ಸಿನಿಮಾ ಎನ್ನುವುದು ಕಲೆ, ಜನರ ಭಾವನೆಗಳ ಪ್ರತಿಬಿಂಬ. ಇದನ್ನು ಮಂಡಿಸುವಾಗ ನೈತಿಕತೆ ಮತ್ತು ಅನೈತಿಕತೆ ನಡುವೆ ಗೆರೆ ಇರುತ್ತದೆ. ಸತ್ಯದ ಪರವಾಗಿರಬೇಕಾಗುತ್ತದೆ. ಧರ್ ತರಹದ ನಿರ್ದೇಶಕರು ʼಧುರಂಧರ್ʼ ಥರದ ಪ್ರೊಪಗ್ಯಾಂಡ ಚಿತ್ರಗಳ ಮೂಲಕ ಈ ಗೆರೆಯನ್ನು ಅಳಿಸಿ ಹಾಕುತ್ತಾರೆ. ಸುಳ್ಳುಗಳನ್ನು ಸೃಷ್ಟಿಸಿ ಅದನ್ನೇ ಜನರ ಭಾವನೆಗಳು ಎಂದು ಬಿಂಬಿಸಿ ಯಶಸ್ವಿಯಾಗುತ್ತಾರೆ.
ನಾಜಿ ಜರ್ಮನಿ ಕಾಲದಲ್ಲಿ ಚಾಲ್ತಿಯಲ್ಲಿದ್ದ ಪ್ರೊಪಗ್ಯಾಂಡ ಸಿನಿಮಾಗಳು, ಸಾಕ್ಷ್ಯಚಿತ್ರಗಳು ಸಾಧಾರಣವಾಗಿ ಸರ್ವಾಧಿಕಾರ ಆಡಳಿತವಿರುವ ದೇಶಗಳಲ್ಲಿ ತಯಾರಾಗುತ್ತವೆ. ಅಧಿಕಾರದಲ್ಲಿರುವ ಸರ್ಕಾರಗಳ ಸಾಧನೆಗಳನ್ನು ಪ್ರಚಾರ ಮಾಡುವ ಸಾಧನವಾಗಿ ಬಳಕೆಯಾಗುತ್ತವೆ. ನಿರಂಕುಶ ಆಡಳಿತದಲ್ಲಿ, ಆರ್‌ಎಸ್‌ಎಸ್‌ನಂತಹ ಸಂಘಟನೆ ಪ್ರಾಬಲ್ಯವಿರುವ ಕಾಲದಲ್ಲಿ ಮತಧರ್ಮಾಂಧತೆಯ ಸಿದ್ಧಾಂತವುಳ್ಳ, ರಾಷ್ಟ್ರೀಯತೆಯ ಮುಖವಾಡ ತೊಟ್ಟ ದ್ವೇಷ ಮನಸ್ಥಿತಿಯನ್ನು ಪ್ರಚಾರ ಮಾಡುವ ವಾಹಕಗಳಾಗುತ್ತವೆ. 2019ರ ನಂತರ ತನ್ನ ಭರಾಟೆ ಶುರುಮಾಡಿಕೊಂಡ ಈ ಸಿನಿಮಾಗಳ ಮುಖ್ಯ ಗುರಿ ಮುಸ್ಲಿಮರು ಮತ್ತು ಪಾಕಿಸ್ತಾನ. ಇವರಿಬ್ಬರನ್ನು ವಿಲನ್‌ಗಳಾಗಿ, ಭಯೋತ್ಪಾದಕರಾಗಿ ಚಿತ್ರಿಸಿ ಇದಕ್ಕೆ ರಾಷ್ಟ್ರೀಯತೆಯ ಮಸಾಲಾ ಸೇರಿಸಿ ದ್ವೇಷದ ಮದ್ದುಗುಂಡು ತಯಾರಿಸುತ್ತಾರೆ.
2014ರಲ್ಲಿ ಮೋದಿ ನೇತೃತ್ವದ ಚುನಾಯಿತ ಸರ್ವಾಧಿಕಾರ ಅಧಿಕಾರಕ್ಕೆ ಬಂದ ನಂತರ ಕಾಶ್ಮೀರ ಫೈಲ್ಸ್(2022), ದ ಕೇರಳ ಸ್ಟೋರಿ(2023), ಆರ್ಟಿಕಲ್ 370(2024), ಪಿಎಂ ನರೇಂದ್ರ ಮೋದಿ(2019), ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್(2019), ಉರಿ(2019), ಸ್ವಾತಂತ್ರ್ಯ ವೀರ ಸಾವರ್ಕರ್(2024), ಜಹಾಂಗೀರ್ ನ್ಯಾಶನಲ್ ಯೂನಿವರ್ಸಿಟಿ(2024), ಸಬರಮತಿ ರಿಪೋರ್ಟ್(2024), ರಾಮಸೇತು(2024) ಮುಂತಾದ ಪ್ರೊಪಗ್ಯಾಂಡ ಸಿನಿಮಾಗಳು ಬಿಡುಗಡೆಯಾದವು. ಇವೆಲ್ಲವನ್ನೂ ಒಟ್ಟುಗೂಡಿಸಿ ಒಂದು ಸಿನಿಮಾ ಮಾಡಿದರೂ ಅದರ ಕತೆ, ಚಿತ್ರಕತೆ ಮತ್ತು ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಎಲ್ಲವೂ ಹಿಂದುತ್ವ ರಾಷ್ಟ್ರೀಯತೆಯ ಎರಕದಲ್ಲಿ ಅಚ್ಚು ಹೊಯ್ದಿರುತ್ತವೆ.
ಕಳೆದ ಎಪ್ಪತ್ತು ವರ್ಷಗಳಿಂದ ಆರ್‌ಎಸ್‌ಎಸ್ ಮತಧರ್ಮಾಂದತೆಗೆ ನೀರೆರೆದು ಈ ಪ್ರೊಪಗ್ಯಾಂಡ ಸಿನಿಮಾಗಳಿಗೆ ಒಂದು ಹದವಾದ ವೇದಿಕೆ ಸಿದ್ಧ ಮಾಡಿತ್ತು. ಅದರಲ್ಲಿ ಕಳೆ ರೀತಿ ನಿರ್ಮಾಣಗೊಂಡ ಬಹುತೇಕ ಸಿನಿಮಾಗಳು ತೋಪಾದವು. ಇದು ಕ್ಷಣಿಕ ಎನ್ನುವಂತೆ ಡಿಸೆಂಬರ್ 2025ರಲ್ಲಿ ಆದಿತ್ಯ ಧರ್ ನಿರ್ದೇಶನದ ʼಧುರಂದರ್ʼ ಎನ್ನುವ ಪ್ರೊಪಗ್ಯಾಂಡ ಸಿನಿಮಾ ಬಿಡುಗಡೆಯಾಗಿ ಹಿಟ್ ಆಗಿದೆ.
ಇದನ್ನು ಓದಿದ್ದೀರಾ?: ಆಸ್ಕರ್ ರೇಸ್‌ನಲ್ಲಿರುವ ‘ಹೋಮ್‌ಬೌಂಡ್’ ಚಿತ್ರಕ್ಕೆ ಕೃತಿಚೌರ್ಯದ ಕಂಟಕ: ಧರ್ಮ ಪ್ರೊಡಕ್ಷನ್ಸ್ ವಿರುದ್ಧ ಲೇಖಕಿ ದೂರು
2016ರಲ್ಲಿ ಉರಿ ಸೇನಾ ಸ್ಥಳದ ಮೇಲೆ ಉಗ್ರರ ದಾಳಿಗೆ ಪ್ರತೀಕಾರವಾಗಿ ಆಗಿನ ಮೋದಿ ಸರ್ಕಾರವು ಪಾಕಿಸ್ತಾನದಲ್ಲಿನ ಅವರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಎಂದು ದಾಳಿ ಮಾಡಿದರು. ಈ ಕ್ರಮವು ರಕ್ಷಣಾ ಸಂಬಂಧಿತವಾಗಿ, ರಾಜತಾಂತ್ರಿಕವಾಗಿ ಮತ್ತು ಭದ್ರತಾ ದೃಷ್ಟಿಯಿಂದಲೂ ಯಾವುದೇ ದೂರಗಾಮಿ ಫಲ ಕೊಡಲಿಲ್ಲ. ಆದರೆ ರಾಜಕೀಯವಾಗಿ ಬಿಜೆಪಿ ಪಕ್ಷಕ್ಕೆ ಪ್ರಚಾರ ದೊರಕಿತು. ಇದನ್ನು ಆದರಿಸಿ ಧರ್(ಉರಿ, ಚಾವಾ, ಆರ್ಟಿಕಲ್ 370 ಸಿನಿಮಾಗಳ ನಿರ್ದೇಶಕ) ತನ್ನ ಮೊದಲ ಸಿನಿಮಾ ʼಉರಿʼಯಲ್ಲಿ ರಾಷ್ಟ್ರೀಯತೆಯನ್ನು ಉನ್ಮಾದಗೊಳಿಸಿ ʼಜೋಶ್ ಹೇಗಿದೆʼ ಎನ್ನುವ ಸೆಳೆನುಡಿಯನ್ನು ಜನಪ್ರಿಯಗೊಳಿಸಿ 11 ಜನವರಿ 2019ರಂದು ಬಿಡುಗಡೆ ಮಾಡಿದರು. ಬಿಜೆಪಿ ಪಕ್ಷವು ಇದನ್ನು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿತು. ಮೇ 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿತು. ತನ್ನ ಮೊದಲ ಪ್ರೊಪಗ್ಯಾಂಡ ಸಿನಿಮಾದ ಮೂಲಕ ಮೋದಿ-ಶಾ ಜೋಡಿಯ ನೀಲಿಕಣ್ಣಿನ ಹುಡುಗನಾಗಿ ಬೆಳಕಿಗೆ ಬಂದ ಧರ್ ಮುಂದೆ ಇದನ್ನೇ ತನ್ನ ವೃತ್ತಿಯನ್ನಾಗಿಸಿಕೊಂಡ ಎನ್ನುವುದಕ್ಕೆ ನಂತರ ಬಂದ ಆರ್ಟಿಕಲ್ 370, ಈಗಿನ ʼಧುರಂದರ್ʼ ಸಿನಿಮಾಗಳೇ ಸಾಕ್ಷಿ.

ದುರಂಧರ್‌ನ ಮೊದಲ ದೃಶ್ಯದಿಂದಲೇ ತನ್ನ ಉದ್ದೇಶವನ್ನು ಸ್ಪಷ್ಟಪಡಿಸುವ ನಿರ್ದೇಶಕ ಮುಂದಿನ ಮೂರು ಗಂಟೆಗಳಲ್ಲಿ ಉತ್ತಮ ಮೇಕಿಂಗ್‌ನ ಮುಖವಾಡದಲ್ಲಿ ದ್ವೇಷ ಬಿತ್ತುವ ಕರಸೇವೆ ಮಾಡುತ್ತಾನೆ. ಇಂಟೆಲಿಜೆನ್ಸ್ ಬ್ಯೂರೋದ ಮುಖ್ಯಸ್ಥ ಅಜಯ್ ಸನ್ಯಾಲ್ (ನಿಜ ಜೀವನದ ಎನ್‌ಎಸ್‌ಎ ಅಜಿತ್ ಡೋವಲ್‌ನ ಪ್ರತಿರೂಪ) ʼಕಾರ್ಯಾಂಗದಲ್ಲಿ ಭ್ರಷ್ಟಾಚಾರವಿರುವ ಕಾರಣ ನಕಲಿ ನೋಟುಗಳ ರಾಕೆಟ್ ಕುರಿತು ತನ್ನ ಮೇಲಧಿಕಾರಿಗಳಿಗೆ ಹೇಳಿ ಉಪಯೋಗವಿಲ್ಲʼ ಎಂದು ತನ್ನ ಸಹೋದ್ಯೋಗಿಗೆ ಹೇಳುತ್ತಾನೆ. ಅದು ಯುಪಿಎ 2 ಆಡಳಿತದಲ್ಲಿದ್ದ ಸುಮಾರು 2008ರ ಕಾಲಘಟ್ಟ. ಮುಂದುವರೆದು ʼನಮ್ಮನ್ನು ಬೆಂಬಲಿಸುವ ಸರ್ಕಾರ ಬೇಕು, ಅದು ಈಗಿಲ್ಲʼ ಅಂತ ಹೇಳುವುದರ ಮೂಲಕ ನೇರವಾಗಿ ಮನಮೋಹನ್ ಸಿಂಗ್ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾನೆ. ನಂತರ ʼಈ ದಾಖಲೆಯನ್ನು ಸುರಕ್ಷಿತವಾಗಿಡು, ಯಾರಿಗೆ ಗೊತ್ತು… ಭವಿಷ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುವ ಸರ್ಕಾರ, ರಾಜಕಾರಣಿ ಬರಬಹುದು…ʼ ಎಂದು ಹೇಳುವುದರ ಮೂಲಕ ಭ್ರಷ್ಟಾಚಾರ ವಿರೋಧಿ ಆಂದೋಲನ ಐಎಸಿಯ ಯಶಸ್ಸಿನ ಲಾಭ ಪಡೆದುಕೊಂಡು(ಪಿಗ್ಗಿಬ್ಯಾಕ್) 2014ರಲ್ಲಿ ಅಧಿಕಾರಕ್ಕೇರಿದ ಮೋದಿ ನೇತೃತ್ವ ಸರ್ಕಾರವನ್ನು ಉದಾಹರಿಸುತ್ತಾನೆ. ಅಂದರೆ ಐದು ನಿಮಿಷಗಳ ದೃಶ್ಯದಲ್ಲಿ ʼಕಾಂಗ್ರೆಸ್ ಭ್ರಷ್ಟ, ಮೋದಿ ಸ್ವಚ್ಛʼ ಎನ್ನುವ ನೆರೇಶನ್ ಕಟ್ಟುತ್ತಾನೆ. ಇದನ್ನೇ ಪ್ರೊಪಗ್ಯಾಂಡ ಅಂತ ಹೇಳುವುದು.
ಈ ಪ್ರೊಪಗ್ಯಾಂಡ ಸಿನಿಮಾ ಕೇವಲ ಪಾಕಿಸ್ತಾನವನ್ನು ವಿಲನ್ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ, ಜೊತೆಗೆ 2014ರ ಪೂರ್ವದ ಸರ್ಕಾರಗಳನ್ನು ಸಹ ಕಟಕಟೆಯಲ್ಲಿ ಎಳೆದುತರುತ್ತದೆ. ʼಧುರಂದರ್ʼ ಮೇಲ್ನೋಟದಲ್ಲಿ ಗೂಢಚಾರಿ, ಗ್ಯಾಂಗಸ್ಟರ್ ಡ್ರಾಮಾ ಹಾಗೂ ಪಾಕಿಸ್ತಾನ ಮತ್ತು ಬಲೂಚಿಸ್ತಾನ ನಡುವಿನ ಪ್ರಾದೇಶಿಕ ಕದನದ ಕತೆಯನ್ನು ಒಳಗೊಂಡಿದೆ. ಆದರೆ ಯುಪಿಎ ಸರ್ಕಾರ ಭಯೋತ್ಪಾದಕರ ಪರ ಸಹಾನುಭೂತಿ ಇರುವ, ದುರ್ಬಲ ಆಡಳಿತ, ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪಾಕಿಸ್ತಾನ ಮತ್ತು ಮುಸ್ಲಿಮರನ್ನು ಹುಟ್ಟಡಗಿಸುವ ಧೀರ ಎನ್ನುವ ನೀತಿ ಅದರ ಕಾರ್ಯಸೂಚಿಯಾಗಿದೆ, ಸಿನಿಮಾದ ಆತ್ಮವಾಗಿದೆ.
ಇಲ್ಲಿ 1999-2004ರ ವಾಜಪೇಯಿ ನೇತೃತ್ವ ಸರ್ಕಾರದ ಅವಧಿಯಲ್ಲಿ ನಡೆದ ಕಂದಹಾರ್ ವಿಮಾನ ಅಪಹರಣ ಮತ್ತು ಭಯೋತ್ಪಾದಕರ ಬಿಡುಗಡೆ, ಸಂಸತ್ ಭವನದ ಮೇಲಿನ ದಾಳಿ ಈ ಎರಡೂ ಘಟನೆಗಳನ್ನು ನೆಪ ಮಾತ್ರಕ್ಕೆ ಬಳಸಿಕೊಳ್ಳಲಾಗಿದೆ. ಆಗಿನ ಎನ್‌ಡಿಎ ಸರ್ಕಾರದ ವೈಫಲ್ಯದ ಕುರಿತು ಕಣ್ಣು ಮಿಟುಕಿಸುವಷ್ಟು ಸೆಕೆಂಡುಗಳಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ 2008ರ ಮುಂಬೈ ದಾಳಿ ಪ್ರಕರಣ ಕುರಿತು ವಿವರವಾಗಿ ತೋರಿಸಿ ಆಗಿನ ಯುಪಿಎ ಸರ್ಕಾರದ ವೈಫಲ್ಯದ ಕುರಿತು ಹೆಚ್ಚು ಕೇಂದ್ರೀಕರಿಸಲಾಗಿದೆ. ಇಲ್ಲಿನ ಎರಡು ದೃಶ್ಯಗಳನ್ನು ಗಮನಿಸಬಹುದು:
ಬಾಂಬೆ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ಜನರಲ್ ‘ಇಂಡಿಯಾ ಕಡೆಯಿಂದ ಏನಾದರೂ ಪ್ರತಿಕ್ರಿಯೆ ಬರುತ್ತದೆ ಎಂದು ಕಾದೆವು, ಆದರೆ ಬರಲಿಲ್ಲ’ ಎಂದು ಹೇಳುತ್ತಾರೆ(ಗುಸ್ಕೆ ನಹೀ ಮಾರ…)
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸಚಿವರು ‘ಮುಂದೊಂದು ದಿನ ದೇಶದ ಹಿತಕ್ಕಾಗಿ ಯೋಚಿಸುವ ಸರ್ಕಾರ ಅಧಿಕಾರಕ್ಕೆ ಬರುತ್ತದೆ’ ಎಂದು ಹೇಳುತ್ತಾರೆ(ಯಾರೆಂದು ಬಿಡಿಸಿ ಹೇಳಬೇಕಿಲ್ಲ.)
ಇದನ್ನು ಪ್ರೊಪಗ್ಯಾಂಡ ಎಂದು ಕರೆಯುತ್ತಾರೆ.
ಸಿನಿಮಾ ಎಂಬ ಪ್ರಭಾವಶಾಲಿ ಮಾಧ್ಯಮವನ್ನು ಬಳಸಿಕೊಂಡು ಇತಿಹಾಸವನ್ನು ತಿರುಚಿ, ನೈಜ ಘಟನೆಗಳನ್ನು ತಪ್ಪಾಗಿ ಬಿಂಬಿಸಿ ಆ ಮೂಲಕ ಸುಳ್ಳುಗಳನ್ನು ಬಿತ್ತಿರುವುದು ಧರ್ ಅವರ ಸಾಧನೆಯಾಗಿದೆ. ಬಿಜೆಪಿ ಸರ್ಕಾರವನ್ನು ದೇಶಭಕ್ತಿಯ ಸ್ಥಾನದಲ್ಲಿ ನಿಲ್ಲಿಸುವ ಧಾವಂತದಲ್ಲಿ ಕಾಂಗ್ರೆಸ್ ಪಕ್ಷವನ್ನು ಶಿಲುಬೆಗೇರಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಸೂಫಿ, ಅರೇಬಿಕ್ ಹಾಡುಗಳನ್ನು ಶಕ್ತವಾಗಿ ಬಳಸಿಕೊಂಡು ಹಿನ್ನಲೆಯಲ್ಲಿ ಸಂಯೋಜಿಸಿ ಒಂದು ಬಗೆಯ ಭಾವನಾತ್ಮಕ ರಿಧಮ್ ತುಂಬುತ್ತಲೇ ಮುಸ್ಲಿಮರೆಂದರೆ ಹಿಂಸಾವಾದಿಗಳು ಎನ್ನುವಂತಹ ಹಿಂಸಾತ್ಮಕ ದೃಶ್ಯಗಳನ್ನೂ ಜೋಡಿಸುವ ಧರ್ ಪ್ರೊಪಗ್ಯಾಂಡ ಸಿನಿಮಾದ ಶೈಲಿಗೆ ಹೊಸ ಚೌಕಟ್ಟನ್ನು ನಿರ್ಮಿಸಿದ್ದಾರೆ. ಇವರು ʼನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಚಿತ್ರʼ ಎಂದು ಘೋಷಿಸಿಕೊಳ್ಳುವುದೇ ಒಂದು ಮರೆಮೋಸದ್ದಾಗಿದೆ.
ಇತಿಹಾಸವನ್ನು ತಿರುಚಿ, ಆಗಿನ ಸಾಂಧರ್ಬಿಕ ಘಟನೆಗಳಿಗೆ ತಪ್ಪಾದ ಅರ್ಥ ಕೊಟ್ಟು ಸುಳ್ಳನ್ನು ಪ್ರಚಾರ ಮಾಡುತ್ತಿದ್ದೀರಿ ಎಂದು ವಿಮರ್ಶಕರು ಆರೋಪಿಸಿದರೆ ʼಅದು ನಿಜ ಘಟನೆಗಳನ್ನು ಒಳಗೊಂಡಿದ್ದರೂ ಕಾಲ್ಪನಿಕತೆಯೊಂದಿಗೆ ಜೋಡಿಸಲಾಗಿದೆʼ ಎಂದು ಹಾದಿ ತಪ್ಪಿಸುತ್ತಾರೆ. ಉದಾಹರಣೆಗೆ 2008ರ ಮುಂಬೈ ದಾಳಿಯ ಸಂದರ್ಭದಲ್ಲಿ ʼಉಗ್ರರನ್ನು ಎದುರಿಸುವಲ್ಲಿ ಆಗಿನ ಯುಪಿಎ ಸರ್ಕಾರ ವಿಫಲವಾಯಿತು, ಅಸಹಾಯಕವಾಗಿತ್ತು. ಪಾಕಿಸ್ತಾನಿಗಳು ಭಾರತದ ರಕ್ಷಣಾ ವ್ಯವಸ್ಥೆಯನ್ನು ನೋಡಿ ನಗುತ್ತಿದ್ದರು. ಅಮೆರಿಕ ಭಾರತಕ್ಕೆ ಕೇವಲ ಸುಳ್ಳು ಭರವಸೆ ನೀಡುತ್ತಿತ್ತುʼ ಎಂದು ಸಿನಿಮಾದಲ್ಲಿ ನಿರೂಪಿಸಲಾಗಿದೆ.
ಉದ್ದೇಶಪೂರ್ವಕವಾಗಿ ನೈಜ ಫೂಟೇಜ್ ಮತ್ತು ಆಡಿಯೋಗಳನ್ನು ಬಳಸಿ ಜನರ ಭಾವನೆಗಳನ್ನು ಪ್ರಚೋದಿಸುವಲ್ಲಿ. ದಾಳಿಯನ್ನು ಪುನರಸೃಷ್ಟಿಸಿ ಹಿಂದಿನ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಅಥವಾ ಭದ್ರತಾ ವೈಫಲ್ಯ ಆಗಿರಬಹುದು, ಆದರೆ ಭಾರತದ ಪ್ರತಿಕ್ರಿಯೆ ದುರ್ಬಲವಾಗಿರಲಿಲ್ಲ. ಅಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ, ಮುಂಬೈ ಪೋಲೀಸ್ ಇನ್‌ಸ್ಪೆಕ್ಟರ್ ವಿಜಯ್ ಸಾಲಸ್ಕರ್, ಮಹಾರಾಷ್ಟ್ರ ಎಟಿಎಸ್‌ನ ಹೆಚ್ಚುವರಿ ಪೊಲೀಸ್ ಕಮೀಷನರ್ ಅಶೋಕ್ ಕಾಮ್ಟೆ, ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ತುಕಾರಾಂ ಓಂಬ್ಳೆ ಮುಂತಾದವರು ಉಗ್ರರ ದಾಳಿಯನ್ನು ಹಿಮ್ಮಟ್ಟಿಸಲು ಜೀವದ ಹಂಗು ತೊರೆದು ಹೋರಾಡಿದರು, ಹುತಾತ್ಮರಾದರು. ತುಕಾರಾಂ ಒಂಬ್ಳೆ ಗುಂಡಿಗೆ ಎದೆಯೊಡ್ಡಿ ಅಜ್ಮಲ್ ಕಸಬ್‌ನನ್ನು ಜೀವಂತವಾಗಿ ಹಿಡಿದರು. ಆದರೆ ʼಧುರಂದರ್ʼ ಸಿನಿಮಾದಲ್ಲಿ ಇವರ ಬಲಿದಾನವನ್ನು ನಿರ್ಲಕ್ಷಿಸಿ, ಈ ಶೌರ್ಯವನ್ನು ಕುಗ್ಗಿಸಿ, ನಕಾರಾತ್ಮಕತೆಯನ್ನು ವೈಭವೀಕರಿಸಲಾಗಿದೆ. ನಿರ್ದೇಶಕ ಧರ್ 1999-2004ರ ವಾಜಪೇಯಿ ನೇತೃತ್ವ ಸರ್ಕಾರದ ಅವಧಿಯಲ್ಲಿನ ಕಂದಹಾರ್ ವಿಮಾನ ಅಪಹರಣ, ಸಂಸತ್ ಮೇಲಿನ ದಾಳಿ ಸಂದರ್ಭದ ಇಂಟೆಲಿಜೆನ್ಸ್ ಅಥವಾ ಭದ್ರತಾ ವೈಫಲ್ಯ ಕುರಿತು ಮಾತನಾಡುವುದಿಲ್ಲ. ಚೆರ್ರಿ ಪಿಕ್ ರೀತಿ ಆಯ್ಕೆ ಮಾಡಿಕೊಂಡು ಅನೈತಿಕತೆಯನ್ನು ಪ್ರದರ್ಶಿಸುತ್ತಾರೆ.
ಮತ್ತೊಂದು ದೃಶ್ಯದಲ್ಲಿ ಈಗಿನ ಎನ್‌ಎಸ್‌ಎ ಅಜಿತ್ ಡೋವಲ್‌ನ ಪಾತ್ರದ ಪ್ರತಿರೂಪವಾಗಿರುವ ಇಂಟೆಲಿಜೆನ್ಸ್ ಅಧಿಕಾರಿ ಅಜಯ್ ಸಾನ್ಯಾಲ್ ಯುಪಿಎ ಕಾಲದಲ್ಲಿ ಸರ್ಕಾರ ಸರಿಯಿಲ್ಲ ಎಂಬ ಕಾರಣಕ್ಕೆ ಸಿಕ್ಕ ಮಾಹಿತಿಯನ್ನು ಬಳಸದೆ ಮೌನವಾಗಿ ಉಳಿಯುತ್ತಾರೆ. ʼಸಮಯ ಬಂದಾಗ ನಾವು ಪ್ರತೀಕಾರ ತೆಗೆದುಕೊಳ್ಳೋಣʼ ಎಂದು ಹತ್ತು ವರ್ಷ ಕಾಯುತ್ತಾರೆ. ತಾನು ಸೇವೆ ಸಲ್ಲಿಸುತ್ತಿರುವ ಸರ್ಕಾರಕ್ಕೆ ಮಾಹಿತಿ ಕೊಡದೆ ಗೌಪ್ಯವಾಗಿರುವುದು, ಭಯೋತ್ಪಾದನೆ ನಡೆಯಲು ಅವಕಾಶ ಮಾಡಿಕೊಟ್ಟಂತೆ, ಸಾನ್ಯಾಲ್‌ನ ಈ ವರ್ತನೆ ದೇಶದ್ರೋಹಕ್ಕೆ ಸಮ ಎನ್ನುವ ಸತ್ಯವನ್ನು ಸ್ವತಃ ನಿರ್ದೇಶಕ ಅಪ್ರಜ್ಞಾಪೂರ್ವಕವಾಗಿ ಬಹಿರಂಗಗೊಳಿಸುತ್ತಾರೆ. ಮುಖ್ಯವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ದೋಷಿ ಎಂದು ತೋರಿಸಲು ಇಲ್ಲಿನ ಇಂಟೆಲಿಜೆನ್ಸ್ ತುಂಬಾ ದುರ್ಬಲವಾಗಿದೆ ಎಂದು ನಿರೂಪಿಸುತ್ತಾರೆ.

ಪಾಕಿಸ್ತಾನವು ದಶಕಗಳಿಂದ ವಿಶ್ವಸಂಸ್ಥೆಯಲ್ಲಿ ʼಭಾರತ ನಮ್ಮ ದೇಶದೊಳಗೆ ನುಗ್ಗಿ ವಿಧ್ವಂಸಕ ಕೃತ್ಯ ನಡೆಸುತ್ತಿದೆʼ ಎಂದು ಆರೋಪ ಮಾಡುತ್ತಲೇ ಬಂದಿದೆ. ಭಾರತ ಇದನ್ನು ನಿರಾಕರಿಸುತ್ತಾ ಬಂದಿದೆ. ಆದರೆ ಧರ್ ಈ ಸಿನಿಮಾದಲ್ಲಿ ಪದೇ ಪದೇ ʼಭಾರತ ತನ್ನ ಏಜೆಂಟ್‌ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿ ಅಲ್ಲಿನ ಗ್ಯಾಂಗ್‌ಸ್ಟರ್‌ಗಳ ನಡುವೆ ಕಲಹ ತಂದಿಟ್ಟಿತು, ಪರಸ್ಪರ ಹೊಡೆದಾಡಿ ಅವರನ್ನು ಕೊಲ್ಲಿಸಿತುʼ ಎಂದು ತೋರಿಸುತ್ತಾರೆ. ಲ್ಯಾರಿ ಗ್ಯಾಂಗ್ ಮತ್ತು ರೆಹಮಾನ್ ಡಕೈಟ್ ಅವರನ್ನು ಬಳಸಿ ಈ ಕತೆ ಕಟ್ಟಿದ್ದಾರೆ. ಅಂದರೆ ಹುಸಿ ರಾಷ್ಟ್ರೀಯತೆ, ಗೂಢಚರ್ಯೆಯ ವೈಭವೀಕರಣ ತೋರಿಸುವ ಭರದಲ್ಲಿ, ಪಾಕಿಸ್ತಾನ ಮಾಡುತ್ತಿದ್ದ ಆರೋಪವನ್ನೇ ನಿಜವೆಂದು ಒಪ್ಪಿಕೊಂಡಿದ್ದಾರೆ. ಇದು ಅವಿವೇಕಿತನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಧಿಕೃತ ಮಾಹಿತಿಗಳ ಪ್ರಕಾರ ರೆಹಮಾನ್ ಡಕೈಟ್ 2009ರಲ್ಲಿ, ಸಲೀಮ್ ರೆಹಮಾನಿ 2022ರಲ್ಲಿ ಪಾಕಿಸ್ತಾನ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿರುತ್ತಾರೆ. ಆದರೆ ಭಾರತೀಯ ಗೂಢಚಾರರು ಇದರಲ್ಲಿ ಪಾಲ್ಗೊಂಡಿರುವುದರ ಕುರಿತು ಎಲ್ಲಿಯೂ ದಾಖಲೆಗಳಿಲ್ಲ. ನಿರ್ದೇಶಕ ನಿಜ ಘಟನೆಗಳನ್ನು ಸಹ ತಿರುಚಿ ಸುಳ್ಳುಗಳನ್ನು ಇತಿಹಾಸ ಎಂದು ಸೃಷ್ಟಿಸಿದ್ದಾರೆ. ಇದನ್ನು ಪ್ರೊಪಗ್ಯಾಂಡ ಎಂದು ಕರೆಯುತ್ತಾರೆ.
ಪಾಕಿಸ್ತಾನದ ರಾಜಕೀಯ ಪರಿಣಿತರು ʼವಾಸ್ತವದಲ್ಲಿ ಬಲೂಚಿಸ್ತಾನದ ಲೈಯರಿ ಎನ್ನುವ ಪುಟ್ಟ ಪ್ರದೇಶದ ಪ್ರಾಬಲ್ಯ ಸಾಧಿಸುವ ಸಲುವಾಗಿ ನಡೆದ ಆಂತರಿಕ ಕಲಹವನ್ನು ವೈಭವೀಕರಿಸಿದ್ದಾರೆ. ಈ ಗ್ಯಾಂಗ್ ವಾರ್ 26/11 ಬಾಂಬೆ ದಾಳಿಯನ್ನು ಪ್ರಭಾವಿಸುತ್ತದೆ ಎಂದು ಬಿಂಬಿಸಿರುವುದು ಬಾಲಿಶ. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗೆಯೇ ಅಲ್ಲಿನ ಪ್ರಜೆಗಳು ಈ ದಾಳಿಯನ್ನು ಸಂಭ್ರಮಿಸಿರಲಿಲ್ಲ…ʼ ಎಂದು ಹೇಳುತ್ತಾರೆ. ಆದರೆ ಪ್ರೊಪಗ್ಯಾಂಡ ಸಿನಿಮಾವನ್ನು ಮಾತ್ರ ಮಾಡುತ್ತೇನೆ ಎಂದು ಪಣ ತೊಟ್ಟಂತಿರುವ ಧರ್ ಭಾರತದ ಬಹುಸಂಖ್ಯಾತ ಧರ್ಮದ ಪ್ರೇಕ್ಷಕರನ್ನು ಮೆಚ್ಚಿಸಲು ಪಕ್ಕದ ದೇಶದ ಆಂತರಿಕ ವಿದ್ಯಮಾನಗಳನ್ನು, ಭಾವನೆಗಳನ್ನು ದೋಷಪೂರಿತವಾಗಿ ತೋರಿಸಿ ಸಿನಿಮಾ ನಿರ್ಮಾಣದ ಮೌಲ್ಯಗಳನ್ನು ಹಾಳು ಮಾಡಿದ್ದಾರೆ. ಜಾಗತಿಕವಾಗಿಯೂ ಇಂತಹ ಪ್ರೊಪಗ್ಯಾಂಡ ಚಿತ್ರ ಭಾರತದ ಗೌರವವನ್ನು ಕುಂಠಿತಗೊಳಿಸುತ್ತದೆ.
ಮರೆಯುವ ಮುನ್ನ
ಸಿವಿಲ್ ರೈಟ್ಸ್ ಲೇಖಕಿ ಎಲೆನ್ ಸ್ಕಾಟ್ 1915ರಲ್ಲಿ ಬಿಡುಗಡೆಯಾದ ಗ್ರಿಫಿತ್ ನಿರ್ದೇಶನದ ‘ದ ಬರ್ತ್ ಆಫ್ ನೇಷನ್’ ಸಿನಿಮಾ ಕುರಿತು ‘ಈ ಚಲನಚಿತ್ರವು ಇದುವರೆಗೆ ನಿರ್ಮಿಸಲಾದ ಅತ್ಯಂತ ಜನಾಂಗೀಯವಾದಿ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಲನಚಿತ್ರವು ವಾಸ್ತವವಾಗಿ ಗಲ್ಲಿಗೇರಿಸುವಿಕೆಯನ್ನು ಸಕಾರಾತ್ಮಕವಾಗಿ ಚಿತ್ರಿಸುತ್ತದೆ, ಮೂಲತಃ ಕೆಲವು ಕಪ್ಪು ಜನರು ಗಲ್ಲಿಗೇರಿಸಲ್ಪಡಲು ಯೋಗ್ಯರು ಎಂದು ಹೇಳುವುದಾಗಿತ್ತು. ಆ ಅರ್ಥದಲ್ಲಿ ಇದು ಅತ್ಯಂತ ಜನಾಂಗೀಯವಾದಿಯಾಗಿದೆ’ ಎಂದು ಬರೆಯುತ್ತಾರೆ
110 ವರ್ಷಗಳ ಹಿಂದೆ ಬಿಡುಗಡೆಯಾದಾಗ ಮತ್ತು ನಂತರದ ಅನೇಕ ದಶಕಗಳ ಕಾಲ ‘ದ ಬರ್ತ್ ಆಫ್ ನೇಷನ್’ ಬಗ್ಗೆ ತುಂಬಾ ಪ್ರಶಂಸೆ ವ್ಯಕ್ತವಾಗಿತ್ತು. ಸಿನಿಮಾ ಎನ್ನುವ ದೃಶ್ಯ ಕಲೆ ಪ್ರಾರಂಭವಾಗಿ ಇಪ್ಪತ್ತು ವರ್ಷಗಳ ಅಂತರದಲ್ಲಿ ನಿರ್ಮಾಣವಾದ ಈ ಸಿನಿಮಾದ ಮೇಕಿಂಗ್, ತಾಂತ್ರಿಕತೆ ಕುರಿತು ಪ್ರೇಕ್ಷಕರು, ವಿಮರ್ಶಕರು ಬೆರಗಾಗಿದ್ದರು. ಈ ಚಲನಚಿತ್ರವನ್ನು ಆಗಾಗ್ಗೆ ಚಲನಚಿತ್ರ ತರಗತಿಗಳಲ್ಲಿ ಬೋಧನಾ ಪಠ್ಯವಾಗಿಯೂ ಬಳಸಲಾಗುತ್ತದೆ.
ಆದರೆ ‘ದ ಬರ್ತ್…’ನ ಎಲ್ಲಾ ವೈಭವದ ಹೊರತಾಗಿಯೂ ಅದರ ಆತ್ಮವು ಜನಾಂಗೀಯವಾದಿಯಾಗಿತ್ತು. ತೀವ್ರವಾದಿ ಬಿಳಿ ಶ್ರೇಷ್ಠತೆ(white supremacy) ವಿಕೃತಿಯ ಪರವಾಗಿತ್ತು. ಆ ಚಲನಚಿತ್ರದ ರಾಜಕೀಯ ನಿಲುವು ಕಪ್ಪು ಜನರು ಗಲ್ಲಿಗೇರಿಸಲ್ಪಡಲು ಯೋಗ್ಯರು ಎಂದು ಹೇಳುತ್ತದೆ. ಕಪ್ಪು ವರ್ಣೀಯರು ಬಿಳಿಯ ಮಹಿಳೆಯರ ಮೇಲೆ ಕಣ್ಣಿಟ್ಟಿರುವ ವಿಲನ್ ಆಗಿ ಚಿತ್ರಿತವಾಗಿದೆ. ಗ್ರಿಫಿತ್ ಈ ಚಲನಚಿತ್ರದಲ್ಲಿ ಕಪ್ಪು ಜನರಿಗೆ ಹಕ್ಕುಗಳನ್ನು ನೀಡುವುದು ತೀರಾ ಭಯಾನಕ ತಪ್ಪು ಎಂದು ವಾದಿಸುತ್ತಾನೆ, ಅವರು ಭಯಾನಕ ಕೃತ್ಯಗಳನ್ನು ಮಾಡಿದ್ದಾರೆ ಎಂದು ತೋರಿಸುತ್ತಾನೆ. ಮತ್ತು ಆ ಕಾಲದಲ್ಲಿ ಬಿಳಿ ಶ್ರೇಷ್ಠತೆ ಪರ, ಕಪ್ಪು ಜನರ ವಿರುದ್ಧ ದ್ವೇಷ ಬಿತ್ತುವುದರ ಜೊತೆಗೆ ಭಯೋತ್ಪಾದಕರಾಗಿದ್ದ. ಕುಕ್ಲಕ್ಸ್ ಕ್ಲಾನ್ (KKK) ಸಂಘಟನೆಯನ್ನು ಅಮೆರಿಕವನ್ನು ರಕ್ಷಿಸಿದ ಅದ್ಭುತ ರಕ್ಷಕ ಎಂದು ಚಿತ್ರಿಸುತ್ತಾನೆ. ಮೇಕಿಂಗ್‌ನಲ್ಲಿ ಯಶಸ್ವಿಯಾಗಿದ್ದ ಈ ಚಲನಚಿತ್ರವು ಜನಾಂಗೀಯವಾದಿ KKKಯನ್ನು ಪುನರುಜ್ಜೀವನಗೊಳಿಸಿದ ಕೀರ್ತಿಯನ್ನು ಪಡೆದಿದೆ. ಅವರು ಇದನ್ನು ತಮ್ಮ ಸಾಧನವಾಗಿ ಬಳಸಿಕೊಂಡರು. 1915ರ ಹೊತ್ತಿಗೆ ಕುಕ್ಲಕ್ಸ್ ಕ್ಲಾನ್ ಒಂದು ರೀತಿಯಲ್ಲಿ ಸತ್ತ ಸಂಸ್ಥೆಯಾಗಿತ್ತು, ಆದರೆ ಚಲನಚಿತ್ರ ಬಿಡುಗಡೆಯಾಗಿ ಯಶಸ್ವಿಯಾದಾಗ, KKK ಪುನಃ ಚಟುವಟಿಕೆ ಪ್ರಾರಂಭಿಸಿತು.
ವಿಮರ್ಶಕ ಪಾಲ್ ಮ್ಯಾಕ್‌ಇವಾನ್ ‘KKK ಚಲನಚಿತ್ರದ ಯಶಸ್ಸನ್ನು ಬಂಡವಾಳವಾಗಿಸಿಕೊಂಡಿತು. ಮತ್ತು 1920ರ ದಶಕದಲ್ಲಿ ಯುಎಸ್ಎನ ಒಂದು ಬೃಹತ್ ಸಂಘಟನೆಯಾಯಿತು’ ಎಂದು ಹೇಳುತ್ತಾರೆ. ದಶಕಗಳ ಕಾಲ ಅಮೆರಿಕನ್ನರಿಗೆ ತಮ್ಮ ರಾಷ್ಟ್ರದ ಜನನದ ಸ್ಮರಣೆಯ ದ್ಯೋತಕವಾಗಿ ‘ದ ಬರ್ತ್ ಆಫ್ ನೇಷನ್’ ಒಂದು ಹೆಮ್ಮೆಯಾಗಿತ್ತು. ಕಪ್ಪು ಜನರ ವಿರುದ್ಧದ ಅದರ ವಿಕೃತಿ ಅವರಿಗೆ ಲಜ್ಜೆ ಎನಿಸಲಿಲ್ಲ. ಆಗಿನ ಅಧ್ಯಕ್ಷ ವುಡ್ರೋ ವಿಲ್ಸನ್ ಈ ಸಿನಿಮಾವನ್ನು ವೈಟ್ ಹೌಸ್‌ನಲ್ಲಿ ಪ್ರಥಮ ಪ್ರದರ್ಶನ ಮಾಡಿದರು. ಎಲೆನ್ ಸ್ಕಾಟ್ ‘ನನ್ನ ತಾಯಿಗೆ ಆಕೆ ಮತ್ತು ಆಕೆಯ ಸ್ನೇಹಿತೆ ಬಿಳಿಯರು ಪ್ರೇಕ್ಷಕರಿದ್ದ ಥಿಯೇಟರ್‌ನಿಂದ ಶೀಘ್ರವಾಗಿ ಮತ್ತು ಕಣ್ಣುಗಳನ್ನು ತಗ್ಗಿಸಿಕೊಂಡು ಹೊರನಡೆದದ್ದು ಮಾತ್ರ ನೆನಪಿತ್ತು. ಆ ವರ್ಷ 1915 ಆಗಿತ್ತು’ ಎಂದು ಬರೆಯುತ್ತಾರೆ.

ಈ ಪ್ರೊಪಗ್ಯಾಂಡ ಸಿನಿಮಾ ʼಧುರಂದರ್ʼ ಹಿಟ್ ಆಗಿದೆ, ಬಹುತೇಕರು ಅದರ ಮೇಕಿಂಗ್, ತಾಂತ್ರಿಕತೆ ಕುರಿತು ಹೊಗಳುತ್ತಿದ್ದಾರೆ. ನೂರು ವರ್ಷಗಳ ಹಿಂದೆ ‘ದ ಬರ್ತ್ ಆಫ್ ನೇಷನ್’ ಕುರಿತು ಅಮೆರಿಕನ್ನರು ಮಾಡಿದ ತಪ್ಪುಗಳನ್ನು ಈಗ ಭಾರತದ ಜನತೆ ಮಾಡುತ್ತಿದ್ದಾರೆ. ರಾಷ್ಟ್ರೀಯತೆ ಎನ್ನುವ ಅಫೀಮಿನ ಮತ್ತೇರಿಸಿಕೊಂಡ ಇವರಿಗೆ ʼಧುರಂದರ್ʼ ತರಹದ ಸಿನಿಮಾ ಬಿತ್ತುವ ದ್ವೇಷ, ಬಲಪಂಥೀಯತೆಯ ವೈಭವೀಕರಣ ಅರಿವಾಗುತ್ತಿಲ್ಲ. ಸಿನಿಮಾ ನೋಡಿದ ಮೇಲೆ ಯಾರೋ ಲಜ್ಜೆಯಿಂದ ತಲೆ ತಗ್ಗಿಸಿ ಹೊರ ಬರುತ್ತಿಲ್ಲ ಎಂದರೆ ಈ ದೇಶವು ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯವನ್ನು ನಿರೀಕ್ಷಿಸಬೇಕಾಗಿದೆ.
ಮುಗಿಯದ ಟಿಪ್ಪಣಿಗಳು
ಹಾಲಿವುಡ್‌ನ ಟಾಪ್ ಗನ್ & ಮಾವೆರಿಕ್, ಜೀರೋ ಡಾರ್ಕ್ ಥರ್ಟಿ, ಅರ್ಗೋ, ಅಮೆರಿಕನ್ ಸ್ನಿಪ್ಪರ್ ಮುಂತಾದ ಪ್ರೊಪಗ್ಯಾಂಡ ಸಿನಿಮಾಗಳ ಸಾಲಿಗೆ ಸೇರುವ ʼಧುರಂದರ್ʼ, 1935ರಲ್ಲಿ ಬಿಡುಗಡೆಯಾದ ಲೇನಿ ರೈಫೆನಸ್ತಾಲ್‌ಳ ನಾಜಿ ಪ್ರೊಪಗ್ಯಾಂಡ ಸಿನಿಮಾ ʼದ ಟ್ರೈಂಪ್ ಆಫ್ ದ ವಿಲ್ʼನ ಮನಸ್ಥಿತಿಯನ್ನು ಹೊಂದಿದೆ. ತನ್ನ ಮೊದಲ ಸಿನಿಮಾ ʼಉರಿʼಯಲ್ಲಿ ʼಅವರಿಗೆ ಕಾಶ್ಮೀರ ಬೇಕಾಗಿದೆ, ನಮಗೆ ಅವರ ತಲೆʼ ಎನ್ನುವಂತಹ ತೀವ್ರವಾದಿ ಸಂಭಾಷಣೆಗಳಿಂದ ಶುರುವಾಗಿ ʼಧುರಂದರ್ʼನಲ್ಲಿ ʼಇದು ಹೊಸ ಭಾರತ… ನಾವು ಮನೆಯೊಳಗೆ ನುಗ್ಗುತ್ತೇವೆ… ಸಾಯಿಸುತ್ತೇವೆ…ʼ ಎಂದು ಹೇಳುವಲ್ಲಿಗೆ ಬಂದು ತಲುಪಿದ್ದಾರೆ. ಧರ್ ಅವರು ಮೋದಿ ನೇತೃತ್ವದ ಸರ್ಕಾರವು 2014 ರಿಂದ 2024ರವರೆಗೆ ನಡೆದು ಬಂದ ದಾರಿಯ ಅಧಿಕೃತ ದಾಖಲೆಕಾರರಾಗಿದ್ದಾರೆ.
ಇದನ್ನು ಓದಿದ್ದೀರಾ?: ಜಗತ್ತಿನ ಗಮನ ಸೆಳೆಯುತ್ತಿರುವ ಗ್ರೆಟಾ ಥನ್‌ಬರ್ಗ್; ಭಾರತದ ರೈತರನ್ನು ಬೆಂಬಲಿಸಿದ್ದ ಪರಿಸರ ಹೋರಾಟಗಾರ್ತಿ
ಸಿನಿಮಾ ಎನ್ನುವುದು ಕಲೆಯು ಸಾರ್ವಜನಿಕ ದಾಖಲೆಯಾಗಿದೆ. ಜನರ ಭಾವನೆಗಳ ಪ್ರತಿಬಿಂಬವೂ ಹೌದು. ಇದನ್ನು ಮಂಡಿಸುವಾಗ ನೈತಿಕತೆ ಮತ್ತು ಅನೈತಿಕತೆ ನಡುವೆ ಗೆರೆ ಇರುತ್ತದೆ. ಸತ್ಯದ ಪರವಾಗಿರಬೇಕಾಗುತ್ತದೆ. ಧರ್ ತರಹದ ನಿರ್ದೇಶಕರು ಈ ಗೆರೆಯನ್ನು ಅಳಿಸಿ ಹಾಕುತ್ತಾರೆ. ಸುಳ್ಳುಗಳನ್ನು ಸೃಷ್ಟಿಸಿ ಅದನ್ನೇ ಜನರ ಭಾವನೆಗಳು ಎಂದು ಬಿಂಬಿಸಿ ಯಶಸ್ವಿಯಾಗುತ್ತಾರೆ. ಇದು ಇಂದಿನ ಬಿಕ್ಕಟ್ಟಾಗಿದೆ. ದೇಶದ ಭದ್ರತೆ, ಜಿಯೋ ಪಾಲಿಟಿಕ್ಸ್, ಸೆಕ್ಯುಲರಿಸಂ, ತೀವ್ರವಾದಿ ಮುಂತಾದ ವಿಚಾರಗಳ ಕುರಿತು ಸಿನಿಮಾ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಸತ್ಯ ಹೇಳುವಲ್ಲಿ ಮರೆತರೂ ಪರವಾಗಿಲ್ಲ, ಸುಳ್ಳನ್ನು ಮಾತ್ರ ಹೇಳಲಾರೆ ಎನ್ನುವ ಕನಿಷ್ಠ ನೈತಿಕತೆ ಬೇಕಾಗುತ್ತದೆ. ಧರ್ ತರಹದ ಪ್ರೊಪಗ್ಯಾಂಡ ನಿರ್ದೇಶಕರು ಇಂತಹ ಚರ್ಚೆ, ಸಂವಾದವನ್ನೇ ತಿರಸ್ಕರಿಸಿ ಸತ್ಯಕ್ಕೆ ಅಪಚಾರ ಎಸಗುವ, ಇತಿಹಾಸ ತಿರುಚುವಿಕೆಯ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಾರೆ. ಇದಕ್ಕೆ ಬಾಕ್ಸ್ ಆಫೀಸ್ ಲೆಕ್ಕಾಚಾರವೂ ಸೇರಿಕೊಂಡಾಗ ʼಧುರಂದರ್ʼ ತರಹದ ಅಪಾಯ ಧುತ್ತನೆ ಬಂದೆರಗುತ್ತದೆ. ಇದರಿಂದ ಪಾರಾಗುವ ಬಗೆ ಹೇಗೆ?

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ




