ಅರಸು ಮುತ್ಸದ್ದಿ ರಾಜಕಾರಣಿ, ರಾಜಕಾರಣದ ನೆಲದಲ್ಲಿ ಶ್ರಮವಹಿಸಿ ದುಡಿದು ಫಲ ಪಡೆದವರು; ಸಿದ್ದರಾಮಯ್ಯ ಅದೃಷ್ಟವಂತ ರಾಜಕಾರಣಿ, ರಾಜಕಾರಣದ ಆಟದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿದ್ದು ಅವಕಾಶವನ್ನು ಪಡೆದುಕೊಳ್ಳಲು ಯಾವ ರೀತಿಯ ರಾಜಕಾರಣವನ್ನು ಎಷ್ಟರಮಟ್ಟಿಗೆ ಮಾಡಬೇಕೋ ಅಷ್ಟೇ ಮಾಡಿ ಯಶಸ್ವಿಯಾದವರು.
ಅಧಿಕಾರದಲ್ಲಿದ್ದ ಅವಧಿಯ ಲೆಕ್ಕಾಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1972-80ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ. ದೇವರಾಜ ಅರಸು ಅವರನ್ನೂ ಹಿಂದಿಕ್ಕಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದಲ್ಲಿ ಈ ತನಕ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದವರು ಎಂದು 2026ರ ಜನವರಿ ಏಳನೇ ದಿನಾಂಕದಿಂದ ತೊಡಗಿ ಚರಿತ್ರೆ ದಾಖಲಿಸಿಕೊಳ್ಳುತ್ತದೆ. ಆದರೆ ಸಾಧನೆಯಲ್ಲಿ ಈರ್ವರಿಗೆ ಸಮಾನತೆ ಇದೆಯೇ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹೇಳಬೇಕಿರುವ ಕೆಲವು ವಿಚಾರಗಳು ಈ ಕೆಳಗಿನಂತಿವೆ.
ಅರಸು ಮುತ್ಸದ್ದಿ ರಾಜಕಾರಣಿ, ರಾಜಕಾರಣದ ನೆಲದಲ್ಲಿ ಶ್ರಮವಹಿಸಿ ದುಡಿದು ಫಲ ಪಡೆದವರು; ಸಿದ್ದರಾಮಯ್ಯ ಅದೃಷ್ಟವಂತ ರಾಜಕಾರಣಿ, ರಾಜಕಾರಣದ ಆಟದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿದ್ದು ಅವಕಾಶವನ್ನು ಪಡೆದುಕೊಳ್ಳಲು ಯಾವ ರೀತಿಯ ರಾಜಕಾರಣವನ್ನು ಎಷ್ಟರಮಟ್ಟಿಗೆ ಮಾಡಬೇಕೋ ಅಷ್ಟೇ ಮಾಡಿ ಯಶಸ್ವಿಯಾದ ವೃತ್ತಿಪರ ರಾಜಕಾರಣಿ. ಅರಸು ಹೊಸ ರಾಜಕೀಯವನ್ನು ಕಟ್ಟಿದವರು – ತಮಗೆ ದೊರೆತ ಅಷ್ಟೂ ಅವಕಾಶಗಳನ್ನೂ ತಾವೇ ಸೃಷ್ಟಿಸಿಕೊಂಡವರು. ಸಿದ್ದರಾಮಯ್ಯ ಹೊಸ ರಾಜಕಾರಣ ಕಟ್ಟಲಿಲ್ಲ. ಹೊಸ ಪ್ರಯೋಗ ನಡೆಸಲಿಲ್ಲ. ಅರಸು ಅವರು ಸೃಷ್ಟಿಸಿದ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗಗಳ ಮೈತ್ರಿಯನ್ನು ಅಹಿಂದ ಎಂಬ ಹೊಸ ಹೆಸರಿನಲ್ಲಿ ಸಶಕ್ತವಾಗಿ ಮರುಸ್ಥಾಪಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಡೆಸಬೇಕು ಎನ್ನುವ ಕೆಲವರ ಯೋಜನೆಯೂ ಆರಕ್ಕೆ ಏಳದೆ ಮೂರಕ್ಕೆ ಇಳಿಯದೆ ನಿಂತಿದೆ.
ಇದನ್ನು ಓದಿದ್ದೀರಾ?: ದೇವರಾಜ ಅರಸು ದಾಖಲೆ ದಾಟಿದರೇ ಸಿದ್ದರಾಮಯ್ಯ?
ಅರಸು ರಾಜಕಾರಣಿಯಂತೆ ರಾಜಕಾರಣವನ್ನೂ ಮಾಡಿದರು, ರಾಜಕಾರಣಿಯಂತೆ ಆಡಳಿತವನ್ನೂ ನಡೆಸಿದರು. ಸಿದ್ದರಾಮಯ್ಯ ರಾಜಕಾರಣಿಯಂತೆ ರಾಜಕಾರಣವನ್ನೂ ಮಾಡಲಿಲ್ಲ, ರಾಜಕಾರಣಿಯಂತೆ ಆಡಳಿತವನ್ನೂ ನಡೆಸಲಿಲ್ಲ. ರಾಜಕಾರಣಿಯ ಪಕ್ಕಾ ಲೆಕ್ಕಾಚಾರದಿಂದ ರಾಜಕೀಯ ಮಾಡದೆ ಹೋದರೂ ಲೆಕ್ಕಾಚಾರ ಮಾಡಿ ರಾಜಕೀಯದ ದಾಳ ಉರುಳಿಸುತ್ತಾ ಮಾಡಿದ ರಾಜಕಾರಣಕ್ಕಿಂತ ಹೆಚ್ಚು ಯಶಸ್ವಿಯಾದ ರಾಜಕಾರಣದ ಮಾದರಿ ಅವರದ್ದು. ಅದೊಂದು ಯಶಸ್ವೀ ಮಾದರಿ. ಇಲ್ಲದೆ ಹೋದರೆ ಇಷ್ಟೊಂದು ನಿರಾಯಾಸವಾಗಿ ಇಷ್ಟೊಂದು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಯಾದರೂ ಎಲ್ಲಿತ್ತು?
ಆಡಳಿತದ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯನವರು ರಾಜಕಾರಣಿ ಎನ್ನುವುದಕ್ಕಿಂತ ಹೆಚ್ಚಾಗಿ ಕಟ್ಟುನಿಟ್ಟಾಗಿರುವುದರಲ್ಲಿ ಬಹುತೇಕ (ಪೂರ್ತಿಯಲ್ಲ) ವಿಶ್ವಾಸ ಇರಿಸಿಕೊಂಡಿರುವ ಓರ್ವ ಐಎಎಸ್ ಅಧಿಕಾರಿಯಂತೆ ಕಾಣಿಸುತ್ತಾರೆ ಎಂದೂ, ರಾಜಕಾರಣಕ್ಕಿಂತ ಅವರು ಆಡಳಿತದ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಹೆಚ್ಚು ಆನಂದಿಸುತ್ತಾರೆ ಎಂದೂ ಅವರ ಆಪ್ತರು ಅಲ್ಲಲ್ಲಿ ಹೇಳಿದ್ದುಂಟು. ಅಷ್ಟೇ ಅಲ್ಲ, ಆಡಳಿತಾತ್ಮಕವಾಗಿ ನಿಭಾಯಿಸಬೇಕಾದ ವಿಷಯಗಳಿಗೊಂದು ರಾಜಕೀಯ ಆಯಾಮ ಇರುತ್ತದೆ ಎನ್ನುವುದನ್ನೇ ಮರೆತಂತೆ ವರ್ತಿಸುತ್ತಾ, ಅಪ್ಪಟ ಬ್ಯೂರೊಕ್ರಾಟಿಕ್ ನೆಲೆಯಲ್ಲಿ ಅವರು ವರ್ತಿಸಿದ ಮತ್ತು ವರ್ತಿಸುತ್ತಿರುವ ನಿದರ್ಶನಗಳು ಸಾಕಷ್ಟು ಸಿಗುತ್ತವೆ. ಇಲ್ಲದೇ ಹೋದರೆ ಪ್ಯಾಲೆಸ್ತೀನ್ ಪರವಾಗಿ ಹೋರಾಟಗಾರರನ್ನು ಅವರ ಆಡಳಿತದಲ್ಲಿ ಪೊಲೀಸರು ಬಂದಿಸುವಂತಹ ಪ್ರಕರಣ ನಡೆಯುತ್ತಿರಲಿಲ್ಲ. ಧರ್ಮಸ್ಥಳದ ಸೌಜನ್ಯ ಕೊಲೆ ಮತ್ತು ಅಲ್ಲಿನ ಮತ್ತಿತರ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಆಗ್ರಹಿಸುವವರ ವಿರುದ್ಧವೇ ಪೊಲೀಸ್ ಕಾರ್ಯಾಚರಣೆ ನಡೆಯುತ್ತಿರಲಿಲ್ಲ. ಒಳಮೀಸಲಾತಿ ನೀಡಿದರೂ ಅಲೆಮಾರಿಗಳಿಗೆ ನ್ಯಾಯ ಒದಗಿಸಲಾಗದೆ ಹೋಗುತ್ತಿರಲಿಲ್ಲ. ಇಷ್ಟೆಲ್ಲಾ ಆದರೂ, ಎಲ್ಲ ಹೋರಾಟಗಾರರಿಗೂ, ಎಲ್ಲಾ ಅನ್ಯಾಯಕ್ಕೊಳಗಾದವರಿಗೂ ಈಗಲೂ ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಕರ್ನಾಟಕದ ರಾಜಕಾರಣದಲ್ಲಿ ಯಾರಾದರೂ ಇದ್ದಾರೆ ಅದು ಸಿದ್ದರಾಮಯ್ಯ ಎನ್ನುವುದು ಸತ್ಯ.

ಅರಸು ಪ್ರಬಲ ಜಾತಿಗಳ ಕಬಂದ ಬಾಹುಗಳಿಂದ ಕರ್ನಾಟಕ ರಾಜ್ಯವನ್ನು ಜಾಣ್ಮೆಯಿಂತ ಬಿಡಿಸುವ ಪ್ರಯತ್ನ ಮಾಡಿದರು. ಸಿದ್ದರಾಮಯ್ಯ ಹಿಂದೂವಾದದ ಸೋಂಕಿನಿಂದ ಕರ್ನಾಟಕವನ್ನು ತಾತ್ಕಾಲಿಕವಾಗಿ ಪಾರುಮಾಡಿದರು. ಎಲ್ಲ ಅಪವಾದಗಳ ಆಚೆಗೆ, ಎಲ್ಲ ವೈಫಲ್ಯಗಳಾಚೆಗೆ ಕರ್ನಾಟಕದಲ್ಲೊಬ್ಬ ಸಿದ್ದರಾಮಯ್ಯ ಎಂಬ ಜನನಾಯಕ ಕಾಂಗ್ರೆಸ್ಸಿನೊಳಗೆ ಇದ್ದದ್ದು ಕೂಡಾ ಬಿಜೆಪಿಗೆ ಕರ್ನಾಟಕದಲ್ಲಿ ಈ ತನಕ ಪೂರ್ಣ ಬಹುಮತ ಪಡೆಯಲು ಸಾಧ್ಯವಾಗದೆ ಹೋದದ್ದಕ್ಕೆ ಒಂದು ಕಾರಣ. ಇದರಾಚೆಗೆ, ಹಿಂದೂ ಮತೀಯವಾದದ ಸೋಂಕು ರಾಜಕೀಯದಲ್ಲೂ, ಸಮಾಜದಲ್ಲೂ ಕಂಡುಕೇಳರಿಯದ ಕೀವು-ಬಾವುಗಳನ್ನು ಉಂಟುಮಾಡಿದ್ದು ಸಿದ್ದರಾಮಯ್ಯ ಅವರ ಕಾಲದಲ್ಲೇ. ಆ ಸೋಂಕಿನ ನಿವಾರಣೆ ಬಿಡಿ, ಒಂದು ಸಣ್ಣ ಚುಚ್ಚು ಮದ್ದು ನೀಡುವ ಕೆಲಸವೂ ಸಿದ್ದರಾಮಯ್ಯ ಅವರ ಕಡೆಯಿಂದ ನಡೆಯಲಿಲ್ಲ ಎನ್ನುವುದು ನಿಜ. ಆದರೆ ಅದೇ ವೇಳೆ, ಇಡೀ ಕರ್ನಾಟಕದ ರಾಜಕೀಯದಲ್ಲಿ ಹಿಂದೂ ಮತೀಯವಾದವನ್ನು ಖಂಡಿಸುವ ಮತ್ತು ಟೀಕಿಸುವ ಕೆಲಸವನ್ನು ಅವರಷ್ಟಾದರೂ ಮಾಡುವ ಇನ್ನೋರ್ವ ಕಾಂಗ್ರೆಸ್ ಮುಖ್ಯಮಂತ್ರಿ ಅಥವಾ ಇನ್ನೋರ್ವ ಕಾಂಗ್ರೆಸ್ ಮೈತ್ರಿಕೂಟದ ಮುಖ್ಯಮಂತ್ರಿ ದೇಶದಲ್ಲಿ ಇಲ್ಲ ಎನ್ನುವುದು ಕೂಡಾ ವಾಸ್ತವ.
ಅರಸು ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಅವರದ್ದೇ ಆದ ಸ್ಪಷ್ಟ ಮತ್ತು ವಿಶಾಲ ಕಲ್ಪನೆ ಇತ್ತು, ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಕಲ್ಪನೆ ಸೀಮಿತ. ಸಾಮಾಜಿಕ ನ್ಯಾಯ ಎನ್ನುವ ಪದವನ್ನು ಅರಸು ಬಳಸಿದ್ದರೋ ಗೊತ್ತಿಲ್ಲ, ಆದರೆ ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಒಬ್ಬ ವಿದ್ವಾಂಸನಿಗಿರಬೇಕಾದ ಆಳವಾದ ಅರಿವು ಇತ್ತು, ತಮ್ಮ ಕಲ್ಪನೆಯ ಸಾಮಾಜಿಕ ನ್ಯಾಯವನ್ನು ಕಾರ್ಯರೂಪಕ್ಕಿಳಿಸಬೇಕಿದ್ದ ವ್ಯಾವಹಾರಿಕ ತಂತ್ರಗಳೂ ಕರಗತವಾಗಿದ್ದವು ಎನ್ನುವುದು ಆ ಕಾಲದ ಚರಿತ್ರೆಯಿಂದ ತಿಳಿಯುತ್ತದೆ. ಅರಸು ಅವರ ಆಡಳಿತಕ್ಕೆ ಸಾಕ್ಷಿಯಾಗಿದ್ದವರ ಮಾತುಗಳಿಂದ ತಿಳಿಯುತ್ತದೆ.
ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಆಳವಾದ ಕಾಳಜಿ ಇತ್ತು ಮತ್ತು ಇದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆ ಕಾಳಜಿಯೇ ಅವರನ್ನು ಇತರ ರಾಜಕಾರಣಿಗಳಿಗಿಂತ ಭಿನ್ನವಾಗಿ ತೋರುವಂತೆ ಮಾಡಿದ್ದು ಎನ್ನುವುದರಲ್ಲಿಯೂ ಯಾವ ಸಂಶಯವೂ ಇಲ್ಲ. ಆದರೆ ಸಾಮಾಜಿಕ ನ್ಯಾಯ ಅಂದರೆ ಏನು, ಎಷ್ಟು ಎನ್ನುವ ಸ್ಪಷ್ಟತೆ ಅವರಿಗೆ ಇದೆಯೇ? ಇದ್ದರೆ ಎಷ್ಟಿದೆ? ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಮೂಲಭೂತವಾಗಿ ತಾವೇ ದಿನನಿತ್ಯ ಪಠಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬಗೆಗೆ ಅವರಿಗೆ ಸ್ಪಷ್ಟತೆ ಇಲ್ಲವೆಂದಾದ ಮೇಲೆ ಅದನ್ನು ಜಾರಿಗೊಳಿಸಲು ಬೇಕಿರುವ ಪ್ರಾಯೋಗಿಕ ಜಾಣ್ಮೆ ಅವರಲ್ಲಿ ಇದೆಯೇ, ಇಲ್ಲವೇ ಎನ್ನುವುದು ಅಪ್ರಸ್ತುತ. ಒಂದಷ್ಟು ಹೆಚ್ಚು ಅನುದಾನ, ಆಯ್ದ ತಳವರ್ಗದ ಮಂದಿಗೆ ಒಂದಷ್ಟು ಸ್ಥಾನಮಾನ, ಅಲ್ಲೊಂದು ಇಲ್ಲೊಂದು ರೀತಿಯ ಹೆಚ್ಚಿನ ಸೌಲಭ್ಯ ಎನ್ನುವಷ್ಟಕ್ಕೆ ಬಹುತೇಕ ಸೀಮಿತವಾದ ಅವರ ಸಾಮಾಜಿಕ ನ್ಯಾಯ ಅವರ ನ್ಯಾಯಕತ್ವದ ಮಿತಿ. ಮೊದಲ ಜಾತಿ ಗಣತಿಯ ವರದಿಯನ್ನು ಜಾರಿಗೊಳಿಸಲು ಸಾಧ್ಯವಾಗದೆ ಹೋದದ್ದು, ಎರಡನೆಯ ಜಾತಿಗಣತಿಯ ವೇಳೆಗೆ ಎದ್ದ ಅಪಪ್ರಚಾರವನ್ನು ತಟಸ್ಥಗೊಳಿಸುವ ಯಾವ ಪ್ರಯತ್ನವೂ ನಡೆಯದೆ ಹೋದದ್ದು ಇತ್ಯಾದಿಗಳಿಗೆಲ್ಲಾ ಕಾರಣ ರಾಜಕೀಯ ಕಾರಣ ಎನ್ನುವುದಕ್ಕಿಂತ ಹೆಚ್ಚಾಗಿ, ಬದ್ಧತೆಯ ಕೊರತೆ ಎನ್ನುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಅವರಿಗೆ ಮತ್ತು ಅವರು ಕಿವಿಗೊಡುವ ಅವರ ಅಧಿಕಾರಿ-ಅಧಿಕಾರೇತರ ಸಲಹಾಗಾರರಿಗೆ ಈ ಕಾಲಕ್ಕೆ ಅನುಗುಣವಾದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದೆ ಹೋದದ್ದು ಅಂತಲೇ ಅನ್ನಿಸುತ್ತದೆ. ಇಷ್ಟೆಲ್ಲಾ ಆದರೂ ಸಾಮಾಜಿಕ ನ್ಯಾಯದ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡುವ ರಾಜ್ಯಮಟ್ಟದ ಏಕೈಕ ನಾಯಕ ಇಡೀ ದೇಶದಲ್ಲೇ ಸಿದ್ದರಾಮಯ್ಯ ಒಬ್ಬರೇ.
ಇದನ್ನು ಓದಿದ್ದೀರಾ?: ಸಿದ್ದರಾಮಯ್ಯ ನೆಪದಲ್ಲಿ ಮಾಂಸಾಹಾರ ಸಂಸ್ಕೃತಿ- ಪಶುಪಾಲಕ ಕರ್ನಾಟಕದ ಚರ್ಚೆಯಾಗಲಿ
ಅರಸು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ವೇಳೆಗೆ ಸಾಮಾಜಿಕ ನ್ಯಾಯ-ಕೇಂದ್ರಿತ ರಾಜಕಾರಣದ ಬಗ್ಗೆ ಇಡೀ ದೇಶ ಮಾತನಾಡುತಿತ್ತು. ಹಿಂದುಳಿದವರ ರಾಜಕೀಯ ಪ್ರವೇಶ ದೊಡ್ಡ ಮಟ್ಟದಲ್ಲಿ ಆಗದೆ ಇದ್ದರೂ, ತಳವರ್ಗಗಳತ್ತ ದೇಶದ ಸಂಪತ್ತು ಮತ್ತು ಸರಕಾರೀ ಯೋಜನೆಗಳು ಪ್ರವಹಿಸಬೇಕೆಂಬ ಕಾಳಜಿ ರಾಜಕಾರಣದ ಭಾಗವಾಗಿತ್ತು, ಮಾತ್ರವಲ್ಲ ಅಂದಿನ ಕೇಂದ್ರ ಸರಕಾರ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಜತೆ ಸುಮಾರು ಮೂರು ದಶಕಗಳ ಸುದೀರ್ಘ ಸಂಘರ್ಷದಲ್ಲೆ ತೊಡಗಿತ್ತು. ಹಾಗಾಗಿ ಅರಸು ಸಾಮಾಜಿಕ ನ್ಯಾಯದ ಕುರಿತಂತೆ ಆ ಮಟ್ಟಿನ ಬದ್ಧತೆ ತೋರುವುದು ಸಾಧ್ಯವಾಯಿತು. ಕಾಲ ಬದಲಾಗಿದೆ. ಈಗ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದವರ ಬ್ರಾಂಡ್ ವ್ಯಾಲ್ಯೂ ರಾಜಕೀಯದಲ್ಲಿ ದಿಢೀರ್ ಕುಸಿಯುತ್ತದೆ. ಹಾಗಿರುವಾಗಲೂ ಸಿದ್ದರಾಮಯ್ಯ ಅವರ ಹೆಚ್ಚುಗಾರಿಕೆ ಏನೆಂದರೆ, ಅವರಿಗೆ ಅರಸು ಅವರಷ್ಟು ಕಾರ್ಯದಲ್ಲಿ ಮಾಡಿತೋರಿಸುವ ಬದ್ಧತೆ ಇತ್ತೋ ಬಿಟ್ಟಿತೋ ಎನ್ನುವುದಕ್ಕಿಂತ ಹೆಚ್ಚಾಗಿ ರಾಜಕಾರಣದಿಂದ ಸಾಮಾಜಿಕ ನ್ಯಾಯದ ನುಡಿಗಟ್ಟುಗಳೇ ಅಳಿದು ಹೋದ ಕಾಲಕ್ಕೆ ಅವರು ಇಡೀ ದೇಶದಲ್ಲಿ ಏಕಾಕಿಯಾಗಿ ನಿಂತು ಸಾಮಾಜಿಕ ನ್ಯಾಯದ ಪರ ಗಟ್ಟಿ ಧ್ವನಿಯಲ್ಲಿ ಮಾತುಗಳನ್ನಾದರೂ ಆಡುತ್ತಿದ್ದಾರೆ ಎನ್ನುವುದು. ಹಾಗೆ ಮಾತನಾಡಿ ದೊಡ್ಡ ಜನವರ್ಗದ ವಿರೋಧ ಕಟ್ಟಿಕೊಂಡೂ ಅಧಿಕಾರದಲ್ಲಿ ಅರಸು ಅವರಿಗಿಂತಲೂ ಸುದೀರ್ಘ ಅವಧಿಗೆ ಅವರಿಗೆ ಇರುವುದಕ್ಕೆ ಸಾಧ್ಯ ಆಯಿತು ಎನ್ನುವುದು.
ಅರಸು ರಾಜಕೀಯದ ಪರೀಕ್ಷೆಯಲ್ಲಿ ಪ್ರಬುದ್ಧವಾದ ಪ್ರಬಂಧಗಳನ್ನು ಬರೆದು ಅಂಕಗಳನ್ನು ಪಡೆದವರಾದರೆ, ಸಿದ್ದರಾಮಯ್ಯ ಅದೇ ರಾಜಕೀಯ ಪರೀಕ್ಷೆಯಲ್ಲಿ ಬಹು-ಆಯ್ಕೆ ಮಾದರಿಯ (multiple choice questions) ಪ್ರಶ್ನೆಗಳನ್ನು ಉತ್ತರಿಸಿ ಅಂಕಗಳನ್ನು ಪಡೆದವರು. ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಶ್ರಮಕ್ಕಿಂತ ಹೆಚ್ಚು ಕೆಲವೊಮ್ಮೆ ಅದೃಷ್ಟವೂ ಕೆಲಸ ಮಾಡುತ್ತದೆ. ವಿದ್ವತ್ ಜಗತ್ತಿನಲ್ಲಿ ಬಹುಆಯ್ಕೆ ಪ್ರಶ್ನೆಗೆ ಉತ್ತರಿಸಿ ಪಡೆದ ಅಂಕಗಳಿಗೆ ಆಳ ಅರಿವಿನ ಪ್ರಬಂಧ ರೂಪದ ಉತ್ತರಗಳನ್ನು ಬರೆದು ಪಡೆದು ಅಂಕಗಳಷ್ಟು ಮಾನ್ಯತೆ ಇಲ್ಲ, ಕ್ಲಿಷ್ಟಕರವಾದ ಸಮಸ್ಯೆಗಳನ್ನು ಬಿಡಿಸಿ ಪಡೆದ ಅಂಕಗಳಷ್ಟು ಮಾನ್ಯತೆ ಇಲ್ಲ. ರಾಜಕೀಯ ಪರೀಕ್ಷೆಯ ಅಂಕಗಳು ಹಾಗಲ್ಲ. ರಾಜಕೀಯದಲ್ಲಿ ಬಹುಆಯ್ಕೆಯ ಪ್ರಶ್ನೆಗಳನ್ನು ಉತ್ತರಿಸಿ ಪಡೆದ ಅಂಕಗಳಿಗೂ ಅವುಗಳದ್ದೇ ಆದ ಮಾನ್ಯತೆ ಇದೆ.

ಎ. ನಾರಾಯಣ
ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಎ.ನಾರಾಯಣ ಅವರು ಪ್ರಖರ ರಾಜಕೀಯ ವಿಶ್ಲೇಷಕರೂ ಹೌದು. ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿರುವ ಅವರು, ತಮ್ಮ ವಿಶಿಷ್ಟ ಒಳನೋಟಗಳಿಂದ ಗಮನ ಸೆಳೆದಿದ್ದಾರೆ




