ಅರವಿಂದ್ ಕೇಜ್ರಿವಾಲ್ ಮತ್ತ ಮನೀಶ್ ಸಿಸೋಡಿಯ ಅವರೊಂದಿಗೆ ಇತರೆ 21 ಮಂದಿ ಆಪಾದಿತರನ್ನು ದೆಹಲಿಯ ನ್ಯಾಯಾಲಯ ದೋಷಮುಕ್ತರೆಂದು ಸಾರಿದೆ. ಅಬಕಾರಿ ನೀತಿ ಹಗರಣ ಸಂಬಂಧ ಇವರ ಮೇಲೆ ಹೂಡಲಾಗಿರುವ ಮೊಕದ್ದಮೆಗಳಿಗೆ ಪುರಾವೆಗಳೇ ಇಲ್ಲವೆಂದಿದೆ.
598 ಪುಟಗಳ ತೀರ್ಪು ಆಮ್ ಆದ್ಮಿ ಪಾರ್ಟಿ ನಾಯಕರು ಮತ್ತು ಪ್ರಕರಣದ ಇತರ ಆಪಾದಿತರಿಗೆ ದೊರೆತ ದೊಡ್ಡ ಪರಿಹಾರ. ಆದರೆ, ಇದೇ ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣದ ಕತೆಯೇನು ಎಂಬ ಪ್ರಶ್ನೆ ಈಗಲೂ ಉಳಿದಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002 (Prevention of Money Laundering Act – PMLA) ಅಡಿಯಲ್ಲಿ ED ದಾಖಲಿಸುವ ಪ್ರಕರಣವನ್ನು ಸಾಮಾನ್ಯವಾಗಿ ಮೂಲ ಅಪರಾಧಕ್ಕೆ ಸಂಬಂಧಿಸಿದ ‘ಸ್ವತಂತ್ರ ಅಪರಾಧ’ ಎಂದು ಕರೆಯಲಾಗುತ್ತದೆ. ಅಂದರೆ, ಮೂಲ ಅಪರಾಧದಲ್ಲಿ ದೋಷಿಯೆಂದು ತೀರ್ಪು ಬಂದಿರದಿದ್ದರೂ, ಅಕ್ರಮವಾಗಿ ಸಂಪಾದಿಸಿದ ‘ಅಪರಾಧದ ಆದಾಯ’ ಕುರಿತು ED ತನಿಖೆ ಆರಂಭಿಸಬಹುದು. ಮೂಲ ಅಪರಾಧದ ವಿಚಾರಣೆ ನಡೆಯುತ್ತಿದ್ದರೂ ಅಥವಾ ತೀರ್ಪು ಬಾರದಿದ್ದರೂ, ED ತಾನು ಹೂಡಿದ ಪ್ರಕರಣವನ್ನು ಮುಂದುವರಿಸಬಹುದು.
ಮದ್ಯನೀತಿ ಹಗರಣದ ಆರೋಪಿಯಾಗಿ ಕೇಜ್ರಿವಾಲ್ ಹೆಸರನ್ನು ಸಿಬಿಐ ಸೇರಿಸುವ ಮುನ್ನವೇ ED, ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ಅಕ್ರಮ ಹಣ ವರ್ಗಾವಣೆಯು ಸ್ವತಂತ್ರ ಅಪರಾಧ ಎಂದು ವಾದಿಸಿತ್ತು. ಆದರೆ, ED ಹೂಡಿರುವ ಪ್ರಕರಣವು ಮೂಲ ಅಪರಾಧವನ್ನೇ ಅವಲಂಬಿಸಿದೆ. ಈ ಪ್ರಕರಣವು ಮೂಲ ಅಪರಾಧದಿಂದಲೇ ಹುಟ್ಟಬೇಕು. ನ್ಯಾಯಾಲಯವು ಆರೋಪಿ ಅಥವಾ ಆರೋಪಿಗಳನ್ನು ಖುಲಾಸೆಗೊಳಿಸಿದರೆ, ED ಪ್ರಕರಣವನ್ನು ಮುಂದುವರೆಸಲು ಸಾಧ್ಯವಿಲ್ಲ.
ಈ ದಿಸೆಯಲ್ಲಿ ‘Vijay Madanlal Chaudhary vs Union of India’ 2022ರ ಪ್ರಸಿದ್ಧ ತೀರ್ಪನ್ನು ಗಮನಿಸಬೇಕು. ಈ ತೀರ್ಪಿನಲ್ಲಿ ಅಕ್ರಮ ಹಣ ವರ್ಗಾವಣೆಯ ವ್ಯಾಖ್ಯಾನವನ್ನು ನೀಡಿದೆ ಸುಪ್ರೀಮ್ ಕೋರ್ಟು. ನಿರ್ದಿಷ್ಟ ಅಪರಾಧ ನಡೆದಿರಬಹುದು ಎಂಬ ಕೇವಲ ಊಹೆ ಅಥವಾ ಕಲ್ಪನೆಯ ಆಧಾರದ ಮೇಲೆ ಯಾರನ್ನೂ ಪ್ರಕರಣದ ವ್ಯಾಪ್ತಿಗೆ ತರುವುದು ಸಾಧ್ಯವಿಲ್ಲ. ಈ ಅಪರಾಧ ಅದಾಗಲೇ ಸಂಬಂಧಿತ ಪೊಲೀಸ್ ಠಾಣೆಯಲ್ಲಿ ದಾಖಲಾಗಿರಬೇಕು. ಇಲ್ಲವೇ, ನ್ಯಾಯಾಲಯದಲ್ಲಿ ಅದರ ಪ್ರಕ್ರಿಯೆ-ವಿಚಾರಣೆ ನಡೆಯುತ್ತಲಿರಬೇಕು ಎಂದು ವಿಧಿಸಿತು.
ಈ ಲೇಖನ ಓದಿದ್ದೀರಾ?: ಎಪ್‌ಸ್ಟೀನ್ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ
ಅರ್ಥಾತ್, ED ಹೂಡಿದ ಪ್ರಕರಣವು ಮೂಲ ಅಪರಾಧದ ಪ್ರಕರಣವನ್ನು ಅನುಸರಿಸಬೇಕು. ಹೀಗಾಗಿ, ಮೂಲ ಅಪರಾಧವೇ ರದ್ದಾದರೆ ಅಥವಾ ಆರೋಪಿಗಳು ಖುಲಾಸೆಯಾದರೆ, ED ಪ್ರಕರಣ ಮುಂದುವರಿಯಲು ಸಾಧ್ಯವಿಲ್ಲ. ಬಿದ್ದು ಹೋಗುತ್ತದೆ.
ಕೇಜ್ರೀವಾಲ್ ಮತ್ತು ಇತರೆ 22 ಮಂದಿಯ ಖುಲಾಸೆಯ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಿಬಿಐ ಶುಕ್ರವಾರವೇ ಹೇಳಿದೆ. ದೆಹಲಿ ನ್ಯಾಯಾಲಯದ ಶುಕ್ರವಾರದ ಆದೇಶಕ್ಕೆ ತಡೆಯಾಜ್ಞೆ ಸಿಗುವ ತನಕವಾದರೂ ED ಪ್ರಕರಣ ಮುಂದುವರೆಯುವುದು ಶಕ್ಯವೇ ಇಲ್ಲ.
ಅನೇಕ ಪ್ರಕರಣಗಳಲ್ಲಿ ವಿಜಯ್ ಮದನಲಾಲ್ ಚೌಧರಿ ತೀರ್ಪನ್ನೇ ಅನ್ವಯಿಸಿ, ಮೂಲ ಅಪರಾಧದಲ್ಲಿ ಆರೋಪಿಗೆ ವಿನಾಯಿತಿ ಅಥವಾ ವಿಮುಕ್ತಿ ದೊರೆತರೆ, ಅಕ್ರಮ ಹಣ ವರ್ಗಾವಣೆಯ ED ಪ್ರಕರಣ ಮುಂದುವರಿಯುವುದಿಲ್ಲ ಎಂದು ಸುಪ್ರೀಮ್ ಕೋರ್ಟು ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ




