ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಂಗಾಳ ರಾಜ್ಯ ಡಿಜಿಪಿ, ಕೋಲ್ಕತ್ತಾ ಪೊಲೀಸ್ ಆಯುಕ್ತರು, ಐ-ಪ್ಯಾಕ್ ಸಂಸ್ಥಾಪಕ ಪ್ರತೀಕ್ ಜೈನ್ ವಿರುದ್ಧ ಜಾರಿ ನಿರ್ದೇಶನಾಲಯವು (ಇಡಿ) ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಈ ಎಲ್ಲರ ವಿರುದ್ಧ ಡಕಾಯಿತಿ, ಕೊಲೆ ಯತ್ನ, ಅತಿಕ್ರಮಣ, ಕಳ್ಳತನ ಹಾಗೂ ಅಕ್ರಮವಾಗಿ ಮನೆ ನುಗ್ಗಿದ ಆರೋಪ ಸೇರಿದಂತೆ 17 ಆರೋಪಗಳ ಮೇಲೆ ಪ್ರಕರಣ ದಾಖಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ.
ಮಮತಾ ಬ್ಯಾನರ್ಜಿ ಅವರ ಪಕ್ಷ ಟಿಎಂಸಿಗೆ ರಾಜಕೀಯ ಸಲಹೆಗಳು ಮತ್ತು ಕಾರ್ಯತಂತ್ರ ರೂಪಿಸುವ ಸಂಸ್ಥೆ ‘ಐ-ಪ್ಯಾಕ್’ನ ಕಚೇರಿ ಮತ್ತು ಅದರ ಸಂಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜನವರಿ 8ರಂದು ಇಡಿ ದಾಳಿ ನಡೆಸಿತ್ತು. ಹಿಂದಿನ, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿರುವುದಾಗಿ ಇಡಿ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ, ಬಂಗಾಳ ಚುನಾವಣೆಯ ಸಮದಯಲ್ಲಿ ನಡೆದಿರುವ ಈ ದಾಳಿಯು, ಟಿಎಂಸಿಯ ಚುನಾವಣಾ ತಂತ್ರಗಳು, ಆಂತರಿಕ ದಾಖಲೆಗಳು ಹಾಗೂ ಅಭ್ಯರ್ಥಿಗಳ ಮಾಹಿತಿಯನ್ನು ಕದಿಯಲು ಕೇಂದ್ರ ತನಿಖಾ ಸಂಸ್ಥೆಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ. ಅಮಿತ್ ಶಾ ಅವರ ನಿರ್ದೇಶನದಂತೆ ಈ ದಾಳಿ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ದಾಳಿ ವೇಳೆ ಐ-ಪ್ಯಾಕ್ ಕಚೇರಿಗೆ ತೆರಳಿದ ಮಮತಾ, ಕೆಲವು ಕಡತಗಳನ್ನು ಅಧಿಕಾರಿಗಳಿಂದ ಕಸಿದುಕೊಂಡು ಹೊರತಂದಿದ್ದಾರೆ. ಅಲ್ಲದೆ, ಬಂಗಾಳದಾದ್ಯಂತ ಟಿಎಂಸಿ ಕಾರ್ಯಕರ್ತರು ಇಡಿ ಮತ್ತು ಬಿಜೆಪಿ ವಿರುದ್ಧ ಜನವರಿ 9ರಂದು ಪ್ರತಿಭಟನೆ ನಡೆಸಿದ್ದಾರೆ.
ಅದೇ ಸಮಯದಲ್ಲಿ, ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಇಡಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ನ್ಯಾಯಾಲಯದ ಆವರಣದಲ್ಲಿ ಟಿಎಂಸಿ ಕಾರ್ಯಕರ್ತರು ಜಮಾಯಿಸಿದ್ದರಿಂದ, ಜನಸಂದಣಿಯ ಕಾರಣಕ್ಕಾಗಿ ವಿಚಾರಣೆಯನ್ನು ಮುಂದೂಡಿದ್ದರು. ಇದೀಗ, ಇಡಿ ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಮಮತಾ ಮತ್ತು ಇತರ 16 ಮಂದಿ ವಿರುದ್ಧ ಹಲವು ಆರೋಪಗಳ ಮೇಲೆ ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ.
“ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯಿಂದ ಪಡೆದ ಸುಮಾರು 3,000 ಕೋಟಿ ರೂ.ಗಳಿಗೆ ಸಂಬಂಧಿಸಿದ ಬಹು ರಾಜ್ಯ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿದೆ. ಜೈನ್ ಅವರು ಅಕ್ರಮ ಹಣದಲ್ಲಿ 20 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಈ ಪ್ರಕರಣದ ಭಾಗವಾಗಿ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಆದರೆ, ದಾಳಿ-ಪರಿಶೀಲನೆ ಸಮಯದಲ್ಲಿ ಮುಖ್ಯಮಂತ್ರಿ ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ತನಿಖೆಗೆ ಅಡ್ಡಿಪಡಿಸಿದ್ದಾರೆ” ಎಂದು ಇಡಿ ಆರೋಪಿಸಿದೆ.
ಜನವರಿ 8ರಂದು ನಡೆದ ಘಟನೆಯನ್ನು ಆಘಾತಕಾರಿ, ವಿಲಕ್ಷಣ ಹಾಗೂ ಅಸಾಧಾರಣ ಎಂದು ಬಣ್ಣಿಸಿರುವ ಇಡಿ, “ಕಾನೂನು ರಕ್ಷಕರು – ಮುಖ್ಯಮಂತ್ರಿ, ಡಿಜಿಪಿ ಹಾಗೂ ಕೋಲ್ಕತ್ತಾ ಪೊಲೀಸ್ ಆಯುಕ್ತರು – ಎಫ್‌ಐಆರ್ ದಾಖಲಿಸಬೇಕಾದ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಬಿಎನ್‌ಎಸ್ ಅಡಿಯಲ್ಲಿ 17 ಅಪರಾಧಗಳನ್ನು ಮಾಡಿದ್ದಾರೆ” ಎಂದು ಇಡಿ ಆರೋಪಿಸಿದೆ. ಇವುಗಳಲ್ಲಿ ದರೋಡೆ, ಡಕಾಯಿತಿ, ಕಳ್ಳತನ, ಹಲ್ಲೆ ಅಥವಾ ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ, ಕ್ರಿಮಿನಲ್ ಬಲ ಪ್ರಯೋಗ, ಕಣ್ಮರೆ ಮಾಡುವುದು, ಸಾಕ್ಷ್ಯ ನಾಶ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿವೆ.
ಈ ಲೇಖನ ಓದಿದ್ದೀರಾ?: ವಿಶ್ವದ ಟಾಪ್ 100ರಲ್ಲಿ ಇಲ್ಲ ಭಾರತದ ವಿವಿಗಳು; IITಗೂ ಸ್ಥಾನವಿಲ್ಲ ಯಾಕೆ?
“ಶೋಧ ನಡೆಯುತ್ತಿದ್ದ ಸ್ಥಳದಿಂದ ಕಾನೂನುಬಾಹಿರವಾಗಿ ಮತ್ತು ಬಲವಂತವಾಗಿ ತೆಗೆದುಕೊಂಡು ಹೋಗಲಾದ ಎಲ್ಲ ಡಿಜಿಟಲ್ ಸಾಧನಗಳು, ಎಲೆಕ್ಟ್ರಾನಿಕ್ ದಾಖಲೆಗಳು, ಸಂಗ್ರಹಣಾ ಮಾಧ್ಯಮ ಹಾಗೂ ದಾಖಲೆಗಳನ್ನು ತಕ್ಷಣ ವಶಪಡಿಸಿಕೊಳ್ಳುವುದು, ಸೀಲಿಂಗ್ ಮಾಡುವುದು, ವಿಧಿವಿಜ್ಞಾನ ಸಂರಕ್ಷಣೆ ಹಾಗೂ ಇಡಿಯ ಕಾನೂನುಬದ್ಧ ಕಸ್ಟಡಿಗೆ ನೀಡುವಂತೆ ನಿರ್ದೇಶನ ನೀಡಬೇಕು” ಎಂದು ಸುಪ್ರೀಂ ಕೋರ್ಟ್‌ಗೆ ಇಡಿ ಮನವಿ ಮಾಡಿದೆ.
“ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗಿದೆ.ಆವರಣದಲ್ಲಿ ಯಾವುದೇ ಹೆಚ್ಚಿನ ಶೋಧ ನಡೆಸಲು ಅನುಮತಿ ನೀಡಲಾಗಿಲ್ಲ. ರಾಜ್ಯದ ಸಾಂವಿಧಾನಿಕ ಮತ್ತು ಪೊಲೀಸ್ ಅಧಿಕಾರಿಗಳ ಈ ಕಾನೂನುಬಾಹಿರ ಕ್ರಮಗಳಿಗೆ ಎಫ್‌ಐಆರ್ ದಾಖಲಿಸಲು ಸ್ಥಳೀಯ ಪೊಲೀಸರನ್ನು ಸಂಪರ್ಕಿಸುವುದು ವ್ಯರ್ಥ. ಏಕೆಂದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಗೃಹ ಖಾತೆಯನ್ನು ಹೊಂದಿದ್ದಾರೆ” ಎಂದು ಇಡಿ ಹೇಳಿದೆ.
ದಾಳಿ ನಡೆಸಿದ್ದಕ್ಕಾಗಿ ರಾಜ್ಯ ಪೊಲೀಸರು ದುರುದ್ದೇಶಪೂರ್ವಕವಾಗಿ ತಮ್ಮ ಅಧಿಕಾರಿಗಳ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ಐ-ಪಿಎಸಿಗೆ ಸಂಬಂಧಿಸಿದ ಪಿಎಂಎಲ್‌ಎ ಪ್ರಕರಣದ ತನಿಖೆಯನ್ನು ಅಡೆತಡೆಯಿಲ್ಲದೆ ನಡೆಸಲು ತನ್ನ ಅಧಿಕಾರಿಗಳಿಗೆ ನ್ಯಾಯಾಲಯದಿಂದ ರಕ್ಷಣೆ ನೀಡಬೇಕು” ಎಂದು ಇಡಿ ಕೋರಿದೆ.




