ಹಾವನೂರು ಆಯೋಗದ ವರದಿ ಜಾರಿ ಸಂದರ್ಭದಲ್ಲಿ ಬಂದ ತೀವ್ರ ಸ್ವರೂಪದ ಧಮಕಿಗೆ ತಲೆಬಾಗದೆ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಮೀಸಲಾತಿಯನ್ನು ಅನುಷ್ಠಾನಗೊಳಿಸಿದ ದೇವರಾಜ ಅರಸು ಎಲ್ಲಿ? ಬಲಿಷ್ಠ ಜಾತಿಗಳ ಗುಡುಗಿಗೆ ಶಿರ ಬಗ್ಗಿಸಿದ ಸಿದ್ದರಾಮಯ್ಯ ಎಲ್ಲಿ? ಇವರೀರ್ವರ ನಡುವೆ ಸಾಧನೆಯ ಸಾಮ್ಯತೆಯ ಸಾದೃಶ್ಯ ಮತ್ತು ಸಾಮಾಜಿಕ ನ್ಯಾಯದ ನಿಜ ಹರಿಕಾರ ಯಾರೆಂಬುದನ್ನು ನೀವೇ ನಿರ್ಧರಿಸಿ...
ದೇವರಾಜ ಅರಸು ಆಡಳಿತದ ಅವಧಿಯ ದಾಖಲೆಯನ್ನು ಸರಿಗಟ್ಟಿದ್ದಾರೆ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದೇನೋ ತಥ್ಯ. ಅದರಲ್ಲಿ ಯಾವ ಉತ್ಪೇಕ್ಷೆಯೂ ಇಲ್ಲ. ಈ ನಿಟ್ಟಿನಲ್ಲಿ ನಾಡಿನ ಪತ್ರಿಕೆಗಳೆಲ್ಲವೂ ತುಸು ಹೆಚ್ಚೇ ಎನ್ನಬಹುದಾದ ರೀತಿಯಲ್ಲಿ ಸುದ್ದಿ ಮಾಡಿವೆ. ಅಷ್ಟೇ ಅಲ್ಲ, ಅವರ ಹಿಂಬಾಲಕರೂ ಕೂಡ ಇಚ್ಛಾನುಸಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ, ಈ ದೆಸೆಯಲ್ಲಿ ನಾಟಿ ಕೋಳಿ ಬಿರಿಯಾನಿಯನ್ನೂ ವಿತರಿಸಿದ್ದಾರೆ. ಇವಾವು ಆಕ್ಷೇಪಿತವಲ್ಲ. ಈ ಆಡಳಿತದ ಕಾಲಾವಧಿಯನ್ನು ಬ್ರೇಕ್ ಮಾಡಿದ ಸಂಗತಿ ಇನ್ನೂ ಕೆಲ ದಿನ ಸುದ್ದಿಯಲ್ಲಿರುತ್ತದೆ.
ದಾಖಲೆಯೋ ಅಥವಾ ಸಾಧನೆಯೋ?
ಈ ಇಬ್ಬರ ನಡುವಿನ ಆಡಳಿತದ ಕಾಲಾವಧಿಯ ದಾಖಲೆಯನ್ನಷ್ಟೇ ಗಣನೆಗೆ ತೆಗೆದುಕೊಳ್ಳಬಹುದೇ ಅಥವಾ ಅವರ ಸಾಧನೆಗಳನ್ನೂ ಒರೆಗೆ ಹಚ್ಚಬಹುದೇ ಎಂಬುದು ಚರ್ಚಾಸ್ಪದ. ಅದಾದರೆ, ಈರ್ವರ ಸಾಧನೆಗಳು ಮಾನದಂಡಗಳಾಗಬೇಕೆ ವಿನಾ ನಂಬರ್ ಗೇಮ್ ಅಲ್ಲ ಎಂಬುದು ಮುನ್ನೆಲೆಗೆ ಬರುತ್ತದೆ. ಇಬ್ಬರೂ ಸಾಮಾಜಿಕ ನ್ಯಾಯದ ಪರ ಇದ್ದವರು ಅಥವಾ ಇದ್ದಾರೆ ಎಂದೇ ಸದ್ಯಕ್ಕೆ ಇಟ್ಟುಕೊಳ್ಳೋಣ. ಈ ವಿಷಯದಲ್ಲಿ ಹಿಂದುಳಿದ ವರ್ಗಗಳಿಗೆ ಅಕೃತ್ರಿಮವಾಗಿ ಸಾಮಾಜಿಕ ನ್ಯಾಯ ನೀಡಿದವರು ಯಾರು ಎಂಬ ಪ್ರಶ್ನೆ ಉಗಮಿಸುತ್ತದೆ. ಈ ಒಂದೇ ವಿಷಯದ ಮೇಲೆ ತರ್ಕಿಸುವುದಾದರೆ, ಮೊದಲಿಗೆ ದೇವರಾಜ ಅರಸರ ಸಾಮಾಜಿಕ ನ್ಯಾಯದ ನಿಲುವು ಏನಿತ್ತು, ಅದನ್ನು ಯಾವ ರೀತಿ ಅಪೂರ್ವ ಸಾಧನೆಯಾಗಿ ಪರಿವರ್ತಿಸಿಕೊಂಡರು ಎಂಬುದು.
ಇದನ್ನು ಓದಿದ್ದೀರಾ?: ಅರಸು – ಸಿದ್ದರಾಮಯ್ಯ: ʼಬದಲಾದ ಕಾಲಘಟ್ಟದ ಪಾತ್ರʼಕ್ಕೆ ಸಿಗದ ವಿಶ್ಲೇಷಣಾ ನ್ಯಾಯ
ಸ್ವಾತಂತ್ರ್ಯೋತ್ತರ ಭಾರತದ ಕರ್ನಾಟಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಪದವಿಗೆ ಏರುವ ಮುನ್ನ ಕರ್ನಾಟಕದ ಆಡಳಿತ ಎರಡು ಪ್ರಬಲ ಜಾತಿಗಳ ನಡುವೆ ಹೊಯ್ದಾಡುತ್ತಿತ್ತು. ಇಂತಹ ಕಾಲಘಟ್ಟದಲ್ಲಿ, ಕನಸಿನ ಕರ್ನಾಟಕವನ್ನು ಕಟ್ಟಬೇಕೆಂಬ ಮಹಾದಾಸೆಯಿಂದ, ಎರಡು ಬಲಿಷ್ಠ ಕೋಮುಗಳ ನಡುವೆ ನುಸುಳಿ ಅಧಿಕಾರ ಗಿಟ್ಟಿಸಲು ಅವಕಾಶ ಮಾಡಿಕೊಂಡರು ಅರಸು. ಅರಸು ಮೂಲತಃ ಕ್ಷತ್ರಿಯರಾದರೂ ಅಲ್ಪಸಂಖ್ಯಾತರು. ಅವರು ಅಷ್ಟೇನೂ ಸಿರಿವಂತರಾಗಿರಲಿಲ್ಲ. ಸ್ವತಃ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ಒಬ್ಬ ಸಾಮಾನ್ಯ ರೈತ. ರಾಜಕೀಯಕ್ಕೆ ಬರುವ ಮುನ್ನ ಹಳ್ಳಿಗರ ಜಾತಿ ವ್ಯವಸ್ಥೆ ಮತ್ತು ಅದರಲ್ಲಿರುವ ಮೇಲು-ಕೀಳು ಎಂಬ ಅಸಮಾನತೆ-ತಾರತಮ್ಯವನ್ನು ಕಣ್ಣಾರೆ ಕಂಡಿದ್ದರು. ಈ ಜಾತಿಗಳ ಅಸಮಾನತೆಯಿಂದ ಯಾತನೆ ಅನುಭವಿಸುತ್ತಿರುವವರ ಪರ ಸ್ಪಂದಿಸಬೇಕೆಂಬುದು ಅವರ ಮನದಾಳದ ಇಚ್ಛೆಯಾಗಿತ್ತು. ಅದಕ್ಕಾಗಿಯೋ ಏನೋ, ಅವರ ಪಾಲಿಗೆ ಅಧಿಕಾರ ಒಲಿದು ಬಂತು.
ಮುಖ್ಯಮಂತ್ರಿ ಅರಸು:
1972ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೇರಿದರು. ಮುಖ್ಯಮಂತ್ರಿ ಹುದ್ದೆ ಮೋಜು-ಮಸ್ತಿ ಮಾಡುವುದಕ್ಕಲ್ಲ ಎಂಬುದನ್ನು ಬಲ್ಲವರಾಗಿದ್ದ ಅರಸು ಕಾಲದಿಂದ ನನೆಗುದಿಗೆ ಬಿದ್ದಿದ್ದ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂಬ ಹೆಬ್ಬಯಕೆಯಿಂದ ಸಂವಿಧಾನದ ವಿಧಿಗಳನ್ನನುಸರಿಸಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದರು. ಕರ್ನಾಟಕದಲ್ಲಿ ಅದು ಮೊದಲನೆಯದಾಗಿತ್ತು. ಅದರ ಅಧ್ಯಕ್ಷತೆಯನ್ನು ಸ್ವತಃ ಬಡತನದ ಒಳಗುದಿಯಿಂದ ಮೇಲೆ ಬಂದು ವಕೀಲಿ ವೃತ್ತಿ ಕೈಗೊಂಡು ಪ್ರಸಿದ್ಧರಾಗಿದ್ದ ಎಲ್.ಜಿ. ಹಾವನೂರ್ ಅವರಿಗೆ ವಹಿಸಿದರು. ಆರು ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದ ಸದಸ್ಯರನ್ನೂ ನೇಮಿಸಿದರು.

ವರದಿ ಸಲ್ಲಿಕೆ:
ಮೂರು ವರ್ಷಗಳ ಅವಧಿಯಲ್ಲಿ ಹಾವನೂರ್ ಸಮಸ್ತ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಂಶಗಳನ್ನು ವಿಶ್ಲೇಷಿಸಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಸಮಗ್ರ ವರದಿಯೊಂದನ್ನು ಸರ್ಕಾರಕ್ಕೆ 1975ರಲ್ಲಿ ಸಲ್ಲಿಸಿದರು.
ವರದಿ ವಿರುದ್ಧ ಹೂಂಕಾರ:
ರಾಜ್ಯಾದ್ಯಂತ ವರದಿಯಲ್ಲಿ ಸೇರಿರದ ಜಾತಿಗಳು ಅದರಲ್ಲೂ ಪ್ರಮುಖವಾಗಿ ಲಿಂಗಾಯತರು ವರದಿಯನ್ನು ನಖಶಿಖಾಂತ ವಿರೋಧಿಸಿದರು. ವೀರಶೈವ ಮಹಾಸಭಾ ಅಧ್ಯಕ್ಷ ಮಲ್ಲಾರಾಧ್ಯ ಪತ್ರಿಕಾಗೋಷ್ಠಿಯಲ್ಲಿ ವರದಿ ವಿರುದ್ಧ ಘರ್ಜಿಸಿದರು. ತರಳಬಾಳು ಜಗದ್ಗುರುಗಳು ವರದಿ ಸಂವಿಧಾನಬದ್ಧವಾಗಿಲ್ಲ ಎಂದು ಹೇಳಿ, ಜಾತಿ ಆಧಾರದ ಮೇಲೆ ಜನರನ್ನು ವಿಂಗಡಿಸಲು ಮುಂದಾದಲ್ಲಿ ಧರ್ಮ ಮತ್ತು ಸರ್ವವಿಧ ಸಮಾನತೆಯು ಉಳಿಯುವುದೇ ಇಲ್ಲ ಎಂದರು. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಮತ್ತು ಕೇಂದ್ರದ ಮಾಜಿ ಮಂತ್ರಿ ವಿ.ಕೆ.ಆರ್.ವಿ.ರಾವ್ ಹಾಗೂ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಚ್. ಕೃಷ್ಣರಾವ್ ಮುಂತಾದವರು ವರದಿಯನ್ನು ವಿರೋಧಿಸಿ ಚಳವಳಿಗೆ ಸ್ವಜನರನ್ನು ಪ್ರಚೋದಿಸಿದರು. ಅಂದು ವಿಧಾನಸಭಾ ಸದಸ್ಯರಾಗಿದ್ದ ಭೀಮಣ್ಣ ಖಂಡ್ರೆ ವರದಿಯನ್ನು ವಿಧಾನಸಭಾಂಗಣದಲ್ಲಿಯೇ ಕೋಪೋದ್ರಿಕ್ತರಾಗಿ ಬೆಂಕಿ ಇಟ್ಟು ಸುಟ್ಟರು. ಹೀಗೆ ದಾಂಧಲೆ ನಾನಾ ರೀತಿಯಲ್ಲಿ ಮುಂದುವರಿದೇ ಇತ್ತು.
ವರದಿ ಅನುಷ್ಠಾನ:
ಛಲ ಬಿಡದ ತ್ರಿವಿಕ್ರಮನಂತೆ, ದಾಂಧಲೆಗೆ ಕಿಂಚಿತ್ತು ಅಳುಕದೇ ಹಿಂದುಳಿದ ವರ್ಗಗಳ ಕರುಣಾಮಯಿಯಾದ ಅರಸು ವರದಿಯನ್ನು ಅನುಸರಿಸಿ 1977ರ ಪ್ರಾರಂಭದ ತಿಂಗಳಲ್ಲಿ ಮೀಸಲಾತಿಯನ್ನು ಜಾರಿಗೆ ಕೊಟ್ಟೆ ಬಿಟ್ಟರು. ಮೀಸಲಾತಿಯಿಂದ ಹಂತ ಹಂತವಾಗಿ ಸಾವಿರಾರು ಹಿಂದುಳಿದ ವರ್ಗಗಳ ಮಂದಿ ಸರ್ಕಾರದ ಸೇವೆಗಳಲ್ಲಿ ಹುದ್ದೆಗಳನ್ನು ಪಡೆದು ಅದರ ಫಲಾನುಭವಿಗಳಾದರು. ಹಾವನೂರು ವರದಿಯ ಅನುಷ್ಠಾನ ಅರಸರಿಗೆ ಹಿಂದುಳಿದ ವರ್ಗಗಳ ಬಗ್ಗೆ ಇದ್ದ ಅಂತಃಕರಣ ಎಂಥದ್ದು ಎಂದು ತೋರಿಸುತ್ತದೆ. ಇದು ದೇವರಾಜ ಅರಸರ ಬದ್ಧ ಸಾಮಾಜಿಕ ನ್ಯಾಯ. ಸಾಮಾಜಿಕ ನ್ಯಾಯದ ಮತ್ತೊಂದು ಮಹತ್ ಸಾಧನೆ ಎಂದರೆ, ಅವರು ಆಯ್ಕೆ ಮಾಡಿ ವಿಧಾನಸಭೆಗೆ ಗೆಲ್ಲಿಸಿಕೊಂಡಿದ್ದ ಅತ್ಯಂತ ತಳ ಸಮುದಾಯಗಳ ಮಂದಿ ದೀರ್ಘಕಾಲ ರಾಜಕೀಯದಲ್ಲಿ ಉಳಿದುಕೊಂಡಿದ್ದು. ಸರ್ವರಿಗೂ ಸಮಪಾಲು ಸಮಬಾಳು ಎಂಬ ಸಿದ್ಧಾಂತದ ಹರಿಕಾರನಾಗಿ ಅರಸು ಹಿಂದುಳಿದ ವರ್ಗಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಸಿದ್ದರಾಮಯ್ಯ ಮತ್ತು ಸಾಮಾಜಿಕ ನ್ಯಾಯ:
ಹಿಂದುಳಿದ ಜಾತಿಯಿಂದಲೇ ಬಂದ ಸಿದ್ದರಾಮಯ್ಯ ಅಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಿ.ಪರಮೇಶ್ವರ್ ವಿಧಾನಸಭೆಗೆ ಆರಿಸಿ ಬರದ ಕಾರಣ ಅನಾಯಾಸವಾಗಿ ಮುಖ್ಯಮಂತ್ರಿ ಗದ್ದುಗೆ ಏರಿದರು. ಇವರ ಕಾಲಾವಧಿಯಲ್ಲಿ ಹಿಂದುಳಿದವರ ಮೀಸಲಾತಿಗೆ ಸಂಬಂಧಿಸಿದ ಹಾಗೆ ಯಾವ ದೃಗ್ಗೋಚರ ಸ್ವರೂಪದ ಬದಲಾವಣೆ ಕಾಣಬರಲಿಲ್ಲ. ಆದರೆ 2004ರಲ್ಲಿ ಜನತಾದಳ ಪಕ್ಷದಿಂದ ಉಪಮುಖ್ಯಮಂತ್ರಿಯಾಗಿ- ಅರ್ಥ ಸಚಿವನಾಗಿ ಜಾತಿ-ಜನಗಣತಿ ನಡೆಸುವುದಕ್ಕಾಗಿ ಬಜೆಟ್‌ನಲ್ಲಿ ಹಣ ಕಾದಿರಿಸಿದ್ದುದು ಸಾಮಾಜಿಕ ನ್ಯಾಯದ ಕಡೆಗೆ ಸಿದ್ದರಾಮಯ್ಯ ಎಂಬ ಹೆಗ್ಗಳಿಕೆಯನ್ನೇನೋ ಗಳಿಸಿದರು. ಆದರೆ ಜಾತಿ-ಜನಗಣತಿ ವಿವಿಧ ಕಾರಣಗಳಿಂದ ಅಂದು ಕಾರ್ಯರೂಪಕ್ಕೆ ಬರಲಿಲ್ಲ ಎಂಬುದು ಬೇರೆ ಮಾತು.
ಇದನ್ನು ಓದಿದ್ದೀರಾ?: ‘ಸಿದ್ದರಾಮಯ್ಯನವರೇ… ದಾಖಲೆ ನಿರ್ಮಿಸುವುದಲ್ಲ, ಇತಿಹಾಸದಲ್ಲಿ ದಾಖಲಾಗುವುದು ಮುಖ್ಯ!’
2013ರಲ್ಲಿ ಮುಖ್ಯಮಂತ್ರಿ:
ಸಾಮಾಜಿಕ ನ್ಯಾಯ ಮತ್ತು ‘ಅಹಿಂದ’ ಪರಿಕಲ್ಪನೆಯಡಿಯಲ್ಲಿ ಮುಖ್ಯಮಂತ್ರಿ ಹುದ್ದೆ ಗಳಿಸಿದ ನಂತರದಲ್ಲಿ, ಜಾತಿ-ಜನಗಣತಿ ಮಾಡುವುದಾಗಿ ಘೋಷಿಸಿದರು. ಅದಕ್ಕನುಗುಣವಾಗಿ ಹಿಂದುಳಿದ ಆಯೋಗಕ್ಕೆ ಒಂದು ಹೊಸ ರೂಪ ಕೊಟ್ಟರು. ತನ್ನವರೊಬ್ಬರನ್ನು ಆಯೋಗದ ಅಧ್ಯಕ್ಷರನ್ನಾಗಿಸಿದರು. ಆಯೋಗ ಸಕಲ ಸಿದ್ಧತೆಗಳೊಡನೆ 2015ರಲ್ಲಿ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ”ಯನ್ನು ಕೈಗೊಂಡಿತು. ಇದು ರಾಷ್ಟ್ರದಲ್ಲೇ ಮೊದಲನೇ ಜಾತಿ-ಜನಗಣತಿ ಎಂದು ಹೆಸರು ಪಡೆದುಕೊಂಡಿತು. ಆದರೆ ವಾಸ್ತವದಲ್ಲಿ ತಮಿಳುನಾಡಿನಲ್ಲಿ 1982ರಲ್ಲಿ ಅಂಬಾ ಶಂಕರ್ ಆಯೋಗ ಮೊತ್ತ ಮೊದಲ ಬಾರಿಗೆ ಜಾತಿ-ಜನಗಣತಿ ಮಾಡಿದ್ದುದು ದಾಖಲೆಯಾಗಿ ಉಳಿದಿದೆ.
ಹಿಂದುಳಿದ ವರ್ಗಗಳ ಆಯೋಗ, ಸಮೀಕ್ಷೆಯ ದತ್ತಾಂಶಗಳು ಮತ್ತು ಅದಕ್ಕೆ ಸಂಬಂಧಿಸಿದ ವರದಿಯನ್ನು ಸಿದ್ಧಪಡಿಸಿಕೊಂಡು ಸಿದ್ದರಾಮಯ್ಯನವರಿಗೆ ಸಲ್ಲಿಸಲು ಅಣಿಯಾಗಿತ್ತು. ಸನಿಹದಲ್ಲೆ 2018ರ ವಿಧಾನ ಸಭೆಗೆ ಚುನಾವಣೆ ಘೋಷಣೆಯಾಗುವುದರಲ್ಲಿತ್ತು. ಸಿದ್ದರಾಮಯ್ಯನವರ ಅತಿಶಯ ಆತ್ಮವಿಶ್ವಾಸವೋ ಅಥವಾ ಧನುಷ್ಠಂಕಾರವೋ ದತ್ತಾಂಶವನ್ನು ಚುನಾವಣೆ ಮುಗಿದ ನಂತರ ಸ್ವೀಕರಿಸುವುದಾಗಿ ಹೇಳಿದರೆಂಬುದು. ಅದಕ್ಕಿರುವ ಕಾರಣ ಚುನಾವಣೆಯಲ್ಲಿ ಗೆದ್ದೇ ತೀರುತ್ತೇನೆ ಎಂಬ ಹುಂಬತನ ಇದ್ದಿರಬಹುದು. ಸಾಕಷ್ಟು ಕೆಲಸ ಮಾಡಿದ್ದೇನೆ, ಆದ್ದರಿಂದ ಕರ್ನಾಟಕದ ಜನತೆ ನನ್ನ ಕೈಬಿಡರು ಎಂಬ ಪ್ರಬಲವಾದ ನಂಬಿಕೆಯೂ ಇರಬಹುದು. ಆದರೆ ನಿರೀಕ್ಷೆ ಹುಸಿಯಾಗಿ, ಜನತಾದಳದೊಡನೆ ಸಮ್ಮಿಶ್ರ ಸರ್ಕಾರ ರಚಿಸುವಂತಾಯಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು ಮತ್ತು ಸಿದ್ದರಾಮಯ್ಯನವರು ಸಮನ್ವಯ ಸಮಿತಿಯ ಅಧ್ಯಕ್ಷರಾದರು. ಆಯೋಗದ ದತ್ತಾಂಶ ಮತ್ತು ವರದಿಯನ್ನು ಸ್ವೀಕರಿಸಿ ಎಂದು ಒಬ್ಬ ಸಮನ್ವಯ ಸಮಿತಿಯ ಅಧ್ಯಕ್ಷನಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಗೆ ಹೇಳುವುದರಲ್ಲಿ ಅನೂಹ್ಯ ಕಾರಣದಿಂದ ವಿಫಲರಾದರು. ಜೊತೆಗೆ ಬಲಿಷ್ಠ ಜಾತಿಗಳ ಧಮ್ಕಿಗೆ ಸಿದ್ದರಾಮಯ್ಯ ಬೆದರಿದರು.
ಕೇವಲ 14 ತಿಂಗಳಲ್ಲಿಯೇ ಯಡಿಯೂರಪ್ಪನವರ “ಮಂತ್ರ ಜಾಲ”ದಿಂದ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ನಂತರದ ದಿನಗಳಲ್ಲಿ ಭಾಜಪ ಅಧಿಕಾರ ಅನುಭವಿಸಿತು. ಭಾಜಪದ ದುರಾಡಳಿತದಿಂದ, 2023ರಲ್ಲಿ ನೇತ್ಯಾತ್ಮಕ ಮತಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರೇ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಭಾಜಪ ಸರ್ಕಾರದ ವೇಳೆಯಲ್ಲಿ ಆಯೋಗದ ಪದಾಧಿಕಾರಿಗಳು ಬದಲಾಗಿದ್ದರು. ಆಯೋಗದ ಪದಾಧಿಕಾರಿಗಳ ಅವಧಿ ಮುಗಿದಿದ್ದರೂ ಅದೇ ಅಧಿಕಾರಿಗಳನ್ನು ಒಂದು ವರ್ಷ ಮುಂದುವರಿಸಿದರು ಸಿದ್ದರಾಮಯ್ಯ. ಆಯೋಗ ಮತ್ತು ಸರ್ಕಾರದ ನಡುವೆ ನಡೆದ ಒಡಂಬಡಿಕೆ ಏನು ಎಂಬುದು ಯಾರಿಗೂ ತಿಳಿಯಲಿಲ್ಲ. ಕೊನೆಗೂ, ಸಿದ್ದರಾಮಯ್ಯ ಮನಸ್ಸು ಮಾಡಿ 2024 ಫೆಬ್ರವರಿ ತಿಂಗಳಲ್ಲಿ ದತ್ತಾಂಶ ಮತ್ತು ವರದಿಯನ್ನು ಸ್ವೀಕರಿಸಿದರು. ಇದು ಒಂದು ದೊಡ್ಡ ಸುದ್ದಿ ಆಯಿತು. ಮತ್ತೊಂದೆಡೆ, ಎರಡು ಬಲಿಷ್ಠ ಜಾತಿಗಳ ಧಮ್ಕಿಗೆ ಸಿದ್ದರಾಮಯ್ಯನವರ ಜಂಘಾಬಲವೇ ಅಷ್ಟರಲ್ಲಿ ಉಡುಗಿ ಹೋಗಿತ್ತು. ಆ ಬಲಿಷ್ಠ ಜಾತಿಗಳು ಬೀದಿಗೆ ಬಂದು ದಾಂಧಲೆ ಎಬ್ಬಿಸಲಿಲ್ಲ. ಕೇವಲ ನಾಲ್ಕು ಗೋಡೆಗಳ ನಡುವೆ ಹಾಕಿದ್ದ ಬೆದರಿಕೆಗೆ ಮಣಿದು ಹೋದ ಸಿದ್ದರಾಮಯ್ಯ ದತ್ತಾಂಶ ಮತ್ತು ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಪ್ರಹಸನವಾಡಿ, ಕೊನೆಗೂ ದತ್ತಾಂಶ ಮತ್ತು ವರದಿಯನ್ನು ಸರ್ಕಾರ ಸ್ವೀಕರಿಸಿದೆ ಎಂಬುದನ್ನೂ ಹೇಳಲಿಲ್ಲ ಮತ್ತು ಸಾರ್ವಜನಿಕ ಅವಗಾಹನೆಗೂ ಬಿಡುಗಡೆ ಮಾಡಲಿಲ್ಲ. ಎಲ್ಲವೂ ಗಪ್ ಚುಪ್. ಒಟ್ಟಿನಲ್ಲಿ 160 ಕೋಟಿ ಖರ್ಚು ಮಾಡಿ 2015ರಲ್ಲಿ ನಡೆಸಿದ್ದ ಸಮೀಕ್ಷೆಯ ದತ್ತಾಂಶಗಳು ವಿಧಾನಸೌಧದ ಗಠಾರದಲ್ಲಿ ಕೊಚ್ಚಿಹೋದವು. ಇದೊಂದು ಸಿದ್ದರಾಮಯ್ಯನವರಿಗಿದ್ದ ಸಾಮಾಜಿಕ ನ್ಯಾಯದ ದೃಷ್ಟಾಂತ!

ಇದನ್ನು ಓದಿದ್ದೀರಾ?: ದೇವರಾಜ ಅರಸು-ಸಿದ್ದರಾಮಯ್ಯ: ಸಾಧನೆಯಲ್ಲಿ ಸಮಾನತೆ ಇದೆಯೇ?
ಸಿದ್ದರಾಮಯ್ಯನವರು ತಮ್ಮ ಓತಪ್ರೋತ ಮಾತುಗಾರಿಕೆಯಿಂದ, ಹಿಂದುಳಿದ ವರ್ಗಗಳನ್ನು ಅದರಲ್ಲೂ ದಮನಿತ ಹಿಂದುಳಿದ ವರ್ಗಗಳನ್ನು ಮರಳು ಮಾಡಿಕೊಂಡೇ ಬಂದರು. ಯಾವುದೇ ಹಿಂದುಳಿದ ಜಾತಿಗಳ ಸಮಾವೇಶದಲ್ಲೆ ಆಗಲಿ ಅಥವಾ ಆಯೋಗ ನೀಡಿದ ವರದಿಯನ್ನು ಬಿಡುಗಡೆ ಮಾಡಿ ಎಂದು ಮನವಿ ಅರ್ಪಿಸಲು ಹೋದವರ ಜೊತೆಯಲ್ಲಾಗಲಿ ಸಿದ್ದರಾಮಯ್ಯನವರ ಬಡಿವಾರವೆಂದರೆ ನಾನು ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿದ್ದೇನೆ; ವರದಿಯನ್ನು ಬಿಡುಗಡೆ ಮಾಡಿಯೇ ತೀರುತ್ತೇನೆ ಎಂಬುದು. ಇದು ಅವರ ಬೋಳೇ ಸ್ವಭಾವದ ಮಾತಾಗಿತ್ತು. ಈ ವಿಷಯಗಳೆಲ್ಲ ಕರ್ನಾಟಕದ ಜನತೆಯ ಮುಂದೆ ಜನಜನಿತವಾಗಿ ಹೋಗಿವೆ. ಸಿದ್ದರಾಮಯ್ಯ ರಾಜಕೀಯ ಅಧಿಕಾರದ ಕಾರಣವೋ ಏನೋ, ಬಲಾಢ್ಯ ಜಾತಿಗಳ ಬೆದರಿಕೆಯ ಮಾತುಗಳಿಗೆ ಶರಣಾದರು. ಅಷ್ಟೇ ಅಲ್ಲದೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಅಸ್ಪೃಶ್ಯ ಅಲೆಮಾರಿಗಳಿಗೆ ಶೇಕಡ ಒಂದರಷ್ಟು ಮೀಸಲಾತಿಯನ್ನು ಕೊಡದ ನಿಷ್ಕರುಣಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರರೇ?
ಹಾವನೂರು ಆಯೋಗದ ವರದಿಯನ್ನು ಜಾರಿಗೆ ಕೊಡುವ ಸಂದರ್ಭದಲ್ಲಿ, ಬಂದ ತೀವ್ರ ಸ್ವರೂಪದ ಧಮಕಿಗೆ ತಲೆಬಾಗದೆ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಮೀಸಲಾತಿಯನ್ನು ಅನುಷ್ಠಾನಗೊಳಿಸಿದ ದೇವರಾಜ ಅರಸು ಎಲ್ಲಿ? ಬಲಿಷ್ಠ ಜಾತಿಗಳ ಗುಡುಗಿಗೆ ಶಿರ ಬಗ್ಗಿಸಿದ ಸಿದ್ದರಾಮಯ್ಯ ಎಲ್ಲಿ?
ಇವರೀರ್ವರ ನಡುವೆ ಸಾಧನೆಯ ಸಾಮ್ಯತೆಯ ಸಾದೃಶ್ಯ ಮತ್ತು ಸಾಮಾಜಿಕ ನ್ಯಾಯದ ನಿಜ ಹರಿಕಾರ ಯಾರೆಂಬುದನ್ನು ಹೇಳಬಹುದಲ್ಲವೇ?

ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.




