ಕೃಷಿ ಸಚಿವರ ಸೂಚನೆಯನ್ನು ಗೌರವಿಸದ ಕುಲಪತಿ: ಕೃಷಿ ವಿವಿಗಳಿಗೇ ‘ಕಿಸಾನ್ ಸತ್ಯಾಗ್ರಹ’ ಬೇಡವಾಯಿತೇ?

Date:

ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದ ಹೋರಾಟದ ‘ಕಿಸಾನ್ ಸತ್ಯಾಗ್ರಹ’ವನ್ನು ನೋಡುವ, ಆ ಮೂಲಕ ದೇಶದ ರೈತರ, ವಿವಿಧ ಕೃಷಿ ತಜ್ಞರ ಅಭಿಪ್ರಾಯಗಳನ್ನು ತಿಳಿಯುವ ಮತ್ತು ವಿಶ್ಲೇಷಿಸುವ ಅಥವಾ ತಾತ್ವಿಕವಾಗಿ ವಿರೋಧಿಸುವ ಅಕೆಡೆಮಿಕ್ ಉತ್ಸುಕತೆಯನ್ನು ಮಾನವಿಕ, ಕಾನೂನು, ಮಾಧ್ಯಮ ಮತ್ತು ಕೃಷಿ ವಿದ್ಯಾರ್ಥಿಗಳು ಹಾಗೂ ಬೋಧಕವರ್ಗ ತೋರಬೇಕಲ್ಲದೆ ಮತ್ಯಾರು ತೋರಬೇಕು? ಅಂತಹ ಅವಕಾಶವನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡುವುದು ವಿಶ್ವವಿದ್ಯಾಲಯಗಳ ಕೆಲಸವಲ್ಲವೇ? 

ದೇಶದ ರೈತರು ಮತ್ತೆ ಹೋರಾಟಕ್ಕೆ ಸಜ್ಜಾಗಿ ಮತ್ತೊಮ್ಮೆ ದೆಹಲಿಯ ಕಡೆಗೆ ಹೊರಟಿದ್ದಾರೆ. ಕಳೆದ ಬಾರಿ ದೆಹಲಿಗೆ ಹೊರಟ ರೈತರನ್ನು ಅಲ್ಲಿಗೆ ತಲುಪದಂತೆ ಪ್ರಭುತ್ವ ಏನೆಲ್ಲ ತಂತ್ರ, ಪೊಲೀಸ್ ಶಕ್ತಿಗಳನ್ನು ಬಳಸಿತೋ, ಅವನ್ನೇ ಈ ಬಾರಿ ಇನ್ನಷ್ಟು ಉಗ್ರವಾಗಿ ಬಳಸುತ್ತಿದೆ. ಆಗ ರೈತರು ಅವು ಯಾವುವನ್ನೂ ಲೆಕ್ಕಿಸದೆ, ಒಡ್ಡಿದ್ದ ಅಡೆತಡೆಗಳನ್ನು ಮುರಿದು ಮುನ್ನುಗ್ಗಿ ದೆಹಲಿಯ ಐದು ಗಡಿಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯ ಧರಣಿ ಕುಳಿತು, ಮೂರೂ ಕರಾಳ ಕೃಷಿ ಕಾಯ್ದೆಗಳನ್ನು ಹಿಮ್ಮೆಟ್ಟಿಸಿದ್ದರು. ತಮ್ಮ ಎಲ್ಲ ಬೇಡಿಕೆಗಳನ್ನೂ ಈಡೇರಿಸುತ್ತೇವೆಂದು ಪ್ರಭುತ್ವದಿಂದ ಲಿಖಿತ ಪತ್ರ ಪಡೆದ ನಂತರವೇ ದೆಹಲಿಯ ಗಡಿಗಳಿಂದ ತಮ್ಮ ತಮ್ಮ ರಾಜ್ಯ, ಊರುಗಳಿಗೆ ಮರಳಿದ್ದರು.

ಅಸಲಿಗೆ ರೈತರು ಅಂದಿನ ಹೋರಾಟವನ್ನು ಮುಕ್ತಾಯಗೊಳಿಸಿರಲಿಲ್ಲ. ತಮ್ಮ ಬೇಡಿಕೆಗಳನ್ನು ಒಕ್ಕೂಟ ಸರ್ಕಾರ ಈಡೇರಿಸುತ್ತದೆಂಬ ವಿಶ್ವಾಸದೊಂದಿಗೆ ಹೋರಾಟಕ್ಕೆ ಒಂದು ವಿರಾಮ ಕೊಡುತ್ತಿದ್ದೇವೆಂದು ಹೇಳಿದ್ದರು. ಅದಾಗಿ ಸುಮಾರು ಎರಡು ವರ್ಷಗಳ ನಂತರವೂ ಸರ್ಕಾರ ಅವರ ಯಾವೊಂದು ಬೇಡಿಕೆಯನ್ನೂ ಮಾನ್ಯ ಮಾಡದೆ ತನ್ನ ಮಾತಿಗೆ ತಾನೇ ತಪ್ಪಿತು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಚೌಕಟ್ಟನ್ನು ನೀಡಲಿಲ್ಲ, ವಿದ್ಯುತ್ ಕಾಯ್ದೆಯನ್ನು ಹಿಂಪಡೆಯಲೂ ಇಲ್ಲ. ಸಂಪು ಹೂಡಿದ್ದ ರೈತರ ಮೇಲೆ ಹಾಕಿದ್ದ ಕೇಸುಗಳನ್ನೂ ವಾಪಸ್ಸು ಪಡೆಯಲಿಲ್ಲ. ಅಲ್ಲದೇ, ಲಖೀಂಪುರ್ ಖೇರಿಯಲ್ಲಿ ಪ್ರತಿಭಟನೆಯಲ್ಲಿದ್ದ ರೈತರ ಮೇಲೆ ವಾಹನ ಚಲಾಯಿಸಿ ಐದು ಮಂದಿ ರೈತರನ್ನೂ, ಒಬ್ಬ ಪತ್ರಕರ್ತರನ್ನೂ ಕೊಂದವರಿಗೆ ಶಿಕ್ಷೆಯೂ ಆಗಲಿಲ್ಲ. ಅವರು ಇಂದಿಗೂ ಸ್ವತಂತ್ರವಾಗಿಯೇ ತಿರುಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ತಾನೇ ನೀಡಿದ್ದ ಆಶ್ವಾಸನೆಯನ್ನು ಮಾನ್ಯ ಮಾಡುವಂತೆ ರೈತರು ಇಂದು ಕೇಳುತ್ತಿರುವುದರಲ್ಲಿ, ವಿರಾಮ ನೀಡಿದ್ದ ತಮ್ಮ ಹೋರಾಟವನ್ನು ಮುಂದುವರೆಸುತ್ತಿರುವುದಲ್ಲಿ ತಪ್ಪೇ ಇಲ್ಲ. ಆದರೆ ಸರಕಾರಕ್ಕೆ ಅವರ ಬೇಡಿಕೆಗಳನ್ನು ಮನ್ನಿಸುವ ಯಾವುದೇ ಇರಾದೆ ಇಂದು ಇದ್ದಂತಿಲ್ಲ, ಬಹುಶಃ ಅಂದೂ ಇರಲಿಲ್ಲ. ಮಾನವ ಚರಿತ್ರೆಯಲ್ಲೇ ಬೃಹತ್ ಮತ್ತು ಸುದೀರ್ಘ ರೈತ ಹೋರಾಟ ಎನ್ನುವ ಖ್ಯಾತಿ ಗಳಿಸಿಕೊಂಡು, ಅಂತಾರಾಷ್ಟ್ರೀಯ ರೈತಾಪಿ ಹಾಗೂ ಮಾನವೀಯ ವೇದಿಕೆಗಳ ನೈತಿಕ ಬೆಂಬಲ ಪಡೆಯುತ್ತಿದ್ದ ಹೋರಾಟವನ್ನು ದೆಹಲಿಯ ಗಡಿಗಳಿಂದ ತೆರವುಗೊಳಿಸುವುದು ಮತ್ತು ತನಗಾಗುತ್ತಿರುವ ಮುಜುಗರ, ಒತ್ತಡದಿಂದ ತಪ್ಪಿಸಿಕೊಳ್ಳುವುದಷ್ಟೇ ಅಂದು ಪ್ರಭುತ್ವದ ಉದ್ದೇಶವಾಗಿತ್ತು ಎನಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂದಿನ ಹೋರಾಟದಲ್ಲಿ ಎಂಟುನೂರಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದರೆ, ಈ ಎರಡನೇ ಸುತ್ತಿನಲ್ಲಿ ಈಗಾಗಲೇ ಮೂರು ಮಂದಿ ರೈತರು, ಒಬ್ಬ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ. ಹಲವಾರು ರೈತರು ಗಾಯಗೊಂಡಿದ್ದಾರೆ. ಈ ಸಾವುನೋವುಗಳಿಗೆ ಬೆಲೆಯೇ ಇಲ್ಲವೇನೋ ಎನ್ನುವಂತೆ, ಪ್ರಭುತ್ವ ಇಂದು ನಾಲ್ಕಾರು ಸುತ್ತು ರೈತ ಮುಖಂಡರೊಂದಿಗೆ ಮಾತುಕತೆಗಳನ್ನು ನಡೆಸಿ, ಇಲ್ಲದ ಸಬೂಬುಗಳು, ಕುಟಿಲ ಪ್ರಸ್ತಾವಗಳೊಂದಿಗೆ ಸಮಯ ತಳ್ಳುತ್ತಿದೆ. ಹಾಗೆಯೇ, ದಿನಗಳೆದಂತೆಲ್ಲ ರೈತ ಸಂಘಟನೆಗಳು ತಮ್ಮೊಳಗೆ ಮೂಡಿದ್ದ ಭಿನ್ನಾಭಿಪ್ರಾಯಗಳನ್ನು ಹಿಂದಿಕ್ಕಿ ಮತ್ತೆ ಒಮ್ಮತದ ಹೋರಾಟಕ್ಕೆ, ಇನ್ನಷ್ಟು ಗಟ್ಟಿಯಾದ ಹೋರಾಟಕ್ಕೆ ಸಿದ್ಧವಾಗುತ್ತಿವೆ ಎನಿಸುತ್ತಿದೆ.

ನಿರ್ದೇಶಕ ಕೇಸರಿ ಹರವೂ ಮತ್ತು ಕ್ಯಾಮರಾಮನ್ ನವೀನ್ ಕುಮಾರ್
ನಿರ್ದೇಶಕ ಕೇಸರಿ ಹರವೂ ಮತ್ತು ಕ್ಯಾಮರಾಮನ್ ನವೀನ್ ಕುಮಾರ್

ಪ್ರಭುತ್ವ ಮತ್ತು ದೇಶದ ರೈತರ ಈ ತಾತ್ವಿಕ ತಿಕ್ಕಾಟ ಈ ರೀತಿಯಲ್ಲಿ ಪುನರಾವರ್ತನೆ ಆಗುತ್ತಿದ್ದರೆ, ಪ್ರಭುತ್ವವನ್ನು ಓಲೈಸುವ ಒಂದು ದೊಡ್ಡ ಜನಸಮೂಹ ಮತ್ತು ಮಾಧ್ಯಮಗಳ ವರಸೆಯೂ ಪುನರಾವರ್ತನೆ ಆಗುತ್ತಿದೆ. ಇದು ಎಷ್ಟು ಕುತೂಹಲಕರವೋ, ಅಷ್ಟೇ ನಿರೀಕ್ಷಿತ ಕೂಡ. ಎರಡು ವರ್ಷಗಳ ಹಿಂದೆ ಸಾಕುನಾಯಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಭುತ್ವ ಬೆಂಬಲಿಗರ ದೊಡ್ಡ ಜನಸಮೂಹದಲ್ಲಿ ಒಂದು ರೈತವಿರೋಧೀ ಉದ್ವಿಗ್ನ ಮನಸ್ಥಿತಿಯನ್ನು ನಿರ್ಮಾಣ ಮಾಡಿದ್ದವು. ಹೋರಾಟನಿರತ ರೈತರನ್ನು ಹತ್ತಾರು ರೀತಿಯಲ್ಲಿ ಅಪನಾಮಕರಣ ಮಾಡಿ, ಆರೋಪಗಳನ್ನು ಹೊರೆಸಿ ತಮ್ಮ ಕಲ್ಪನಾಶಕ್ತಿಯನ್ನು ಮೆರೆದಿದ್ದವು. ಪ್ರಭುತ್ವದ ಭಾಷೆಯೂ ಅದರ ಬೆಂಬಲಿಗರ ಭಾಷೆಯೂ ಒಂದೇ ಆಗಿತ್ತು. ಪ್ರಭುತ್ವದ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತ ಪುಂಡು ಪ್ರತಿಹೋರಾಟಗಳನ್ನು ಪ್ರದರ್ಶಿಸಿದ್ದವು. ಈ ಬಾರಿಯೂ ಅಂತಹ ಪ್ರಭುತ್ವ ಪ್ರೇರಿತ ತಂತ್ರೋಪಾಯಗಳು ಮತ್ತೆ ತಲೆಯೆತ್ತಿದರೆ ಆಶ್ಚರ್ಯವಿಲ್ಲ. ಈ ವಿದ್ಯಮಾನ ರೈತ ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಎಲ್ಲ ಜನಪರ ಪ್ರತಿರೋಧಗಳಲ್ಲೂ, ಸರ್ಕಾರವನ್ನು ಪ್ರಶ್ನಿಸುವ ಸನ್ನಿವೇಶಗಳಲ್ಲೂ ಒಂದೇ ಬಗೆಯ ಸವಿಸ್ತಾರ ವಿನ್ಯಾಸದಲ್ಲಿ ಪ್ರಕಟವಾಗುತ್ತಿದೆ. ದೊಡ್ಡ ಜನಸಂಖ್ಯೆ ಪ್ರಭುತ್ವವನ್ನು ಸಮರ್ಥಿಸುವುದು, ಪ್ರಭುತ್ವವು ತನ್ನ ಬೆಂಬಲಿಗ ಸಮೂಹವನ್ನು ಉತ್ತೇಜಿಸುವುದು, ತಂತ್ರ ಸರಬರಾಜು ಮಾಡುವುದು ಮತ್ತು ಆ ಮೂಲಕ ಪ್ರಜಾಪ್ರಭುತ್ವವನ್ನು ಬದಿಗೆ ಸರಿಸುವುದು ಫ್ಯಾಸಿಸಂನ ಮೂಲ ಲಕ್ಷಣ. ಅದು ಪ್ರೊಪಗ್ಯಾಂಡಾದ ಒಂದು ಪ್ರಕ್ರಿಯೆ.

ಇಂತಹ ಪ್ರೊಪಗ್ಯಾಂಡಾದಿಂದಾಗಿ ಪ್ರಜೆಗಳ ಮತ್ತು ರೈತರ ಬೇಡಿಕೆಗಳ ಒಳಹೊರಗನ್ನು ಅರಿಯದ ಜನ ಸಾಮಾನ್ಯರ ಮನಸ್ಸಿನಲ್ಲಿ ಹೋರಾಟನಿರತರ ಸಂಪು ಹುಸಿ ಹೋರಾಟ, ಅದು ಸಮರ್ಥನೀಯವಲ್ಲ, ಅವರ ಬೇಡಿಕೆಗಳು ಎಲ್ಲ ರೈತರ ಬೇಡಿಕೆಗಳಲ್ಲ, ಪ್ರಭುತ್ವದ ‘ಪುರೋಗಾಮಿ’ ನೀತಿಗಳನ್ನು ಬೇಕೆಂದೇ ತಿರಸ್ಕರಿಸಲಾಗುತ್ತಿದೆ, ಪ್ರಭುತ್ವವನ್ನು ವಿರೋಧಿಸುವುದೇ ಅವರ ಉದ್ದೇಶ – ಎನ್ನುವ ಬಿತ್ತಿದ ಭಾವನೆಗಳು ಇಂದಿಗೂ ಇವೆ. ಇಂತಹ ಮನಸ್ಥಿತಿ ಅನೇಕ ಶೈಕ್ಷಣಿಕ ಮಹಾಸಂಸ್ಥೆಗಳನ್ನೂ, ಅಷ್ಟೇಕೆ ವಿಶ್ವವಿದ್ಯಾಲಯಗಳನ್ನೂ, ಅಲ್ಲಿಯ ಆಡಳಿತ ಮತ್ತು ಬೋಧಕವರ್ಗಗಳನ್ನೂ ಆವರಿಸಿದೆ ಎನ್ನುವುದು ದುರದೃಷ್ಟಕರ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಾರ್ಪೊರೇಟ್‌ಗೆ ರೆಡ್ ಕಾರ್ಪೆಟ್, ರೈತರಿಗೆ ಮುಳ್ಳಿನ ಬೇಲಿ- ಇದು ಮೋದಿ ಶೈಲಿ

ಆಗ ನಡೆದ ಚಾರಿತ್ರಿಕ ರೈತ ಹೋರಾಟವನ್ನು ನಾವು ಚಿತ್ರೀಕರಿಸಿ ‘ಕಿಸಾನ್ ಸತ್ಯಾಗ್ರಹ‘ ಎನ್ನುವ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದೆವು ಎನ್ನುವುದು ಅನೇಕರಿಗೆ ತಿಳಿದೇ ಇದೆ. ಚಿತ್ರವನ್ನು ರಾಜ್ಯದ, ದೇಶದ ಅನೇಕ ಜನರು ನೋಡಿದ್ದಾರೆ, ನಾಲ್ಕಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳು ಆಹ್ವಾನಿಸಿ ಪ್ರದರ್ಶಿಸಿವೆ. ಹಲವು ವೇದಿಕೆಗಳಲ್ಲಿ ಚಿತ್ರದ ಕುರಿತ ಮೌಲಿಕ ಚರ್ಚೆ, ಸಂವಾದಗಳೂ ನಡೆದಿವೆ.

ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಕಾಲೇಜುಗಳಲ್ಲಿನ ಮಾನವಿಕ, ಕಾನೂನು ಹಾಗೂ ಮಾಧ್ಯಮ ವಿದ್ಯಾರ್ಥಿಗಳಿಗೆ ಮತ್ತು ಮುಖ್ಯವಾಗಿ, ಎಲ್ಲ ಕೃಷಿ ವಿಶ್ವವಿದ್ಯಾಲಯಗಳ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಚಿತ್ರವನ್ನು ಪ್ರದರ್ಶಿಸಿ, ಅವರಲ್ಲಿ ಒಂದು ಸಂವಾದವನ್ನು ಹುಟ್ಟುಹಾಕಬೇಕೆನ್ನುವ ಯೋಚನೆ ಸಹಜವಾಗಿ ಮೊಳೆಯಿತು. ಆದರೆ, ಆಗ ರಾಜ್ಯದಲ್ಲಿ ಮತ್ತು ಒಕ್ಕೂಟದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದುದರಿಂದ ಸದ್ಯಕ್ಕೆ ಅದಾಗದು ಎಂದು ತೀರ್ಮಾನಿಸಿ ಮುಂದೂಡಲಾಯಿತು.

ರಾಜ್ಯದಲ್ಲಿ ಚುನಾವಣೆಗಳು ನಡೆದು, ಫ್ಯಾಸಿಸಂ ಅನ್ನು ವಿರೋಧಿಸಿ, ಜನಪರ ಆಡಳಿತ ನೀಡುವ ವಾಗ್ದಾನದೊಂದಿಗೆ ಬಹುಮತ ಪಡೆದುಕೊಂಡ ಕಾಂಗ್ರೆಸ್ ಅಧಿಕಾರಕ್ಕೇರಿದ ಮೇಲೆ ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಯವರನ್ನು, ಒಂದೆರಡು ಕೃಷಿ ವಿಶ್ವವಿದ್ಯಾಲಯಗಳ ಡೀನ್‌ಗಳನ್ನು ಸಂಪರ್ಕಿಸಲಾಯಿತು. ಆಪ್ತ ಕಾರ್ಯದರ್ಶಿಯವರು ಚಿತ್ರ ನೋಡಲು ಮುಂದಾದರಾದರೂ, ಚಿತ್ರದ 86 ನಿಮಿಷ ಅವಧಿಯಲ್ಲಿ ಅಲ್ಲಲ್ಲಿ ಹತ್ತು ಹನ್ನೆರಡು ನಿಮಿಷಗಳನ್ನಷ್ಟೇ ನೋಡಿದರು. ಅವರು ಅದನ್ನು ಸಚಿವರ ಗಮನಕ್ಕೆ ತಂದರೋ ಇಲ್ಲವೋ ತಿಳಿಯಲಿಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು

ಕೃಷಿ ವಿಶ್ವವಿದ್ಯಾಲಯಗಳಿಂದ ಸ್ಪಂದನೆಯೇ ದೊರಕಲಿಲ್ಲ. ಕೆಲವರನ್ನು ಖುದ್ದಾಗಿ ಭೇಟಿ ಮಾಡಿದಾಗಲೂ ಅವರಿಂದ ಆಶ್ಚರ್ಯಕರ ರೀತಿಯಲ್ಲಿ ನೇತ್ಯಾತ್ಮಕ ಪ್ರತಿಕ್ರಿಯೆಯೇ ಸಿಕ್ಕಿತು. ಕೊನೆಗೊಮ್ಮೆ ರಾಜ್ಯದ ಕೃಷಿ ಸಚಿವರನ್ನು ಭೇಟಿಯಾಗಿ ವಿಷಯ ತಿಳಿಸಿದಾಗ ಅವರು ಆ ಕ್ಷಣವೇ ಒಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಫೋನ್ ಮಾಡಿ, ಚಿತ್ರವನ್ನು ವೀಕ್ಷಿಸಿ ತಮಗೆ ತಿಳಿಸುವಂತೆ ಸೂಚಿಸಿದರು. ಕುಲಪತಿಗಳು ಎರಡು ಬಾರಿ ಸಮಯ ನಿಗದಿ ಮಾಡಿ, ಕೊನೆ ಗಳಿಗೆಯಲ್ಲಿ ರದ್ದು ಮಾಡಿದರು. ಇದಾಗಿ ಮೂರು ತಿಂಗಳಾದರೂ ಆ ಕುಲಪತಿಗಳಿಗೆ ಚಿತ್ರವನ್ನು ನೋಡಲು ಒಂದೂವರೆ ಗಂಟೆಯಷ್ಟು ಸಮಯ ಸಿಕ್ಕಿಲ್ಲ! ಪ್ರದರ್ಶನಕ್ಕೆ ತಗಲುವ ಕನಿಷ್ಠ ವೆಚ್ಚವನ್ನು ಆಯಾ ಕಾಲೇಜು ಅಥವಾ ವಿದ್ಯಾರ್ಥಿಗಳಿಂದ ಎತ್ತಬಹುದಾದ ಸಣ್ಣ ಪ್ರಮಾಣದ ಚಂದಾ ಮೂಲಕ ಭರಿಸಬೇಕು ಎನ್ನುವ ಬೇಡಿಕೆಯೂ ನಮ್ಮಿಂದ ಇತ್ತು. ಆದರೆ, ನಿರಾಕರಣೆಗೆ ಅದು ಪ್ರಮುಖ ಕಾರಣವಾಗಿರಲಿಲ್ಲ. ಒಮ್ಮೆ ಕುಲಪತಿಯವರು ಮಾತಿನ ನಡುವೆ, ನಮ್ಮ ಕ್ಯಾಂಪಸ್ಸುಗಳಲ್ಲಿ ಎಬಿವಿಪಿ ವಿದ್ಯಾರ್ಥಿಗಳಿದ್ದಾರೆ, ಈ ಚಿತ್ರವನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸುವುದೆಂದರೆ, ಕ್ಯಾಂಪಸ್ಸಿನಲ್ಲಿ ಶಾಂತಿ ಕದಡುವ ವಾತಾವರಣ ಸೃಷ್ಟಿಯಾಗಬಹುದು ಎಂದು ನೇರವಾಗಿ, ಆದರೆ ಖಾಸಗಿಯಾಗಿ ಹೇಳಿದರು. ಮತ್ತೊಂದು ಕೃಷಿ ವಿಶ್ವವಿದ್ಯಾಲಯದಿಂದಲೂ ಇದೇ ರೀತಿಯ ಮೌಖಿಕ ಉತ್ತರ ಬಂದಿತು. ಮತ್ತೂ ಒಂದು ಕಡೆಯಿಂದ ತೀರ ಸಂವೇದನಾರಹಿತ ಉತ್ತರವೂ ಬಂದಿತು.

ಹತ್ತಾರು ಪ್ರಶ್ನೆಗಳು ಏಳುತ್ತವೆ. ವಿದ್ಯಾರ್ಥಿಗಳಿಗೆ ಚಿತ್ರವನ್ನು ತೋರಿಸುವ ಮಾತು ಒತ್ತಟ್ಟಿಗಿರಲಿ, ಆಡಳಿತ ಮತ್ತು ಬೋಧಕವರ್ಗಕ್ಕೆ ಚಿತ್ರವನ್ನು ನೋಡಲೂ ಮನಸ್ಸಿಲ್ಲವೆಂದರೆ, ಇವರುಗಳೂ ರಾಜಕೀಯ ಪ್ರೇರಿತರೇ? ಪೂರ್ವಗ್ರಹ ಪೀಡಿತರಾಗಿದ್ದಾರೆಯೇ? ಆ ಪೂರ್ವಗ್ರಹವನ್ನು ಕ್ಯಾಂಪಸ್ಸಿನ ಒಂದು ಗುಂಪಿನ ವಿದ್ಯಾರ್ಥಿಗಳ ಮೇಲೆ ಆರೋಪಿಸಿ, ಇಡೀ ವಿದ್ಯಾರ್ಥಿ ಸಮೂಹವನ್ನು ಈ ಚಿತ್ರದ ವೀಕ್ಷಣೆಯಿಂದ ತಪ್ಪಿಸುತ್ತಿದ್ದಾರೆಯೇ? ಒಂದು ಗುಂಪಿನ ವಿದ್ಯಾರ್ಥಿಗಳು ಚಿತ್ರ ವೀಕ್ಷಣೆಯನ್ನು ವಿರೋಧಿಸುತ್ತಾರೆ ಎಂದರೆ ಅದು ಮಿಕ್ಕೆಲ್ಲ ವಿದ್ಯಾರ್ಥಿಗಳಿಗೂ ಅನ್ವಯವಾಗಬೇಕೇ? ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು, ರಾಜ್ಯದ ಕೃಷಿ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆಯುವ ವಿಶ್ವವಿದ್ಯಾಲಯಗಳು ಕೃಷಿ ಸಚಿವರ ಸೂಚನೆಯನ್ನೂ ಗೌರವಿಸದೆ ಸಮಯಾಭಾವದ ಸಬೂಬು ಹೇಳುತ್ತಿವೆಯೇ? ಇನ್ನೂ ನೇರವಾಗಿ ಹೇಳಬಹುದಾದರೆ, ಪ್ರೊಪಗ್ಯಾಂಡಾ ಹುಳುವಿನಿಂದ ಕಚ್ಚಿಸಿಕೊಂಡ ಅಧಿಕಾರಿಶಾಹಿ ಆ ನಂಜನ್ನು ತನ್ನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆಯೂ ಪಸರಿಸುವ ಕೆಲಸವನ್ನು ಮಾಡುತ್ತಿದೆಯೇ? ಫ್ಯಾಸಿಸಂ ಸಾಂಕ್ರಾಮಿಕವಾಗುವ ಬಗೆ ಹೀಗೆಯೇ.

ರೈತ ಹೋರಾಟ
ರೈತ ಹೋರಾಟ

ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದ ಹೋರಾಟದ ಚಿತ್ರಣವನ್ನು ನೋಡುವ, ಆ ಮೂಲಕ ದೇಶದ ರೈತರ, ವಿವಿಧ ಕೃಷಿ ತಜ್ಞರ ಅಭಿಪ್ರಾಯಗಳನ್ನು ತಿಳಿಯುವ ಮತ್ತು ವಿಶ್ಲೇಷಿಸುವ ಅಥವಾ ತಾತ್ವಿಕವಾಗಿ ವಿರೋಧಿಸುವ ಅಕೆಡೆಮಿಕ್ ಉತ್ಸುಕತೆಯನ್ನು ಮಾನವಿಕ, ಕಾನೂನು, ಮಾಧ್ಯಮ ಮತ್ತು ಕೃಷಿ ವಿದ್ಯಾರ್ಥಿಗಳು ಹಾಗೂ ಬೋಧಕವರ್ಗ ತೋರಬೇಕಲ್ಲದೆ ಮತ್ಯಾರು ತೋರಬೇಕು? ಅಂತಹ ಅವಕಾಶವನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡುವುದು ವಿಶ್ವವಿದ್ಯಾಲಯಗಳ ಕೆಲಸವಲ್ಲವೇ? ಇಂತಹ ವಂಚನೆಗೆ ನಮ್ಮ ರಾಜ್ಯದ ವಿದ್ಯಾರ್ಥಿಗಳು ಏಕೆ ಬಲಿಯಾಗಬೇಕು? ದೇಶದ ಜನರ ಅಭಿಪ್ರಾಯ, ಪ್ರತಿರೋಧಗಳ ಆಳ-ಅಗಲಗಳನ್ನು ತಿಳಿದು, ಚರ್ಚಿಸಿ, ತಮ್ಮದೇ ತೀರ್ಮಾನಕ್ಕೆ ಬರುವ ಮುಕ್ತ ವಾತಾವರಣ ದೇಶದ, ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲವೆಂದಾದರೆ, ಅಲ್ಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಲೋಪವಿದೆ ಎಂದೇ ಅರ್ಥ. ಅದು ದೀರ್ಘಕಾಲದಲ್ಲಿ ದೇಶಕ್ಕೇ ಮಾರಕ.

ರಾಜ್ಯದಲ್ಲಿ ಪುರೋಗಾಮಿ, ಸಮಾಜವಾದಿ ಆಶಯಗಳನ್ನು ಹೊತ್ತ ಪಕ್ಷದ ಆಡಳಿತ ಬಂದು ಏಳೆಂಟು ತಿಂಗಳು ಕಳೆದರೂ, ಹಲವಾರು ಇಲಾಖೆಗಳಲ್ಲಿ, ಅಧಿಕಾರಶಾಹಿ ಹಾಗೂ ನೌಕರವರ್ಗದಲ್ಲಿ ಮುಂಚಿನ ಪ್ರತಿಗಾಮಿ ಮನಸ್ಥಿತಿಯೇ ಉಳಿದಿರುವಂತೆ ತೋರುತ್ತಿದೆ. ‘ಈ ಸರ್ಕಾರದ ಆಡಳಿತ ಮತ್ತು ಆಶಯಗಳು ಒಂದು ತಾತ್ಕಾಲಿಕ ಅವಧಿಗಷ್ಟೇ’ ಎನ್ನುವ ವಿರೋಧಿಗಳ ಮನಸ್ಥಿತಿಯೇ ಇವರುಗಳಲ್ಲಿ ಇರಲಿಕ್ಕೂ ಸಾಕು. ಈ ಸೂಕ್ಷ್ಮ ವಿಚಾರಗಳು ಈ ಸರಕಾರಕ್ಕೆ ತಿಳಿದಿಲ್ಲವೆಂದೇನೂ ಇಲ್ಲ. ಸರ್ಕಾರದ ಚಿಂತನೆ ಒಂದು ತೆರನಾಗಿದ್ದು, ಅಧಿಕಾರಿ ವರ್ಗದ ಒಳಮನಸ್ಸು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಇದ್ದರೆ, ಆಡಳಿತದ ಯಾವ ಪ್ರಗತಿಪರ ಆಲೋಚನೆ, ಯೋಜನೆಗಳೂ ಪೂರ್ಣ ಸಾಫಲ್ಯ ಕಾಣಲಾರವು.

kesari haravu 1
ಕೇಸರಿ ಹರವೂ
+ posts

ಚಿತ್ರನಿರ್ದೇಶಕ, ಲೇಖಕ, ಸಾಮಾಜಿಕ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಕೇಸರಿ ಹರವೂ
ಕೇಸರಿ ಹರವೂ
ಚಿತ್ರನಿರ್ದೇಶಕ, ಲೇಖಕ, ಸಾಮಾಜಿಕ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...