ಯಾರ ದನಿಯನ್ನು ಕೇಳಿಸಿಕೊಳ್ಳಲು ಆಳುವವರ್ಗ ಅಥವಾ ಪ್ರಭುತ್ವ ಇಚ್ಛಿಸುವುದಿಲ್ಲವೋ ಅಂತಹ ಅಲಕ್ಷಿತ ಸಮುದಾಯಗಳ ಪ್ರತಿನಿಧಿಯಾಗಿ ಸದನದಲ್ಲಿ ಕವಿ ಸಿದ್ಧಲಿಂಗಯ್ಯನವರು ದನಿ ಎತ್ತಿದ್ದಾರೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕವಿಯ ಕಾಳಜಿ, ಕಳಕಳಿಯತ್ತ ಒಂದು ನೋಟ...
“ನಿಮ್ಮ ಸತ್ತ ಬಾಯಿಗಳಿಗಾಗಿ
ಮಾತಾಡಲು ನಾನು ಬಂದಿದ್ದೇನೆ.
ನಿಮ್ಮ ದೇಹಗಳು
ಸೂಜಿಗಲ್ಲಿನ ಹಾಗೆ ನನ್ನ ದೇಹಕ್ಕೆ ಅಂಟಲಿ
ಬೇಗ ಬನ್ನಿ-
ನನ್ನ ನರಗಳಿಗೆ, ನನ್ನ ಬಾಯಿಗೆ,
ನನ್ನ ಸ್ವರದಲ್ಲಿ ಮಾತಾಡಿ
ನನ್ನ ರಕ್ತದಲ್ಲಿ ಮಾತಾಡಿ.”
-ಪಾಬ್ಲೊ ನೆರೂಡ
(‘ಮಾಚ್ಚು ಪಿಚ್ಚುವಿನ ಶಿಖರಗಳು’)
ಕೃಪೆ: ‘ಮರಳಿ ಬರುವೆ’ (ಪಾಬ್ಲೊ ನೆರೂಡ ಕವಿತೆಗಳು, 1976) ಕನ್ನಡಕ್ಕೆ: ತೇಜಸ್ವಿನೀ ನಿರಂಜನ
*
ಕವಿ ಸಿದ್ಧಲಿಂಗಯ್ಯನವರು ಮನುಷ್ಯತ್ವದ ಸಹಜ ವಿಸ್ತಾರಕ್ಕೆ ಅಡ್ಡಿಯಾಗಿರುವ ಅಸಮಾನತೆಯ ವಿರುದ್ಧ ನಿರಂತರವಾಗಿ ಸ್ಪಂದಿಸಿದವರು. ಕಾವ್ಯ, ನಾಟಕ, ಆತ್ಮಕಥನ, ವಿಮರ್ಶೆ, ಸದನದ ಭಾಷಣಗಳು, ಜಾನಪದ ಸಂಶೋಧನಾ ಅಧ್ಯಯನವನ್ನೊಳಗೊಂಡ ಅವರ ಸಮಗ್ರ ಸಾಹಿತ್ಯ ಸಮಾನತೆಯ ಅನ್ವೇಷಣೆ, ಸಾಮಾಜಿಕ ಕಾಳಜಿಯನ್ನು ಪ್ರತಿಪಾದಿಸುತ್ತದೆ. ಹಸಿವು, ಅಸಮಾನತೆಗಳೇ ತಮ್ಮ ಬೌದ್ಧಿಕ ಪ್ರಯಾಣದ ಮೂಲಧಾತುಗಳು ಎಂದು ಅವರು ಪರಿಭಾವಿಸುತ್ತಾರೆ. ಜನರ ಬದುಕನ್ನು ನೇರ್ಪುಗೊಳಿಸುವ ಜೀವಪರವಾದ ನಿಲುವನ್ನು ಅವರ ಗದ್ಯಬರಹಗಳು, ಭಾಷಣಗಳು ಸಾಬೀತುಪಡಿಸುತ್ತವೆ.
ಇದನ್ನು ಓದಿದ್ದೀರಾ?: MGNREGA | ವಿಶ್ವವೇ ಗೌರವಿಸುವ ಮಹಾತ್ಮ ಗಾಂಧಿ ಕಂಡರೆ ಮೋದಿ ಸರ್ಕಾರಕ್ಕೆ ಏಕಿಷ್ಟು ಕೋಪ?
ಸಿದ್ಧಲಿಂಗಯ್ಯನವರು ಎರಡು ಅವಧಿಗೆ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯರಾಗಿ (1988-1994 ಮತ್ತು 1995-2001) ನಿರ್ವಹಿಸಿದ ಮಹತ್ವದ ಪಾತ್ರವನ್ನು ನಾಡಿನ ಜನತೆ ಮರೆಯುವಂತಿಲ್ಲ. “ನನ್ನ ಬದುಕಿನ ವಿಸ್ತರಿತ ಭಾಗವಾಗಿ, ಅನುಭವದ ವ್ಯಾಪ್ತಿಯನ್ನು ಹೆಚ್ಚಿಸಿದ ವಿಧಾನ ಪರಿಷತ್ತಿನ ಸದಸ್ಯತ್ವದ ಅವಧಿ ನನ್ನ ಮಟ್ಟಿಗೆ ಮಹತ್ವಪೂರ್ಣವಾದುದು. ಕಾವ್ಯ ಹಾಗೂ ಹೋರಾಟದ ಮೂಲಕ ನಾನು ಮಾಡಿದ ಕಾರ್ಯವನ್ನು ರಾಜ್ಯದ ಪ್ರಜಾಪ್ರಭುತ್ವದ ಅತ್ಯುನ್ನತ ವೇದಿಕೆ ಮೂಲಕ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿರುತ್ತೇನೆ.”1 ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ಸಭೆಗಳಲ್ಲಿ, ಹೋರಾಟಗಳಲ್ಲಿ, ಭಾಷಣಗಳಲ್ಲಿ, ತಮ್ಮ ಕವಿತೆಗಳ, ಬರಹಗಳ ಮೂಲಕ ನಾವು ಜೀವಿಸುತ್ತಿರುವ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿರುವ, ಅಲಕ್ಷಿತ ಸಮುದಾಯಗಳ ಪ್ರತಿನಿಧಿಯಾಗಿ ಸಿದ್ಧಲಿಂಗಯ್ಯನವರು ದನಿಯೆತ್ತಿ, ಜನಕಲ್ಯಾಣಕ್ಕೆ ಅಗತ್ಯವಾದ ಪ್ರಗತಿಪರ ವಿಚಾರಗಳನ್ನು, ಮೌಢ್ಯ ವಿರೋಧಿ, ಜಾತ್ಯತೀತ ನಿಲುವುಗಳನ್ನು ಪ್ರತಿಪಾದಿಸಿದ್ದರೋ ಅವುಗಳು ಮುಕ್ಕಾಗದಂತೆ ಪ್ರಜಾಸತ್ತಾತ್ಮಕ ಮಾರ್ಗದ ಸಂಸದೀಯ ಚೌಕಟ್ಟಿನಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಮುಂದೆ ಸದನದಲ್ಲಿ ಸಮರ್ಥವಾಗಿ ಮಂಡಿಸಿದ್ದಾರೆ.
1970ರ ದಶಕದಲ್ಲಿ ಸಂಭವಿಸಿದ ಸಾಮಾಜಿಕ ಪಲ್ಲಟಗಳು, ರಾಜಕೀಯ ಸ್ಥಿತ್ಯಂತರಗಳು, ಚಳವಳಿಗಳು ಉಂಟುಮಾಡಿದ ಸಂಚಲನದಿಂದ ಕನ್ನಡ ಸಾಂಸ್ಕೃತಿಕ ಲೋಕ, ಕಾವ್ಯ ಜಗತ್ತು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುವ ಒತ್ತಡ ಸೃಷ್ಟಿಯಾಯಿತು. ಆ ಕಾಲಘಟ್ಟದ ಮಗ್ಗುಲಿನಲ್ಲಿ ಅಸ್ಪೃಶ್ಯ ಲೋಕದ ಬೇಗುದಿ, ಒಡಲಾಳದ ತಲ್ಲಣಗಳನ್ನು, ಅನಾದಿ ಕಾಲದ ಸಮಷ್ಟಿ ಪ್ರಜ್ಞೆಯನ್ನು, ಕೆಂಡದುಂಡೆಯಂತಹ ಸುಡುವಾಸ್ತವದ ನುಡಿಗಟ್ಟುಗಳನ್ನು ‘ಹೊಲೆಮಾದಿಗರ ಹಾಡು’ (1975) ಎಂಬ ಕವನ ಸಂಕಲನದ ಮೂಲಕ ಅನಾವರಣ ಮಾಡಿದ ಕವಿ ಸಿದ್ಧಲಿಂಗಯ್ಯನವರು ಶ್ರಮಜೀವಿ ವರ್ಗದ ಪ್ರಣಾಳಿಕೆಯಂತಿರುವ, ಶೋಷಿತರ ಎದೆಯ ದನಿಯಂತಿರುವ ‘ನನ್ನ ಜನಗಳು’ ಕವಿತೆಯಲ್ಲಿ ಚಿತ್ರಿಸಿರುವ ಜನರೆಲ್ಲರೂ ಅವರ ಸದನದ ಭಾಷಣಗಳಲ್ಲಿ ಜೀವಂತವಾಗಿದ್ದಾರೆ. ಸ್ವತಃ ಕವಿಗಳೇ ತಮ್ಮ ‘ನನ್ನ ಜನಗಳು ಮತ್ತು ಇತರ ಕವಿತೆಗಳು’ (2005) ಎಂಬ ಕವನ ಸಂಗ್ರಹದಲ್ಲಿ ‘ನನ್ನ ಜನಗಳು’ ನಿರ್ದಿಷ್ಟ ಗುಂಪನ್ನು ಸೂಚಿಸದೆ ಸಮಾಜದ ಎಲ್ಲ ಶೋಷಿತರನ್ನು ಒಳಗೊಳ್ಳುತ್ತದೆ. ಎಲ್ಲ ಜಾತಿಮತಗಳಲ್ಲಿರುವ ದಮನಿತರು ಮತ್ತು ಅಪಮಾನಕ್ಕೊಳಗಾದವರೇ ನನ್ನ ಜನಗಳು. ಈ ಜನತೆಯೊಂದಿಗೆ ಗುರುತಿಸಿಕೊಳ್ಳಲು ಮಾಡಿದ ಪ್ರಯತ್ನವೇ ನನ್ನ ಕವಿತೆಗಳು. ದಲಿತರು, ರೈತರು, ಕಾರ್ಮಿಕರು, ಕೂಲಿಕಾರರು ತಮ್ಮ ಮೆರವಣಿಗೆ, ಹೋರಾಟಗಳಲ್ಲಿ ನನ್ನ ಕವಿತೆಗಳನ್ನು ಹಾಡಿದ್ದಾರೆ, ಕೇಳಿದ್ದಾರೆ. ಆ ಸಂದರ್ಭಗಳೇ ನನ್ನ ಕಾವ್ಯದ ಸಾರ್ಥಕ ಕ್ಷಣಗಳು.”2 ಎಂದು ಅಭಿಮಾನದಿಂದ ನುಡಿದಿದ್ದಾರೆ. ‘ನನ್ನ ಜನಗಳು’ ಹೋರಾಟದ ಹಾಡಿನಲ್ಲಿ ಕವಿಯಾಗಿ ಅವರು ಯಾರನ್ನು ‘ನನ್ನ ಜನಗಳು’ ಎಂದು ಕರೆದಿದ್ದಾರೋ ಅವರೆಲ್ಲರ ಒಳಿತಿಗಾಗಿ ಅಂದರೆ, ಶೋಷಿತರ ಮತ್ತು ದನಿಯಿಲ್ಲದವರ, ನೊಂದವರ ಸಂಕಟಗಳನ್ನು ನೀಗಿಸುವ ದನಿಯಾಗಿ ಅವರು ಸದನವನ್ನು ಪ್ರತಿನಿಧಿಸಿದ್ದಾರೆ ಎಂಬುದು ಅವರ ಸದನದ ಭಾಷಣಗಳಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.
‘ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು’ ಎರಡು ಸಂಪುಟಗಳಲ್ಲಿ ದೊಡ್ಡಹುಲ್ಲೂರು ರುಕ್ಕೋಜಿಯವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ. ಆ ಎರಡು ಸಂಪುಟಗಳನ್ನು ಗಮನಿಸಿದಾಗ, ಅವರು ಪ್ರಸ್ತಾಪಿಸಿರುವ ವಿಷಯಗಳು ಯಾವುದನ್ನು ಆಳುವ ವರ್ಗ, ಜನಸಮುದಾಯದ ಅಂಚಿಗೆ ತಳ್ಳಿದೆಯೋ, ಯಾರ ವಿಚಾರಗಳಿಗೆ, ಬದುಕಿಗೆ ಮನ್ನಣೆ ಸಿಗದೆ ಮೂಲೆಗುಂಪು ಮಾಡಲಾಗಿದೆಯೋ ಅಥವಾ ಆದ್ಯತೆಯ ದೃಷ್ಟಿಯಿಂದ ಕಡೆಗಣಿಸಿ ಮುಖ್ಯವಲ್ಲ ಎಂದು ಸಮಾಜದ ಅಧಿಕಾರಶಾಹಿಗಳು, ಪ್ರತಿಷ್ಠಿತ ಗಣ್ಯವರ್ಗ ನಿರ್ಲಕ್ಷಿಸಿ ವಂಚಿಸಿದೆಯೊ ಅಂತಹ ಕಣ್ಣಿಗೆ ಸಹಜವಾಗಿ ಕಾಣದ ಬಹಿಷ್ಕೃತ, ಪರಿಶಿಷ್ಟ ನೆಲೆಗಳಿಗೆ ಕಣ್ಣುಹಾಯಿಸಿ ಜನಪ್ರತಿನಿಧಿಗಳನ್ನು ಹಕ್ಕೊತ್ತಾಯದ ಧಾಟಿಯಲ್ಲಿ ಮನವೊಲಿಸುವ, ಸಮಾಜದ ಕಣ್ತೆರೆಸುವ ಕಾರ್ಯವನ್ನು ಮಾಡುತ್ತವೆ. ಏಕೆಂದರೆ, ಸಿದ್ಧಲಿಂಗಯ್ಯನವರದು ಬಹುಜನರ ಪರವಾದ, ನೊಂದವರನ್ನು ಸಂತೈಸುವ ಹೋರಾಟದ ದನಿ. ಇದರಿಂದಾಗಿಯೇ ಅವರು, “ಕೂಲಿಕಾರ್ಮಿಕರ ಬಗ್ಗೆ, ಜೋಪಡಿಗಳಲ್ಲಿ ಮಲಗುವವರ ಬಗ್ಗೆ, ಅಗ್ನಿಶಾಮಕರ ಬಗ್ಗೆ, ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ, ಮಹಿಳೆಯರ ಬಗ್ಗೆ, ಪೌರಕಾರ್ಮಿಕರ ಬಗ್ಗೆ, ಬೀದಿ ಬದಿಯ ವ್ಯಾಪಾರಿಗಳ ಬಗ್ಗೆ, ಬೀಡಿ ಕಟ್ಟುವ ಕಾರ್ಮಿಕರ ಬಗ್ಗೆ, ಬುಡಕಟ್ಟು ಸಮುದಾಯಗಳ ಬಗ್ಗೆ, ಆದಿವಾಸಿಗಳ ಬಗ್ಗೆ, ನಿರ್ಗತಿಕರ ಬಗ್ಗೆ, ಜೈಲುಗಳಲ್ಲಿನ ಅಮಾಯಕರ ಬಗ್ಗೆ, ಜೀತಪದ್ಧತಿಯ ಬಗ್ಗೆ, ಬಾಲಕಾರ್ಮಿಕರ ಬಗ್ಗೆ, ಅಂಗನವಾಡಿ ಕಾಯಕರ್ತೆಯರ ಬಗ್ಗೆ, ಬುದ್ದಿಮಾಂಧ್ಯ ಮಕ್ಕಳ ಬಗ್ಗೆ, ಮೂಢನಂಬಿಕೆಗಳ ಬಗ್ಗೆ, ಅಂತರ್ಜಾತಿ ವಿವಾಹಗಳ ಬಗ್ಗೆ, ಮೀಸಲಾತಿಯ ಬಗ್ಗೆ, ಜನಪದ ಕಲಾವಿದರ ಬಗ್ಗೆ, ಖಾಸಗಿ ಕಾರ್ಖಾನೆಗಳ ವಂಚನೆಯ ಬಗ್ಗೆ, ಕನ್ನಡ ನಾಡು, ನುಡಿಯ ಬಗ್ಗೆ, ಶಿಕ್ಷಣದ ಬಗ್ಗೆ, ಸಂಸ್ಕೃತಿ ಬಗ್ಗೆ, ಸೌಹಾರ್ದತೆಯ ಬಗ್ಗೆ ಒಟ್ಟಾರೆ ಅಸಹಾಯಕರ ನಿಟ್ಟುಸಿರಿನ ಬಗ್ಗೆ ಸದನದಲ್ಲಿ ದನಿಯೆತ್ತಿ ಸರ್ಕಾರದ ಗಮನವನ್ನು ಸೆಳೆದು ದಾಖಲುಮಾಡಿ ನ್ಯಾಯಕೊಡಿಸಲು ಶ್ರಮಿಸುತ್ತಾರೆ.”3 ಇದರ ಪ್ರತಿಫಲವಾಗಿ ಸರ್ಕಾರ ಕೊರಗ ಸಮುದಾಯದವರ ಬಾಳಿಗೆ ಮುಳುವಾಗಿದ್ದ ಅಮಾನವೀಯ ‘ಅಜಲು ಪದ್ದತಿ ನಿಷೇಧ’ ಕಾನೂನನ್ನು ಅನುಷ್ಠಾನಕ್ಕೆ ತಂದಿತು. ಅಗ್ನಿಶಾಮಕರಿಗೆ ಪಾಳಿ ಕೆಲಸ, ಸಮವಸ್ತ್ರ, ಕಾರ್ಮಿಕರ ವಿಮಾ ಸೌಲಭ್ಯ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಶಾಲಾ ಮಕ್ಕಳಿಗೆ ಬಿಸಿಯೂಟ, ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ನೌಕರರಿಗೆ ಮುಂಬಡ್ತಿ, ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ, ವಿದ್ಯಾರ್ಥಿಗಳ ವಸತಿಗೃಹ ಸುಧಾರಣೆ ಮುಂತಾದವುಗಳು ಅಸ್ತಿತ್ವಕ್ಕೆ ಬರಲು ಸಾಧ್ಯವಾಗಿದೆ.

ವಸಾಹಾತೋತ್ತರ ಕಾಲಘಟ್ಟದ ಭಾರತದ ಮಹತ್ವದ ಚಿಂತಕರಾದ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಅವರ ಒಂದು ಬಹುಮುಖ್ಯವಾದ ಲೇಖನ ಇದೆ. ಅದರ ಶೀರ್ಷಿಕೆ ‘Can the Subaltern Speak?’ (1988) (‘ಸಬಾಲ್ಟರ್ನ್ ಮಂದಿಗೆ ಮಾತನಾಡಲು ಸಾಧ್ಯವೇ?’) ಅವರ ನಿಲುವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮತ್ತೊಂದು ರೀತಿಯಲ್ಲಿ ನಾವು ಆ ಪ್ರಶ್ನೆಯನ್ನು ಕೇಳಿಕೊಳ್ಳಬಹುದು. “ನಿಜವಾಗಿಯೂ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ: ‘ಸಬಾಲ್ಟರ್ನ್ ಮಂದಿಗೆ ಮಾತನಾಡಲು ಅನುಕೂಲಕರವಾದ ವಾತಾವರಣ ಇದೆಯಾ?’ ಎಂದು. ತನ್ನ ಮೇಲೆ ದೌರ್ಜನ್ಯ ನಡೆದಾಗ ಯಾಕೆ ದಲಿತನೊಬ್ಬ ಏರುದನಿಯ ಪೋಲಿಸ್ ಮುಂದೆ ದೂರು ನೀಡಲಾಗುವುದಿಲ್ಲ? ಸಬಾಲ್ಟರ್ನ್ ಮಂದಿ, ಮುಖ್ಯವಾಹಿನಿಯ ಭಾಷೆ-ನುಡಿಗಟ್ಟಿನಲ್ಲೇ ಮಾತನಾಡಬೇಕ?… ಸಿಟ್ಟು ಒಂದು ಅಭಿವ್ಯಕ್ತಿ ಅಲ್ಲವೇ? ನೊಂದವರ ಮಾತು-ಚರ್ಚೆಗಳು ಉಳ್ಳವರು ನಿರ್ಮಿಸಿದ ಚೌಕಟ್ಟಿಗೆ ಬಗ್ಗಿ ಮಾತು ಬೆಳಸಬೇಕೆ? ಮತ್ತು ಮುಖ್ಯವಾಗಿ ಕೇಳಿಕೊಳ್ಳಬೇಕಾದುದು ‘Can the Subaltern be Heard?’ ಎಂದು. ‘ಸಬಾಲ್ಟರ್ನ್ ಮಂದಿಯ ಮಾತನ್ನು ಆಲಿಸಲು ನಮ್ಮಿಂದ ಸಾಧ್ಯವೇ?’ ಆ ಸಂಯಮ, ಆ ಹೃದಯವಂತಿಕೆ, ಆ ಮಾನವೀಯತೆ ನಮ್ಮಲಿದೆಯೇ? ಎಂದು.”4
ಇದನ್ನು ಓದಿದ್ದೀರಾ?: ಮದುವೆಯಿಂದ ಹಿಂದೆ ಸರಿಯುತ್ತಿದ್ದಾರೆ ಭಾರತೀಯ ನಾರಿಯರು!
ಕವಿ ಸಿದ್ಧಲಿಂಗಯ್ಯನವರು ಯಾರ ದನಿಯನ್ನು ಕೇಳಿಸಿಕೊಳ್ಳಲು ಆಳುವವರ್ಗ ಅಥವಾ ಪ್ರಭುತ್ವ ಇಚ್ಛಿಸುವುದಿಲ್ಲವೋ ಅಂತಹ ಅಲಕ್ಷಿತ ಸಮುದಾಯಗಳ ಪ್ರತಿನಿಧಿಯಂತೆ, ದಮನಿತರ ಪರವಾದ ಕಾಳಜಿಯಿಂದ ದನಿಯೆತ್ತಿದ್ದಾರೆ. ನಾಡಿನ ಏಳಿಗೆಗೆ ಪೂರಕವಾದ ಅವರ ಜೀವಪರ, ದೂರದೃಷ್ಟಿಯುಳ್ಳ ಸಮಾಜಮುಖಿ ನಿಲುವಿಗೆ ಇವು ಸಾಕ್ಷಿಯಾಗಿವೆ. ದುಡಿಯುವ ವರ್ಗದ, ಶೋಷಿತರ ಬದುಕಿನ ಘನತೆಗೆ ಹಾಗೂ ಅವರ ಉದ್ಧಾರಕ್ಕೆ ಅನುವಾಗುವಂತೆ ಸರ್ಕಾರ ನೀತಿಗಳನ್ನು ರೂಪಿಸುವಲ್ಲಿ ಸಿದ್ಧಲಿಂಗಯ್ಯವರು ತಮ್ಮ ಮಿತಿಯೊಳಗೆ ಗಣನೀಯವಾದ ಸೇವೆಯನ್ನು, ನಿಜವಾದ ಅರ್ಥದಲ್ಲಿ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರನಂತೆ ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ.
ಅಡಿ ಟಿಪ್ಪಣಿಗಳು:
1. ಡಾ. ಸಿದ್ಧಲಿಂಗಯ್ಯ (‘ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-02’ ಸಂಪಾದಕರು: ದೊಡ್ಡಹುಲ್ಲೂರು ರುಕ್ಕೋಜಿ, ಅಂಕಿತ ಪುಸ್ತಕ, ಬೆಂಗಳೂರು, 2021)
2. ಡಾ. ಸಿದ್ಧಲಿಂಗಯ್ಯ (‘ನನ್ನ ಜನಗಳು ಮತ್ತು ಇತರ ಕವಿತೆಗಳು’ ಕ್ರಾಂತಿ ಸಿರಿ ಪ್ರಕಾಶನ, ಬೆಂಗಳೂರು, 2005)
3. ಡಾ. ಉಮಾಶಂಕರ ಎಚ್.ಡಿ. (‘ಸುಡುವ ನೆತ್ತಿಯ ಸಿಂಬೆ’ ಡಾ. ಸಿದ್ಧಲಿಂಗಯ್ಯ ಅವರ ಸಾಹಿತ್ಯಾವಲೋಕನ, ನವಸ್ಫೂರ್ತಿ ಪಬ್ಲಿಕೇಷನ್ಸ್, ಬೆಂಗಳೂರು, 2022)
4. ಸಂವರ್ತ ಸಾಹಿಲ್ (‘ಬಾಳ್ಕಟ್ಟೆ’ ಅಂಕಣ ಬರಹಗಳು, ಅಹರ್ನಿಶಿ ಪ್ರಕಾಶನ, ಪುಟ: 69-70, 2018)
ಪರಾಮರ್ಶನ ಗ್ರಂಥಗಳು:
1) ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು, ಸಂಪಾದಕರು: ದೊಡ್ಡಹುಲ್ಲೂರು ರುಕ್ಕೋಜಿ, (ಅಂಕಿತ ಪುಸ್ತಕ, ಬೆಂಗಳೂರು, ಪರಿಷ್ಕೃತ ವಿಸ್ತೃತ ಆವೃತ್ತಿ, 2004)
2) ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-02, ಸಂಪಾದಕರು: ದೊಡ್ಡಹುಲ್ಲೂರು ರುಕ್ಕೋಜಿ (ಅಂಕಿತ ಪುಸ್ತಕ, ಬೆಂಗಳೂರು, 2021)

ಆರ್. ಶ್ರೀಧರ್
ಲೇಖಕರು, ಸಹಾಯಕ ಪ್ರಾಧ್ಯಾಪಕರು




