ದೇವದುರ್ಗ ಟೋಲ್ ವಿವಾದವು ಸಾರ್ವಜನಿಕರ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ ಮತ್ತು ರಸ್ತೆ ಸಂಚಾರದಲ್ಲಿ ಅನಾವಶ್ಯಕ ತೊಂದರೆ ಉಂಟುಮಾಡುತ್ತದೆಂಬ ಆಕ್ರೋಶವನ್ನು ಎದುರಿಸಿದೆ. ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಈ ವಿಷಯದಲ್ಲಿ ತ್ವರಿತ ತನಿಖೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಂಡರೆ ಒಳಿತಾಗಬಹುದು.
ರಾಜ್ಯ ಹೆದ್ದಾರಿಗಳ ನಿರ್ವಹಣೆಗಾಗಿ ವಾಹನಗಳಿಂದ ಟೋಲ್ ಶುಲ್ಕ ವಸೂಲಿ ಮಾಡುವ ವ್ಯವಸ್ಥೆ ಜಾರಿಯಲ್ಲಿದ್ದರೂ, ಸರ್ಕಾರದ ನಿಯಮಾವಳಿ ಪ್ರಕಾರ ಒಂದು ಟೋಲ್ ಗೇಟ್‌ನಿಂದ ಇನ್ನೊಂದು ಟೋಲ್ ಗೇಟ್‌ಗೆ ಕನಿಷ್ಠ 60 ಕಿಲೋಮೀಟರ್ ಅಂತರ ಇರಬೇಕೆಂಬ ನಿಯಮವಿದೆ. ಆದರೆ ರಾಯಚೂರು ಜಿಲ್ಲೆಯ ದೇವದುರ್ಗ ವ್ಯಾಪ್ತಿಯ ಕಲ್ಮಲಾ–ತಿಂಥಿಣಿ ರಾಜ್ಯ ಹೆದ್ದಾರಿಯಲ್ಲಿ ಕೇವಲ 40 ಕಿಮೀ ಅಂತರದಲ್ಲಿ ಎರಡು ಟೋಲ್ ಗೇಟ್‌ಗಳನ್ನು ಅಳವಡಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಅವೈಜ್ಞಾನಿಕ ಟೋಲ್ ವ್ಯವಸ್ಥೆ ವಿರುದ್ಧ ಕ್ಷೇತ್ರದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ, ರಸ್ತೆ ತಡೆ, ಟೋಲ್ ಗೇಟ್‌ಗಳ ಮೇಲೆ ದಾಳಿ ಸೇರಿದಂತೆ ಹಲವು ಹೋರಾಟಗಳು ನಡೆದಿವೆ. ಜನರ ವಿರೋಧದ ನಡುವೆಯೂ ಟೋಲ್ ಸಂಗ್ರಹ ನಿಲ್ಲದಿರುವುದು ಸಾರ್ವಜನಿಕರಲ್ಲಿ ಅನುಮಾನ ಮತ್ತು ಅಸಮಾಧಾನವನ್ನು ಹೆಚ್ಚಿಸಿದೆ.
ಕಲ್ಮಲಾ–ತಿಂಥಿಣಿ ಮಾರ್ಗದೊಳಗೆ ಕಾಕರಗಲ್ ಮತ್ತು ಜಾಲಹಳ್ಳಿ ಗ್ರಾಮಗಳಲ್ಲಿ ಟೋಲ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಈ ಮಾರ್ಗದಲ್ಲಿ ಯಾವುದೇ ಪ್ರಮುಖ ಕೈಗಾರಿಕೆಗಳು ಇಲ್ಲ, ಭಾರೀ ವಾಹನ ಸಂಚಾರವೂ ಇಲ್ಲ. ಅಲ್ಲದೆ ಇದು ರಾಷ್ಟ್ರೀಯ ಹೆದ್ದಾರಿಯೂ ಅಲ್ಲ ಎಂಬುದು ಸ್ಥಳೀಯರ ವಾದ. ದೇವದುರ್ಗ ತಾಲೂಕು ಹಿಂದುಳಿದ ಪ್ರದೇಶವಾಗಿರುವಾಗ ಟೋಲ್ ಅಗತ್ಯವೇ ಇಲ್ಲ ಎನ್ನುವುದು ಜನಾಭಿಪ್ರಾಯವಾಗಿದೆ.

ಈ ಕುರಿತು ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪತ್ರ ಬರೆದು ಟೋಲ್ ಗೇಟ್‌ಗಳನ್ನು ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನೆಲದ ಮೇಲೆಯೇ ಕುಳಿತು ಧರಣಿ ನಡೆಸಿದ್ದೂ ಆಗಿದೆ. ಬಳಿಕ ಕೆಲ ದಿನಗಳು ಟೋಲ್ ಸಂಗ್ರಹ ಸ್ಥಗಿತಗೊಂಡಿತ್ತು. ಆದರೆ ಮತ್ತೆ ಯಥಾಪ್ರಕಾರ ಟೋಲ್ ವಸೂಲಿ ಆರಂಭವಾಗಿದೆ” ಎಂದು ಹೇಳಿದರು.

“ಎರಡು ಟೋಲ್ ಗೇಟ್‌ಗಳಲ್ಲಿ ಟೋಲ್ ಸಂಗ್ರಹ ರದ್ದುಪಡಿಸಬೇಕೆಂದು ಒತ್ತಾಯಿಸಿ ಕಾಕರಗಲ್ ಟೋಲ್ ಗೇಟ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದೇವೆ. ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿಯೂ ಟೋಲ್ ರದ್ದುಪಡಿಸುವಂತೆ ಆಗ್ರಹಿಸಲಾಗಿದೆ. ಆದರೆ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು, ಟೋಲ್ ದಂಧೆ ಮುಂದುವರೆದಿದೆ” ಎಂದು ಆರೋಪಿಸಿದರು.
“ದೇವದುರ್ಗ ಮೊದಲೇ ಹಿಂದುಳಿದಿರುವ ಪ್ರದೇಶ. ಇಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು ಸಂಚಾರ ಮಾಡುತ್ತಾರೆ. ತಮ್ಮ ಹೊಲ ಜಮೀನುಗಳಿಗೆ ಹೋಗುವ ಹೆಣ್ಣುಮಕ್ಕಳು ಈ ರಸ್ತೆಯಲ್ಲಿ ತಿರುಗುತ್ತಾರೆ. ಹೀಗಿರುವಾಗ ಇಲ್ಲಿ ಅವೈಜ್ಞಾನಿಕವಾಗಿ ಟೋಲ್ ಗೇಟ್ ನಿರ್ಮಿಸಿದರೆ ಎಷ್ಟು ಸರಿ. ಅವೈಜ್ಞಾನಿಕ ಟೋಲ್ ಗೇಟ್ ವಸೂಲಿ ನಿಲ್ಲಬೇಕೆಂದು ಟೋಲ್ ಗೇಟ್ ತೆರವಿಗೆ ಪ್ರತಿಭಟನೆ ನಡೆಸಿದ್ದಕ್ಕೆ ನನ್ನ ಮಗ ಸೇರಿದಂತೆ 14 ಜನರ ವಿರುದ್ಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 19 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಧ್ವಂಸ ಮಾಡಿದ ಆರೋಪ ದಾಖಲಾಗಿದೆ. ನಾನು ಮಹಿಳೆ ಎನ್ನುವ ಕಾರಣಕ್ಕೆ ನನ್ನನ್ನು ರಾಜಕೀಯವಾಗಿ ಹಿಮ್ಮೆಟ್ಟಿಸುವ ತಂತ್ರ ನಡೆದಿದೆ. ಇದರಿಂದ ಈ ಪ್ರಕರಣ ಇನ್ನಷ್ಟು ರಾಜಕೀಯ ಬಣ್ಣ ಪಡೆದುಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದರು.

“ಲಿಂಗಸುಗೂರು–ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದರೂ ಒಂದೇ ಒಂದು ಟೋಲ್ ಗೇಟ್ ಇಲ್ಲ. ಆದರೆ ಇಲ್ಲಿ ರಾಜ್ಯ ಹೆದ್ದಾರಿಯೂ ಅಲ್ಲದ ಮಾರ್ಗದಲ್ಲಿ ಎರಡೆರಡು ಟೋಲ್ ಗೇಟ್ ಯಾಕೆ ಇರಬೇಕು. ಇದರಿಂದ ನಾನು ಈಗಾಗಲೇ ಬೇಸತ್ತು ಹೋಗಿದ್ದೇನೆ. ನಮ್ಮ ಭಾಗದ ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಮುಂದಿನ ಬಾರಿ ನಮ್ಮ ಪಕ್ಷ ಆಡಳಿತಕ್ಕೆ ಬಂದಾಗ ಈ ಸಮಸ್ಯೆಯನ್ನು ನಾನು ಬಗೆಹರಿಸದೇ ಹಿಂದೆ ಸರಿಯುವುದಿಲ್ಲ. ನನ್ನ ಜನರಿಗೆ ನ್ಯಾಯ ಒದಗಿಸುವುದೇ ನನ್ನ ಗುರಿಯಾಗಿದೆ” ಎಂದು ಸವಾಲು ಹಾಕಿದರು.
ತರಕಾರಿ ವ್ಯಾಪಾರಿ ರಾಜು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೂವತ್ತು–ನಲವತ್ತು ಕಿಲೋಮೀಟರ್ ವ್ಯಾಪ್ತಿಯೊಳಗೆ ಎರಡು ಟೋಲ್ ಗೇಟ್‌ಗಳನ್ನು ನಿರ್ಮಿಸಿರುವುದರಿಂದ ಅವೈಜ್ಞಾನಿಕವಾಗಿದೆ. ಈ ಪ್ರದೇಶದಲ್ಲಿ ಯಾವುದೇ ದೊಡ್ಡ ಕೈಗಾರಿಕೆ ಅಥವಾ ವ್ಯಾಪಾರ ಚಟುವಟಿಕೆಗಳಿಲ್ಲದಿದ್ದರೂ, ದಿನಬಳಕೆ ಅಗತ್ಯಗಳಿಗಾಗಿ ಸಂಚರಿಸುವ ವಾಹನಗಳ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಬೀಳುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಿತ್ಯದ ಬದುಕಿನ ಮಾರ್ಗವಾಗಿರುವ ಈ ದಾರಿಯಲ್ಲೇ ನಾವು ಓಡಾಡಬೇಕು. ಪ್ರತಿ ಬಾರಿ ಓಡಾಡುವಾಗಲೂ ನೂರಾರು ರೂಪಾಯಿ ಟೋಲ್ ಶುಲ್ಕ ಪಾವತಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಣ್ಣ ವ್ಯಾಪಾರಿಗಳು ಹಾಗೂ ಸಾಮಾನ್ಯ ಜನರಿಗೆ ತೀವ್ರ ಸಂಕಷ್ಟ ಉಂಟಾಗಿದೆ” ವಾಹನ ಚಾಲಕರೊಬ್ಬರು ಅಲವತ್ತುಕೊಂಡರು.
ಈ ಬಗ್ಗೆ ಶಾಂತಕುಮಾರ ಹೊನ್ನಟಗಿ ಮಾತನಾಡಿ, “ಉದ್ದೇಶ ಪೂರ್ವಕವಾಗಿ ಮಹಿಳಾ ಶಾಸಕಿಯನ್ನು ಮೂಲೆಗುಂಪು ಮಾಡುವ ಉದ್ದೇಶವಾಗಿದ್ದು, ಸರ್ಕಾರಾನ್ಯಾಯ ಧೋರಣೆ ತೋರುತ್ತಿದೆ. ಈ ಟೋಲ್ ಗೇಟ್ ನಿರ್ಧಾರದ ಹಿಂದೆ ರಾಜ್ಯ ರಾಜಕಾರಣದ ಒಳ-ಹೊರಗಿನ ಒತ್ತಡಗಳಿವೆಯೇ? ಕಾಂಗ್ರೆಸ್ ಸರ್ಕಾರದೊಳಗಿನ ಗುಂಪು ರಾಜಕೀಯವೇ ಅಥವಾ ವಿರೋಧ ಪಕ್ಷದ ನಾಯಕರೊಂದಿಗೆ ನಡೆದಿರುವ ಹೊಂದಾಣಿಕೆಯೇ ಎಂಬ ಅನುಮಾನಗಳು ಚರ್ಚೆಯಾಗುತ್ತಿವೆ. ದೇವದುರ್ಗದ ಟೋಲ್ ವಿವಾದ ಕೇವಲ ರಸ್ತೆ ಮತ್ತು ಶುಲ್ಕದ ಪ್ರಶ್ನೆಯಲ್ಲ” ಎಂದು ಹೇಳಿದರು.

“ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ, ಪಾರದರ್ಶಕ ಉತ್ತರ ನೀಡದೇ ಹೋದರೆ, ʼಮಹಿಳಾ ಶಾಸಕಿಯನ್ನು ಮೂಲೆಗುಂಪು ಮಾಡುವ ರಾಜಕೀಯ ಷಡ್ಯಂತ್ರʼ ಎಂಬ ಆರೋಪ ಇನ್ನಷ್ಟು ಬಲ ಪಡೆಯುವುದು ನಿಶ್ಚಿತ” ಎಂದು ಹೇಳಿದರು.
“ಈ ಸಮಸ್ಯೆಯನ್ನು ಪರಿಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಸ್ಥಳೀಯರ ದೀರ್ಘಕಾಲದ ಬೇಡಿಕೆಗಳನ್ನು ಗೌರವಿಸಿ ಕೂಡಲೇ ಕ್ರಮ ಕೈಗೊಳ್ಳುವ ಅಗತ್ಯವಿದೆ” ಎಂದು ಹೇಳಿದರು.
ದೇವದುರ್ಗ ಕ್ಷೇತ್ರದಲ್ಲಿ ಕೇವಲ 40 ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್ ಗೇಟ್‌ಗಳ ಅಳವಡಿಕೆ ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಇದು ಮಹಿಳಾ ಶಾಸಕಿಯನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಉದ್ದೇಶಿತ ಷಡ್ಯಂತ್ರವೇ? ಎಂಬ ಗಂಭೀರ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿದ್ದೀರಾ? ಹಾಸನ ಮಣ್ಣಿನ ಹೆಣ್ಣು ಬೇರುಗಳು | ಹಿರಿಯ ಲೇಖಕಿ, ಪರ್ತಕರ್ತೆ ಪಾರ್ವತಿ ಕೃ.ನ.ಮೂರ್ತಿ
ಲಿಂಗಸುಗೂರು–ಬೀದರ್ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಮಾರ್ಗಗಳಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದರೂ ಟೋಲ್ ಗೇಟ್‌ಗಳಿಲ್ಲ. ಆದರೆ ಕೈಗಾರಿಕೆಗಳಿಲ್ಲದ, ಕಡಿಮೆ ಸಂಚಾರವಿರುವ ದೇವದುರ್ಗದಲ್ಲಿ ಎರಡೆರಡು ಟೋಲ್ ಗೇಟ್‌ಗಳನ್ನು ಅಳವಡಿಸಿರುವುದು ತಾರತಮ್ಯಪೂರಿತ ನೀತಿ ಎಂಬ ಆರೋಪ ಕೇಳಿಬರುತ್ತಿದೆ. ಈ ತಾರತಮ್ಯ ಕೇವಲ ಭೌಗೋಳಿಕವಾಗಿದೆಯೇ ಅಥವಾ ಮಹಿಳಾ ನಾಯಕತ್ವವನ್ನು ದುರ್ಬಲಗೊಳಿಸುವ ರಾಜಕೀಯ ಲೆಕ್ಕಾಚಾರವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ದೇವದುರ್ಗ ಟೋಲ್ ವಿವಾದವು ಸಾರ್ವಜನಿಕರ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ ಮತ್ತು ರಸ್ತೆ ಸಂಚಾರದಲ್ಲಿ ಅನಾವಶ್ಯಕ ತೊಂದರೆ ಉಂಟುಮಾಡುತ್ತದೆಂಬ ಆಕ್ರೋಶವನ್ನು ಎದುರಿಸಿದೆ. ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಈ ವಿಷಯದಲ್ಲಿ ತ್ವರಿತ ತನಿಖೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಂಡರೆ ಒಳಿತಾಗಬಹುದು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಮಾತ್ರ ಟೋಲ್ ವ್ಯವಸ್ಥೆಯ ಮೇಲಿನ ವಿಶ್ವಾಸ ಕಾಪಾಡಬಹುದು ಹಾಗೂ ಸಾರ್ವಜನಿಕರ ಹಿತವನ್ನು ರಕ್ಷಿಸಬಹುದು.





