ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ಸಭೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯ ಬಗ್ಗೆ ಆಕ್ಷೇಪ ಎತ್ತಿರುವ ಹಲವು ಸಾಹಿತಿಗಳು, “ಉಪ ಮುಖ್ಯಮಂತ್ರಿಯವರ ಹೇಳಿಕೆ ಅತ್ಯಂತ ಖಂಡನೀಯ. ಬೇಷರತ್ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹಲವಾರು ಸಾಹಿತಿಗಳು, “ಇಂದು ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಉಪಮುಖ್ಯಮಂತ್ರಿಗಳು, “ಕಾಂಗ್ರೆಸ್ ಪಕ್ಷದ ಕಛೇರಿಗೆ ಸಾಹಿತಿಗಳನ್ನು ಕರೆದು ಸಭೆ ನಡೆಸಿದ್ದು ನಾನೇ, ಅದರಲ್ಲಿ ತಪ್ಪೇನು . ಸಾಹಿತಿಗಳು ರಾಜಕಾರಣಿಗಳೇ ಎಂಬ ಮಾತನ್ನಾಡಿದ್ದಾರೆ. ಅಕಾಡೆಮಿಯ ನೇಮಕಗಳೂ ಸಹ ನಿಗಮ ಮತ್ತು ಮಂಡಳಿಗಳ ನೇಮಕದಂತೆ ಪಕ್ಷದ ಹಿತಾಸಕ್ತಿಯ ನೇಮಕವೇ ಆಗಿದೆ. ಸಾಹಿತಿಗಳೂ ಕೂಡ ಪಕ್ಷ ರಾಜಕಾರಣಿಗಳೇ. ಬಾಯಿ ಬಿಟ್ಟು ಹೇಳಿಕೊಳ್ಳುವುದಿಲ್ಲ ಅಷ್ಟೇ. ಅಕಾಡೆಮಿಗಳ ಸ್ವಾಯತ್ತತೆ ಅಂತ ಏನೂ ಇಲ್ಲ. ಎಲ್ಲ ಸರ್ಕಾರದ ನೇಮಕಾತಿಗಳೇ. ಹೀಗಾಗಿ ಎಲ್ಲಿ ಬೇಕಾದರೂ ಸಭೆ ಕರೆಯಬಹುದು” ಎಂದು ತಿಳಿಸಿದ್ದಾರೆ.
ಮೊದಲನೆಯದಾಗಿ, ಉಪ-ಮುಖ್ಯಮಂತ್ರಿಗಳ ಈ ಉದ್ಧಟತನ ಹಾಗೂ ಅಧಿಕಾರದ ದರ್ಪದಿಂದ ಕೂಡಿದ ಈ ಹೇಳಿಕೆಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಡಿಸಿಎಂರವರ ಈ ಹೇಳಿಕೆಯನ್ನು ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಇತರೆ ಸಚಿವರು ಅನುಮೋದಿಸುತ್ತಾರೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ” ಎಂದು ಪ್ರಶ್ನಿಸಿದ್ದಾರೆ.
“ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲೊರಟಿರುವ ಕೋಮುವಾದಿ ಹಾಗು ಸರ್ವಾಧಿಕಾರಿ ಧೋರಣೆಯ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ಎಲ್ಲ ಪ್ರಗತಿಪರ , ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳನ್ನು ಜೊತೆಗೆ ಕೊಂಡೊಯ್ಯಬೇಕಾದ ಇಂದಿನ ರಾಜಕೀಯ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳ ಈ ಹೇಳಿಕೆ ನಮಗೆ ಅಘಾತವನ್ನುಂಟು ಮಾಡಿದೆ. ಉಪಮುಖ್ಯಮಂತ್ರಿಯವರ ಈ ನಡೆ ಪಾಳೇಗಾರಿಕೆ ಮನೋಧೋರಣೆಯಾಗಿದೆ. ಸರ್ವಾಧಿಕಾರ ಹಾಗೂ ದರ್ಪದ ನಡೆ. ಇದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ ಮತ್ತು ಬೇಷರತ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸುತ್ತೇವೆ” ಎಂದು ಹಲವು ಕನ್ನಡದ ಸಾಹಿತಿಗಳು ಹಾಗೂ ಸಾಮಾಜಿಕ ಹೋರಾಟಗಾರರು ತಿಳಿಸಿದ್ದಾರೆ.
“ನಾವು ಸಂವಿಧಾನಬದ್ಧ ರಾಜಕೀಯದಲ್ಲಿ ನಂಬಿಕೆ ಇಟ್ಟು ಸಂವಿಧಾನದ ಆಶಯದಂತೆ ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಗಣರಾಜ್ಯವನ್ನಾಗಿ ರೂಪಿಸಲು ಕೆಲ ನಿರ್ವಹಿಸುತ್ತಿದ್ದೇವೆಯೇ ಹೊರತು ಯಾವುದೇ ಪಕ್ಷದ ಬಾಲಂಗೋಚಿಗಳಲ್ಲ. ಉಪಮುಖ್ಯಮಂತ್ರಿಗಳು ಪ್ರಗತಿಪರರು ಅವರ ಹಂಗಿನಲ್ಲಿದ್ದಾರೆ ಎಂದುಕೊಂಡರೆ ಅದು ಅವರ ಮೂರ್ಖತನವೇ ಸರಿ. ಇವರ ಧೋರಣೆಯನ್ನು ಗಮನಿಸಿದರೆ, ಇವರು ಸರ್ವಾಧಿಕಾರಿ ಮೋದಿಯವರಿಗಿಂತ ಭಿನ್ನವಿಲ್ಲವೆನಿಸುತ್ತದೆ. ಹಾಗೆಯೇ, ಕಾಂಗ್ರೆಸ್ಸಿನ ಬಹುಮುಖಗಳಲ್ಲಿ ಒಂದನ್ನು ಡಿಕೆಶಿವಕುಮಾರ್ ಅನಾವರಣಗೊಳಿಸಿದಂತಿದೆ. ಕಾಂಗ್ರೆಸ್ಸಿನ ನಾಯಕರಿಗೆ ಈ ಧೈರ್ಯ ಬರಲು, ಓಲೈಸುವ ಮನೋಧರ್ಮದ ನಮ್ಮ ಸಾಹಿತಿಗಳೂ-ಬರಹಗಾರರು ಕಾರಣ ಎಂಬುದನ್ನು ನಾವು ಮರೆಯಬಾರದು. ಸಾಹಿತಿಗಳು ತಮ್ಮ ಅಂತಃ ಸಾಕ್ಷಿಗೆ ಓಗೊಟ್ಟು ಇದನ್ನು ಖಂಡಿಸಿ ತಮ್ಮ ಸ್ವಾಯತ್ತ ಮನೋಧರ್ಮವನ್ನು ಸಾರುವ ಕೆಲಸ ಮಾಡಬೇಕಿದೆ” ಎಂದು ತಿಳಿಸಿದ್ದಾರೆ.
“ಉಪಮುಖ್ಯಮಂತ್ರಿಗಳ ಈ ನಿಲುವು ಅವರ ಸ್ಥಾನಕ್ಕೆ ಕಳಂಕ ತಂದಿದೆ. ಒಕ್ಕೂಟದ ಮೋದಿ ಸರ್ಕಾರವು ಇದೇ ರೀತಿಯ ಅಹಂಕಾರದಿಂದಲೇ ಎಲ್ಲ ಸ್ವಾಯತ್ತ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಸರ್ವಾನಾಶ ಮಾಡಿ, ಸರ್ಕಾರದ ಗುಲಾಮರಾಗಿಸಿಕೊಂಡಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆದರೆ ಈಗ ಕಾಂಗ್ರೆಸ್ ಸರ್ಕಾರವು ಕೂಡ ಸ್ವಾಯತ್ತ ಸಂಸ್ಥೆಗಳ ಬಗ್ಗೆ ಮೋದಿ ಸರ್ಕಾರದ ಸರ್ವಾಧಿಕಾರಿ ನಿಲುವನ್ನೇ ಅನುಸರಿಸಿದರೆ , ನಮ್ಮ ನಿಲುವು ಏನಾಗಬೇಕೆಂದು ಪ್ರಜ್ಞಾವಂತ ಸಮಾಜ ಯೋಚಿಸಬೇಕಿದೆ. ಮೋದಿ ಸರ್ಕಾರದ ಸರ್ವಾಧಿಕಾರಕ್ಕೆ, ದರ್ಪ ಹಾಗೂ ದುರಹಂಕಾರಕ್ಕೆ ತೋರಿದ ವಿರೋಧವನ್ನೇ ಕಾಂಗ್ರೆಸ್ ಸರ್ಕಾರದ ಧೋರಣೆಗೂ ತೋರಬೇಕಾದ ಅನಿವಾರ್ಯತೆಯನ್ನು ಉಪ ಮುಖ್ಯಮಂತ್ರಿಯವರು ಸೃಷ್ಟಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲವೆಂಬುದು ನಮ್ಮ ಒಮ್ಮತದ ಅಭಿಪ್ರಾಯ” ಎಂದು ಸಾಹಿತಿಗಳು ತಿಳಿಸಿದ್ದಾರೆ.
“ಅಕಾಡೆಮಿ ಮತ್ತು ಪ್ರಾಧಿಕಾರಗಳು ಉಳಿದ ಬೋರ್ಡ್ ಮತ್ತು ಪ್ರಾಧಿಕಾರಗಳಂತಲ್ಲ. ಸಾಹಿತ್ಯ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಈ ಅಕಾಡೆಮಿ ಹಾಗು ಪ್ರಾಧಿಕಾರಗಳು ವಿಷಯ ತಜ್ಞರ ತಜ್ಞತೆಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳು. ಇವುಗಳಿಗೆ ಸರ್ಕಾರವೇ ಅಧ್ಯಕ್ಷರು ಹಾಗು ಸದಸ್ಯರನ್ನು ನೇಮಿಸಿದರೂ , ಅದು ತಜ್ಞತೆಯ ಮತ್ತು ಆ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಮಾನದಂಡವಾಗಿ ಇಟ್ಟುಕೊಂಡು ನೇಮಕವಾಗಿರುತ್ತದೆಯೇ ಹೊರತು ರಾಜಕೀಯ ಅಥವಾ ಪಕ್ಷ ರಾಜಕಾರಣ ಮಾನದಂಡವಲ್ಲ. ಅಂತಹ ತಜ್ಞರನ್ನು ನೇಮಿಸುವುದು ವ್ಯಕ್ತಿಯ ಘನತೆಗಿಂತ ಸರಕಾರ ಹಾಗೂ ಸಂಸ್ಥೆಯ ಘನತೆಯನ್ನು ಹೆಚ್ಚಿಸುತ್ತದೆ. ನೇಮಕವಾಗುವ ಅಧ್ಯಕ್ಷರು ಮತ್ತು ಸದಸ್ಯರು ತಾವು ನೇಮಕವಾದ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆಯೇ ಹೊರತು ರಾಜಕೀಯ ಪಕ್ಷವನ್ನಲ್ಲ. ಜೊತೆಗೆ , ಈ ಸಂಸ್ಥೆಗಳು ಜನರ ತೆರಿಗೆ ಹಣದಲ್ಲಿ ನಡೆಯುವ ಸಂಸ್ಥೆಗಳು ಹೊರತು ಯಾವುದೇ ಪಕ್ಷ ಹಂಗಿನಲ್ಲಲ್ಲ” ಎಂದು ತಿಳಿಸಿದ್ದಾರೆ.
“ಅಕಾಡೆಮಿ ಮತ್ತು ಪ್ರಾಧಿಕಾರಗಳಂತ ಸ್ವಾಯತ್ತ ಸಂಸ್ಥೆಗಳ ಘನತೆಯನ್ನು ಕುಗ್ಗಿಸಿದೆ. ಇದೇ ಸಂದರ್ಭದಲ್ಲಿ ಅಲ್ಲಿ ಭಾಗವಹಿಸಿದ ಅಧ್ಯಕ್ಷರು ಸದಸ್ಯರು ಪಕ್ಷರಾಜಕಾರಣಕ್ಕೆ ಹೊರತಾಗಿ ತಮ್ಮ ಜವಾಬ್ದಾರಿ ಹಾಗು ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮಾದವೆಸಗಿದ್ದಾರೆ. ಇದು ಪ್ರಗತಿಪರ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಕಪ್ಪು ಚುಕ್ಕೆ. ತುಂಬಾ ನೋವಿನ ಬೆಳವಣಿಗೆ” ಎಂದು ಬೇಸರಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ಬಕ್ರೀದ್ ಸಂಭ್ರಮಾಚರಣೆ ಮರೆತು ಪ್ರಯಾಣಿಕರ ರಕ್ಷಣೆಗಿಳಿದ ಮುಸ್ಲಿಮರು
“ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವೀಯ ಸಂಸ್ಥೆಗಳ ಸ್ವಾಯತ್ತತೆಗೆ ದಕ್ಕೆ ತರುವ ಇಂತಹ ನಡುವಳಿಕೆಗಳನ್ನು, ಪ್ರಸ್ತುತ ಸರಕಾರದಿಂದ ನೇಮಕಗೊಂಡಿರುವ ಸ್ವಾಯತ್ತ ಸಾಹಿತ್ಯ, ಸಂಸ್ಕೃತಿ , ಕಲೆ ಹಾಗೂ ಶೈಕ್ಷಣಿಕ ಸಂಸ್ಥೆ ಹಾಗು ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರೂ ವಿರೋಧಿಸಿ, ಸಂಸ್ಥೆಗಳ ಪ್ರಜಾಪ್ರಭುತ್ವೀಯ ಘನತೆಯನ್ನು ಎತ್ತಿಹಿಡಿಯಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಸಾಹಿತಿ ಡಾ. ಎಚ್. ಎಸ್. ಅನುಪಮಾ, ಕೆ.ಫಣಿರಾಜ್ ಉಡುಪಿ, ರಹಮತ್ ತರೀಕೆರೆ, ಡಾ.ಶ್ರೀನಿವಾಸ ಕಕ್ಕಿಲಾಯ, ಬಸವರಾಜ ಸೂಳಿಭಾವಿ ಸೇರಿದಂತೆ ಹಲವು ಮಂದಿ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.





