“ದಾವಣಗೆರೆ ನಗರದ ಬಾಪೂಜಿ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿತು. ಇದಕ್ಕೂ ಮುನ್ನ ನಗರದ ಜಯದೇವ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ತಿರಂಗಾ ಯಾತ್ರೆ ನಡೆಸಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥಗೌಡ ಮಾತನಾಡಿ”ಇಂದು ಮಹಾತ್ಮ ಗಾಂಧಿಯವರನ್ನು ಗೋಡ್ಸೆಗೆ ಹೋಲಿಸಿ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಆದರೆ ದೇಶಕ್ಕೆ ಮುಂದಿನ ದಿನಗಳಲ್ಲಿ ಮುಂದೆ ಬೇಕಾದ ತತ್ವ ಆದರ್ಶಗಳನ್ನು ಗಾಂಧಿ ನಮಗೆ ರೂಪಿಸಿ ಕೊಟ್ಟಿದ್ದಾರೆ. ಇಂದು ಗಾಂಧಿ ಪರಿವಾರವನ್ನು ದೂಷಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಗಾಂಧಿ ಪರಿವಾರ ದೇಶಕ್ಕಾಗಿ ಸೇವೆ, ತ್ಯಾಗ ಮಾಡುವ ಪರಿವಾರವಾಗಿದೆ. ಗಾಂಧಿ ಪರಿವಾರ ದೇಶಕ್ಕಾಗಿ ಅನೇಕ ಸೇವೆ, ಪ್ರಾಣತ್ಯಾಗಗಳನ್ನು ಮಾಡಿದೆ” ಎಂದು ಸ್ಮರಿಸಿದರು.

ನರೇಂದ್ರ ಮೋದಿಯವರಿಗೆ ಇಂದಿರಾಗಾಂಧಿಯವರನ್ನು ನೋಡಿದಲ್ಲೆಲ್ಲಾ ಹೆದರಿಕೆಯಾಗುತ್ತದೆ. ಅವರಿಗೆ, ಅವರ ಕೆಲಸಗಳಿಗೆ ಹೆದರಿ ಅವರನ್ನು ಕೀಳರಿಮೆ ಕಾಡುತ್ತಿದೆ. ಆದ್ದರಿಂದಲೇ ಇಂದಿರಾ ಗಾಂಧಿಯವರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ದಾವಣಗೆರೆಯಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

“ಯುವ ಕಾಂಗ್ರೆಸ್ ನಲ್ಲಿ ಉತ್ತಮ ಅವಕಾಶಗಳಿದೆ. ಇಲ್ಲಿ ಕೆಲಸ ಮಾಡಿದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ಸೇರಿದಂತೆ ಅನೇಕರು ಇಂದು ಉತ್ತಮ ಸ್ಥಾನಮಾನ ಪಡೆದಿದ್ದಾರೆ ಮತ್ತು ಯುವ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದರೆ ರಾಷ್ಟ್ರಮಟ್ಟದಲ್ಲಿಯೂ ಕೂಡ ಉತ್ತಮ ಸ್ಥಾನಮಾನಗಳು ದೊರೆಯಲಿದೆ. ಪಕ್ಷದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ರಾಜೀವ್ ಗಾಂಧಿಯವರು ಕಾಂಗ್ರೆಸ್ ನಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಬಯಸಿದ್ದರು. ಅವರು ಯುವ ಕಾಂಗ್ರೆಸನ್ನು ರಾಷ್ಟ್ರೀಯ ಕಾಂಗ್ರೆಸಿನ ಮುಂದಾಳು ಎಂದು ಕರೆಯುತ್ತಿದ್ದರು. ಏಕೆಂದರೆ ಯಾವುದೇ ಪ್ರತಿಭಟನೆಗಳು ಮತ್ತು ಸಮಾರಂಭಗಳು ಅಥವಾ ಕಾಂಗ್ರೆಸ್ನ ಯಾವುದೇ ಕಾರ್ಯಕ್ರಮಗಳಿದ್ದರೂ ಯುವ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿನ ಮುಂದಾಳುಗಳಾಗಿ ಕೆಲಸ ಮಾಡುತ್ತಾರೆ” ಎಂದು ಪ್ರಶಂಸಿಸಿದರು.

“ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ನಾವು ಅದನ್ನು ಮರೆತು ಪಕ್ಷಕ್ಕಾಗಿ ಸೇವೆ ಸಲ್ಲಿಸೋಣ. ಪಕ್ಷಕ್ಕಾಗಿ ದುಡಿಯೋಣ. ನೀವು ಇಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದರೆ ಪಕ್ಷ ನಿಮ್ಮನ್ನು ಗುರುತಿಸುತ್ತದೆ. ನಿಮ್ಮ ನಿಮ್ಮ ಗ್ರಾಮ ಮತ್ತು ನಗರಗಳಲ್ಲಿ ಉತ್ತಮ ಕೆಲಸ ಮಾಡಿ ಜನರ ಮಧ್ಯೆ ನಾಯಕರಾಗಿ ಬೆಳೆಯಿರಿ. ಅದು ನಿಮ್ಮ ಜನರ ನಡುವೆ ಪ್ರೀತಿ ವಿಶ್ವಾಸವನ್ನು ಬೆಳೆಸುತ್ತದೆ. ಅದನ್ನು ಪಕ್ಷ ಗುರುತಿಸಿ ನಿಮಗೆ ಸ್ಥಾನಮಾನ ನೀಡುತ್ತದೆ” ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಶೆಟ್ಟಿ “ಯುವ ಕಾಂಗ್ರೆಸ್ ನಲ್ಲಿ ಉತ್ತಮ ಅವಕಾಶಗಳಿದೆ. ನಾನು ಯುವ ಕಾಂಗ್ರೆಸ್ ನಲ್ಲಿ ಸುಮಾರು 9 ವರ್ಷಗಳ ಕಾಲ ಕೆಲಸ ಮಾಡಿ ಬಂದಿದ್ದೇನೆ. ಅಲ್ಲಿ ಉತ್ತಮ ಕೆಲಸ ಮಾಡಿದವರನ್ನು ಗುರುತಿಸುತ್ತಾರೆ. ಅವರು ರಾಷ್ಟ್ರಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ನಾನು ಯುವ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದರಿಂದಲೇ ಇಂದು ನನಗೆ ನಗರಸಭೆಯ ಮತ್ತು ಇತರ ಅಧಿಕಾರಗಳು ದೊರಕಿವೆ. ಆದ್ದರಿಂದ ಉತ್ತಮ ಕೆಲಸ ಮಾಡಿ, ನಿಮ್ಮ ನಿಮ್ಮ ನಗರ ಮತ್ತು ನಿಮ್ಮ ಬೀದಿ, ಗ್ರಾಮಗಳಲ್ಲಿ ನೀವು ಗುರುತಿಸಿಕೊಂಡರೆ ನಾಯಕರಾಗಿ ಬೆಳೆಯಲು ಸಾಧ್ಯ” ಎಂದು ಸಲಹೆ ನೀಡಿದರು.

ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಮಾತನಾಡಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಪಕ್ಷಕ್ಕಾಗಿ ಯುವ ಕಾಂಗ್ರೆಸ್ ನಲ್ಲಿ ದುಡಿಯಬೇಕು. ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರು ಕುಳಿತು ಬಗೆಹರಿಸಿಕೊಂಡು ಮುನ್ನಡೆಯಬೇಕು. ಯುವ ಕಾಂಗ್ರೆಸ್ ನಲ್ಲಿ ದುಡಿದಿದ್ದರಿಂದಲೇ ನಾವು ಇಂದು ಉತ್ತಮ ಸ್ಥಾನಮಾನಗಳನ್ನು ಪಡೆದು ಇಂದು ಇಲ್ಲಿ ನಿಂತಿರುವುದು. ಹಳಬರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡರಿಂದ ತಿರಂಗಾ ಯಾತ್ರೆ

ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ರಾಜ್ಯ ಪದಾಧಿಕಾರಿಗಳಾದ ಬಾಹುಬಲಿ ಜೈನ್, ಜಿಲ್ಲಾ ಅಧ್ಯಕ್ಷ ವರುಣ್ ಬೆಣ್ಣಿಹಳ್ಳಿ, ನಿಖಿಲ್ ಕೊಂಡಜ್ಜಿ, ಜಿಲ್ಲಾ ಕಾರ್ಯದರ್ಶಿ ತಾಹಿರ್, ಜವಾಹರ್ ಬಾಲ್ ಮಂಚ್ ನಾ ಮೈನುದ್ದೀನ್ , ಲಿಯಾಖತ್ ಅಲಿ ಸೇರಿದಂತೆ ಬ್ಲಾಕ್ ಅಧ್ಯಕ್ಷರು, ಅಸೆಂಬ್ಲಿ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಿಲ್ಲಾ ಯುವ ಕಾಂಗ್ರೆಸ್ ಪದಗ್ರಹಣ ಸಮಾರಂಭದಲ್ಲಿ ನೂಕಾಟ ವಾಗ್ವಾದ; ಬಣ ರಾಜಕೀಯ ಜೋರು
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 12.30ಕ್ಕೆ ಕರ್ನಾಟಕ ಕಾಂಗ್ರೆಸ್ ಯುವ ಘಟಕದ ವತಿಯಿಂದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ದಾವಣಗೆರೆ ನಗರದ ಜಯದೇವ ವೃತ್ತದಿಂದ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ವೃತ್ತದವರೆಗೆ ಸುಮಾರು ನೂರು ಮೀಟರ್ ಉದ್ದದ ರಾಷ್ಟ್ರಧ್ವಜ ತಿರಂಗಾ ಯಾತ್ರೆ ನಡೆಸಿದರು.

ಬೆಳಿಗ್ಗೆ 12.30ಕ್ಕೆ ನಗರದ ಕೇಂದ್ರಭಾಗ ಜಯದೇವ ವೃತ್ತದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ , ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ಕಾರ್ಯದರ್ಶಿ ನಿಗಮ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಬೆಣ್ಣಿಹಳ್ಳಿ, ಉಪಾಧ್ಯಕ್ಷ ಅಲಿ ರೆಹಮತ್ಮತ್ತು ಪದಾಧಿಕಾರಿಗಳು, ಜವಾಹರ್ ಬಾಲ್ ಮಂಚ್ ರಾಜ್ಯ ಕಾರ್ಯದರ್ಶಿ ಲಿಯಾಖತ್ ಅಲಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರಥಮ ಬಾರಿಗೆ ಆಗಮಿಸಿದ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಶುಭಕೋರಿದರು.
ನೂರಾರು ವಿದ್ಯಾರ್ಥಿಗಳು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಅಂಬೇಡ್ಕರ್ ವೃತ್ತದಲ್ಲಿ ವೃತ್ತಾಕಾರದ ತಿರಂಗಾ ಮತ್ತು ಮಾನವ ಸರಪಳಿ ರಚಿಸಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ರವರಿಗೆ ಹಾರ ಹಾಕಿ ಪುಷ್ಪ ವೃಷ್ಟಿ ಸುರಿಸುವ ಮೂಲಕ ಗೌರವ ಸಮರ್ಪಿಸಿದರು.





