ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣ ರಾಷ್ಟ್ರಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ. ಇದೇ ವೇಳೆ, ಅಶ್ಲೀಲ ಚಿತ್ರವೊಂದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋಟೋವನ್ನು ಮಾರ್ಫಿಂಗ್ ಮಾಡಿ, ವೈರಲ್ ಮಾಡಲಾಗಿದೆ. ಡಿಕೆ ಶಿವಕುಮರ್ ಅವರ ಚಿತ್ರವನ್ನು ತಿರುಚಿ, ಅಶ್ಲೀಲವಾಗಿ ವೈರಲ್ ಮಾಡಿದ ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಸಂತೋಷ್, ರಾಜೇಶ್, ಕೇಸರಿ ಸಾಮ್ರಾಟ್ ಎಂಬವರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಆರೋಪಿಗಳು ದಿಯು-ದಮನ್‌ನ ಬಿಜೆಪಿ ನಾಯಕನ ಅಶ್ಲೀಲ ಚಿತ್ರಕ್ಕೆ ಡಿಕೆ ಶಿವಕುಮಾರ್ ಅವರ ಮುಖವನ್ನು ಎಡಿಟ್ ಮಾಡಿ ಸೇರಿಸಿದ್ದಾರೆ. ಆ ಚಿತ್ರವನ್ನು ಡಿಕೆ ಶಿವಕುಮಾರ್ ಅವರ ಅಶ್ಲೀಲ ಚಿತ್ರವೆಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: Fact Check | BJP ನಾಯಕನ ಅಶ್ಲೀಲ ಚಿತ್ರವನ್ನು ಡಿಕೆಶಿ ಅವರದ್ದೆಂದು ತಪ್ಪಾಗಿ ಹಂಚಿಕೊಂಡ ಜೆಡಿಎಸ್ ಹೆಸರಿನ ಪೇಜ್
ಆರೋಪಿಗಳ ವಿರುದ್ಧ ಕೆಪಿಸಿಸಿ ಕಾನೂನು ಘಟಕ ದೂರು ನೀಡಿತ್ತು. ದೂರು ಆಧರಿಸಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.




