ಆಗ್ನೇಯ ಪದವೀಧರರ ಮತದಾರ ನೊಂದಣಿ ಪ್ರಕ್ರಿಯೆ ವಿಸ್ತರಣೆಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ದಾವಣಗೆರೆ ಜಿಲ್ಲೆ ಜಗಳೂರು ನಗರದ ತಾಲೂಕು ಕಛೇರಿ ಮುಂಭಾಗದಲ್ಲಿ ಜಗಳೂರು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ವಕೀಲ ಆರ್.ಓಬಳೇಶ್ ಮಾತನಾಡಿ, “ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ನೊಂದಣಿಗೆ ನ.6 ರಂದು ದಿನಾಂಕ ನಿಗದಿಗೊಳಿಸಿದ ಪರಿಣಾಮ ತಾಲ್ಲೂಕಿನಲ್ಲಿ ಸಾವಿರಾರು ಪದವೀಧರರು ಮತದಾನ ಅರ್ಹತೆಯಿಂದ ವಂಚಿತರಾಗುತ್ತಿದ್ದಾರೆ. ತಾಲ್ಲೂಕಿನಾದ್ಯಂತ ಕೇವಲ 3025 ಮತದಾರರು ಅರ್ಜಿಸಲ್ಲಿಸಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಳ್ಳಿಗಳಲ್ಲಿ ಬಹುತೇಕ ಪದವೀಧರರು, ಸೇವಾನಿರತ ಶಿಕ್ಷಕರು, ವಕೀಲರು, ದುಡಿಮೆ ಅರಸಿ ನಗರಪ್ರದೇಶಗಳಿಗೆ ತೆರಳಿರುವ ನಿರುದ್ಯೋಗಿ ಪದವೀಧರರು ಮಾಹಿತಿ ಕೊರತೆಯಿಂದ, ಇನ್ನು ಕೆಲವರು ಸಮರ್ಪಕ ದಾಖಲಾತಿಗಳಿಲ್ಲದ ಕಾರಣ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿಲ್ಲ. ಆದ್ದರಿಂದ ಸರ್ಕಾರ ಮತದಾರರ ನೊಂದಣಿಗೆ ಇನ್ನೂ ಕೆಲದಿನಗಳಿಗೆ ವಿಸ್ತರಣೆಗೊಳಿಸಿ ಅವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕನಕದಾಸರ ಸಮಾಜ ಸುಧಾರಣೆ ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತ: ಸಚಿವ ಡಿ ಸುಧಾಕರ್
ಮನವಿ ಸಲ್ಲಿಸುವ ವೇಳೆ ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಜಿ.ಶಂಭುಲಿಂಗಪ್ಪ, ಮಾನವಹಕ್ಕುಗಳ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಜಿ.ತಿಪ್ಪೇಸ್ವಾಮಿ, ರಕೀಬ್, ಪ್ರದೀಪ್, ಶುಕ್ರದೆಸೆ ಸಂಪಾದಕ, ಪ್ರಗತಿಪರ ಹೋರಾಟಗಾರರಾದ ರಾಜಪ್ಪ ವ್ಯಾಸಗೊಂಡನಹಳ್ಳಿ, ದಸಂಸ ತಾಲೂಕಾಧ್ಯಕ್ಷ ಸತೀಶ್ ಮಲೆಮಾಚಿಕೆರೆ, ಮಾದಿಹಳ್ಳಿ ಮಂಜುನಾಥ್, ಗೊಲ್ಲರಹಟ್ಟಿ ತಿಪ್ಪೇಸ್ವಾಮಿ, ಧನ್ಯಕುಮಾರ್ ಎಚ್.ಎಂ ಹೊಳೆ, ಚಂದ್ರಪ್ಪ, ಗೌರಿಪುರ ಸತ್ಯಮೂರ್ತಿ, ಉಮೇಶ್ ಸೇರಿದಂತೆ ಇತರರು ಹಾಜರಿದ್ದರು.





