ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ಕೋರಿ ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ್ದ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತು ಇತರ ಐವರಿಗೆ ನೋಟಿಸ್ ನೀಡಿದೆ.
ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ದಾಖಲಿಸಿದ್ದ ಚಾರ್ಜ್‌ಶೀಟ್ ಅನ್ನು ಪರಿಗಣಿಸಲು ದೆಹಲಿಯ ಸ್ಥಳೀಯ ನ್ಯಾಯಾಲಯವು ಡಿಸೆಂಬರ್ 16ರಂದು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಇಡಿ ಹೈಕೋರ್ಟ್ ಮೊರೆ ಹೋಗಿದೆ.
ಇದನ್ನು ಓದಿದ್ದೀರಾ? ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ದೂರು ವಜಾ: ಮೋದಿ, ಶಾ ರಾಜೀನಾಮೆ ನೀಡಬೇಕೆಂದ ಖರ್ಗೆ
ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ರವೀಂದರ್ ದುಡೇಜಾ ಅವರ ಪೀಠವು ಪ್ರಕರಣಕ್ಕೆ ಪ್ರತಿಕ್ರಿಯಿಸಲು ಹೈಕೋರ್ಟ್ ರಾಹುಲ್, ಸೋನಿಯಾ ಅವರಿಗೆ ನೋಟಿಸ್ ನೀಡಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿ ವಾದ ಮಂಡಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಹಾಜರಾಗಿದ್ದರು. ಮುಂದಿನ ವಿಚಾರಣೆಯು 2026ರ ಮಾರ್ಚ್ 12ರಂದು ನಡೆಯಲಿದೆ.
ಏನಿದು ನ್ಯಾಷನರ್ ಹೆರಾಲ್ಡ್ ಪ್ರಕರಣ?
2012ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಂಚನೆ ಮತ್ತು ಹಣಕಾಸು ದುರುಪಯೋಗದ ಆರೋಪ ಮಾಡಿ ದೂರು ನೀಡಿದ್ದರು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್) ಎಂಬ ಸಂಸ್ಥೆ ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕಿದ್ದ 90.25 ಕೋಟಿ ರೂ. ಸಾಲವನ್ನು ‘ಯಂಗ್ ಇಂಡಿಯನ್’ ಎಂಬ ಸಂಸ್ಥೆಯ ಮೂಲಕ ಕೇವಲ 50 ಲಕ್ಷ ರೂ.ಗಳಿಗೆ ಖರೀದಿಸಿ, ಆ ಮೂಲಕ ಎಜೆಎಲ್ ಸಂಸ್ಥೆಯ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಹಸ್ತಾಂತರಿಸಿಕೊಳ್ಳಲಾಗಿದೆ ಎಂಬುದು ಆರೋಪವಾಗಿದೆ. ಈ ಸಂಸ್ಥೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಶೇ. 76ರಷ್ಟು ಪಾಲನ್ನು ಹೊಂದಿದ್ದಾರೆ.
ಆದರೆ ಇತ್ತೀಚೆಗೆ ನ್ಯಾಯಾಲಯವುದ ಇಡಿ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣಿಸಲು ನಿರಾಕರಿಸಿದೆ. ಈ ಪ್ರಕರಣವು ಸುಬ್ರಮಣಿಯನ್ ಸ್ವಾಮಿ ಅವರ ಖಾಸಗಿ ದೂರಿನ ಆಧಾರದಲ್ಲಿ ಆರಂಭವಾಗಿರುವುದರಿಂದ ಇಡಿ ದೂರು ಕಾನೂನುಬದ್ಧವಾಗಿ ಉಳಿಯುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಸಂದರ್ಭದಲ್ಲೇ ಇಡಿ ತನ್ನ ತನಿಖೆಯನ್ನು ಮುಂದುವರಿಸಲು ಸ್ವತಂತ್ರವಾಗಿದೆ ಎಂದೂ ಕೋರ್ಟ್ ತಿಳಿಸಿದೆ. ಅದಾದ ಬಳಿಕ ಇಡಿ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.





