ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಸುಬೇಕೆಂದು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಹಾಗೂ ಅದನ್ನು ರಾಜ್ಯ ಚುನಾವಣಾ ಆಯೋಗ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಡ್ವೋಕೇಟ್ ತಾಹೇರ್ ಹುಸೈನ್ ಸ್ವಾಗತಿಸಿದ್ದಾರೆ.
ಇತ್ತೀಚೆಗೆ ಅನೇಕ ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಕಳ್ಳತನ ಆಗಿದೆ ಎಂಬ ಸಾಕ್ಷ್ಯಸಮೇತದ ಇಂಡಿಯಾ ಒಕ್ಕೂಟದ ನಾಯಕರುಗಳ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದ ಪ್ರಧಾನಿಗಳ ಉದ್ದಟತನ ಒಂದು ಕಡೆ. ಮತ್ತೊಂದು ಕಡೆ ಆರೋಪಿತ ಸ್ಥಾನದಲ್ಲಿ ಇರುವ ಕೇಂದ್ರ ಚುನಾವಣಾ ಆಯೋಗವು ಸೂಕ್ತ ಸ್ಪಷ್ಟೀಕರಣಗಳನ್ನು ಹಾಗೂ ಸಮಜಾಯಿಷಿಗಳನ್ನು ನೀಡದೆ, ಆರೋಪ ಮಾಡಿದ್ದ ನಾಯಕರುಗಳ ವಿರುದ್ಧವೇ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡಿ ಮುಚ್ಚಿ ಹಾಕುವ ತಂತ್ರಗಾರಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ಇವರ ಈ ಎಲ್ಲ ನಡೆಯಿಂದಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಆಮೂಲಾಗ್ರ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಇಚ್ಛೆ ಇಲ್ಲದಿರುವುದು ದೇಶದ ಜನತೆಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಬ್ಯಾಲೆಟ್ ಪೇಪರ್ ಬಳಕೆಯ ನಿರ್ಧಾರ ಕೈಗೊಂಡಿರುವುದು ಅತ್ಯಂತ ಸ್ವಾಗತಾರ್ಹ ಕ್ರಮ ಎಂದು ತಾಹೇರ್ ಹುಸೈನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಸಿಕಾಂತ್ ಸೆಂಥಿಲ್
ದೇಶದ ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಮತ ಕಳ್ಳತನ ಮಾಡಿ ಅಧಿಕಾರ ಪಡೆದುಕೊಳ್ಳುವ ಪ್ರಬಲರ ಹುನ್ನಾರ ತಪ್ಪಬೇಕಾದರೆ ಬ್ಯಾಲೆಟ್ ಪೇಪರ್‌ನ ಅವಶ್ಯಕತೆ ಅತ್ಯಂತ ಅವಶವಾಗಿದೆ. ಪಕ್ಷವು ಎಲ್ಲ ಸ್ತರಗಳಲ್ಲಿಯೂ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತದೆ. ಭಾರತೀಯ ಜನತಾ ಪಕ್ಷಕ್ಕೆ ಮತ ಕಳ್ಳತನವನ್ನು ನಿಜಕ್ಕೂ ತಡೆಗಟ್ಟುವ ಮನಸ್ಸಿದ್ದಲ್ಲಿ ಬಿಜೆಪಿ ಅಧಿಕಾರ ಹೊಂದಿರುವ ಇನ್ನಿತರ ರಾಜ್ಯಗಳಲ್ಲಿಯೂ ಸಹ ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸುತ್ತದೆ ಎಂದು ತಾಹೇರ್ ಹುಸೈನ್ ತಿಳಿಸಿದ್ದಾರೆ.





