ತಮಿಳುನಾಡು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ(ಎಸ್‌ಐಆರ್) ಕರಡು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 97 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಚೆನ್ನೈನಲ್ಲೇ 14.25 ಲಕ್ಷ ಮತದಾರರನ್ನು ಚುನಾವಣಾ ಆಯೋಗ ಕೈಬಿಟ್ಟಿದೆ. ವಲಸೆ, ಸಾವು, ನಕಲಿ ಮೊದಲಾದ ಕಾರಣ ನೀಡಿ 97 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲಾಗಿದೆ.
ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿ ಒದಗಿಸಿದ ಮಾಹಿತಿಯ ಪ್ರಕಾರ, ವಲಸೆ ಬಂದ ಕಾರಣ 66.4 ಲಕ್ಷ ಜನರನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ, 26.9 ಲಕ್ಷ ಜನರು ಮೃತಪಟ್ಟಿದ್ದಾರೆ ಮತ್ತು 3.98 ಲಕ್ಷ ಮತದಾರರ ಹೆಸರು ಒಂದಕ್ಕಿಂತ ಅಧಿಕ ಸ್ಥಳಗಳಲ್ಲಿ ದಾಖಲಾಗಿರುವುದು ಕಂಡುಬಂದಿದೆ.
ಇದನ್ನು ಓದಿದ್ದೀರಾ? 12 ರಾಜ್ಯಗಳಲ್ಲಿ ನಾಳೆಯಿಂದ ಎಸ್‌ಐಆರ್ ಎರಡನೇ ಹಂತ ಆರಂಭ
5.43 ಕೋಟಿ ಮತದಾರರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದು ರಾಜ್ಯದ ಒಟ್ಟು ಮತದಾರರಲ್ಲಿ ಶೇಕಡ 84.81ರಷ್ಟಿದೆ. 2025ರ ಡಿಸೆಂಬರ್ 19ರ ಹೊತ್ತಿಗೆ 6,41,14,587 ಮತದಾರರಲ್ಲಿ, 5,43,76,755 ಮತದಾರರು ತಮ್ಮ ಮಾಹಿತಿಯನ್ನು ನೀಡಿದ್ದು, ಎಸ್‌ಐಆರ್‌ನ ಮೊದಲ ಹಂತದಲ್ಲಿ ಅಗಾಧ ಪ್ರಮಾಣದಲ್ಲಿ ಜನರು ಭಾಗಿಯಾಗಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.
ಇನ್ನು ತಮಿಳುನಾಡನ್ನು ಹೊರತುಪಡಿಸಿ, ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದ್ದು, 73.7 ಲಕ್ಷ ಮತದಾರರ ಹೆಸರು ಅಳಿಸಲಾಗಿದೆ. ಗುಜರಾತ್‌ನ ಮುಖ್ಯ ಚುನಾವಣಾ ಅಧಿಕಾರಿ ಒದಗಿಸಿದ ಮಾಹಿತಿಯ ಪ್ರಕಾರ, 18.07 ಲಕ್ಷ ಮತದಾರರು ಮೃತಪಟ್ಟಿದ್ದಾರೆ. 51.86 ಲಕ್ಷ ಮತದಾರರನ್ನು ಸ್ಥಳಾಂತರರಾಗಿದ್ದಾರೆ ಮತ್ತು 3.81 ಲಕ್ಷ ಮತದಾರರನ್ನು ಒಂದಕ್ಕಿಂತ ಅಧಿಕ ಸ್ಥಳದಲ್ಲಿ ನೋಂದಾಯಿಸಲಾಗಿದೆ.
ಇನ್ನು ತಮಿಳುನಾಡಿನಲ್ಲಿ ಡಿಎಂಕೆ ಆಡಳಿತವು ಎಸ್‌ಐಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ತೀವ್ರ ವಿರೋಧದ ನಡುವೆಯೂ ಎಸ್‌ಐಆರ್ ನಡೆಯುತ್ತಿದ್ದು, ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. “ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ತಡೆಯಲು, ನಾವು ಸರ್ವಪಕ್ಷ ಸಭೆ ಕರೆದು SIR ಅನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ್ದೇವೆ. ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮತದಾರರ ಪಟ್ಟಿಯ ಸಂಪೂರ್ಣ ಪರಿಷ್ಕರಣೆಯನ್ನು ಕೈಗೊಳ್ಳುವ ಚುನಾವಣಾ ಆಯೋಗದ ನಿರ್ಧಾರವು ಕಾನೂನುಬದ್ಧ ಮತದಾರರನ್ನು ಅಳಿಸಲು ಯೋಜಿತ ತಂತ್ರದ ಭಾಗವಾಗಿದೆ” ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
“ಲಕ್ಷಾಂತರ ನಿಜವಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಬಿಹಾರದಲ್ಲಿ ಇದೇ ತಂತ್ರವನ್ನು ಮೊದಲು ಬಳಸಲಾಗಿತ್ತು. ಬಿಹಾರದಲ್ಲಿಯೂ ಇದೇ ತಂತ್ರವನ್ನು ಬಳಸಲಾಗಿತ್ತು” ಎಂದು ಹೇಳಿದ್ದಾರೆ.





