“ಇತ್ತೀಚಿನ ದಿನಗಳಲ್ಲಿ, ಸುಮಾರು ಒಂದು ತಿಂಗಳಿನಿಂದ ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣವಾಗಿದೆ. ಹೈಕಮಾಂಡ್ ಸೂಚನೆಯಂತೆ ನಾನು, ಡಿಕೆಶಿ ಉಪಾಹಾರ ಸಭೆ ನಡೆಸಿದ್ದೇವೆ. ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಉಪಾಹಾರ ಸಭೆ ನಡೆಸಿದ್ದಾರೆ. ಅದಾದ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು,”ಅನಗತ್ಯ ಗೊಂದಲ ನಿರ್ಮಾಣವಾಗುತ್ತಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಆಡಳಿತ ಪಕ್ಷದವರಿಂದಲೇ ಸಿಎಂ ಬದಲಾವಣೆಗೆ ಅವಸರ: ಸಂಸದ ಬಸವರಾಜ ಬೊಮ್ಮಾಯಿ
“2028ರ ಸ್ಥಳೀಯ ಚುನಾವಣೆ ಬಹಳ ಮುಖ್ಯ. ಆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾವಿಬ್ಬರೂ 2023ರ ವಿಧಾನಸಭೆ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಿದೆವೋ, ಅದೇ ರೀತಿಯಲ್ಲಿ ಮುಂದೆಯೂ ಜತೆಯಾಗಿರುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನತೆಗಳಿಲ್ಲ” ಎಂದಿದ್ದಾರೆ.
“ಗೊಂದಲವನ್ನು ತಿಳಿ ಮಾಡುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಹೀಗಾಗಿ ನಾಳೆಯಿಂದ ಯಾವುದೇ ಗೊಂದಲವಿರುವುದಿಲ್ಲ. ಈಗಲೂ ಯಾವುದೇ ಗೊಂದಲವಿಲ್ಲ, ಹಿಂದೆಯೂ ಇರಲಿಲ್ಲ. ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ” ಎಂದು ಹೇಳಿದರು.
ಇನ್ನು ದೆಹಲಿಗೆ ಕೆಲವು ನಾಯಕರುಗಳು ಹೋಗಿರುವ ವಿಚಾರದಲ್ಲಿ ಮಾತನಾಡಿದ ಸಿಎಂ, “ನಾನು ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದ್ದೆ. ಹಾಗಾಗಿ ಕೆಲ ಶಾಸಕರು ಮಂತ್ರಿ ಮಾಡಬೇಕೆಂದು ದೆಹಲಿಗೆ ಹೋಗಿದ್ದರು. ನಾಯಕತ್ವದ ವಿರುದ್ಧವಾಗಿ ಶಾಸಕರು ದೆಹಲಿಗೆ ಹೋಗಿರಲಿಲ್ಲ” ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳು ಗೊಂದಲ ಸೃಷ್ಟಿಸಿವೆ
ಇತ್ತೀಚೆಗೆ ಅಧಿಕಾರ ಹಸ್ತಾಂತರದ ಬಗ್ಗೆ ಉಂಟಾಗಿರುವ ಗೊಂದಲಗಳಿಗೆ ಮಾಧ್ಯಮಗಳೇ ಕಾರಣ ಎಂದು ಆರೋಪಿಸಿದ ಸಿಎಂ, “ಬಿಜೆಪಿ, ಜೆಡಿಎಸ್ ಪಕ್ಷಗಳು ಪತ್ರಿಕೆಗಳಲ್ಲಿ ಅವಿಶ್ವಾಸ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಅಸಂಭವವಾಗಿದ್ದು, ನಾವು 142 ಜನರಿದ್ದು, ಅವರು 64 ಜನ ಮಾತ್ರ, ಜೆಡಿಎಸ್ 18 ಇದ್ದಾರೆ. ಅವರಿಬ್ಬರೂ ಸೇರಿ 82 ಜನರಾಗುತ್ತಾರೆ. ಇದೊಂದು ವಿಫಲ ಪ್ರಯತ್ನ ಎಂದು ಭಾವಿಸಿದ್ದೇನೆ. ವಿರೋಧ ಪಕ್ಷಗಳು ಏನೇ ಸುಳ್ಳು ಆರೋಪಗಳನ್ನು ಮಾಡಿದರೂ ಅವನ್ನೆಲ್ಲಾ ಸಮರ್ಥವಾಗಿ ಎದುರಿಸುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.

ಇನ್ನು ಡಿಕೆ ಶಿವಕುಮಾರ್ ಮಾತನಾಡಿ, “ರಾಜ್ಯದ ಜನರು ನಮ್ಮ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ನಾವು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ನಮ್ಮದು ಒಂದೇ ಗುಂಪು, ಹೈಕಮಾಂಡ್ ಗುಂಪು. ನಾವು ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ” ಎಂದು ಹೇಳಿದರು.
“ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸ್ವಲ್ಪ ದುರ್ಬಲವಾಗಿದೆ ಎಂಬುದು ತಿಳಿದಿದೆ. ಆದರೆ ಕರ್ನಾಟಕದಲ್ಲಿ ಹಾಗಿಲ್ಲ. 2028ಕ್ಕೆ ಮತ್ತೆ ಅಧಿಕಾರಕ್ಕೆ ಬರಲು ನಾವು ಕಾರ್ಯಕ್ರಮ ರೂಪಿಸಿಕೊಂಡಿದ್ದೇವೆ. ಅದಕ್ಕಾಗಿ ಈಗ ಒಮ್ಮತದಿಂದ ಆಡಳಿತ ನಡೆಸುತ್ತೇವೆ” ಎಂದು ತಿಳಿಸಿದರು.





