ಪಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಹಲವು ಪಕ್ಷಗಳಲ್ಲಿ ಹಂಚಿಹೋಗಿದ್ದಾರೆ. ಅವರನ್ನು ಈ ಬಾರಿ ದಕ್ಷಿಣದಲ್ಲಿ ಮುಸ್ಲಿಂ ಪ್ರಾತಿನಿದ್ಯ ಪಡೆಯಲು ಒಂದೇ ವೇದಿಕೆಯಡಿ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸಂಘಟಿಸಬಲ್ಲ ನಾಯಕತ್ವವನ್ನು ಸಮುದಾಯದ ಹಿರಿಯ ನಾಯಕರು ಗುರುತಿಸಬೇಕು. ಅಲ್ಲದೆ ಹೊಣೆಗಾರಿಕೆಯನ್ನು ಕೂಡ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಸಮುದಾಯದ ಮತಗಳು ಭಿನ್ನದಾರಿ ಹಿಡಿದರೆ ಎದುರಾಳಿ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂಬುದು ರಾಜಕೀಯ ವಿಶ್ಲೇಷಕರ ಮಾತು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಪಾತ್ರ ನಿರ್ಣಾಯಕವಾಗಿದ್ದು, ಮುಸ್ಲಿಂ ಮತಗಳು ಒಂದೇ ವೇದಿಕೆ ಅಡಿಯಲ್ಲಿ ಒಟ್ಟಾದರೆ ಜತೆಗೆ ಈ ಬಾರಿ “ಕಾಂಗ್ರೆಸ್ ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಅವಕಾಶ ನೀಡಿದರೆ ಕಾಂಗ್ರೆಸ್‌ನ ಸಾಮಾಜಿಕ ನ್ಯಾಯದ ರಾಜಕೀಯ ಸಿದ್ಧಾಂತಕ್ಕೆ ನೈತಿಕ ಶಕ್ತಿ ಬಂದಂತಾಗಲಿದೆ. ಅಲ್ಲದೆ ಕೇವಲ ನಾಮ್ ಕಾ ವಾಸ್ತೆಗೆ ಟಿಕೆಟ್ ನೀಡದೆ ವಿಶ್ವಾಸಾರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಹಿಂದ ವರ್ಗಕ್ಕೆ ಸಾಮಾಜಿಕ ನ್ಯಾಯದ ರಾಜಕೀಯ ಸಂದೇಶ ನೀಡಬೇಕು. ಜತೆಗೆ ಸಂಘಟಿತ ಚುನಾವಣಾ ತಂತ್ರ ಅಳವಡಿಸಿಕೊಳ್ಳಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಹಾಗೂ ಸ್ಥಳೀಯ ರಾಜಕೀಯ ನಾಯಕರು ಪಕ್ಷಭೇದ ಮರೆತು ಬೆಂಬಲ ನೀಡಬೇಕು ಎನ್ನುವುದು ಸಾಮಾಜಿಕ ವಲಯದಲ್ಲಿ ಸಾರ್ವಜನಿಕರಿಂದ ಕೇಳಿಬಂದಿದೆ.
ಮುಸ್ಲಿಂ ಸಮುದಾಯದ ವಿಶ್ವಾಸಾರ್ಹ ನಾಯಕರಿಗೆ ಟಿಕೆಟ್ ನೀಡಿ ಒಗ್ಗಟ್ಟು ರೂಪಿಸಬೇಕು. ಹಾಗಾದಾಗ ಮಾತ್ರ ಮುಸ್ಲಿಂ-ಅಹಿಂದ ಮತಗಳ ಒಗ್ಗಟ್ಟು ಸಾಧ್ಯವಾಗಲಿದೆ. ಕಾಂಗ್ರೆಸಿನ ಧರ್ಮ ನಿರಪೇಕ್ಷ ನಿಲುವಿಗೆ ನಿಜ ಅರ್ಥ ಎನಿಸಲಿದೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರ ‘ನಾವು ಜಾತ್ಯತೀತ, ಧರ್ಮಾತೀತ ಕೋಮು ವಿರೋಧಿ ರಾಜಕಾರಣ ಮಾಡುತ್ತೇವೆ’ ಎನ್ನುವ ವೇದಿಕೆ ಮೇಲಿನ ಭಾಷಣಗಳಿಗೂ ಅರ್ಥ ಬರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿದ್ದೀರಾ? ಸಂವಿಧಾನದ ಪೀಠಿಕೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದ ಹೊರತು ʼಪ್ರತಿಜ್ಞೆʼಗೆ ಅರ್ಥವಿಲ್ಲ
ಈ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ದಾವಣಗೆರೆ ದಕ್ಷಿಣದಲ್ಲಿ ಎಚ್ಚರಿಕೆ ಹೆಜ್ಜೆ ಇಡುವ ಅನಿವಾರ್ಯತೆ, ಅಪಾಯ ಎರಡೂ ಎದುರಾಗಿದೆ. ಲೆಕ್ಕಾಚಾರದಲ್ಲಿ ಸ್ವಲ್ಪವೇ ಎಡವಿದರೂ ಮತದಾರನ ನಿರಾಸಕ್ತಿ ಮೂಲಕ ಎದುರಾಳಿಗಳಿಗೆ ಲಾಭವಾಗುವ ಅವಕಾಶ ಹೆಚ್ಚಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ, ವಸತಿ, ರಸ್ತೆ, ಸ್ವಚ್ಛತೆ, ನೀರು, ಮೂಲಸೌಕರ್ಯ ಸೇರಿದಂತೆ ಇತರ ಸಮಸ್ಯೆಗಳಿಗೆ ಬೇಸತ್ತು ದಾವಣಗೆರೆ ನಗರ ಪ್ರದೇಶದಲ್ಲಿ ಮುಸ್ಲಿಂ ಮತದಾರರೂ ಸೇರಿದಂತೆ ಎಲ್ಲ ಮತದಾರರು ಮಧ್ಯಾಹ್ನ 3ರವರೆಗೂ ಮತದಾನದಿಂದ ದೂರವೇ ಉಳಿಯುವ ಮೂಲಕ ಆಕ್ರೋಶ ವ್ಯಕ್ತವಾಗಿತ್ತು. ತದನಂತರ ಸ್ಥಳೀಯ ನಾಯಕರು ಮತ್ತು ಶಾಮನೂರು ಶಿವಶಂಕರಪ್ಪನವರ ಮನವೊಲಿಕೆಯ ಕಾರಣದಿಂದ 3 ಗಂಟೆ ಬಳಿಕ ದಾಖಲೆಯ ಮತದಾನಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರ ಕಾರಣವಾಗಿತ್ತು. ಇದರಿಂದ ಪಾಠ ಕಲಿಯಬೇಕಿರುವ ಕಾಂಗ್ರೆಸ್ ಈ ಬಾರಿ ತನ್ನ ಸಾಮಾಜಿಕ, ರಾಜಕೀಯ ನ್ಯಾಯದ ಸಿದ್ದಾಂತವನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ತರಬೇಕಿದೆ. ನಿರ್ಲಕ್ಷಿಸಿದರೆ ತಿರುಗುಬಾಣವಾಗಬಹುದಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು




