ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ‘ಅಕ್ರಮ ಹಣ ವರ್ಗಾವಣೆ’ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತೆಲಂಗಾಣ ಜಾಗೃತಿ ಸಂಘಟನೆಯ ನಾಯಕಿ ಕೆ ಕವಿತಾ ಸೇರಿದಂತೆ 23 ಮಂದಿ ವಿರುದ್ಧದ ಪ್ರಕರಣವನ್ನು ದೆಹಲಿ ನ್ಯಾಯಾಲಯವು ರದ್ದುಗೊಳಿಸಿದೆ. ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದ್ದ ಎಲ್ಲರನ್ನೂ ಖುಲಾಸೆಗೊಳಿಸಿದೆ.
ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಸುಮಾರು 598 ಪುಟಗಳ ಸುದೀರ್ಘ ತೀರ್ಪು ಹೊರಡಿಸಿದ್ದಾರೆ. ಕೇಂದ್ರ ತನಿಖಾ ದಳದ (CBI) ತನಿಖಾ ವಿಧಾನವನ್ನು ತೀವ್ರವಾಗಿ ಖಂಡಿಸಿದ್ದಾರೆ. ತನಿಖಾ ಸಂಸ್ಥೆಯ ಅನೇಕ ಲೋಪದೋಷಗಳನ್ನು ಎತ್ತಿ ತೋರಿಸಿದ್ದಾರೆ. ಸಿಬಿಐ ವಿರುದ್ಧ ಛಾಟಿ ಬೀಸಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸುವಾಗ ನ್ಯಾಯಾಲಯ ಗಮನಿಸಿದ ಮತ್ತು ನೀಡಿದ ಹೇಳಿಕೆಗಳ ವಿವರ ಇಲ್ಲಿದೆ;
- ಪ್ರಕರಣದ 18ನೇ ಆರೋಪಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಲಂಚ ಪಡೆದಿದ್ದಾರೆ ಅಥವಾ ಲಂಚ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಗಳನ್ನು ಹಾಜರುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ.
- ಕೇಜ್ರಿವಾಲ್ ವಿರುದ್ಧದ ಆರೋಪಗಳು ಸಹ-ಆರೋಪಿಗಳ ಅಥವಾ ಸಾಕ್ಷಿಗಳ ಹೇಳಿಕೆಗಳನ್ನು ಮಾತ್ರವೇ ಆಧರಿಸಿವೆ. ಆದರೆ, ಅವರನ್ನು ಯಾವುದೇ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತು ಮಾಡುವ ಸ್ವತಂತ್ರ ಪುರಾವೆಗಳ ಕೊರತೆಯಿದೆ.
- ಅಪ್ರಾಮಾಣಿಕ ಉದ್ದೇಶ ಅಥವಾ ಪ್ರತಿಫಲಾಪೇಕ್ಷೆಗೆ (quid pro quo) ಸಂಬಂಧಿಸಿದ ಪುರಾವೆಗಳಿಲ್ಲದೆ, ಕೇವಲ ನೀತಿ ನಿರ್ಧಾರಗಳ ಅನುಮೋದನೆಯು ಕ್ರಿಮಿನಲ್ ಹೊಣೆಗಾರಿಕೆಯನ್ನು ಆಕರ್ಷಿಸುವುದಿಲ್ಲ. ಈ ಹಗರಣದಿಂದ ಕೇಜ್ರಿವಾಲ್ ಅವರಿಗೆ ಯಾವುದೇ ಆರ್ಥಿಕ ಲಾಭವಾಗಿದೆ ಎಂಬುದಕ್ಕೆ ಯಾವುದೇ ದಾಖಲೆ ಅಥವಾ ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಸಿಕ್ಕಿಲ್ಲ.
- ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಲ್ಲಿ, ಆದಾಯ ಹೆಚ್ಚಿಸಲು, ನಿಯಂತ್ರಕ ಚೌಕಟ್ಟುಗಳನ್ನು ಸುಧಾರಿಸಲು ಅಥವಾ ಸಾರ್ವಜನಿಕ ಕಲ್ಯಾಣದ ಉದ್ದೇಶಗಳನ್ನು ಮುನ್ನಡೆಸಲು ನೀತಿ ಬದಲಾವಣೆಗಳು ಅಗತ್ಯವಾಗಿರುತ್ತದೆ… ಒಂದು ನಿರ್ದಿಷ್ಟ ನೀತಿಯು ನಿರೀಕ್ಷಿತ ಫಲಿತಾಂಶಗಳನ್ನು ನೀಡದಿದ್ದರೆ ಅಥವಾ ಖಾಸಗಿ ವ್ಯಕ್ತಿಗಳು ಆ ನೀತಿಯಡಿಯಲ್ಲಿ ಕಾನೂನುಬದ್ಧವಾಗಿ ಲಾಭ ಗಳಿಸಿದರೆ, ಅಷ್ಟಕ್ಕೇ ಕ್ರಿಮಿನಲ್ ಮೊಕದ್ದಮೆಯನ್ನು ಸಮರ್ಥಿಸಲು ಸಾಧ್ಯವಿಲ್ಲ… ಸ್ಪಷ್ಟವಾದ ದುರುದ್ದೇಶ ಅಥವಾ ಅಧಿಕಾರದ ದುರುಪಯೋಗ ಕಂಡುಬರದ ಹೊರತು, ಸದುದ್ದೇಶದಿಂದ ತೆಗೆದುಕೊಂಡ ಆರ್ಥಿಕ ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ಅಪರಾಧೀಕರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
- ಆರೋಪಿಗಳ ವಿರುದ್ಧ ವಿಚಾರಣೆ ನಡೆಸಲು ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಅಗತ್ಯವಿರುವ ‘ಗಂಭೀರ ಅನುಮಾನ’ವಿರಲಿ, ಕನಿಷ್ಠ ಮಟ್ಟದ ‘ಮೇಲ್ನೋಟದ ಅನುಮಾನ’ವನ್ನೂ ಎತ್ತಿ ತೋರಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ.
- ಮೇಲ್ನೋಟದ ಅನುಮಾನವನ್ನು ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ. ಸಿಬಿಐ ಬಿಂಬಿಸಿದ ಅಬಕಾರಿ ನೀತಿ ಪ್ರಕರಣವು ನ್ಯಾಯಾಂಗ ಪರಿಶೀಲನೆಯ ಮುಂದೆ ನಿಲ್ಲಲು ಸಂಪೂರ್ಣ ಅಸಮರ್ಥವಾಗಿದೆ.
- “ತನಿಖಾ ಸಂಸ್ಥೆಯು ತನ್ನದೇ ಆದ ಸಾಕ್ಷಿಗಳ ಹೇಳಿಕೆಗಳ ಮೇಲೆ ಅವಲಂಬಿತವಾಗಿದೆ. ಆದರೆ, ಆ ಸಾಕ್ಷ್ಯಗಳೇ ಪ್ರಾಸಿಕ್ಯೂಷನ್‌ನ ಮೂಲಭೂತ ಆರೋಪಗಳಿಗೆ ವಿರುದ್ಧವಾಗಿವೆ. ಈ ಸಾಕ್ಷ್ಯಗಳ ಒಟ್ಟಾರೆ ಪರಿಣಾಮವು ಪ್ರಕರಣವನ್ನು ಬೆಂಬಲಿಸುವ ಬದಲು ಅದನ್ನು ಧ್ವಂಸಗೊಳಿಸುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.
- ಯಾವುದೇ ಕಾನೂನುಬದ್ಧ ಪುರಾವೆಗಳಿಲ್ಲದಿದ್ದರೂ ಆರೋಪಿಗಳನ್ನು ಸುದೀರ್ಘ ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವುದು ನ್ಯಾಯದ ಹಿತದೃಷ್ಟಿಯಿಂದ ಸರಿಯಲ್ಲ; ಇದು ನ್ಯಾಯದ ವಿಫಲತೆ ಮತ್ತು ಕ್ರಿಮಿನಲ್ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
- ನ್ಯಾಯಾಲಯವು ದೋಷಪೂರಿತ ತನಿಖಾ ಪ್ರಕ್ರಿಯೆಯನ್ನು ಗುರುತಿಸಿದೆ. ಮಾತ್ರವಲ್ಲದೆ, ಯಾವುದೇ ಸಾಕ್ಷ್ಯವಿಲ್ಲದಿದ್ದರೂ ಕುಲದೀಪ್ ಸಿಂಗ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ.
- ಕುಲದೀಪ್ ಸಿಂಗ್ ಅವರನ್ನು ಆರೋಪಿಯನ್ನಾಗಿಸಿದ ತನಿಖಾಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲು ನ್ಯಾಯಾಲಯವು ಶಿಫಾರಸು ಮಾಡಿದೆ. ತನಿಖಾ ಯಂತ್ರದ ವಿಶ್ವಾಸಾರ್ಹತೆಯನ್ನು ಕಾಪಾಡಲು ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಅಗತ್ಯವೆಂದು ಹೇಳಿದೆ.
- ಸಿಸೋಡಿಯಾ ಅವರ ವಿಷಯದಲ್ಲಿ, ಅವರು ಕಾನೂನುಬಾಹಿರವಾಗಿ ಹಣದ ಬೇಡಿಕೆ ಇಟ್ಟಿದ್ದಾರೆ ಅಥವಾ ಸ್ವೀಕರಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಅಕ್ರಮ ಹಣದ ಹರಿವಿಗೂ ಅವರಿಗೂ ಸಂಬಂಧವಿದೆ ಎಂಬುದನ್ನು ಸ್ಥಾಪಿಸಲು ಸಿಬಿಐ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
- ಅಬಕಾರಿ ನೀತಿಯ ನಿರ್ಧಾರಗಳನ್ನು ಸಾಮೂಹಿಕವಾಗಿ ತೆಗೆದುಕೊಳ್ಳಲಾಗಿತ್ತು. ಸಿಸೋಡಿಯಾ ಅವರು ಏಕಪಕ್ಷೀಯವಾಗಿ ಅಥವಾ ಕ್ರಿಮಿನಲ್ ಉದ್ದೇಶದಿಂದ ಕಾರ್ಯನಿರ್ವಹಿಸಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ.
- ದಾಖಲೆಗಳಲ್ಲಿರುವ ಸಾಕ್ಷ್ಯಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡುವಲ್ಲಿ ಅಥವಾ ಕಾನೂನುಬದ್ಧ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ತನಿಖಾ ಸಂಸ್ಥೆಯು ಮೂಲಭೂತವಾಗಿ ವಿಫಲವಾಗಿದೆ.
- ಅಬಕಾರಿ ನೀತಿಯು ಎಲ್ಲ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಮತ್ತು ಕಾನೂನು ಪ್ರಕ್ರಿಯೆಯನ್ನು ಅನುಸರಿಸಿದ ನಂತರವೇ ಸಿದ್ಧವಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
- ಸಿಬಿಐ ತನಿಖೆಯು ಮೊದಲೇ ನಿರ್ಧರಿಸಿದ ಹಾದಿಯಲ್ಲಿ ನಡೆದಿದೆ. ನೀತಿ ನಿರೂಪಣೆಯಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಆರೋಪಿಗಳನ್ನಾಗಿ ಮಾಡಿ ಪ್ರಕರಣಕ್ಕೆ ಒಂದು ‘ದೊಡ್ಡ ಹಗರಣ’ದ ರೂಪ ನೀಡಲು ಪ್ರಯತ್ನಿಸಿದೆ” ಎಂದು ನ್ಯಾಯಾಲಯ ಟೀಕಿಸಿದೆ.
- ಈ ಪ್ರಕರಣವು ಹೆಚ್ಚಾಗಿ ಊಹೆಗಳ ಮೇಲೆಯೇ ನಿಂತಿದೆ. ಯಾವುದೇ ಸರಿಯಾದ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
- ಅಪ್ರೂವರ್ ಸಾಕ್ಷಿಗಳಿಂದ ಪದೇ ಪದೇ ಹೇಳಿಕೆಗಳನ್ನು ಪಡೆಯುವ ಮೂಲಕ ಪ್ರಾಸಿಕ್ಯೂಷನ್ ತನ್ನ ಕಥೆಯನ್ನು ಸುಧಾರಿಸಲು ಪ್ರಯತ್ನಿಸುವುದು ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬಹುದು ಎಂದು ನ್ಯಾಯಾಲಯ ಎಚ್ಚರಿಸಿದೆ.
- ಒಮ್ಮೆ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಂಡರೆ, ನಂತರದ ಬಿಡುಗಡೆಯಿಂದ ಅದನ್ನು ಅರ್ಥಪೂರ್ಣವಾಗಿ ಮರಳಿ ಒದಗಿಸಲು ಸಾಧ್ಯವಿಲ್ಲ. ಅವರು ನ್ಯಾಯಾಂಗ ಬಂಧನದಲ್ಲಿ ಕಳೆದ ಸಮಯಕ್ಕೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಮಮ್ಮಲ ಮರುಗಿದೆ.
- ವೈಯಕ್ತಿಕ ಸ್ವಾತಂತ್ರ್ಯ ಮತ್ತು ತನಿಖಾ ಸಂಸ್ಥೆಯ ಅಧಿಕಾರಗಳ ನಡುವೆ ಸಮತೋಲನ ಇರಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
- ಶುಕ್ರವಾರದ ತೀರ್ಪಿನಲ್ಲಿ ಖುಲಾಸೆಗೊಂಡ ಎಲ್ಲ ಆರೋಪಿಗಳ ಹೆಸರುಗಳು; ಕುಲದೀಪ್ ಸಿಂಗ್, ನರೇಂದರ್ ಸಿಂಗ್, ವಿಜಯ್ ನಾಯರ್, ಅಭಿಷೇಕ್ ಬೋಯಿನ್‌ಪಲ್ಲಿ, ಅರುಣ್ ಪಿಳ್ಳೈ, ಮುತ್ತಾ ಗೌತಮ್, ಸಮೀರ್ ಮಹೇಂದ್ರು, ಮನೀಶ್ ಸಿಸೋಡಿಯಾ, ಅಮನ್‌ದೀಪ್ ಸಿಂಗ್ ಧಾಲ್, ಅರ್ಜುನ್ ಪಾಂಡೆ, ಬುಚ್ಚಿಬಾಬು ಗೊರಂಟ್ಲ, ರಾಜೇಶ್ ಜೋಶಿ, ದಾಮೋದರ್ ಪ್ರಸಾದ್ ಶರ್ಮಾ, ಪ್ರಿನ್ಸ್ ಕುಮಾರ್, ಅರವಿಂದ್ ಕುಮಾರ್ ಸಿಂಗ್, ಚನ್‌ಪ್ರೀತ್ ಸಿಂಗ್, ಕೆ ಕವಿತಾ, ಅರವಿಂದ್ ಕೇಜ್ರಿವಾಲ್, ದುರ್ಗೇಶ್ ಪಾಠಕ್, ಅಮಿತ್ ಅರೋರಾ, ವಿನೋದ್ ಚೌಹಾಣ್, ಆಶಿಶ್ ಚಂದ್ ಮಾಥೂರ್ ಮತ್ತು ಶರತ್ ರೆಡ್ಡಿ.




