ಐಟಿ ದಿಗ್ಗಜರು, ಬಿಜೆಪಿ-ಸಂಘಪರಿವಾರದ ನಾಯಕರು, ಸುದ್ದಿ ಮಾಧ್ಯಮಗಳು ಒಂದಾದರೆ- ಒಂದು ಸುದ್ದಿಯನ್ನು ಹೇಗೆಲ್ಲ ತಿರುಚಬಹುದು, ಯಾರನ್ನೆಲ್ಲ ಗುರಿ ಮಾಡಬಹುದು, ಎಂತಹ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಎಐ ಡೇಟಾ ಹಬ್ ಸಣ್ಣ ಉದಾಹರಣೆಯಷ್ಟೇ...
ಇತ್ತೀಚೆಗೆ ಐಟಿ-ಬಿಟಿ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡ ಕಿರಣ್ ಮಜುಂದಾರ್ ಷಾ ಮತ್ತು ಮೋಹನ್ ದಾಸ್ ಪೈ ಬೆಂಗಳೂರಿನ ಗುಂಡಿಬಿದ್ದ ರಸ್ತೆಗಳ ಬಗ್ಗೆ ಅಪಸ್ವರ ಎತ್ತಿದ್ದರು. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಐಟಿ ಇಂಡಸ್ಟ್ರಿ ಸೊರಗುತ್ತಿದೆ, ಕಂಪನಿಗಳು ಬೆಂಗಳೂರಿನಿಂದ ಹೊರಗೆ ಹೋಗಲು ತವಕಿಸುತ್ತಿವೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಫಲ ಎಂದಿದ್ದರು. ಟೆಕಿ ಜಗತ್ತಿನವರಾದ ಕಾರಣಕ್ಕೆ ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಅದೇ ಸಂದರ್ಭದಲ್ಲಿ, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ; ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗದಂತೆ ಕ್ರಮ ಕೈಗೊಳ್ಳಲು ಕೋರಿ ಮಾಹಿತಿ-ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಅದು ಸಂಘಪರಿವಾರದ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ಬೀದಿಗಿಳಿದು ಬೊಬ್ಬೆ ಹಾಕುವಂತೆ ಮಾಡಿತ್ತು. ಸುದ್ದಿ ಮಾಧ್ಯಮಗಳಲ್ಲಿ ಬ್ರೇಕಿಂಗ್ ಸುದ್ದಿ ಆಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.
ಒಂದು ಐಟಿ ಕ್ಷೇತ್ರದವರ ಅಪಸ್ವರ, ಮತ್ತೊಂದು ಸಂಘಪರಿವಾರದವರ ಅಸಮಾಧಾನ- ಎರಡಕ್ಕೂ ಗುರಿಯಾಗಿದ್ದವರು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ ಖರ್ಗೆಯವರು. ಅವರನ್ನು ಕೊಲ್ಲುವ, ಜಾತಿ ಹಿಡಿದು ಅವಾಚ್ಯವಾಗಿ ನಿಂದಿಸುವ ಕಿಡಿಗೇಡಿತನವೂ ನಡೆಯಿತು.
ಇದನ್ನು ಓದಿದ್ದೀರಾ?: ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಎಫೆಕ್ಟ್: ಸರ್ಕಾರಿ ಜಾಗದಲ್ಲಿ RSS ಸೇರಿ ಎಲ್ಲ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ
ಇದೇ ಸಂದರ್ಭದಲ್ಲಿ, ಇಂಟರ್ನೆಟ್ ಸರ್ಚ್ ಎಂಜಿನ್ ದಿಗ್ಗಜ ಗೂಗಲ್, ಭಾರತದ ಅತಿ ದೊಡ್ಡ ಎಐ ಡೇಟಾ ಸೆಂಟರ್ ಅನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಸ್ಥಾಪಿಸಲು, ಅಲ್ಲಿನ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಈ ಬೃಹತ್ ಯೋಜನೆಗೆ ಗೌತಮ್ ಅದಾನಿ ಗ್ರೂಪ್, ಏರ್‌ಟೆಲ್ ಮತ್ತು ಗೂಗಲ್ ಪಾಲುದಾರಿಕೆ ಇದೆ. ಅಮೆರಿಕದ ಹೊರಗೆ ಗೂಗಲ್ ಸ್ಥಾಪಿಸಲಿರುವ ಅತಿ ದೊಡ್ಡ ಎಐ ಹಬ್ ಇದಾಗಲಿದೆ. ಇದಕ್ಕಾಗಿ 15 ಬಿಲಿಯನ್ ಡಾಲರ್- ಅಂದರೆ 1,33,500 ಕೋಟಿ ರೂಪಾಯಿಗಳನ್ನು ಮುಂದಿನ 5 ವರ್ಷಗಳಲ್ಲಿ- 2026ರಿಂದ 2030ರವರೆಗೆ- ವಿನಿಯೋಗಿಸಲು ಉದ್ದೇಶಿಸಿದೆ ಎಂಬ ಸುದ್ದಿ ಹೊರಬಿತ್ತು.
ಸುದ್ದಿ ಮಾಧ್ಯಮಗಳು, ಗೂಗಲ್ ಎಐ ಡೇಟಾ ಹಬ್ ಸುದ್ದಿಗೆ ಹೆಚ್ಚು ಒತ್ತು ಕೊಟ್ಟು ಪ್ರಕಟಿಸಿದವು. ಅದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಆ ಸುದ್ದಿಯ ಜೊತೆಗೆ, ‘ಇಂಥ ಮಹತ್ವದ ಯೋಜನೆ ಭಾರತದ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರಿಗೆ ಏಕೆ ಸಿಗಲಿಲ್ಲ, ಕರ್ನಾಟಕದ ಕೈ ತಪ್ಪಿದ್ದು ಏಕೆ’ ಎಂದು ಪ್ರಶ್ನೆ ಮಾಡಲಾಗಿತ್ತು. ಅಷ್ಟೇ ಅಲ್ಲ, ‘ಈ ಯೋಜನೆಯಿಂದ ಸುಮಾರು 30 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ, ಆಂಧ್ರಪ್ರದೇಶಕ್ಕೆ ವಾರ್ಷಿಕ 10 ಸಾವಿರ ಕೋಟಿ ರೂ. ಆದಾಯ ದೊರೆಯುವ ನಿರೀಕ್ಷೆಯಿದೆ’ ಎಂದು ಹೇಳಲಾಗಿತ್ತು. ಇದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಸಚಿವರ ಅಜ್ಞಾನ ಮತ್ತು ಅಸಹಕಾರದಿಂದ ಕೈ ತಪ್ಪಿದ್ದೆಂದು ಟೀಕಿಸಲಾಗಿತ್ತು. ಆ ಖಾತೆಯ ಸಚಿವ ಪ್ರಿಯಾಂಕ ಖರ್ಗೆಯವರನ್ನು ನೇರವಾಗಿ ಟಾರ್ಗೆಟ್ ಮಾಡಲಾಗಿತ್ತು.

ಇದನ್ನೇ ಕಾಯುತ್ತಿದ್ದ ಸಂಘಪರಿವಾರ ಮತ್ತು ಬಿಜೆಪಿ ನಾಯಕರು, ‘ನಿಮ್ಮ ದುರಾಡಳಿತಕ್ಕೆ ಈಗಾಗಲೇ 30 ಸಾವಿರ ಉದ್ಯೋಗ ಸೃಷ್ಟಿಸಿ 10 ಸಾವಿರ ಕೋಟಿ ಆದಾಯ ನೀಡಬಲ್ಲ ಗೂಗಲ್ ಎಐ ಹಬ್ ಆಂಧ್ರದ ಪಾಲಾಗಿದೆ. ಏಷ್ಯಾದಲ್ಲೇ ಗೂಗಲ್ ಸಂಸ್ಥೆಯ ಅತಿ ದೊಡ್ಡ ಹೂಡಿಕೆಯನ್ನು ನಮ್ಮ ರಾಜ್ಯ ಕಳೆದುಕೊಳ್ಳುವಂತೆ ಮಾಡಿದ್ದೀರಲ್ಲಾ, ನಿಮಗೆ ನಾಚಿಕೆಯಾಗುವುದಿಲ್ಲವೇ’ ಎಂದು ಟೀಕೆಗಳು, ಕಟಕಿಗಳು, ಮೂದಲಿಕೆಗಳ ಸುರಿಮಳೆ ಸುರಿಸತೊಡಗಿದರು. ಅವುಗಳನ್ನು ಹೆಕ್ಕಿದ ಸುದ್ದಿ ಮಾಧ್ಯಮಗಳು, ಆ ಸುದ್ದಿಗಳಿಗೆ ಆದ್ಯತೆ ನೀಡಿ ಬಿತ್ತರಿಸಿದವು. ಸಾಲದೆಂದು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿ ಪ್ರಿಯಾಂಕ ಖರ್ಗೆ ಕಂಡರೆ ಕೆಂಡ ಕಾರುವಂತೆ, ಆ ಕ್ಷಣವೇ ನೇಣುಗಂಬಕ್ಕೇರಿಸುವಂತೆ ಪ್ರಚೋದಿಸಲಾಯಿತು.
ಇನ್ನು ಈ ಯೋಜನೆ ದೇಶದ ಮೊದಲ ಗಿಗಾವ್ಯಾಟ್ ಹೈಪರ್ ಸ್ಕೇಲ್ ಗೂಗಲ್ ಡೇಟಾ ಹಬ್ ಆಗಲಿದೆ. ಭಾರತದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳಿಗೆ ಭಾರಿ ಉತ್ತೇಜನ ದೊರೆಯಲಿದೆ. ಬರೋಬ್ಬರಿ 30 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದೆ. ಇಂತಹ ಮಹತ್ವದ ಯೋಜನೆ ಬೆಂಗಳೂರಿನ ಕೈತಪ್ಪಿತು ಎಂಬ ವಿಷಯ ಚರ್ಚೆಗೆ ಗ್ರಾಸವಾಯಿತು. ಹೀಗೆ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲೇ ತೆಲುಗು ದೇಶಂ ಪಕ್ಷದ ಶಾಸಕ, ಆಂಧ್ರ ಸಂಪುಟದ ಸಚಿವ ನಾರಾ ಲೋಕೇಶ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಒಂದನ್ನು ಹಂಚಿಕೊಂಡಿದ್ದು, ನೆರೆಯ ರಾಜ್ಯಗಳ ಕಾಲೆಳೆಯುವ ಯತ್ನ ಮಾಡಿದರು.
ಐಟಿ ಕ್ಷೇತ್ರದ ದಿಗ್ಗಜರು, ರಾಜ್ಯ ಬಿಜೆಪಿ ನಾಯಕರು, ಸಂಘಪರಿವಾರದವರು, ನೆರೆಯ ಆಂಧ್ರದ ಸಚಿವರು- ಎಲ್ಲರಿಗೂ ಪ್ರಿಯಾಂಕ ಖರ್ಗೆಯವರು ಟಾರ್ಗೆಟ್ ಆದರು. ರಾಜ್ಯದ ಜನ ಸಹಜವಾಗಿಯೇ ರಾಜ್ಯ ಸರ್ಕಾರವನ್ನು ಮತ್ತು ಸಚಿವ ಪ್ರಿಯಾಂಕ ಖರ್ಗೆಯವರನ್ನು ದೂರತೊಡಗಿದರು.
ಅಸಲಿಗೆ ಆಗಿದ್ದೇನು?
ಇಂಟರ್ನೆಟ್ ಸರ್ಚ್ ಎಂಜಿನ್ ದಿಗ್ಗಜ ಗೂಗಲ್‌ನ ಈ ಮೆಗಾ ಪ್ರಾಜೆಕ್ಟ್‌ಗೆ ಸಬ್‌ಸಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್(Subsea cable landing station) ಅಗತ್ಯವಿದೆ. ಇದಕ್ಕೆ ಕರಾವಳಿಯ ಸಮುದ್ರದ ಸಂಪರ್ಕ ಬೇಕು. ಸಾಗರದಾಳದಲ್ಲಿ ಕೇಬಲ್ ವೈರ್‍ಗಳ ಜಾಲವನ್ನು ಅಳವಡಿಸಬೇಕು. ಹಾಗೆ ನೋಡಿದರೆ, ಬೆಂಗಳೂರು ಸಾಗರ-ಸಮುದ್ರದ ಅಂಚಿನಲ್ಲಿಲ್ಲ. ಅದಕ್ಕೆ ಅದರದೇ ಆದ ಭೌಗೋಳಿಕ ಮಿತಿ ಇದೆ. ಆದ್ದರಿಂದ ಗೂಗಲ್ ವಿಶಾಖಪಟ್ಟಣಂ ಅನ್ನು ಆಯ್ಕೆ ಮಾಡಿದೆ. ಇದಕ್ಕೆ ಪೂರಕವಾಗಿ ಹಬ್‌ಗಾಗಿ ಅಗತ್ಯವಾದ ಸಮುದ್ರಾಂತರ ಕೇಬಲ್ ಮತ್ತು ಡೇಟಾ ಸೆಂಟರ್ ಮೂಲಸೌಕರ್ಯವನ್ನು ನಿರ್ಮಿಸಲು ಅದಾನಿ ಕನೆಕ್ಸ್ (Adani Connex) ಸಿದ್ಧವಾಗಿದೆ. ಇದಕ್ಕೆ ಭಾರ್ತಿ ಏರ್‌ಟೆಲ್ ಕೈಜೋಡಿಸಿದೆ.
ಜೊತೆಗೆ, ಗೂಗಲ್ ಸಿಇಓ ಸುಂದರ್ ಪಿಚ್ಚೈ, ತಮಿಳುನಾಡು ಮೂಲದವರು. ವ್ಯಾಪಾರ-ವಹಿವಾಟಿಗಾಗಿ ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡವರು. ಮತ್ತೊಂದು ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿಯವರು. ಮೋದಿಯವರೊಂದಿಗೆ ಸುಂದರ್ ಪಿಚ್ಚೈ ಸ್ನೇಹ-ಸಂಬಂಧ ಚೆನ್ನಾಗಿದೆ. ಇದಷ್ಟೇ ಅಲ್ಲದೆ, ರಾಜಕೀಯ ಕಾರಣವಾಗಿ, ಬಹುಮತವಿಲ್ಲದ ಬಿಜೆಪಿ, ಕೇಂದ್ರದಲ್ಲಿ ಸರ್ಕಾರ ರಚಿಸುವಾಗ ಆಂಧ್ರದ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ನಿತೀಶ್ ಕುಮಾರ್ ಅವರನ್ನು ಅವಲಂಬಿಸಿತ್ತು. ಕೇಂದ್ರ ಸರ್ಕಾರ ಸ್ಥಿರವಾಗಿರಬೇಕಾದರೆ, ಬಹುಮತ ಕಾಯ್ದುಕೊಳ್ಳಬೇಕಾದರೆ, ಚಂದ್ರಬಾಬು ನಾಯ್ಡು ಅವರ ತಾಳಕ್ಕೆ ತಕ್ಕಂತೆ ಕುಣಿಯಲೇಬೇಕು. ಹಾಗಾಗಿ ಕೇಂದ್ರ ಸರ್ಕಾರ ಆಂಧ್ರದತ್ತ ಒಲವು ತೋರಿದೆ, ಮೋದಿಯವರ ಸೂಚನೆಯ ಮೇರೆಗೆ ಗೂಗಲ್ ಐಟಿ ಹಬ್ ಅಲ್ಲಿಗೆ ಹೋಗಿದೆ.

ಇದನ್ನು ಓದಿದ್ದೀರಾ?: ಬಿಎಂಟಿಸಿ ಮುಗಿಸಲು ತೇಜಸ್ವಿ ಸೂರ್ಯ ಸುಪಾರಿ ಪಡೆದಿದ್ದಾರೆಯೇ?
ಇದರಲ್ಲಿ ಮತ್ತೊಂದು ಮುಖ್ಯ ಕಾರಣವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವಿದೆ. ಕರ್ನಾಟಕಕ್ಕೆ ಹೆಚ್ಚಿನ ಉದ್ಯಮಗಳು ಹೋಗದಂತೆ ತಡೆಯುವ ಕೇಂದ್ರದ ಷಡ್ಯಂತ್ರವೂ ಇದರಲ್ಲಿ ಅಡಗಿದೆ. ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅದಕ್ಕೆ ಕೇಂದ್ರ ಬಜೆಟ್ಟೇ ಸಾಕ್ಷಿಯಾಗಿದೆ. ಹಾಗೆಯೇ ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಅನ್ಯಾಯ, ಅನುದಾನ ತಾರತಮ್ಯ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವುದೇ.
ಒಂದು ತಾಂತ್ರಿಕ ಕಾರಣವಾದರೆ, ಮತ್ತೊಂದು ರಾಜಕೀಯ ಕಾರಣವಿದೆ. ಇಷ್ಟೇ ಅಲ್ಲದೆ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ಈ ಯೋಜನೆ ಸಿಕ್ಕಿಲ್ಲ. ಇದನ್ನು ತಾಳ್ಮೆಯಿಂದ ತಡಕಾಡಿ ನೋಡದ, ಅರ್ಥ ಮಾಡಿಕೊಳ್ಳದ ಸುದ್ದಿ ಮಾಧ್ಯಮಗಳು ಬಿಜೆಪಿ ಬಿಸ್ಕೆಟ್ ತಿಂದು ಖರ್ಗೆ ವಿರುದ್ಧ ವಿಷ ಕಾರತೊಡಗಿದವು. ಕರ್ನಾಟಕಕ್ಕೆ ಕೈ ತಪ್ಪಿದ ಬೃಹತ್ ಯೋಜನೆ ಎಂದು ಸುಳ್ಳು ಸುದ್ದಿ ಪ್ರಕಟಿಸಿದವು.
ಪ್ರಿಯಾಂಕ ಖರ್ಗೆ ಹೇಳಿದ್ದೇನು?
ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ ಖರ್ಗೆಯವರಿಗೆ, ಗೂಗಲ್ ಎಐ ಹಬ್ ಆಂಧ್ರಕ್ಕೆ ಹೋದ ವಿಚಾರ ಕುರಿತು ಕೇಳಿದಾಗ, ‘ಗೂಗಲ್ ನಮ್ಮ ಜೊತೆ ಚರ್ಚೆಗೆ ಬಂದಿದ್ದರೆ, ಟೀಕೆ ಮಾಡಬಹುದಿತ್ತು. ನಮ್ಮ ಜೊತೆಗೆ ಚರ್ಚೆಗೆ ಬಂದ ಯಾವ ಕಂಪನಿಯನ್ನು ನಾವು ಬಿಟ್ಟಿಲ್ಲ’ ಎಂದರು. ಅಂದರೆ, ಗೂಗಲ್ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿಲ್ಲ.
ಮುಂದುವರೆದು, ‘ಬಿಜೆಪಿಯವರು ಬಹಳ ಸುಲಭವಾಗಿ ಸತ್ಯವನ್ನು ಮರೆಮಾಚುತ್ತಾರೆ. ಮೋದಿಯವರ ಕೇಂದ್ರದ ಎನ್‌ಡಿಎ ಸರ್ಕಾರ, ಆಂಧ್ರದ ಚಂದ್ರಬಾಬು ನಾಯ್ಡು ಅವರ ಸರ್ಕಾರಕ್ಕೆ 22 ಸಾವಿರ ಕೋಟಿ ಇನ್ಸೆಂಟಿವ್ ಕೊಡುತ್ತಿದೆ. 25% ಭೂಮಿ ರಿಯಾಯಿತಿ ಇದೆ. ಉಚಿತವಾಗಿ ನೀರು, ವಿದ್ಯುತ್ ಕೊಡುತ್ತಾರೆ. 100% ರಾಜ್ಯ ಜಿಎಸ್‌ಟಿ ಮರುಪಾವತಿ ಕೊಡುತ್ತಿದ್ದಾರೆ. ಇದನ್ನು ಬಿಜೆಪಿಯವರು ಹೇಳಲ್ಲ. ಅಕಸ್ಮಾತ್ ಆ ಯೋಜನೆ ನಮ್ಮ ರಾಜ್ಯಕ್ಕೆ ಬಂದಿದ್ದರೆ, ನಮ್ಮ ರಾಜ್ಯ ಇದೆಲ್ಲವನ್ನು ಕೊಟ್ಟಿದ್ದರೆ, ರಾಜ್ಯ ದಿವಾಳಿ ಆಯಿತು ಎನ್ನುತ್ತಿದ್ದರು’ ಎಂದರು. ಅಂದರೆ, ಅಲ್ಲಿಗೆ ಒಂದು ನ್ಯಾಯ, ಇಲ್ಲಿಗೆ ಒಂದು ನ್ಯಾಯ.

ಸಾಲದು ಎಂದು, ‘ನಾವು ಇಡೀ ಜಗತ್ತಿನ ಎಐ ಡೆವಲಪ್ಮೆಂಟ್‌ನಲ್ಲಿ 5ನೇ ಸ್ಥಾನದಲ್ಲಿದ್ದೇವೆ. ನಾಲ್ಕನೇ ದೊಡ್ಡ ಟೆಕ್ನಾಲಜಿ ಕ್ಲಸ್ಟರ್ ಹೊಂದಿದ್ದೇವೆ. ನಾಲ್ಕೂವರೆ ಲಕ್ಷ ಕೋಟಿ ಐಟಿ ರಫ್ತು ಮಾಡುತ್ತೇವೆ. ಆಂಧ್ರಪ್ರದೇಶದ್ದು ಎರಡು ಲಕ್ಷ ಕೋಟಿ ಅಷ್ಟೇ. ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವೆ ವ್ಯತ್ಯಾಸ ಬಹಳ ದೊಡ್ಡದಿದೆ. ನಮ್ಮ ಬಳಿ ಕ್ವಾಂಟಮ್ ರೋಡ್ ಮ್ಯಾಪ್ ಇದೆ. ಅವರ ಬಳಿ ಇದೆಯಾ? ಗೂಗಲ್ ಅನಂತ ಎಂಬ ಬಹುದೊಡ್ಡ ಕ್ಯಾಂಪಸ್ ನಮ್ಮ ಬೆಂಗಳೂರಿನಲ್ಲಿದೆ. ಬಂಡವಾಳ ಹಾಕುವವರು ಎಲ್ಲಿ ಬೇಕಾದರೂ ಹಾಕುತ್ತಾರೆ’ ಎಂದರು. ಅಂದರೆ, ಕರ್ನಾಟಕ ಐಟಿ ಕ್ಷೇತ್ರದಲ್ಲಿ ಈಗಲೂ ನಂಬರ್ ಒನ್ ಎನ್ನುವುದನ್ನು ಬಿಚ್ಚಿಟ್ಟರು.
ಐಟಿ ದಿಗ್ಗಜರು, ಬಿಜೆಪಿ-ಸಂಘಪರಿವಾರದ ನಾಯಕರು, ಸುದ್ದಿ ಮಾಧ್ಯಮಗಳು ಒಂದಾದರೆ, ಒಂದು ಸುದ್ದಿಯನ್ನು ಹೇಗೆಲ್ಲ ತಿರುಚಬಹುದು, ಯಾರನ್ನೆಲ್ಲ ಗುರಿ ಮಾಡಬಹುದು, ಎಂತಹ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಮೋದಿ ಭಾರತದಲ್ಲಿ ಇದು ಪ್ರತಿದಿನ, ಪ್ರತಿಕ್ಷಣ ನಡೆಯುವ ವಿದ್ಯಮಾನ. ಜನ ಜಾಗೃತರಾಗಬೇಕಷ್ಟೇ.

ಲೇಖಕ, ಪತ್ರಕರ್ತ




