ಕರ್ನಾಟಕದ ಇತಿಹಾಸದಲ್ಲಿ ಮೊದಲನೆಯ ಬಾರಿಗೆ ಒಂದು ಕಾಂಗ್ರೆಸ್ಸೇತರ ಸರ್ಕಾರ 1983ರಲ್ಲಿ ರಾಜ್ಯದ ಅಧಿಕಾರ ಸೂತ್ರ ಹಿಡಿಯುತ್ತದೆ. ಅದರ ಶ್ರೇಯಸ್ಸು ಯಾರಿಗೆ ಸಲ್ಲಬೇಕು? ಒಂದು ವೇಳೆ, ಅರಸು ಅವರು 1983ರಲ್ಲಿ ಬದುಕಿದ್ದಿದ್ದರೆ, ಹೆಗಡೆ ಎಲ್ಲಿರ್ತಿದ್ರು, ಜನತಾ ಪಕ್ಷ ಎಲ್ಲಿರ್ತಿತ್ತು?
ಧೀಮಂತ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಸರಿಗಟ್ಟಿದ್ದಾರೆಂದು ಹೇಳಲು, ಇದೇನೂ ಕ್ರಿಕೆಟ್ ಮ್ಯಾಚ್ ಅಲ್ಲ. ಅರಸರ ಆಡಳಿತ-ರಾಜಕಾರಣದ ಅಂದಿನ ಪರಿಸ್ಥಿತಿಗಳು ಮತ್ತು ಸಿದ್ದರಾಮಯ್ಯ ಆಡಳಿತ-ರಾಜಕಾರಣದ ಇಂದಿನ ಇರಸ್ಥಿತಿಗಳು ಸಂಪೂರ್ಣವಾಗಿ ಬೇರೆ ಬೇರೆ. ಅರಸರು ಯಾವುದೇ ದೊಡ್ಡ ಜಾತಿ ಸಮುದಾಯಕ್ಕೆ ಸೇರಿದವರಾಗಿರಲಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿಯೇ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. 1952ರಿಂದ ಹತ್ತು ವರ್ಷಗಳ ಕಾಲ ವಿಧಾನಸಭಾ ಸದಸ್ಯರಾಗಿದ್ದರು. 1969ರಲ್ಲಿ ಕಾಂಗ್ರೆಸ್ ಇಬ್ಭಾಗ ಆದಾಗ ಇಂದಿರಾ ಗಾಂಧಿ ಜೊತೆ ನಿಂತರು. 1972-1977 ಮತ್ತು 1978-1980ರ ತನಕ ಮುಖ್ಯಮಂತ್ರಿಯಾಗಿದ್ದರು. 1978ರಲ್ಲಿ ಎರಡನೆಯ ಸಲ ಮುಖ್ಯಮಂತ್ರಿಯಾಗಿ ನೇಮಕಗೊಂಡರು. 1979ರಲ್ಲಿ ಇಂದಿರಾ ಜೊತೆ ಭಿನ್ನಾಭಿಪ್ರಾಯಗಳ ಕಾರಣ ಇಂದಿರಾ ಕಾಂಗ್ರೆಸ್ ತೊರೆದರು. ಅರಸು ಕಾಂಗ್ರೆಸ್‌ನ ಅಧ್ಯಕ್ಷರಾದರು. 1980ರ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸಿಕ್ಕಿದ್ದು ಒಂದೇ ಸ್ಥಾನ. ಬಹುತೇಕ ಶಾಸಕರು ಅರಸು ಅವರ ಕೈ ಬಿಟ್ಟರು. ಕಾಂಗ್ರೆಸ್ (ಐ) ಸೇರಿದರು. 1980ರ ಜನವರಿಯಲ್ಲಿ ಗುಂಡೂರಾವ್ ಮುಖ್ಯಮಂತ್ರಿಯಾದರು. 1982ರಲ್ಲಿ ತಮ್ಮ ಸಾವಿಗೆ ಕೆಲ ತಿಂಗಳುಗಳ ಮುನ್ನ ಅರಸರು ಕರ್ನಾಟಕ ಕ್ರಾಂತಿರಂಗ ಪಕ್ಷವನ್ನು ಸ್ಥಾಪಿಸಿದ್ದರು.
ತಮ್ಮ ಆಡಳಿತದ ಒಂದೊಂದು ದಿನವೂ ಅವರ ಪಾಲಿಗೆ ಸವಾಲುಗಳೇ ಸವಾಲುಗಳಾಗಿ ಅರಸು ಅವರ ಮೈಮೇಲೆ ಬಿದ್ದಿದ್ದವು. ಆದರೆ, ಸಿದ್ದರಾಮಯ್ಯನವರು ಹಿಂದುಳಿದ ವರ್ಗಕ್ಕೆ ಸೇರಿದ್ದರೂ, ಅವರ ಸಮುದಾಯ (ಕುರುಬ) ದೊಡ್ಡದೇ ವಿನಾ ಅರಸರಂತೆ ಸಣ್ಣದಲ್ಲ, ಅರಸರು ಉದ್ದಕ್ಕೂ ಪಕ್ಷದೊಳಗೇ ವಿರೋಧ-ಭಿನ್ನಮತಗಳ ಮುಳ್ಳಿನ ಹಾಸಿನ ಮೇಲೆ ನಡೆಯಬೇಕಾಯಿತು. ಆದರೆ, ಸಿದ್ದರಾಮಯ್ಯ ಭಿನ್ನಮತವನ್ನು ಎದುರಿಸಿಯೇ ಇಲ್ಲ.
ಅರಸರು ಕೇಳಿ ಕಂಡಿರದ ತಳಸಮುದಾಯಗಳನ್ನು ಗುರುತಿಸಿ ಅವುಗಳಲ್ಲಿನ ವಿದ್ಯಾವಂತರನ್ನು ಪಕ್ಷಕ್ಕೆ ಕರೆತಂದರೇ ವಿನಾ ಹೆಬ್ಬೆಟ್ಟು ಒತ್ತುವವರನ್ನಲ್ಲ. ಉತ್ತಮ ವಿದ್ಯಾರ್ಹತೆಗಳ ವ್ಯಕ್ತಿಗಳನ್ನು ತಂದು ರಾಜಕೀಯಕ್ಕೆ ಹೊಸ ತಿರುವು ಕೊಟ್ಟರು. ಅದಕ್ಕೂ ಮುಂಚೆ ಅಡಳಿತ ಪಕ್ಷವಾಗಲಿ, ವಿರೋಧ ಪಕ್ಷವೇ ಇರಲಿ, ಬಲಿಷ್ಠ ಸಮುದಾಯಗಳವರೇ ತುಂಬಿದ್ದರು. ಆ ಜಾಗಕ್ಕೆ ಶೋಷಿತರನ್ನು ತಂದ ಶ್ರೇಯಸ್ಸು ಅರಸು ಅವರದು. ಇಂದಿರಾ ಗಾಂಧಿಯವರ ಆಶೀರ್ವಾದ ಅರಸು ಅವರಿಗೆ ನೂರಕ್ಕೆ ನೂರರಷ್ಟಿತ್ತು. ಆದರೆ, ಆಶೀರ್ವಾದದ ದುರ್ಬಳಕೆಯಾಯಿತೇ, ಇಲ್ಲವೇ ಸದ್ಬಳಕೆ ಆಯಿತೇ ಎಂಬುದು ಕೂಡ ಅಷ್ಟೇ ಮುಖ್ಯ ಅಲ್ಲವೇ?
1972ರಿಂದ 1978ರ ನಂತರ 1980ರಲ್ಲಿ ಭಿನ್ನಮತೀಯರು ಇದ್ದೇ ಇದ್ದರು. ಅರಸರ ವಿರುದ್ಧ ಸಹಿ ಸಂಗ್ರಹ ಮಾಡುತ್ತಿದ್ದರು. ಸಿದ್ದರಾಮಯ್ಯನವರಿಗೆ ಭಿನ್ನಮತವೇ ಇಲ್ಲ. ಯಾವುದೇ ಹೊಸ ಪ್ರಯೋಗ ಮಾಡಬೇಕಾದ್ದಿಲ್ಲ. ಭೂ ಸುಧಾರಣೆಯಂತಹ ವಿಷಯವನ್ನೇ ತೆಗೆದುಕೊಳ್ಳೋಣ. ಭೂಮಿ ಕಾಣಿಗಳು ಬಲಿಷ್ಠ ಜಾತಿಗಳ ಬದುಕೇ ಆಗಿಹೋಗಿದ್ದ ಕಾಲ. ಈ ಬಲಿಷ್ಠ ಜಾತಿಗಳು ಬಲಿಷ್ಠ ಜಾತಿಗಳಾಗಿದ್ದು ಅವುಗಳ ಜನಸಂಖ್ಯೆಯ ಬಲದಿಂದ ಅಲ್ಲ, ಬದಲಿಗೆ ಭೂಮಿಯ ಮೇಲೆ ಅವರಿಗಿದ್ದ ಹಿಡಿತದ ಕಾರಣದಿಂದ ಪ್ರಭಾವೀ ಸಮಾಜಗಳಾಗುತ್ತಾರೆ. ಭೂಸುಧಾರಣೆ ಜಾರಿಗೆ ತಂದ ಅರಸರು ಭೂಮಿ ಇರುವವರು ಮತ್ತು ದೊಡ್ಡ ಸಮಾಜಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು. ಭೂ ನ್ಯಾಯಮಂಡಳಿಗಳನ್ನು ರಚಿಸುತ್ತಾರೆ. ಅಲ್ಲಿ ನಾವೇ ಆರಿಸಿದ ಪ್ರಜಾಪ್ರತಿನಿಧಿಗಳೇ ಇರ್ತಾರೆ. ಅಂತಹ ಸವಾಲೇನಾದರೂ ಸಿದ್ದರಾಮಯ್ಯನವರಿಗೆ ಇತ್ತಾ?
ಇನ್ನು, ಹಿಂದುಳಿದ ವರ್ಗಗಳ ಆಯೋಗದ ವಿಷಯಕ್ಕೆ ಬರೋಣ. ಅಷ್ಟೊಂದು ಹಿಂದುಳಿದ ಜಾತಿಗಳಿವೆ ಎಂದು ಯಾರಿಗೆ ಗೊತ್ತಿತ್ತು? ಆಯೋಗ ಗುರುತಿಸದೆ ಹೋಗಿದ್ದರೆ, ಈ ಜಾತಿಗಳು ಬೆಳಕಿಗೆ ಬಾರದೆ ಕತ್ತಲಲ್ಲೇ ಉಳಿದು ಹೋಗುತ್ತಿದ್ದವು. ಒಂದು ಶಾಸನಾತ್ಮಕ ಆಯೋಗ ರಚಿಸಿ, ಎಲ್.ಜಿ ಹಾವನೂರ್ ಅಂತಹವರನ್ನು ಕರೆತಂದು ಅವರಿಗೆ ಜವಾಬ್ದಾರಿ ವಹಿಸಿದರು. ಅರಸರಿಗೆ ಸಿಕ್ಕಿದ್ದು ಒಂದೇ ಅವಕಾಶ, ಅವರು ಅದನ್ನು ದಲಿತ-ಶೋಷಿತರ ಪರವಾಗಿ ಹೇಗೆಲ್ಲ ಬಳಸಿದರು! ತಲೆಯ ಮೇಲೆ ಮಲ ಹೊರುವ ಪದ್ಧತಿಯ ನಿಷೇಧವು ಅದೆಂತಹ ಕ್ರಾಂತಿಕಾರಿ ನಿರ್ಧಾರ ಅಲ್ಲವೇ? ಬಿ.ಬಸವಲಿಂಗಪ್ಪನವರು ಈ ವಿಷಯಕ್ಕೆ ಆರಂಭ ನೀಡುತ್ತಾರೆ, ಆ ಮಾತು ಬೇರೆ. ಆದರೆ ಜಾರಿಗೆ ತರುವವರು ಮುಖ್ಯಮಂತ್ರಿಯವರೇ ಅಲ್ಲವೇ? ಮೈಸೂರನ್ನು ಕರ್ನಾಟಕವೆಂದು ಕರೆಯುವುದನ್ನು ಒಂದು ಕಾಲಕ್ಕೆ ತಾವೇ ವಿರೋಧ ಮಾಡಿದ್ದ ಅರಸರು, ತಮ್ಮನ್ನು ತಾವೇ ತಿದ್ದಿಕೊಳ್ಳುತ್ತಾರೆ. ಮರುನಾಮಕರಣ ಮಾಡುತ್ತಾರೆ. ಅವರಿಗೆ ಎದುರಾದ ಬಹುದೊಡ್ಡ ಸಮಸ್ಯೆಯೆಂದರೆ, ಯಾರೆಲ್ಲ ಇವರನ್ನು ಪಕ್ಷದ ಒಳಗೆ ಹೊರಗೆ ಕಟುವಾಗಿ ವಿರೋಧಿಸಿದ್ದರೋ, ಅವರೆಲ್ಲ ಮೈತ್ರಿ ರೂಪಿಸಿಕೊಂಡು ಅರಸರ ವಿರುದ್ಧ ಒಟ್ಟಾಗುತ್ತಾರೆ.
ತುರ್ತುಪರಿಸ್ಥಿತಿಯಂತಹ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಎದುರಾಗಿತ್ತಾ? ತುರ್ತುಪರಿಸ್ಥಿತಿಯನ್ನು ಜನಸಾಮಾನ್ಯರು, ಬುದ್ಧಿಜೀವಿಗಳು ಪ್ರತಿಭಟಿಸುತ್ತಾರೆ. ತುರ್ತುಪರಿಸ್ಥಿತಿಯಂತಹ ಕರಾಳ ಶಾಸನವನ್ನು ಕೂಡ ಜನಪರವನ್ನಾಗಿ ಮಾಡಿದಂತ ಮನುಷ್ಯ ಅರಸು ಅವರು. 1977ರಲ್ಲಿ ಇಂದಿರಾಗಾಂಧಿಯವರು ಚುನಾವಣೆಯಲ್ಲಿ ಸೋತ ನಂತರ, ಒಂದೇ ದಿನ 10 ಮಂದಿ ಕ್ಯಾಬಿನೆಟ್ ಮಂತ್ರಿಗಳು (ಅವರಲ್ಲಿ ಮಹಮ್ಮದಾಲಿ ವಿನಾ ಒಂಬತ್ತು ಜನ ಬಲಿಷ್ಠ ಜಾತಿಗಳಿಗೆ ಸೇರಿದ್ದವರು) ಅರಸು ಮಂತ್ರಿಮಂಡಲದಿಂದ ಹೊರನಡೆಯುತ್ತಾರೆ. ಕಾಂಗ್ರೆಸ್ ಟಿಕೆಟ್ ಮೇಲೆ ಗೆದ್ದು ಬಂದ ಶಾಸಕಾಂಗ ಪಕ್ಷದವರು ರಾಜಭವನಕ್ಕೆ ಹೋಗುತ್ತಾರೆ. ಜನತಾ ಪಕ್ಷದವರೂ ಇವರನ್ನು ಸೇರಿಕೊಳ್ಳುತ್ತಾರೆ. 1977ರ ಡಿಸೆಂಬರ್ 31ರ ಮಧ್ಯರಾತ್ರಿ ಅರಸು ಸರ್ಕಾರವನ್ನು ವಜಾ ಮಾಡಲಾಗುತ್ತದೆ. ಆಗ ಚರಣಸಿಂಗ್ ಪ್ರಧಾನಮಂತ್ರಿ. 1978ರ ಜನವರಿ 1ಕ್ಕೆ ಅರಸು ಅವರು ವಿಧಾನಮಂಡಲದ ಅಧಿವೇಶನ ಕರೆದಿರುತ್ತಾರೆ. ಆದರೆ, ಹಿಂದಿನ ದಿನ ರಾತ್ರಿಯೇ ಸರ್ಕಾರ ವಜಾ ಆಗಿರುತ್ತದೆ. ಏಕಾಂಗಿಯಾಗಿ ಕುಳಿತು ಇವರೆಲ್ಲರನ್ನೂ ವಿರೋಧಿಸಿ, ಸೋತು ಹೋಗಿದ್ದಂತಹ ಇಂದಿರಾಗಾಂಧಿಯವರನ್ನೇ ಬೆನ್ನಿಗೆ ಕಟ್ಟಿಕೊಂಡು ಪುನಃ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತಾರೆ. ವಿರೋಧಿಗಳು ಸಂಪೂರ್ಣ ತಬ್ಬಿಬ್ಬಾಗಿ ಹೋಗ್ತಾರೆ. ಇವರ್ಯಾರೂ ಅರಸರ ವೈಚಾರಿಕ ವಿರೋಧಿಗಳೇ ವಿನಾ ವೈಯಕ್ತಿಕ ವಿರೋಧಿಗಳಾಗಿರುವುದಿಲ್ಲ. ಇನ್ನು ಹೇಗೆ ವಿರೋಧಿಸುವುದೆಂದು ಇವರಿಗೆ ತೋಚುವುದಿಲ್ಲ. ಕಡೆಯದಾಗಿ ಇಂದಿರಾಗಾಂಧಿಯವರನ್ನೇ ದೇವರಾಜ ಅರಸರಿಂದ ದೂರ ಮಾಡುತ್ತಾರೆ.
ದೇವರಾಜ ಅರಸು ದೂರ ಆದ ನಂತರ ಹಲವರು ಕಾಂಗ್ರೆಸ್ಸಿಗೆ ಸೇರುತ್ತಾರೆ. ಅವರೆಲ್ಲರೂ ಇಂದಿರಾಗಾಂಧಿಯವರ ಮೇಲಿನ ಪ್ರೀತಿಗಲ್ಲ, ಸದ್ಯಕ್ಕೆ ಅರಸರನ್ನ ಹೊರಹಾಕಿದೆವಲ್ಲ, ಆ ಜಾಗವನ್ನು ಆಕ್ರಮಿಸೋಣ ಎಂದು ಬಂದವರು. ಅರಸು ನಾಯಕತ್ವ ಅದೆಷ್ಟು ಪ್ರಭಾವಿಯಾಗಿತ್ತೆಂದರೆ, ಅದು ಜನರಿಗೆ ಗೊತ್ತಾಗಿದ್ದು ಅರಸರ ಮರಣೋತ್ತರದಲ್ಲಿ. ಕರ್ನಾಟಕದ ಇತಿಹಾಸದಲ್ಲಿ ಮೊದಲನೆಯ ಬಾರಿಗೆ ಒಂದು ಕಾಂಗ್ರೆಸ್ಸೇತರ ಸರ್ಕಾರ 1983ರಲ್ಲಿ ರಾಜ್ಯದ ಅಧಿಕಾರ ಸೂತ್ರ ಹಿಡಿಯುತ್ತದೆ. ಅದರ ಶ್ರೇಯಸ್ಸು ಯಾರಿಗೆ ಸಲ್ಲಬೇಕು? ಒಂದು ವೇಳೆ ಅರಸು ಅವರು 1983ರಲ್ಲಿ ಬದುಕಿದ್ದಿದ್ದರೆ, ಹೆಗಡೆ ಎಲ್ಲಿರ್ತಿದ್ರು, ಜನತಾ ಪಕ್ಷ ಎಲ್ಲಿರ್ತಿತ್ತು?
ಈ ಲೇಖನ ಓದಿದ್ದೀರಾ?: ದೇವರಾಜ ಅರಸು-ಸಿದ್ದರಾಮಯ್ಯ: ಸಾಧನೆಯಲ್ಲಿ ಸಮಾನತೆ ಇದೆಯೇ?
1980ರಲ್ಲಿ ಲೋಕಸಭೆಗೆ ಚುನಾವಣೆ ಫಲಿತಾಂಶ ಹೊರಬೀಳುತ್ತದೆ. ತಾನು ನಿಲ್ಲಿಸಿದ್ದ ಹುರಿಯಾಳುಗಳು ಮೂರನೆಯ ಸ್ಥಾನದಲ್ಲಿದ್ದಾರೆಂದು ರೇಡಿಯೋ ಸುದ್ದಿ ಬಂದ ಹತ್ತು ನಿಮಿಷಗಳಲ್ಲಿ ಹಿಂದೆ ಮುಂದೆ ನೋಡದೆ, ನೈತಿಕ ಹೊಣೆಗಾರಿಕೆ ಹೊತ್ತು ಸೀದಾ ರಾಜಭವನಕ್ಕೆ ಹೋಗಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡ್ತಾರೆ ಸ್ವಾಭಿಮಾನಿ ದೇವರಾಜ ಅರಸು. ಅವರು ಮುಖ್ಯಮಂತ್ರಿಯಾಗಿ ಕಳೆದ ಒಂದೊಂದು ದಿವಸವೂ ಸವಾಲುಗಳೇ ಸವಾಲುಗಳು. ನೀವೂ (ಸಿದ್ದರಾಮಯ್ಯ) ಅಷ್ಟು ದಿವಸ ಕಳೆದಿದ್ದೀರಿ, ದಾಖಲೆ ಮುರಿದಿದ್ದೀರಿ. ಇಂತಹ ಸವಾಲುಗಳು ನಿಮಗೆ (ಸಿದ್ದರಾಮಯ್ಯನವರಿಗೆ) ಇರಲಿಲ್ಲ. ನೀವು ಹಿಂದುಳಿದ ವರ್ಗಕ್ಕೆ ಸೇರಿದವರಾದರೂ ಕೂಡ, ಜನಸಂಖ್ಯೆಯ ಪ್ರಕಾರ ಚುನಾವಣಾ ರಾಜಕಾರಣದಲ್ಲಿ ನಿಮ್ಮದು ಬಹಳ ದೊಡ್ಡ ಸಮಾಜ. ನಿಮಗೆ ರಾಹುಲ್ ಗಾಂಧಿ-ಸೋನಿಯಾ ಗಾಂಧಿಯವರ ಸಂಪೂರ್ಣ ಆಶೀರ್ವಾದ ಇದೆ. ಭಿನ್ನಮತ ಅನ್ನೋದೇ ಇರ್ಲಿಲ್ಲ. ಇದರ ಮಧ್ಯೆ ಕೂಡ ನೀವು 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತು ಹೋದಿರಿ. ಕಾಂಗ್ರೆಸ್ಸಿನ ಒಳಗಿದ್ದವರೇ ನಿಮ್ಮನ್ನು ಮುಗಿಸಿದ್ದು. ನಿಮಗೆ ಅಭಿನಂದನೆ ಸಿದ್ದರಾಮಯ್ಯನವರೇ.
ಆದರೆ, ಎರಡೂ ಬಲಿಷ್ಠ ಸಮುದಾಯಗಳಿಗೆ ಸೇರದೆ ಇದ್ದಂತಹ ಮತ್ತೊಬ್ಬ ನಾಯಕ ನೀವೇ. ನೀವು ಅರಸು ಅವರಿಗಿಂತ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದಿರಿ ಅನ್ನೋದು ಸಂತೋಷ. ಆದರೆ ಅವರಿಗಿದ್ದ ಸವಾಲುಗಳು ಬೇರೆ, ನಿಮಗಿದ್ದ ಸವಾಲುಗಳೇ ಬೇರೆ. ಉಳಿದಂತೆ ಇನ್ನೆಷ್ಟು ದಿನ ಮುಖ್ಯಮಂತ್ರಿಯಾಗಿರ್ತೀರಿ ಎಂಬುದು ಕಾಂಗ್ರೆಸ್ ಹೈಕಮಾಂಡನ್ನು ಅವಲಂಬಿಸಿದೆ. ಉಳಿದಿರುವ ಅವಕಾಶಗಳನ್ನು ಸಾರ್ಥಕಪಡಿಸಿಕೊಳ್ಳಿ. ದಾಖಲೆಯಲ್ಲಿರೋದು ಮುಖ್ಯ ಅಲ್ಲ, ಇತಿಹಾಸದಲ್ಲಿರೋದು ಮುಖ್ಯ.
(ದೂರವಾಣಿಯಲ್ಲಿ ಡಿ.ಉಮಾಪತಿ ಅವರಿಗೆ ಹೇಳಿದ ಅನಿಸಿಕೆಗಳು)




