ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪ್ರದೇಶದ ಆಸುಪಾಸಿನಲ್ಲಿ ನೂರಾರು ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆ ಕೃತ್ಯಗಳು ನಡೆದಿದೆ ಎಂದು ಹೇಳಲಾಗುತ್ತಿದ್ದು, ಇದು ದೇಶಕಂಡ ಅತ್ಯಂತ ಗಂಭೀರ ಪ್ರಕರಣ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಎಸ್ಐಟಿ ರಚನೆ ಮಾಡಿ ಸೂಕ್ತ ತನಿಖೆ ನಡೆಸಬೆಕು. ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ವಕೀಲ ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಧರ್ಮಸ್ಥಳದಲ್ಲಿ ಮೂರು ದಶಕಗಳಲ್ಲಿ ನೂರಾರು ಹೆಣ್ಣುಮಕ್ಕಳ ಶವಗಳನ್ನು ಹೂತುಹಾಕಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ಸಾಕ್ಷ್ಯ ಸಮೇತ ದೂರು ನೀಡಿದ್ದರೂ ಸರ್ಕಾರ ತನಿಖೆ ಮಾಡಲು ಹಿಂದೇಟು ಹಾಕುತ್ತಿದೆ. ಕೃತ್ಯಗಳ ಮಹತ್ವದ ಸಾಕ್ಷಿಯೆನಿಸುವ ವ್ಯಕ್ತಿಯೇ ಖುದ್ದಾಗಿ ದ.ಕ.ಎಸ್ಪಿಗೆ ದೂರು ನೀಡಿದ್ದರೂ ರಾಜ್ಯದ ಗೃಹ ಸಚಿವರು ಈವರೆಗೆ ಮೌನವಾಗಿರುವುದು ಧರ್ಮಸ್ಥಳದ ಪ್ರಭಾವಿಗಳನ್ನು ರಕ್ಷಿಸುವ ಸಂಕೇತವೇ ಎಂದು ಪ್ರಶ್ನಿಸಿದ್ದಾರೆ.
ಫೇಸ್ಟುಕ್ ಪೋಸ್ಟ್ ವಿಚಾರಕ್ಕೂ ರಾತ್ರೋರಾತ್ರಿ ಮನೆಗೆ ನುಗ್ಗಿ ಬಂಧಿಸುವ ಪೊಲೀಸ್ ಇಲಾಖೆಯ ಸಕ್ರಿಯತೆ ಧರ್ಮಸ್ಥಳದ ಸರಣಿ ಕೊಲೆ ಪ್ರಕರಣಗಳಲ್ಲಿ ನಿಷ್ಕ್ರಿಯವಾಗಿರುವುದು ಏನನ್ನು ಸೂಚಿಸುತ್ತದೆ? ಪ್ರಭಾವಿಗಳ ಸುಪರ್ದಿಯಲ್ಲಿ ನಡೆಯುವ ಜನಸಾಮಾನ್ಯರ ಸಾವು ನೋವುಗಳಿಗೆ ನ್ಯಾಯ ನಿರಾಕರಿಸಲಾಗುತ್ತಿದೆಯೇ? ಸರಕಾರವು ತನ್ನ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ತಾಹಿರ್ ಹುಸೇನ್ ಅವರು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಮನೆ-ಮನೆಗೆ ಪೊಲೀಸ್’ ಯೋಜನೆಗೆ ಗೃಹ ಸಚಿವರಿಂದ ಚಾಲನೆ: ಏನಿದು ಯೋಜನೆ?
ಸರ್ಕಾರದ ನಡೆ ಅನುಮಾನಕ್ಕೀಡು ಮಾಡಿದೆ. ಆದಷ್ಟು ಬೇಗ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ವಕೀಲ ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.





