ಬಸವಣ್ಣ ನಮ್ಮ ದೇಶದಲ್ಲಿ ಅಲ್ಲದೆ ಬೇರೆ ಯಾವುದಾದರೂ ದೇಶದಲ್ಲಿ ಜನಿಸಿದ್ದರೆ, ಜಗತ್ತು ಇವತ್ತಿಗೆ ಬಸವಮಯ ಆಗಿರುತ್ತಿತ್ತು. ನಮ್ಮ ದೇಶದಲ್ಲಿ ಹುಟ್ಟಿ 800 ವರ್ಷಗಳು ಕಳೆದರೂ ಕೂಡ ಇನ್ನೂ ನಾವು ಸಂಪೂರ್ಣವಾಗಿ ಅವರ ತತ್ವಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ಬೇಸರ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ‘ಮನೆ ಮನಗಳಿಗೂ ವಚನ ಸಂದೇಶ’ ಅಭಿಯಾನವನ್ನು ಉದ್ಘಾಟಿಸಿ ಮತ್ತು ‘ಸಂತೋಷ್ ಲಾಡ್ ಫೌಂಡೇಶನ್’ ಪ್ರಕಟಿಸಿರುವ ‘ವಚನ ಗ್ರಂಥ’ವನ್ನು ಅವರು ಬಿಡುಗಡೆಗೊಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಿರೀಶ್ ದೇಸೂರ ಮಾತನಾಡಿ, “ಬಸವಣ್ಣ ಕೇವಲ ಕರ್ನಾಟಕ ಮತ್ತು ಭಾರತಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಸಾಂಸ್ಕೃತಿಕ ನಾಯಕವಾಗಬಲ್ಲರು. ಅಂತಹ ಶಕ್ತಿ ಅವರ ತತ್ವದಲ್ಲಿ ಅಡಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಬಸವಂತಪ್ಪ ತೋಟದ ಮಾತನಾಡಿ ಧಾರವಾಡ ಜಿಲ್ಲೆಯಾದ್ಯಂತ ಜೆಎಲ್ಎಮ್ ಜಿಲ್ಲಾ ಯುವ ಘಟಕ ವತಿಯಿಂದ ನಡೆಯುತ್ತಿರುವ ಬಸವೋತ್ಸವ ಕಾರ್ಯಕ್ರಮಕ್ಕೆ ಸರ್ವರೂ ಸಾತ್ ನೀಡುತ್ತಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಚೆನ್ನಪ್ಪ ಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಸುನಿಲ್ ದನಿಗೊಂಡ ನಿರೂಪಣೆ ಮಾಡಿದರು. ಎಸ್ ವಿ ಪಾಟೀಲ, ರವಿ ಬಾಗೋಡಿ, ಬಸವರಾಜ ಬೆಂಡಿಗೇರಿ, ಇನ್ನಿತರರು ಭಾಗವಹಿಸಿದ್ದರು.




