ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಹಬ್ಬ ಉದ್ಘಾಟನೆಯ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಮಾತನಾಡುವಾಗ ಮೈಸೂರು ದಸರಾದಲ್ಲಿ ಸನಾತನ ಧರ್ಮದವರು ಮಾತ್ರ ಚಾಮುಂಡಿ ದೇವಿಗೆ ಹೂ ಮುಡಿಸಬೇಕು. ಅದರ ಹೊರತು ಒಬ್ಬ ಸಾಮಾನ್ಯ ದಲಿತ ಹೆಣ್ಣು ಮಕ್ಕಳಿಗೆ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಇಡೀ ರಾಜ್ಯದ ದಲಿತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಬಂಧಿಸುವಂತೆ ದಲಿತ ಸಂಘರ್ಷ ಸಮಿತಿ (ಪ್ರೊ| ಬಿ.ಕೃಷ್ಣಪ್ಪ ದಸಂಸ) ಸದಸ್ಯರು ದಾವಣಗೆರೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ (ಪ್ರೊ. ಕೃಷ್ಣಪ್ಪ) ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ “ಸಾರ್ವಜನಿಕವಾಗಿ ದಲಿತ ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದಲ್ಲಿ ಹೇಳಿಕೆ ನೀಡುವ ಮೂಲಕ ಅವಮಾನ ಮಾಡಿದ್ದಾರೆ. ಇಂತಹ ಕೊಳಕು ಮನಸ್ಥಿತಿಯ ಮತ್ತು ಕೋಮು ಸಂಘರ್ಷದ, ಪ್ರಚೋದನಕಾರಿ ಹೇಳಿ ನೀಡಿರುವ ಇವರನ್ನು ವಿಡಿಯೋ ಆಧಾರದ ಮೇಲೆ ಎಸ್ಸಿ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳಿಸಬೇಕು” ಎಂದು ಆಗ್ರಹಿಸಿದರು.

“ದಾವಣಗೆರೆಯ ನಿಷ್ಠಾವಂತ ಅಧಿಕಾರಿ ಎಸ್ಪಿ ಉಮಾ ಪ್ರಶಾಂತ್ ಅವರ ಬಗ್ಗೆ ಶಾಸಕ ಬಿ.ಪಿ ಹರೀಶ್ ಅವರು ನಾಯಿಗೆ ಹೋಲಿಸಿ ಮಾತನಾಡಿ ಅವರಿಗೆ ಅವಮಾನ ಮಾಡಿದ್ದಾರೆ. ಇಂತಹ ಹೇಳಿಕೆ ಕೊಡುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ಶಾಸಕ ಬಸವನಗೌಡ ಯತ್ನಾಳ ಅವರು ದಲಿತರ, ಅಲ್ಪಸಂಖ್ಯಾತರ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಯತ್ನಾಳ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿ ನಮ್ಮ ದಲಿತ ಸಮಾಜಕ್ಕೆ ತುಂಬಾ ನೋವಾಗಿರುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆಸ್ಪತ್ರೆ ಸ್ನಾನದ ಕೋಣೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ರಕ್ಷಿಸಿ ಆರೈಕೆ ನೀಡಿದ ಸಿಬ್ಬಂದಿ
ಮಹಿಳಾ ಸಂಚಾಲಕರಾದ ವಿಜಯಮ್ಮ , ಚಿತ್ತಾನಹಳ್ಳಿ ನಾಗರಾಜು, ಬೇತೂರು ಹನುಮಂತ, ಶಂಕರ್ ಗಾಂಧಿನಗರ, ಮಂಜುನಾಥ್, ಮಂಜುನಾಥ್ ವೈ ಕಟ್ಟೂರು, ಶಿವಶಂಕರ ಎಸ್ ಎಮ್ ಗಾಂಧಿನಗರ. ರಾಕೇಶ್, ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಖಾಲಿದ್ ಅಲಿ ಸೇರಿದಂತೆ ಇತರರು ಹಾಜರಿದ್ದರು.





