ಬಿಜೆಪಿಯಿಂದ ಟಿಎಂಸಿಗೆ ಪಕ್ಷಾಂತರ ಮಾಡಿದ್ದ ಪಶ್ಚಿಮ ಬಂಗಾಳದ ಶಾಸಕ ಮುಕುಲ್ ರಾಯ್ ಅವರನ್ನು ಎಂಎಲ್‌ಎ ಸ್ಥಾನದಿಂದ ಅನರ್ಹಗೊಳಿಸಿದ್ದ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ತನ್ನ ಸಾಂವಿಧಾನಿಕ ಅಧಿಕಾರ ಚಲಾಯಿಸಿರುವುದಾಗಿ ಹೇಳಿದ್ದ ಕೋಲ್ಕತ್ತಾ ಹೈಕೋರ್ಟ್ ಮುಕುಲ್ ರಾಯ್ ಅವರನ್ನು 2025ರ ನವೆಂಬರ್‌ನಲ್ಲಿ ಅನರ್ಹಗೊಳಿಸಿತ್ತು. ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಕೋಲ್ಕತ್ತಾ ಹೈಕೋರ್ಟ್ ತನ್ನ ಸಾಂವಿಧಾನಿಕ ಅಧಿಕಾರ ಬಳಸಿ, ಶಾಸಕರೊಬ್ಬರನ್ನು ಅನರ್ಹಗೊಳಿಸಿತ್ತು.
ತಮ್ಮನ್ನು ವಿಧಾನಸಭೆಯಿಂದ ಅನರ್ಹಗೊಳಿಸಿರುವ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮುಕುಲ್ ರಾಯ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಮುಕುಲ್ ರಾಯ್ ಅವರು ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಇದೇ ವರ್ಷ (2026) ಮಾರ್ಚ್-ಏಪ್ರಿಲ್‌ನಲ್ಲಿ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಯ್ ಅವರಿಗೆ ರಾಜಕೀಯ ಸ್ವಸ್ಥತೆ ಸಿಕ್ಕಿದೆ ಎಂದು ಹೇಳಲಾಗಿದೆ.
ರಾಯ್ ಅವರು 2021ರ ಬಂಗಾಳ ಚುನಾವಣೆಯಲ್ಲಿ ಕೃಷ್ಣನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ, ಗೆದ್ದಿದ್ದರು. ಆದರೆ, ಅದೇ ವರ್ಷ ಜೂನ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಅವರು ಟಿಎಂಸಿಗೆ ಸೇರಿದ್ದರು. ತಮ್ಮ ಶಾಸಕ ಸ್ಥಾನಮಾನವನ್ನು ಉಳಿಸಿಕೊಂಡಿದ್ದರು.




