ಬಿಹಾರದಲ್ಲಿ ‘ಛೋಟೆ ಸರ್ಕಾರ್’ ಎಂದೇ ಕರೆಯಲಾಗುವ ಡಾನ್ ಅನಂತ್ ಕುಮಾರ್ ಸಿಂಗ್ ಮೋಕಾಮಾ ವಿಧಾನಸಭಾ ಸ್ಥಾನದಲ್ಲಿ ಬಿಜೆಪಿ ಮಿತ್ರಪಕ್ಷ ಜೆಡಿಯು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ 37.88 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದಾರೆ. ಜೊತೆಗೆ ಈ ಅಭ್ಯರ್ಥಿ ವಿರುದ್ಧ 28 ಕ್ರಿಮಿನಲ್ ಪ್ರಕರಣಗಳೂ ಇವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಜೆಡಿಯು ಇನ್ನೂ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿಲ್ಲ. ಆದರೆ ಅದಕ್ಕೂ ಮುನ್ನವೇ ಅನಂತ್ ಕುಮಾರ್ ಸಿಂಗ್ ಜೆಡಿಯು ಅಭ್ಯರ್ಥಿಯಾಗಿ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಮೋಕಾಮಾದಲ್ಲಿ ನವೆಂಬರ್ 6ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಇದನ್ನು ಓದಿದ್ದೀರಾ? ಬಿಹಾರಕ್ಕೆ ‘ವಿಶೇಷ ವರ್ಗ’ ಸ್ಥಾನಮಾನಕ್ಕಾಗಿ ಜೆಡಿಯು ಬೇಡಿಕೆ
2020ರಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಮೋಕಾಮಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಿಂಗ್ ಪತ್ನಿ ನೀಲಂ ದೇವಿ ಗೆದ್ದಿದ್ದರು. ಅದಾದ ಬಳಿಕ ಎನ್‌ಡಿಎ ಸರ್ಕಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ನೀಲಂ ಅವರ ಆಸ್ತಿ 62.72 ಕೋಟಿ ರೂ. ಮೌಲ್ಯದ್ದು ಎಂದು ಘೋಷಿಸಲಾಗಿದೆ.
‘ಛೋಟೆ ಸರ್ಕಾರ್’ ಅಫಿಡವಿಟ್ ಏನು ಹೇಳುತ್ತೆ?
ಅನಂತ್ ಕುಮಾರ್ ನಾಮಪತ್ರದ ಜೊತೆಗೆ ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, 26.66 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 11.22 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರ ಪತ್ನಿ ನೀಲಂ 13.07 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 49.65 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ.
ಮೋಕಾಮಾದಲ್ಲಿ ಐದು ಬಾರಿ ಶಾಸಕರಾಗಿರುವ ಸಿಂಗ್ ಅವರ ಬಳಿ 15.61 ಲಕ್ಷ ರೂ. ನಗದು ಇದ್ದರೆ, ಅವರ ಪತ್ನಿ ಬಳಿ 34.60 ಲಕ್ಷ ರೂ. ಇದೆ. ಸಿಂಗ್ ಬಳಿ ಹಲವಾರು ಬ್ಯಾಂಕ್ ಖಾತೆಗಳು ಮತ್ತು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿವೆ. ನೀಲಂ ಬಳಿ ಹಲವಾರು ಬ್ಯಾಂಕ್ ಖಾತೆಗಳು ಮತ್ತು 76.61 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿವೆ.
ಸಿಂಗ್ ಅವರ ಚರಾಸ್ತಿಗಳಲ್ಲಿ 3.23 ಕೋಟಿ ರೂ. ಮೌಲ್ಯದ ಮೂರು ಐಷಾರಾಮಿ ಎಸ್‌ಯುವಿ ಕಾರುಗಳು ಸೇರಿವೆ. ಅವರ ಪತ್ನಿ 77.62 ಲಕ್ಷ ರೂ. ಮೌಲ್ಯದ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಕುದುರೆಗಳು, ಹಸುಗಳನ್ನೂ ಇವರು ಸಾಕುತ್ತಿದ್ದಾರೆ. ಸಿಂಗ್ ವಿರುದ್ಧ 28 ಕ್ರಿಮಿನಲ್ ಪ್ರಕರಣಗಳನ್ನು ಸಹ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಿಂಗ್ ಜೆಡಿಯು ಸೇರಿದವರಾಗದಿದ್ದರೂ ಅವರ ಕುಟುಂಬವು 1990ರಿಂದ ಈ ಸ್ಥಾನವನ್ನು ಗೆಲ್ಲುತ್ತಿದೆ. ನಡುವೆ ಕೆಲವು ವರ್ಷಗಳು ಸ್ಥಾನ ಅವರ ಕುಟುಂಬದ ಕೈತಪ್ಪಿತ್ತು. 2022ರಲ್ಲಿ ಯುಎಪಿಎ ಪ್ರಕರಣದಲ್ಲಿ ಶಿಕ್ಷಗೆ ಗುರಿಯಾದ ಬಳಿಕ ಸಿಂಗ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ. ಅದಾದ ಬಳಿಕ ಅವರ ಪತಿ ನೀಲಂ ಶಾಸಕರಾಗಿದ್ದಾರೆ. ಇತ್ತೀಚೆಗೆ ಪಟನಾ ಹೈಕೋರ್ಟ್ ಸಿಂಗ್ ಅವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.
ಈ ಬೆನ್ನಲ್ಲೇ “ಕುಟುಂಬದ ಕೋಟೆಯನ್ನು ಕಾಪಾಡುವ ಜವಾಬ್ದಾರಿಯನ್ನು ನನ್ನ ಪತ್ನಿ ಇನ್ನು ಮುಂದೆ ವಹಿಸಲು ಸಾಧ್ಯವಿಲ್ಲ” ಎಂದು ಸಿಂಗ್ ಹೇಳಿಕೊಂಡಿದ್ದಾರೆ. ಆದರೆ ಆರ್‌ಜೆಡಿ ಸಿಂಗ್ ಅವರನ್ನು ಸೋಲಿಸುವ ಪ್ರತಿಜ್ಞೆ ಮಾಡಿದೆ.





