ಶಾಶ್ವತವಾಗಿರುವುದು ಸಮಾಧಿಯ ಗಾತ್ರವಲ್ಲ, ಪ್ರಭಾವದ ಸಾಂದ್ರತೆ. ಸ್ಮಾರಕಗಳು ಸ್ಮರಣೆಗೆ ದಾರಿ ತೋರಿಸಬಹುದು; ಆದರೆ ಆಲೋಚನೆಗಳು, ಸಂಸ್ಥೆಗಳು ಮತ್ತು ನೈತಿಕ ಉದಾಹರಣೆಗಳೇ ಪರಂಪರೆಯನ್ನು ಉಳಿಸುತ್ತವೆ.
ಭಾಗ 1
ʼಉತ್ತಮ ಮಧ್ಯಮ ಅಧಮರೆಲ್ಲರು ಸತ್ತ ಮೇಲೆ ಸಮರಾಗ್ತಾರೋ…ʼ –ಸತ್ಯ ಹರಿಶ್ಚಂದ್ರ ಚಿತ್ರದ ಹಾಡಿನ ಸಾಲು
ಇದು 2021ರ ಮಾರ್ಚ್‍ನಲ್ಲಿ ನಡೆದ ಘಟನೆ. ಕಲ್ಬುರ್ಗಿ ಜಿಲ್ಲೆಯ ಬಣಕೂರು ಗ್ರಾಮದ ಲಕ್ಷ್ಮೀಕಾಂತ ಕುಂದಗಲ್ ತಾಯಿ ವಯೋಸಹಜ ಕಾಯಿಲೆಯಿಂದ ನಿಧನರಾಗುತ್ತಾರೆ. ಹಲವು ಜಾತಿಗಳಿಗೆ ಸೇರಿದ ಏಳು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಊರಿನಲ್ಲಿ ದಲಿತರು ನಿಧನರಾದರೆ ಹೂಳಲು ಸ್ಮಶಾನವಿಲ್ಲ. ಪಂಚಾಯತಿ ಸದಸ್ಯನಾಗಿದ್ದ ಲಕ್ಷ್ಮೀಕಾಂತ 2011ರಿಂದಲೂ ಸರ್ಕಾರದ ಅಧಿಕಾರಿಗಳಿಗೆ ದಲಿತರಿಗೆ ಸ್ಮಶಾನಭೂಮಿ ಮುಂಜೂರು ಮಾಡುವಂತೆ ಪತ್ರ ಬರೆದರೂ ಫಲಿತಾಂಶ ಶೂನ್ಯ. ಬೇರೆ ದಾರಿ ಇಲ್ಲದೆ ತಾಯಿಯ ಶವವನ್ನು ಜಿಲ್ಲೆಯ ವೈದ್ಯಕೀಯ ಕಾಲೇಜಿಗೆ ದಾನ ಮಾಡುತ್ತಾರೆ(ಹಿಂದೂಸ್ತಾನ್ ಟೈಂಸ್ ವರದಿ 13.3.2021).
ತುಮಕೂರು ಜಿಲ್ಲೆಯ ದುರ್ಗದಹಳ್ಳಿಯ 65 ವರ್ಷದ ವೃದ್ಧ ಪೆದ್ದಯ್ಯ ನಿಧನರಾದಾಗ ನಿರ್ದಿಷ್ಟ ಸ್ಮಶಾನವಿಲ್ಲದ ಕಾರಣ ಅವರ ಮಗ ತಿಮ್ಮರಾಜೂರ ತಿಮ್ಮನಾಯಕನಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಗುಂಡಿ ತೋಡಿ ಅಂತ್ಯ ಸಂಸ್ಕಾರ ಮಾಡಬೇಕಾಯಿತು. ಅದೇ ರೀತಿ ದಾವಣಗೆರೆಯ ಪುಟ್ಟಗಾಣಾಳ್ ಗ್ರಾಮದ ದಮನಿತ ವರ್ಗಕ್ಕೆ ಸೇರಿದ ಕುಟುಂಬದವರು ಸ್ಮಶಾನದ ಅಭಾವದಿಂದಾಗಿ ರಸ್ತೆಬದಿಯಲ್ಲಿ ಶವಸಂಸ್ಕಾರ ಮಾಡಿದ ಅನೇಕ ಪ್ರಕರಣಗಳು ಸಂಭವಿಸಿವೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ 21.3.2020ರ ಸಂಚಿಕೆಯಲ್ಲಿ ವರದಿ ಮಾಡಿದೆ. ಪುಟ್ಟಗಾಣಾಳ್ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿ ನಿರ್ಮಿಸಲು ನರೇಗಾ ಅಡಿಯಲ್ಲಿ 2020ರಲ್ಲಿ ಕಾಮಗಾರಿ ಮಂಜೂರಾಗಿದ್ದರೂ ಜಮೀನು ದೊರೆಯದ ಕಾರಣ ಯೋಜನೆ ಕಾಗದದ ಮೇಲೆ ಉಳಿದಿದೆ. ದಾವಣಗೆರೆಯ ಕಾಡಜ್ಜಿ ಗ್ರಾಮದ ದಲಿತರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಿಂದೆ ಸತ್ತವರ ಹೆಣಗಳನ್ನು ಹೂಳುತ್ತಿದ್ದ ಜಮೀನಿನ ಮಾಲೀಕತ್ವ ಬದಲಾದಮೇಲೆ ಅಲ್ಲಿ ಹೆಣಗಳ ಸಂಸ್ಕಾರ ನಿಷಿದ್ಧ. ಇತರ ಜಾತಿಯವರ ಸ್ಮಶಾನವೂ ಅವರ ಪಾಲಿಗೆ ಮುಚ್ಚಿದೆ. ಹಾಗಾಗಿ ಸತ್ತವರ ಸಂಸ್ಕಾರಕ್ಕೆ ಈಗ ರಸ್ತೆಯ ಅಂಚೇ ಗತಿ. ಅದಕ್ಕೂ ತಕರಾರು ಇಲ್ಲವೆಂದಲ್ಲ. ಆ ಗ್ರಾಮದ ರಸ್ತೆಯನ್ನು ವೀಕ್ಷಿಸಿದರೆ ಸತ್ತವರನ್ನು ಹೂಳಿರುವ ಕುರುಹುಗಳು ರಸ್ತೆ ಬದಿಯಲ್ಲಿ ಈಗಲೂ ಕಾಣುತ್ತವೆ. ಒಂದು ಅಂದಾಜಿನ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲೇ 91 ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನಭೂಮಿ ಇಲ್ಲ. ಪರಿಸ್ಥಿತಿ ಇತರೆ ಜಿಲ್ಲೆಗಳಲ್ಲಿ ಇದಕ್ಕಿಂತ ಭಿನ್ನವಾಗಿಲ್ಲ.
ಸುಮಾರು ವರ್ಷಗಳ ಹಿಂದೆ ರಾಜಧಾನಿಗೆ ಸಮೀಪವಿರುವ ಹೊಸಕೋಟೆ ತಾಲೂಕಿನ ಯಮಂಡಹಳ್ಳಿಯಲ್ಲಿ ಮೇಲ್ಜಾತಿಯವರ ಸ್ಮಶಾನದಲ್ಲಿ ಸಂಸ್ಕಾರ ಮಾಡಲು ಹೋದಾಗ ನಡೆದ ಹೊಡೆದಾಟದಲ್ಲಿ ಇಬ್ಬರು ದಲಿತರನ್ನು ಕೊಂದ ಘಟನೆ ಸಹ ಇನ್ನೂ ಹಸಿರಾಗಿದೆ. ದಲಿತರು ಉಳುವ ಭೂಮಿ ಮತ್ತು ಹೂಳುವ ಭೂಮಿ- ಎರಡರಿಂದಲೂ ವಂಚಿತರು.
ರಾಜ್ಯ ಹೈ ಕೋರ್ಟ್, ಸುಪ್ರೀಂ ಕೋರ್ಟ್‍ಗಳು ಕಾಲಕಾಲಕ್ಕೆ ಯಾವುದೇ ಜಾತಿಯವರಾಗಿರಲಿ ಸತ್ತವರನ್ನು ಘನತೆಯಿಂದ ಬೀಳ್ಕೊಡಲು ಅಗತ್ಯವಾದ ಸ್ಮಶಾನ ಭೂಮಿಯನ್ನು ರಾಜ್ಯ ಸರ್ಕಾರ, ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳು ಒದಗಿಸಲೇಬೇಕೆಂದು ಆದೇಶಿಸಿದರೂ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಸರ್ಕಾರಗಳಿಗೆ ಅದು ಆದ್ಯತೆಯೇ ಅಲ್ಲ. ದಲಿತರ ಸ್ಮಶಾನಭೂಮಿಯ ಸಮಸ್ಯೆ ರಾಜ್ಯಕ್ಕೆ ಸೀಮಿತವಲ್ಲ. ರಾಷ್ಟ್ರವ್ಯಾಪಿ ಏಕರೂಪದ್ದಾಗಿದ್ದು ಸರ್ಕಾರ ಮತ್ತು ಆಡಳಿತ ಯಂತ್ರಗಳು ಸಹ ಆ ಸಮಸ್ಯೆ ಬಗ್ಗೆ ತೋರುತ್ತಿರುವ ನಿಷ್ಕಾಳಜಿಯಲ್ಲೂ ಸಮಾನತೆ ಕಾಪಾಡಿಕೊಂಡಿವೆ. ಆದುದರಿಂದ ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳ ಬಡವರು ಹಾಗೂ ದಲಿತ ಸಮುದಾಯಗಳಿಗೆ ಸ್ಮಶಾನ ಭೂಮಿಗಳ ಲಭ್ಯತೆ ಇನ್ನೂ ಗಂಭೀರ ಸಾಮಾಜಿಕ ಸಮಸ್ಯೆಯಾಗಿಯೇ ಮುಂದುವರಿದಿದೆ. ಕಾಲ ಕಾಲಕ್ಕೆ ಬದಲಾಗುವ ಸರ್ಕಾರಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿಕೊಂಡರೂ, ಸಾವಿರಾರು ಹಳ್ಳಿಗಳಲ್ಲಿ ಇಂದಿಗೂ ನಿಗದಿತ ಸಮಾಧಿ ಸ್ಥಳಗಳಿಲ್ಲ. ಇದರ ಪರಿಣಾಮವಾಗಿ ಅನೇಕ ಕುಟುಂಬಗಳು ತಮ್ಮ ಮೃತರನ್ನು ಗೌರವವಿಲ್ಲದ ಪರಿಸ್ಥಿತಿಯಲ್ಲಿ ಸಮಾಧಿ ಮಾಡುವಂತಾಗಿದೆ.

ನಿಗದಿತ ಸಮಾಧಿ ಸ್ಥಳಗಳಿಲ್ಲದ ಕಾರಣ, ಕೆಲ ಹಳ್ಳಿಗಳಲ್ಲಿ ಕುಟುಂಬಗಳು ಮೃತದೇಹಗಳನ್ನು ರಸ್ತೆ ಬದಿಯಲ್ಲಿ, ನದಿಗಳಲ್ಲಿ ಅಥವಾ ವಿವಾದಾತ್ಮಕ ಭೂಮಿಗಳಲ್ಲಿ ಅಪಾಯ ನಿರೀಕ್ಷಿಸಿ ಹೆದರಿಕೆಯಿಂದಲೇ ಸಂಸ್ಕಾರ ಮಾಡಲು ಯತ್ನಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ಮೇಲ್ಜಾತಿಯವರಿಂದ ಮೃತದೇಹಗಳನ್ನು ಹೂಳಿರುವ ಜಾಗದಿಂದ ತೆಗೆಯುವಂತೆ ಬೆದರಿಕೆಗಳು ಕೇಳಿಬಂದಿವೆ. ಕೊಲೆಗಳೂ ಆಗಿವೆ. ‘ಉತ್ತಮ ಮಧ್ಯಮ ಅಧಮರೆಲ್ಲರು ಸತ್ತ ಮೇಲೆ ಸಮರಾಗ್ತಾರೋ…’ ಚಿತ್ರಗೀತೆಯ ಸಾಲುಗಳಲ್ಲಿ ಸಾವು ಮನುಷ್ಯರ ನಡುವಿನ ತರತಮಗಳನ್ನು ಕರಗಿಸಿಬಿಡುತ್ತದೆಂಬ ಆಶಯವಿದೆ. ಆದರೆ ಸತ್ತರೂ ವ್ಯಕ್ತಿಗಳ ಜಾತಿಶ್ರೇಣೀಕರಣದಲ್ಲಿ ವ್ಯತ್ಯಾಸವೇನೂ ಆಗದು ಎಂಬುದು ವಾಸ್ತವ.
ಸಮಾಧಿ ಭೂಮಿಗಳ ಕೊರತೆಯ ಬಗ್ಗೆ ಕರ್ನಾಟಕ ಹೈಕೋರ್ಟ್ ಹಲವು ಬಾರಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಇದನ್ನು ಮೂಲಭೂತ ಹಕ್ಕುಗಳ (ಸಂವಿಧಾನದ ವಿಧಿಗಳು 14, 15, 21) ಉಲ್ಲಂಘನೆ ಎಂದು ಕರೆದಿದೆ. ರಾಜ್ಯ ಸರ್ಕಾರವು 2020 ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 6,000ಕ್ಕಿಂತ ಹೆಚ್ಚು ಹಳ್ಳಿಗಳು ಮತ್ತು 200ಕ್ಕೂ ಹೆಚ್ಚು ಪಟ್ಟಣಗಳಲ್ಲಿ ನಿಗದಿತ ಸ್ಮಶಾನ ಭೂಮಿಗಳಿಲ್ಲ. ಎಲ್ಲಾ ಹಳ್ಳಿಗಳಲ್ಲೂ ಆರು ತಿಂಗಳೊಳಗೆ ಸಮಾಧಿ ಭೂಮಿಗಳನ್ನು ಒದಗಿಸಬೇಕೆಂದು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದೆ. ಆದರೂ ಸ್ಮಶಾನಭೂಮಿಯ ಅಲಭ್ಯ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ.
ಸಮಾಜ ಕಲ್ಯಾಣ ಇಲಾಖೆ ದಲಿತರಿಗಾಗಿ ಪ್ರತ್ಯೇಕ ಸಮಾಧಿ ಭೂಮಿಗಳನ್ನು ಅಭಿವೃದ್ಧಿಪಡಿಸಲು ಭೂಸ್ವಾಧೀನ ಕಾರ್ಯಾಚರಣೆಗಳನ್ನು ಆರಂಭಿಸಿದ್ದು, ಸರ್ಕಾರಿ ಭೂಮಿ ಇಲ್ಲದ ಕಡೆಗಳಲ್ಲಿ ಖಾಸಗಿ ಭೂಮಿಯನ್ನು ಖರೀದಿಸಲು ಅನುದಾನ ಬಿಡುಗಡೆ ಮಾಡಿರುವ ಮಾಹಿತಿಯನ್ನು ಸದನದಲ್ಲಿ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ಅನುಪಾಲನ ವರದಿಗಳಲ್ಲಿ ತಿಳಿಸಿದೆ. 2022ರಲ್ಲಿ ಸರ್ಕಾರ ರಾಜ್ಯದ 92 ಶೇಕಡಾ ಹಳ್ಳಿಗಳಲ್ಲಿ ಸ್ಮಶಾನವಿದೆ ಎಂದು ಹೇಳಿಕೊಂಡಿದ್ದರೂ, ವಾಸ್ತವದಲ್ಲಿ -ವಿಶೇಷವಾಗಿ ದಲಿತರಿಗೆ ಸ್ಮಶಾನ ಪ್ರವೇಶ ಮತ್ತು ಬಳಕೆಯ ವಿಷಯದಲ್ಲಿ -ಸ್ಥಿತಿ ಇನ್ನೂ ಆತಂಕಕಾರಿ ಎಂಬುದು ವರದಿಗಳಿಂದ ಸ್ಪಷ್ಟವಾಗುತ್ತಿದೆ. ಈಗಾಗಲೇ ಲೇಖನದ ಆರಂಭದಲ್ಲಿ ನೀಡಿರುವಂತೆ ತುಮಕೂರು, ದಾವಣಗೆರೆ, ಬೆಂಗಳೂರು, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ 2022–25ರ ಅವಧಿಯಲ್ಲಿ ಸಮಾಧಿ ಭೂಮಿಗಳ ಕೊರತೆಯ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಈ ಸಮಸ್ಯೆಯಿಂದ ದಲಿತ ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಿರುವುದು ಇನ್ನೂ ಕಳವಳಕಾರಿ ಸಂಗತಿ.
ಕಾನೂನುಗಳು ಇದ್ದರೂ, ಅಂತ್ಯಸಂಸ್ಕಾರಕ್ಕೆ ಭೂಮಿಗಾಗಿ ಹೋರಾಡಬೇಕಾದ ಸ್ಥಿತಿ ಗ್ರಾಮೀಣ ಕರ್ನಾಟಕದ ಅಂಚಿನ ಸಮುದಾಯಗಳ ದೈನಂದಿನ ವಾಸ್ತವವಾಗಿಯೇ ಉಳಿದಿದೆ. ಇದು ಕೇವಲ ಆಡಳಿತಾತ್ಮಕ ಸಮಸ್ಯೆಯಲ್ಲ, ರಾಜ್ಯದ ಸಾಮಾಜಿಕ ನ್ಯಾಯದ ಅಸಲಿ ಪರೀಕ್ಷೆಯಾಗಿದೆ.
ಭಾಗ 2
ಸ್ಮಾರಕಗಳ ರಾಜಕೀಯ ಮತ್ತು ಶ್ಮಶಾನಗಳ ಮೌನ
ವ್ಯಕ್ತಿ ಬದುಕಿರುವ ಸಮಯದಲ್ಲಿ ಅಥವಾ ಜನರ ಜೀವನದ ವೈಭವದ ಕ್ಷಣಗಳಲ್ಲಿ ಒಂದು ಸಮಾಜದ ನಿಜವಾದ ಸಮಾನತೆ ಪರೀಕ್ಷೆಗೆ ಒಳಗಾಗುವುದಿಲ್ಲ. ಸಾಮಾಜಿಕ ಸಮಾನತೆ ಪರೀಕ್ಷೆಗೆ ಒಳಗಾಗುವುದು -ವ್ಯಕ್ತಿಯು ಗತಿಸಿದ ನಂತರವೇ! ಹುಟ್ಟು ಹೇಗೋ ಮರಣವು ಸಹ ಎಲ್ಲರಿಗೂ ಸಮಾನವೆಂದು ಹೇಳುತ್ತೇವೆ. ಆದರೆ ಭಾರತದ ಸಂದರ್ಭದಲ್ಲಿ ಎರಡೂ ಸಹ ಸಮಾನವಲ್ಲ. ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಮರಣ ಈಗಲೂ ಸಮಾನವಲ್ಲ. ಯಾರಿಗೆ ಐದು ಏಕರೆ ಸ್ಮಾರಕ ಭೂಮಿ ಸಿಗುತ್ತದೆ, ಯಾರಿಗೆ ತಮ್ಮ ಮನೆಯ ಹಿಂಭಾಗದಲ್ಲೇ ಗುಂಡಿ ತೋಡಿ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ -ಈ ವ್ಯತ್ಯಾಸವು ನಮ್ಮ ಸಾಮಾಜಿಕ ರಚನೆಯ ಆಳದ ಸತ್ಯವನ್ನು ಬಹಿರಂಗಗೊಳಿಸುತ್ತದೆ.
ಕರ್ನಾಟಕದ ಸಾವಿರಾರು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವುದು ಕೇವಲ ಆಡಳಿತದ ಅಲಕ್ಷ್ಯವಲ್ಲ; ಅದು ಐತಿಹಾಸಿಕ ಅಸಮಾನತೆಯ ಮುಂದುವರಿಕೆ. ಇಲ್ಲಿ ಬದುಕಲು ಭೂಮಿ ಇಲ್ಲದವರು, ಸತ್ತ ನಂತರವೂ ಘನತೆಯಿಂದ ಮಣ್ಣಿನಲ್ಲಿ ಒಂದಾಗಲು ಸಹ ಭೂಮಿ ಇಲ್ಲದವರು.
ಸ್ಮಶಾನ ಭೂಮಿಯು ಸಾಮಾನ್ಯವಾಗಿ ʼಧಾರ್ಮಿಕʼ ಅಥವಾ ʼಸಾಂಪ್ರದಾಯಿಕʼ ವಿಷಯವೆಂದು ಪರಿಗಣಿಸಲಾಗುತ್ತದೆ. ಆದರೆ ಸಮಾಜಶಾಸ್ತ್ರೀಯವಾಗಿ ಅದು ಸಾಮಾಜಿಕ ನಾಗರಿಕತ್ವದ ಮೂಲಭೂತ ಸೌಲಭ್ಯ. ಒಂದು ಸಮಾಜದಲ್ಲಿ ಯಾರು ಗೌರವಪೂರ್ಣವಾಗಿ ಸಮಾಧಿಯಾಗುತ್ತಾರೆ, ಯಾರು ಅದರಿಂದ ವಂಚಿತರಾಗುತ್ತಾರೆ ಎಂಬುದು, ಆ ಸಮಾಜದ ಅಧಿಕಾರ ಸಂಬಂಧಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಕರ್ನಾಟಕದ ಅನೇಕ ಗ್ರಾಮಗಳಲ್ಲಿ ದಲಿತರು ಮತ್ತು ಬಡ ಸಮುದಾಯಗಳಿಗೆ ಸ್ಮಶಾನ ಭೂಮಿ ಇಲ್ಲದಿರುವುದು ಮೂಲಸೌಕರ್ಯ ಕೊರತೆಯ ಪ್ರಶ್ನೆಯಲ್ಲ; ಅದು ಸಂರಚಿತ ಸಾಮಾಜಿಕ ನಿರಾಕರಣೆ(structural exclusion)ಯ ಸಮಸ್ಯೆ. ಇಲ್ಲಿ ನ್ಯಾಯಾಲಯಗಳು ಎಲ್ಲರಿಗೂ ಸ್ಮಶಾನ ಒದಗಿಸಿ ಎಂದು ಆದೇಶ ನೀಡುತ್ತವೆ. ಸರ್ಕಾರವು ಶೇಕಡಾ 92 ಗ್ರಾಮಗಳಿಗೆ ಸ್ಮಶಾನ ಒದಗಿಸಲಾಗಿದೆ ಎಂದು ಹೇಳುತ್ತದೆ. ಆದರೆ ವಾಸ್ತವದಲ್ಲಿ ಇರುವ ಸ್ಮಶಾನವನ್ನು ಸಾಮಾಜಿಕವಾಗಿ ನಿರಾಕರಿಸಲಾಗುತ್ತದೆ. ಸರ್ಕಾರಕ್ಕೆ ಸ್ಮಶಾನಭೂಮಿ ಒದಗಿಸಲು ಭೂಮಿ ಅಲಭ್ಯವಾಗಿರುವ ಕಾರಣ ತಡವಾಗುತ್ತಿದೆ ಎಂದು ಸರ್ಕಾರ ಹೇಳುತ್ತದೆ.
ಇದು ಕೇವಲ ಆಡಳಿತಾತ್ಮಕ ವಿಫಲತೆ ಅಲ್ಲ- ಇದು ಸಾಮಾಜಿಕ ನ್ಯಾಯದ ವಿಫಲತೆ. ʼಜಾತಿ ವ್ಯವಸ್ಥೆಯ ಮೂಲವು ಭೂಮಿ ಮತ್ತು ಸಂಪನ್ಮೂಲಗಳ ಅಸಮಾನ ಹಂಚಿಕೆಯಲ್ಲಿದೆ. ಭೂಮಿಯಿಲ್ಲದ ದಲಿತರು ಆರ್ಥಿಕವಾಗಿಯಷ್ಟೇ ಅಲ್ಲ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಧೀನರಾಗುತ್ತಾರೆʼ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೇಳಿಕೆಯಲ್ಲಿ ಅವರು ಬದುಕಿನ ರಾಜಕೀಯವನ್ನಷ್ಟೇ ಉಲ್ಲೇಖಿಸಿರಲಿಲ್ಲ; ಮರಣದ ರಾಜಕೀಯವನ್ನೂ ಸೂಚಿಸಿದ್ದರು.
ಇನ್ನೊಂದು ಕಡೆ- ಗಣ್ಯರ ಸ್ಮಾರಕಗಳಿಗೆ ಎಕರೆಗಟ್ಟಲೆ ಭೂಮಿ ಮಂಜೂರು ಮಾಡಲಾಗುತ್ತದೆ. ಕ್ರಿಯಾಶೀಲತೆಯ ಅಭಿವ್ಯಕ್ತಿಗಳ ಉತ್ಪಾದನೆಗೆ ಕ್ರಿಯಾರಂಗವಾಗಬೇಕಿದ್ದ ಸ್ಟುಡಿಯೋಗಳು ಸ್ಮಶಾನಗಳಾಗಿ, ಸ್ಮಾರಕಗಳಾಗಿ ಬದಲಾಗುತ್ತವೆ. ಬದಲಾಗದಿದ್ದರೆ ಅಭಿಮಾನಿಗಳ, ಕುಟುಂಬದವರ ಹೋರಾಟ. ರಾಜಕೀಯ ಲಾಭ ಪಡೆಯಲು ನಾಯಕರ ಓಲಾಟಕ್ಕೆ ಬದಲಾಗೇ ಆಗುತ್ತವೆ. ಅದರ ಹಿಂದೆಯೇ ಅಪಾರ ವೆಚ್ಚದಲ್ಲಿ ಸುಂದರ ಉದ್ಯಾನ, ಪ್ರತಿಮೆ, ಪ್ರವಾಸೋದ್ಯಮದ ಯೋಜನೆಗಳು ಒಂದನ್ನೊಂದು ಅನುಸರಿಸಿ ಬರುತ್ತವೆ. ಸ್ಮಾರಕಕ್ಕೆ ಕಾಲಾನಂತರದಲ್ಲಿ ಪವಾಡಗಳ ಸರಣಿ ಕಥೆಗಳೂ ಸೇರಿಹೋಗಬಹುದು. ಸಿನೆಮಾ ಕಲಾವಿದರ ರೀತಿಯಲ್ಲೇ ಕಲಾಗ್ರಾಮಗಳನ್ನೂ ಸಾಹಿತಿಗಳ ಸ್ಮಾರಕ ಮಾಡಬೇಕೆಂದು ಕೆಲವು ಬಂಡಾಯ ಸಾಹಿತಿಗಳು ಬೇಡಿಕೆ ಇಟ್ಟಿರುವುದು ಇತ್ತೀಚಿನ ಘಟನೆ. ಕನ್ನಡ ಸಾಂಸ್ಕೃತಿಕವಾಗಿ ಎಷ್ಟು ಶ್ರೀಮಂತವಾಗಿದೆಯೆಂದರೆ ಸತ್ತವರಿಗೆಲ್ಲ ಸ್ಮಾರಕ ನಿರ್ಮಿಸುತ್ತಾ ಹೋದರೆ ಮುಂದೆ ಉಳುವ ಭೂಮಿಯ ವಿಸ್ತೀರ್ಣವನ್ನು ಹೂಳುವ ಭೂಮಿ, ಅದರ ಹಿಂದೆ ನಿರ್ಮಾಣವಾಗುವ ಸ್ಮಾರಕಗಳ ವಿಸ್ತೀರ್ಣ ಮೀರಿದರೆ ಆಶ್ಚರ್ಯ ಪಡಬೇಕಿಲ್ಲ.
ನಿಜ, ಸಾಂಸ್ಕೃತಿಕ ಸ್ಮರಣೆ ಒಂದು ಸಮಾಜದ ಅವಿಭಾಜ್ಯ ಭಾಗ. ಗಣ್ಯರಿಗೆ ಗೌರವ ಸಲ್ಲಿಸುವುದು ಅಗತ್ಯ. ಆದರೆ ಮುಖ್ಯ ಪ್ರಶ್ನೆ– ಗಣ್ಯರಿಗೆ ಸ್ಮಾರಕಗಳನ್ನು ನಿರ್ಮಿಸಿಯೇ ಗೌರವ ತೋರಬೇಕೆ? ಸಮಾಧಿಗೂ ಸ್ಮಾರಕಕ್ಕೂ ವ್ಯತ್ಯಾಸ ತಿಳಿಯದ ಸರ್ಕಾರ, ಜನತೆ ಇರುವಾಗ ಇಂಥ ಅಪಸವ್ಯಗಳು ಸಂಭವಿಸುತ್ತವೆ. ಒಂದು ಸಮಾಜದಲ್ಲಿ ಸ್ಮಾರಕಗಳಿಗೆ ಭೂಮಿ ತಕ್ಷಣ ಸಿಗುತ್ತದೆ. ಸಿಗುವುದು ತಡವಾದರೂ ಉಗ್ರ ಹೋರಾಟ ನಡೆದು ಯಶಸ್ಸು ಕಾಣುತ್ತದೆ. ಆದರೆ ಸ್ಮಶಾನಕ್ಕೆ ವರ್ಷಗಳ ನಿರೀಕ್ಷೆ- ಈ ಆದ್ಯತೆಗಳ ಕ್ರಮ ಯಾವ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ?
ಇದನ್ನೂ ಓದಿ: ಪ್ರೀಮಿಯಂ ಲೇಖನ | ಆಲ್ಕೋಹಾಲ್ ಹಿಂದಿನ ಕಥೆ-ವ್ಯಥೆ
ಈ ಮೌಲ್ಯ ಯಾವುದೆಂಬುದನ್ನು ಫ್ರೆಂಚ್ ಚಿಂತಕ ಮಿಶೆಲ್ ಫೂಕೋ ನಿರ್ವಚಿಸಿದ ʼಬಯೋಪಾಲಿಟಿಕ್ಸ್ʼ ಎಂಬ ಪರಿಕಲ್ಪನೆಯಲ್ಲಿ ಕಾಣಬಹುದು. ಆಧುನಿಕ ರಾಜ್ಯವು ಕೇವಲ ಆಡಳಿತ ನಡೆಸುವುದಿಲ್ಲ; ಅದು ಜೀವನ ಮತ್ತು ಮರಣವನ್ನು ನಿಯಂತ್ರಿಸುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಇದು ಸ್ಮಶಾನ-ಸ್ಮಾರಕ ರಾಜಕೀಯದಲ್ಲಿ ಇನ್ನಷ್ಟು ಸ್ಪಷ್ಟವಾಗುತ್ತದೆ. ಇಲ್ಲಿ ಯಾರು ಸ್ಮಾರಕಗಳ ಮೂಲಕ ʼಸ್ಮರಣೀಯʼರಾಗಬೇಕು; ಯಾರು ಅಜ್ಞಾತವಾಗಿ, ಅಂಚಿನಲ್ಲಿ ಮಣ್ಣಾಗಬೇಕು ಎಂಬ ಆಯ್ಕೆ ಪ್ರಕ್ರಿಯೆ ರಾಜಕೀಯ ಶಕ್ತಿಯೊಂದಿಗೆ ನೇರವಾಗಿ ಸಂಬಂಧಿಸಿದೆ. ಬಯೋಪಾಲಿಟಿಕ್ಸ್ ಯಾರು ಬದುಕಬೇಕು, ಯಾರು ಮರೆಯಾಗಬೇಕು ಎಂಬುದನ್ನು ನಿಯಂತ್ರಿಸುತ್ತದೆ. ಕರ್ನಾಟಕದ ಗ್ರಾಮಗಳಲ್ಲಿ ನಾವು ನೋಡುವುದು ಇನ್ನೂ ಸೂಕ್ಷ್ಮವಾದ ರೂಪ. ಅಂಬೇಡ್ಕರ್ ಹೇಳಿದ ʼಗ್ರೇಡೆಡ್ ಇನಿಕ್ವಾಲಿಟಿʼ(ಹಂತ ಹಂತದ ಅಸಮಾನತೆ) ಇಲ್ಲಿ ಮರಣದಲ್ಲಿಯೂ ಮುಂದುವರಿಯುತ್ತದೆ. ಮರಣ ಸಮಾನವಾದರೂ, ಮರಣದ ಸ್ಥಳ ಸಮಾನವಲ್ಲ. ಸಾಂಸ್ಕೃತಿಕ ಸ್ಮಾರಕಗಳು ರಾಜಕೀಯ ಲಾಭ ತರುತ್ತವೆ; ಸ್ಮಶಾನಗಳು ಲಾಭ ತಾರವು ಎಂಬ ರಾಜಕೀಯ ತರ್ಕ ಇಲ್ಲಿ ಸ್ಪಷ್ಟವಾಗುತ್ತದೆ:
ರಾಜ್ಯವು ಸ್ಮಾರಕ (ಸಮಾಧಿ) ಮತ್ತು ಸ್ಮಶಾನಕ್ಕೆ ಭೂಮಿಯನ್ನು ಮಂಜೂರು ಮಾಡುವಾಗ, ಅದು ಕೇವಲ ಆಸ್ತಿ ಹಂಚುವುದಿಲ್ಲ. ಅದು ತನ್ನದೇ ಮೌಲ್ಯಗಳನ್ನು ಹಂಚುತ್ತದೆ. ಸ್ಮಾರಕಗಳಿಗೆ ವೇಗದ ಮಂಜೂರು ರಾಜಕೀಯ ಸಂಕಲ್ಪವನ್ನು ತೋರಿಸಿದರೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡಲು ತೋರುವ ಉಪೇಕ್ಷೆಯು ಸಾಮಾಜಿಕ ನಿರ್ಲಕ್ಷ್ಯಕ್ಕೆ ಸಾಕ್ಷಿ. ಈ ವ್ಯತ್ಯಾಸವು ನಮ್ಮ ಪ್ರಜಾಪ್ರಭುತ್ವದ ತಾತ್ವಿಕ ತಳಹದಿಯನ್ನೇ ಪ್ರಶ್ನಿಸುತ್ತದೆ. ಪ್ರಜಾಪ್ರಭುತ್ವವು ಕೇವಲ ಮತದಾನಕ್ಕಾಗಿ ವ್ಯಕ್ತಿಯನ್ನು ಉಳಿಸಿಕೊಳ್ಳುವ ವ್ಯವಸ್ಥೆಯೋ? ಅಥವಾ ಅದು ಮರಣದ ನಂತರವೂ ಗೌರವ ನೀಡುವ ವ್ಯವಸ್ಥೆಯೋ? ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ.
ಒಂದು ನ್ಯಾಯಸಮ್ಮತ ಸಮಾಜದ ಕನಿಷ್ಠ ಮಾನದಂಡವೆಂದರೆ ಪ್ರತಿ ನಾಗರಿಕನಿಗೂ- ಜಾತಿ, ವರ್ಗ, ಧರ್ಮ ಭೇದವಿಲ್ಲದೆ- ಗೌರವಪೂರ್ಣ ಅಂತ್ಯಸಂಸ್ಕಾರಕ್ಕೆ ಭೂಮಿ ಸಿಗುವುದು ಆದ್ಯತೆಯಾಗಿರುವುದು. ಸ್ಮಾರಕಗಳು ನಿರ್ಮಾಣವಾಗಲಿ. ಗಣ್ಯರನ್ನು ಗೌರವಿಸಲಿ. ಆದರೆ ಅದಕ್ಕಿಂತ ಮೊದಲು, ಪ್ರತಿ ಗ್ರಾಮದಲ್ಲೂ ಸ್ಮಶಾನ ಇರಲಿ. ಪ್ರತಿ ದಲಿತ ಕುಟುಂಬಕ್ಕೂ ಗೌರವಪೂರ್ಣವಾಗಿ ಬೀಳ್ಕೊಡುವ ಹಕ್ಕು ಇರಲಿ. ಯಾಕೆಂದರೆ ಸಂಸ್ಕಾರದ ಭೂಮಿಯಲ್ಲಿ ಸಮಾನತೆ ಇಲ್ಲದಿದ್ದರೆ, ಬದುಕಿನ ಸಮಾನತೆ ಕೇವಲ ಘೋಷಣೆಯಾಗಿ ಉಳಿಯುತ್ತದೆ.
ಭಾಗ 3
ಜಗತ್ತಿನಲ್ಲಿ ಸಮಾಧಿಗಳು, ಸ್ಮಾರಕಗಳು ಮತ್ತು ಸಂಸ್ಕೃತಿ
ಒಂದು ಸಮಾಜ ತನ್ನ ಸತ್ತವರನ್ನು ಹೇಗೆ ಗೌರವಿಸುತ್ತದೆ ಎಂಬುದರಿಂದ ಅದು ಬದುಕಿರುವವರನ್ನು ಹೇಗೆ ಕಾಣುತ್ತದೆ ಎನ್ನುವುದನ್ನೂ ಬಹಿರಂಗಪಡಿಸುತ್ತದೆ. ಲೇಖಕರು, ಚಿಂತಕರು, ವಿಜ್ಞಾನಿಗಳು, ರಾಜಕೀಯ ನಾಯಕರು ಮತ್ತು ಕಲಾವಿದರು ಮುಂತಾದ ಗಣ‍್ಯ ವ್ಯಕ್ತಿತ್ವಗಳ ಸಮಾಧಿ ಅಥವಾ ಸಂಸ್ಕಾರ ವಿಧಾನಗಳು- ಅವರ ತತ್ತ್ವಚಿಂತನೆ, ಅವರು ಸೇರಿದ ಸಂಸ್ಕೃತಿ ಮತ್ತು ಆ ಕಾಲಘಟ್ಟದ ರಾಜಕೀಯ ಕಲ್ಪನೆಗಳ ಪ್ರತಿಬಿಂಬವಾಗುತ್ತವೆ. ಕೆಲವರು ನಿರ್ಲಿಪ್ತವಾಗಿ ಈ ಜಗತ್ತಿಗೆ ವಿದಾಯ ಹೇಳಿ ಹೊರನಡೆಯುತ್ತಾರೆ. ಅಂತ್ಯ ಸರಳವಾಗಿರಬೇಕೆಂದು ಬಯಸುತ್ತಾರೆ. ಆದರೆ ಅವರ ಸ್ಮೃತಿ ಎಂದಿಗೂ ಸ್ಮಾರಕಗಳಂಥ ಭೌತಿಕ ಭವ್ಯತೆಯನ್ನು ಅನುಗುಣವಾಗಿರುವುದಿಲ್ಲ. ಲಿಯೋ ಟಾಲ್‌ಸ್ಟಾಯ್, ವಿಲಿಯಂ ಶೇಕ್ಸ್‌ಪಿಯರ್, ಅಬ್ರಹಾಂ ಲಿಂಕನ್, ಆಲ್ಬರ್ಟ್ ಐನ್‌ಸ್ಟೈನ್, ರವೀಂದ್ರನಾಥ ಟಾಗೋರ್, ವಿನ್‌ಸ್ಟನ್ ಚರ್ಚಿಲ್, ಹೊಸೆ ಮುಜಿಕಾ ಮತ್ತು ಚಾರ್ಲಿ ಚಾಪ್ಲಿನ್ ಮುಂತಾದವರು- ಮರಣ, ಸ್ಮಾರಕೀಕರಣ ಮತ್ತು ಪರಂಪರೆಗಳ ನಡುವೆ ಸಂಪೂರ್ಣ ವಿಭಿನ್ನ ಸಂಬಂಧಗಳಿರುವುದನ್ನು ತೋರಿಸಿದ್ದಾರೆ.

ವಿಶ್ವ ಸಾಹಿತ್ಯದ ಮಹಾನ್ ಕಾದಂಬರಿಕಾರರೆನಿಸಿದ ಕೌಂಟ್ ಲಿಯೋ ಟಾಲ್‌ಸ್ಟಾಯ್ ಅವರು ಸಾಂಸ್ಥಿಕ ಧರ್ಮವನ್ನೂ, ರಾಜ್ಯಾಧಿಕಾರವನ್ನೂ, ವ್ಯಕ್ತಿಪೂಜೆಯನ್ನೂ ತಿರಸ್ಕರಿಸಿದ್ದರು. ಮರಣದಲ್ಲಿಯೂ ಅವರು ತಮ್ಮ ನಂಬಿಕೆಗಳಿಗೆ ನಿಷ್ಠರಾಗಿಯೇ ಉಳಿದರು. ಬದುಕಿನ ಕೊನೆಯ ದಿನಗಳಲ್ಲಿ ಸರ್ವವನ್ನು ತೊರೆದು ಅನಾಮಿಕನಾಗಿ ಸಾಯಬೇಕೆಂದು ಬಯಸಿ ಶ್ರೀಮಂತರ ಉಡುಗೆಯನ್ನು ಕಳಚಿ, ರೈತನ ಪೋಷಾಕು ತೊಟ್ಟು ಯಾರಿಗೂ ಕಾಣದಂತೆ ರೈಲು ಹತ್ತಿದ ಟಾಲ್‌ಸಾಯ್ ತನ್ನ ಎಸ್ಟೇಟ್‍ನಿಂದ 235 ಕಿಮೀ ದೂರದ ಆಸ್ತಪೋವ್ ರೈಲ್ವೇ ನಿಲ್ದಾಣಕ್ಕೆ ತಲುಪುವ ವೇಳೆಗೆ ಕಾಯಿಲೆಯಿಂದ ಕುಸಿದಿದ್ದರು. ನಿಲ್ದಾಣದಲ್ಲಿ ಅನಾಥವಾಗಿ ಮಲಗಿದ್ದ ಸಾಹಿತಿಯನ್ನು ಗುರುತಿಸಿದ ಸ್ಟೇಷನ್ ಮಾಸ್ಟರ್ ಪಕ್ಕದಲ್ಲೇ ಇದ್ದ ತನ್ನ ಮನೆಗೆ ಕರೆತಂದು ಆರೈಕೆ ಮಾಡಿದ. ಟಾಲ್‌ಸ್ಟಾಯ್ ಕಾಯಿಲೆಯ ಘಟನೆ ಜಾಗತಿಕ ಸುದ್ದಿಯಾಯಿತು. ಅಲ್ಲಿ ಏಳು ದಿನ ಬದುಕಿದ್ದು 1910ರ ನವೆಂಬರ್ 20ರಂದು ನಿಧನರಾದರು. ಅವರ ಬಯಕೆಯಂತೆ ಯಾಸ್ನಯಾ ಪೊಲ್ಯಾನಾದ ಅವರದೇ ಜಮೀನಿನ ಮೂಲೆಯಲ್ಲಿ ಯಾವುದೇ ಭವ್ಯ ಗುರುತು ಇಲ್ಲದಂತೆ ಸರಳವಾಗಿ- ಶಿಲುಬೆ ಇಲ್ಲ, ಹೆಸರು ಇಲ್ಲ, ಸ್ಮಾರಕ ಇಲ್ಲ- ಸಮಾಧಿ ಮಾಡಲಾಯಿತು.
ಈ ಆಯ್ಕೆ ಉದ್ದೇಶಪೂರ್ವಕವಾಗಿತ್ತು. ಸ್ಮಾರಕಗಳು ನೈತಿಕ ಸತ್ಯವನ್ನು ವಿಕೃತಗೊಳಿಸಿ ಮಾನವನನ್ನು ದೇವರಂತೆ ರೂಪಿಸುತ್ತವೆ ಎಂಬ ನಂಬಿಕೆ ಟಾಲ್‌ಸ್ಟಾಯ್‌ಗಿತ್ತು. ಅದು ಅವರಿಗೆ ಬೇಕಾಗಿರಲಿಲ್ಲ. ಆದರೆ ಅವರ ಬರಹಗಳು, ಚಿಂತನೆಗಳು ಮತ್ತು ನೈತಿಕ ಪ್ರಭಾವಗಳು ಅವರನ್ನು ಜೀವಂತವಾಗಿರಿಸಿ ನಿಜವಾದ ಸ್ಮಾರಕವೆನಿಸಿವೆ.
1616ರಲ್ಲಿ ನಿಧನರಾದ ಜಗದ್ವಿಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಅವರನ್ನು ಸ್ಟ್ರಾಟ್‌ಫರ್ಡ್-ಅಪಾನ್-ಏವನ್‌ನ ಹೋಲಿ ಟ್ರಿನಿಟಿ ಚರ್ಚಿನಲ್ಲಿ ಸಮಾಧಿ ಮಾಡಿದರು. ಆತನ ಸಮಾಧಿಯ ಮೇಲೆ ಆತನೇ ಬರೆದಿದ್ದನೆಂದು ಹೇಳಲಾದ ಸಮಾಧಿ ಶಾಸನ(ಗೋರಿ ಬರಹ- Epitaph)ವಿದೆ. ಚರ್ಚಿನ ನೆಲದೊಳಗಿನ ಸರಳ ಸಮಾಧಿ ಕಲ್ಲಿನ ಮೇಲೆ, ತನ್ನ ಎಲುಬುಗಳನ್ನು ಕದಡುವವರನ್ನು ಶಪಿಸುವ ಪ್ರಸಿದ್ಧ ಶಿಲಾಶಾಸನ ಮಾತ್ರವಿದೆ. ಅದರ ಬರಹ ಹೀಗಿದೆ:
Good frend for Jesus sake forbeare,
To digg the dvst encloased heare.
Bleste be yͤ man yͭ spares thes stones,
And cvrst be he yͭ moves my bones
ಸರಳ ಕನ್ನಡದಲ್ಲಿ ಅದನ್ನು ಹೀಗೆ ಹೇಳಬಹುದು:
ಒಳ್ಳೆಯ ಸ್ನೇಹಿತನೇ, ಯೇಸುವಿನ ಹೆಸರಿನಲ್ಲಿ ಬೇಡಿಕೊಳ್ಳುತ್ತೇನೆ-
ಇಲ್ಲಿ ಆವರಿಸಿರುವ ಧೂಳನ್ನು ತೋಡಬೇಡ.
ಈ ಕಲ್ಲುಗಳನ್ನು ಅಚಲವಾಗಿ ಬಿಡುವವನು ಧನ್ಯನು;
ನನ್ನ ಎಲುಬುಗಳನ್ನು ಕದಡುವವನು ಶಾಪಕ್ಕೊಳಗಾಗುವನು.
ಚರ್ಚಿನಲ್ಲಿ ಹೂಳಿದ ಸಮಾಧಿಗಳನ್ನು ಕೆಲವರ್ಷಗಳ ನಂತರ ಹೊಸ ಶವಗಳ ಸಂಸ್ಕಾರಕ್ಕೆ ಸ್ಥಳಾವಕಾಶ ಮಾಡಿಕೊಡಲು ತೋಡಿ, ಹೂತಿದ್ದ ಶವಗಳ ಎಲುಬುಗಳನ್ನು ತೆಗೆದು ಸಿಮೆಟರಿಯಲ್ಲಿರುತ್ತಿದ್ದ ʼಅಸ್ಥಿಗೃಹʼ(charnel house)ದಲ್ಲಿ ಸಂಗ್ರಹಿಸಿಡುವ ಪದ್ಧತಿ ಇದೆ. ತನ್ನ ಗೋರಿಯನ್ನು ಯಾರೂ ಕದಡದಿರಲಿ ಎಂದು ನಾಟಕಕಾರ ಬಯಸಿ ಶಾಪದ ಬೆದರಿಕೆ ಹಾಕಿರಬಹುದು. ಅದು ಫಲಿಸಿ ಈಗಲೂ ಸಮಾಧಿ ಉಳಿದಿದೆ. ಶೇಕ್ಸ್‌ಪಿಯರ್ ಜನಿಸಿ, ಬಾಲ್ಯ ಕಳೆದ ಸ್ಟ್ರಾಟ್‌ಫರ್ಡ್-ಅಪಾನ್-ಏವನ್‌ನಲ್ಲಿರುವ ಅವರ ಮನೆ ಈಗ ಮ್ಯೂಸಿಯಂ ಆಗಿದೆ, ಶೇಕ್ಸ್‌ಪಿಯರ್ ಬರ್ತ್‍ಪ್ಲೇಸ್ ಟ್ರಸ್ಟ್ ಅದನ್ನು ನಿರ್ವಹಿಸುತ್ತಿದೆ. ಆದರೆ ಶೇಕ್ಸ್‌ಪಿಯರ್ ಬದುಕಿರುವುದು ಅವನ ನಾಟಕಗಳಲ್ಲಿ. ಅವರ ನಾಟಕಗಳ ಪ್ರದರ್ಶನ, ಚರ್ಚೆ, ಸಂಶೋಧನೆ, ಉತ್ಸವಗಳ ಮೂಲಕ ಪಡೆದಿರುವ ಸಾಂಸ್ಕೃತಿಕ ಅಮರತ್ವವು ಭೌತಿಕ ಸ್ಮಾರಕಗಳನ್ನು ಮೀರಿಸಿದೆ.

ಕರಿಯರ ವಿಮೋಚನೆಗೆ ನಾಂದಿಹಾಡಿ ಮಾನವ ಹಕ್ಕುಗಳನ್ನು ಎತ್ತಿ ಹಿಡಿದ ಅಬ್ರಹಾಂ ಲಿಂಕನ್ ಹಂತಕನ ಗುಂಡಿಗೆ 1865ರಲ್ಲಿ ಬಲಿಯಾದರು. ಅವರನ್ನು ಇಲಿನಾಯ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನ ಓಕ್ ರಿಡ್ಜ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ನಂತರ ವಾಷಿಂಗ್ಟನ್ ಡಿ.ಸಿ.ಯಲ್ಲಿ ಗೆಟ್ಟಿಸ್‌ಬರ್ಗ್ ಭಾಷಣದ ಶಾಸನದ ಪೀಠದ ಮೇಲೆ ಕುಳಿತ ಲಿಂಕನ್‌ನ ಭಾರೀ ಪ್ರತಿಮೆ ಅತ್ಯಂತ ಶಕ್ತಿಶಾಲಿ ರಾಜಕೀಯ ಸ್ಮಾರಕಗಳಲ್ಲಿ ಒಂದಾಗಿ ರೂಪುಗೊಂಡಿತು. ಲಿಂಕನ್ ಸ್ಮಾರಕವು ಕೇವಲ ಒಬ್ಬ ವ್ಯಕ್ತಿಗೆ ಸಲ್ಲಿಸಿದ ಗೌರವವಲ್ಲ; ಅದು ಅಮೆರಿಕನ್ ಪ್ರಜಾಪ್ರಭುತ್ವ, ಏಕತೆ ಮತ್ತು ವಿಮೋಚನೆಯನ್ನು ಸಂಕೇತಿಸುವ ವಾಸ್ತುಶಿಲ್ಪವಾಗಿದೆ. ಆಧುನಿಕ ಪ್ರಭುತ್ವಗಳು ರಾಷ್ಟ್ರೀಯ ಅನನ್ಯತೆಯ ಬಗ್ಗೆ ತಿಳಿವು ಮೂಡಿಸಲು, ಏಕತೆ ತರಲು ಮತ್ತು ನೈತಿಕತೆಯನ್ನು ಹಿಡಿದಿಡಲು ಸ್ಮಾರಕಗಳನ್ನು ಹೇಗೆ ಬಳಸುತ್ತವೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.
ತಾನು ಸತ್ತ ನಂತರ ಸರಳವಾಗಿ ಬೀಳ್ಕೊಡಬೇಕೆಂಬುದನ್ನು ಆಧುನಿಕ ಭೌತವಿಜ್ಞಾನದ ಶಿಖರ ಆಲ್ಬರ್ಟ್ ಐನ್‌ಸ್ಟೈನ್ ಬಯಸಿದ್ದರು. 1955ರಲ್ಲಿ ಪ್ರಿನ್ಸ್ಟನ್‌ನಲ್ಲಿ ಸಂಸ್ಕಾರವಾದ ನಂತರ ಅವರ ಚಿತಾಭಸ್ಮವನ್ನು ಗುಪ್ತವಾಗಿ (ಈಗಲೂ ಆ ಸ್ಥಳ ಯಾವುದೆಂದು ತಿಳಿದಿಲ್ಲ) ಕುಟುಂಬದ ಸದಸ್ಯರು ವಿಸರ್ಜಿಸಿದರು. ವ್ಯಕ್ತಿಪೂಜೆ ಮತ್ತು ರಾಷ್ಟ್ರವಾದವನ್ನು ತಿರಸ್ಕರಿಸಿದ್ದ ಐನ್‌ಸ್ಟೈನ್ ಅವರ ಸಮಾಧಿಯೇ ಇಲ್ಲ! ಬದಲಾಗಿ ಸಂಶೋಧನಾ ಸಂಸ್ಥೆಗಳು, ಅವರ ಸಮೀಕರಣಗಳು ಮತ್ತು ಬೌದ್ಧಿಕ ಜಿಜ್ಞಾಸೆಯ ಪರಂಪರೆಗಳಂಥ ಅಮೂರ್ತ ರೂಪಗಳಲ್ಲಿ ಅವರ ಸ್ಮಾರಕಗಳಿವೆ. ವಾಷಿಂಗ್ಟನ್ ಡಿ.ಸಿ.ಯಲ್ಲಿನ ಐನ್‌ಸ್ಟೈನ್ ಸ್ಮಾರಕವೂ ಇದೆ. ಆದರೆ ಅದು ವ್ಯಕ್ತಿಯ ಸ್ಮರಣೆಗೆ ಮೀಸಲಿಲ್ಲ. ಅವರ ಚಿಂತನೆಗಳನ್ನು ಸ್ಮರಿಸುತ್ತದೆ. ಅವರ ಪರಂಪರೆಯು ಉದ್ದೇಶಪೂರ್ವಕವಾಗಿ ಕಾಲ, ದೇಶ ಮತ್ತು ಆಚರಣೆಗಳಿಂದ ಕಳಚಿಕೊಂಡಿದೆ.
ಕವಿ, ತತ್ತ್ವಜ್ಞಾನಿ ಮತ್ತು ನೊಬೆಲ್ ಪುರಸ್ಕೃತ ರವೀಂದ್ರನಾಥ ಟಾಗೋರ್ ಅವರನ್ನು 1941ರಲ್ಲಿ ಹಿಂದೂ ಸಂಪ್ರದಾಯದಂತೆ ಸಂಸ್ಕಾರ ಮಾಡಿ ಅವರ ಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸಿದರು. ಇದು ಭವ್ಯ ಸ್ಮಾರಕಗಳಿಗಿಂತಲೂ ಅವರ ಆಧ್ಯಾತ್ಮಿಕ ವಿಶ್ವಮಾನವತೆಗೆ ಅನುರೂಪವಾಗಿತ್ತು. ಟಾಗೋರ್ ಭವ್ಯ ಸ್ಮಾರಕಗಳನ್ನು ಬಯಸಿರಲಿಲ್ಲ. ಅವರು ಸ್ಥಾಪಿಸಿದ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯವೇ ಅವರ ಜೀವಂತ ಸ್ಮಾರಕವಾಗಿದೆ- ಶಿಕ್ಷಣ, ಮಾನವತಾವಾದ ಮತ್ತು ಅಂತಾರಾಷ್ಟ್ರೀಯತೆಯ ಅವರ ಆಲೋಚನೆಗಳನ್ನು ಜೀವಂತವಾಗಿಟ್ಟುಕೊಳ್ಳುವ ಸಂಸ್ಥೆ.

1965ರಲ್ಲಿ ವಿನ್‍ಸ್ಟನ್ ಚರ್ಚಿಲ್‌ನ ಅಂತ್ಯ ಸಂಸ್ಕಾರ ಬ್ರಿಟನ್ ಸರ್ಕಾರದ ವತಿಯಿಂದ ನಡೆಯಿತು. ಅವರ ಕುಟುಂಬದ ನಿವಾಸದ ಸಮೀಪದ ಬ್ಲಾಡನ್‌ನ ಸೇಂಟ್ ಮಾರ್ಟಿನ್ ಚರ್ಚ್‌ನ ಆವರಣದಲ್ಲಿ ಸಮಾಧಿ ಮಾಡಲಾಯಿತು. ಆ ಮೂಲಕ ಬ್ರಿಟನ್ ಸರ್ಕಾರವು ಇಲ್ಲಿ ಭವ್ಯತೆ ಮತ್ತು ನಿಯಂತ್ರಣದ ನಡುವೆ ಸಮತೋಲನ ಸಾಧಿಸಿತು.
ಜಗತ್ತಿನ ಅತ್ಯಂತ ಬಡ ಅಧ್ಯಕ್ಷನೆಂದು ಹೆಸರಾದ ಉರುಗ್ವೆಯ ಮಾಜಿ ಅಧ್ಯಕ್ಷ ಹೊಸೆ ಮುಹಿಕಾ ತಮ್ಮ ವಿನಮ್ರ ಜೀವನಶೈಲಿಗೆ ಜಾಗತಿಕವಾಗಿ ಪ್ರಸಿದ್ಧರು. ಅವರು ಯಾವುದೇ ವೈಭವವಿಲ್ಲದೆ, ತಮ್ಮ ನಾಯಿ ಪಕ್ಕದಲ್ಲೇ ತಮ್ಮ ಸಣ್ಣ ತೋಟದಲ್ಲಿ ಸಮಾಧಿಯಾಗಬೇಕೆಂದು ಬಯಸಿದ್ದರು. ಕಳೆದ ವರ್ಷ ಅವರು ನಿಧನರಾದಾಗ ಅವರ ತೋಟದಲ್ಲಿ ಅವರ ನಾಯಿಯನ್ನು ಹೂತಿದ್ದ ಸ್ಥಳದ ಹತ್ತಿರ ಅವರನ್ನೂ ಸರಳ ರೀತಿಯಲ್ಲಿ ಸಮಾಧಿ ಮಾಡಲಾಯಿತು. ಮುಹಿಕಾರ ಪರಂಪರೆ ಸ್ಮಾರಕೀಕರಣವನ್ನು ತಿರಸ್ಕರಿಸುತ್ತದೆ. ಅವರ ʼಸ್ಮಾರಕʼ ಭೌತಿಕವಲ್ಲ- ನೀತಿ, ಪರಿಸರ ಸಂರಕ್ಷಣೆ, ಅಭಿವೃದ್ಧಿ ಕುರಿತ ಆಧುನಿಕ ಚಿಂತನೆಯ ಅವರ ಅವರ ಭಾಷಣಗಳು, ಜೀವನಶೈಲಿ ಮತ್ತು ರಾಜಕೀಯ ನೀತಿಶಾಸ್ತ್ರ ಜಗತ್ತಿನಾದ್ಯಂತ ಸಂಚರಿಸುತ್ತಿವೆ. ಅವರ ಸರಳ ಸಮಾಧಿ ಅಧಿಕಾರ ಮತ್ತು ಅತಿರೇಕದ ವಿರುದ್ಧದ ರೂಪಕವಾಗಿದೆ.
ಇದನ್ನು ಓದಿದ್ದೀರಾ?: ತರ್ಕವಿಲ್ಲದ ಭಯ ʼಫೋಬಿಯಾʼ ಕುರಿತು ನಿಮಗೆಷ್ಟು ಗೊತ್ತು?
ಜಗತ್ತು ಕಂಡ ಶ್ರೇಷ್ಠ ಕಲಾವಿದ- ನಿರ್ದೇಶಕ ಚಾರ್ಲಿ ಚಾಪ್ಲಿನ್ 1977ರಲ್ಲಿ ನಿಧನರಾದರು. ಸ್ವಿಟ್ಜರ್ಲ್ಯಾಂಡ್‌ನ ಕೋರ್ಸಿಯರ್-ಸೂರ್-ವೇವೆಯಲ್ಲಿದ್ದ ಸಾರ್ವಜನಿಕ ಸಿಮೆಟರಿಯಲ್ಲಿ ಸಮಾಧಿ ಮಾಡಲಾಯಿತು. ವಿಚಿತ್ರ ಘಟನೆಯಲ್ಲಿ, ಅಪಹರಣಕಾರರು ಅವರ ದೇಹವನ್ನು ಕದ್ದುಕೊಂಡು ಹೋಗಿ ಹಣದ ಬೇಡಿಕೆ ಇಟ್ಟರು; ನಂತರ ಶವಪೆಟ್ಟಿಗೆಯನ್ನು ಪತ್ತೆಹಚ್ಚಿ ಸಮಾಧಿಯನ್ನು ಕಾಂಕ್ರೀಟ್‌ನಿಂದ ಭದ್ರಪಡಿಸಿದರು. ತಾನು ವಿಶ್ವಪ್ರಜೆ ಎಂದು ನಂಬಿದ್ದ ಚಾಪ್ಲಿನ್ ಅವರು ಸ್ವಿಟ್ಜರ್‍ಲೆಂಡಿನಲ್ಲಿ ವಾಸವಿದ್ದ ಮನೆಯನ್ನು ಕುಟುಂಬದ ಸದಸ್ಯರು ಇತ್ತೀಚೆಗೆ ತಾನೇ ವಸ್ತು ಸಂಗ್ರಹಾಲಯ ಮಾಡಿದ್ದಾರೆ. ಚಾಪ್ಲಿನ್‌ರ ಸ್ಮರಣೆ ಅವರ ಸಿನೆಮಾಗಳ ಮೂಲಕ ನಿತ್ಯ ಜೀವಂತವಾಗಿದೆ. ಕಲಾತ್ಮಕ ಸ್ಮೃತಿಯು ಭೌತಿಕ ಸ್ಮಾರಕಗಳಿಗಿಂತ ಬಲಿಷ್ಠವಾಗಿರಬಹುದು ಎಂಬುದಕ್ಕೆ ಇದು ಸಾಕ್ಷಿ.
ಮೇಲಿನ ಉದಾಹರಣೆಗಳು ಗುರುತು ಇಲ್ಲದ ಸಮಾಧಿಗಳಿಂದ ಭವ್ಯ ಸ್ಮಾರಕಗಳವರೆಗೆ, ಮಹಾನ್ ವ್ಯಕ್ತಿಗಳ ಅಂತ್ಯಸಂಸ್ಕಾರ ಮತ್ತು ಸ್ಮಾರಕಗಳು ಸ್ಮೃತಿಯ ವಿವಿಧ ತತ್ತ್ವಗಳನ್ನು ಬಹಿರಂಗಪಡಿಸುತ್ತವೆ. ಟಾಲ್‌ಸ್ಟಾಯ್, ಐನ್‌ಸ್ಟೈನ್, ಟ್ಯಾಗೋರ್, ಮುಹಿಕಾ ಸತ್ತ ನಂತರದ ಭವ್ಯತೆಯನ್ನು ತಿರಸ್ಕರಿಸಿದರು. ಲಿಂಕನ್ ಮತ್ತು ಚರ್ಚಿಲ್- ರಾಜ್ಯ ಸ್ಮಾರಕಗಳ ಮೂಲಕ ರಾಷ್ಟ್ರದ ಸಂಕೇತಗಳಾದರು. ಶೇಕ್ಸ್‌ಪಿಯರ್ ಮತ್ತು ಚಾಪ್ಲಿನ್- ಮುಖ್ಯವಾಗಿ ಸಾಂಸ್ಕೃತಿಕ ಮನನದ ಮೂಲಕ ಅಮರತ್ವವನ್ನು ಗಳಿಸಿದರು. ಹಾಗೆಯೇ ಒಬ್ಬ ಕ್ರಿಯಾಶೀಲ ವ್ಯಕ್ತಿಯನ್ನು ಗತಿಸಿದ ನಂತರವೂ ಅರ್ಥಪೂರ್ಣವಾಗಿ ಜೀವಂತವಾಗಿರಿಸಿಕೊಳ‍್ಳುವ ವಿಧಾನವನ್ನು ರಂಗಶಂಕರ ನಿರ್ಮಿಸಿದ ಅರುಂಧತಿ ನಾಗ್ ಅವರು ತೋರಿಸಿಕೊಟ್ಟಿರುವುದನ್ನು ಮರೆಯಬಾರದು.
ಸಾವು ಮತ್ತು ಸಾವಿನ ನಂತರದ ಪ್ರಕ್ರಿಯೆಗಳೆಲ್ಲವೂ ಕುಟುಂಬದ ಖಾಸಗಿತನಕ್ಕೆ ಸೇರಿದ್ದು ಎಂದು ಭಾವಿಸಿದ ಗಿರೀಶ್ ಕಾರ್ನಾಡ್ ಕುಟುಂಬದವರು ಹಾಕಿದ ಮೇಲ್ಪಂಕ್ತಿ ಸಹ ನಮ್ಮ ಮುಂದಿದೆ. ಕಾರ್ನಾಡ್ ಅವರು ಬದುಕುವುದು ಅವರ ನಾಟಕ ಮತ್ತು ಪ್ರತಿನಿಧಿಸಿದ ಚಿಂತನೆಗಳಲ್ಲಿ ಎಂಬ ಅರಿವು ಆ ಕುಟುಂಬದವರಿಗಿತ್ತು. ಇಂಥ ಉದಾಹರಣೆಗಳಿದ್ದರೂ ಈಗಲೂ ಕೆಲವರು ಗಣ್ಯರ ನೆನಪು ಭೌತಿಕ ಸ್ಮಾರಕಗಳಲ್ಲೇ ಉಳಿಯುವುದು ಎಂಬ ಅಚಲ ನಂಬಿಕೆ ತಾಳಿದ್ದಾರೆ.

ಶಾಶ್ವತವಾಗಿರುವುದು ಸಮಾಧಿಯ ಗಾತ್ರವಲ್ಲ, ಪ್ರಭಾವದ ಸಾಂದ್ರತೆ. ಸ್ಮಾರಕಗಳು ಸ್ಮರಣೆಗೆ ದಾರಿ ತೋರಿಸಬಹುದು; ಆದರೆ ಆಲೋಚನೆಗಳು, ಸಂಸ್ಥೆಗಳು ಮತ್ತು ನೈತಿಕ ಉದಾಹರಣೆಗಳೇ ಪರಂಪರೆಯನ್ನು ಉಳಿಸುತ್ತವೆ. ಅಂತಿಮವಾಗಿ, ಜಗತ್ತು ತನ್ನ ಮಹಾನ್ ವ್ಯಕ್ತಿಗಳನ್ನು ಅವರು ಎಲ್ಲಿ ಮಲಗಿದ್ದಾರೆ ಎಂಬುದರಿಂದ ಅಲ್ಲ, ಅವರು ಮಾನವ ಅಂತಃಕರಣದೊಂದಿಗೆ ಎಷ್ಟು ಆಳವಾಗಿ ಮಾತನಾಡುತ್ತಲೇ ಇರುತ್ತಾರೆ ಎಂಬುದರಿಂದ ನೆನಪಿಸಿಕೊಳ್ಳುತ್ತದೆ.
ಈ ಉದಾಹರಣೆಗಳಲ್ಲಿ ಒಂದಂತೂ ಸ್ಪಷ್ಟವಾಗಿದೆ: ಸಮಾಧಿಯೇ ಬೇರೆ; ಸ್ಮಾರಕವೇ ಬೇರೆ. ಎರಡೂ ಒಂದೇ ಸ್ಥಳದಲ್ಲಿ ಇರಬೇಕಿಲ್ಲ; ಇರಬಾರದು. ಆದರೆ ನಮ್ಮಲ್ಲಿ ಅಂತ್ಯ ಸಂಸ್ಕಾರ ಮಾಡುವ ಭೌತಿಕ ನೆಲೆಯೇ ಸ್ಮಾರಕವಾಗಬೇಕೆನ್ನುವ ಹಠ ಯಾಕೋ ತಿಳಿಯದು. ಕಲಾಗ್ರಾಮಗಳನ್ನು ಚಲನಚಿತ್ರ ಸ್ಟುಡಿಯೋಗಳನ್ನು ಸಮಾಧಿ ಸ್ಥಳ ಮಾಡುವ, ಅಲ್ಲೇ ಸ್ಮಾರಕ ಕಟ್ಟುವ ಒತ್ತಾಯಗಳು ನಿಲ್ಲಲಿ. ಅದಕ್ಕೂ ಮೊದಲು ಸಮಾಜದ ಅಂಚಿನ ಸಮುದಾಯಗಳ ವ್ಯಕ್ತಿಗಳು ಸತ್ತರೆ ಘನತೆಯಿಂದ ಸಂಸ್ಕಾರ ಮಾಡಲು ಸರ್ಕಾರ, ಸ್ವಯಮಾಡಳಿತ ಸಂಸ್ಥೆಗಳು ಸ್ಮಶಾನಭೂಮಿಯ ಸೌಲಭ್ಯಗಳನ್ನು ಕಲ್ಪಿಸುವವರೆಗೆ ಗಣ್ಯರ ಸಮಾಧಿ, ಸ್ಮಾರಕಗಳ ನಿರ್ಮಾಣವನ್ನು ಅಮಾನತ್ತಿನಲ್ಲಿಡಬೇಕೆಂಬ ಒತ್ತಾಯ ಬರಲಿ.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




