ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೂ ಬಿಜೆಪಿ ನಡೆಸಿರುವ ಪ್ರಚಾರದ ವಿವರವನ್ನು ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕಿ ಶೋಭಾ ಕರಂದ್ಲಾಜೆ ನೀಡಿದ್ದಾರೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದು ಮಾಹಿತಿ ಹಂಚಿಕೊಂಡಿರುವ ಅವರು, “ಚುನಾವಣೆ ಸಲುವಾಗಿ ರಾಜ್ಯಾದ್ಯಂತ ನಮ್ಮ ನಾಯಕರು 231 ಸಾರ್ವಜನಿಕ ಸಭೆಗಳನ್ನು, 48 ರೋಡ್ ಶೋಗಳನ್ನು ಮಾಡಿದ್ದಾರೆ” ಎಂದು ತಿಳಿಸಿದರು.
“ನಮ್ಮ ರಾಷ್ಟ್ರೀಯ ನಾಯಕರು 206 ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿ ಅವರು 19 ಸಭೆ, 6 ರೋಡ್ ಶೋ ಮಾಡಿದ್ದಾರೆ. ಕೇಂದ್ರದಿಂದ ಬಂದ ನಾಯಕರು ಉತ್ತಮವಾಗಿ ಪ್ರಚಾರ ಮಾಡಿದ್ದು, ಭಾಷಾವಾರು ಸಮುದಾಯಗಳ ಜನರಿರುವ ಕಡೆ ಅದೇ ಭಾಷೆಗಳ ನಾಯಕರು ಪ್ರಚಾರ ಮಾಡಿದ್ದಾರೆ” ಎಂದರು.
“ಏಪ್ರಿಲ್ 25, 26ರಂದು ಬಿಜೆಪಿಯಿಂದ ಮಹಾ ಪ್ರಚಾರ ಅಭಿಯಾನ ನಡೆಸಲಾಗಿದ್ದು, 3,116 ಕಡೆ ಬೂತ್ ಮಟ್ಟದ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ. 9,125 ಚಿಕ್ಕಪುಟ್ಟ ಸಭೆಗಳನ್ನು ನಡೆಸಲಾಗಿದ್ದು, 1,137 ರೋಡ್ ಶೋ ಮಾಡಲಾಗಿದೆ. ಈ ಮೂಲಕ ಒಂದೂವರೆ ದಿನದಲ್ಲಿ 20 ಲಕ್ಷ ಜನರನ್ನು ತಲುಪಿದ್ದೆವು” ಎಂದು ವಿವರಿಸಿದರು.
ಬೇರೆ ರಾಜ್ಯಗಳ 31 ಜನ ನಾಯಕರು ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದಾರೆ. ಅಮಿತ್ ಷಾ 16 ಸಭೆ, 17 ಕಡೆ ರೋಡ್ ಶೋ ಮಾಡಿದ್ದು, ಜೆ ಪಿ ನಡ್ಡಾ ಅವರು 10 ಸಾರ್ವಜನಿಕ ಸಭೆ ಮತ್ತು 16 ರೋಡ್ ಶೋ ಮಾಡಿದ್ದಾರೆ. ಕೇಂದ್ರದ ಅನೇಕ ಸಚಿವರು, ಅನ್ಯರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗೆಲ್ಲಲಿದೆ” ಎಂದು ಹೇಳಿದರು.
“ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 44, ಕೆ ಎಸ್ ಈಶ್ವರಪ್ಪ 24, ಸಿ ಟಿ ರವಿ 16, ಬಸನಗೌಡ ಪಾಟೀಲ ಯತ್ನಾಳ್ 41, ನಳಿನ್ ಕುಮಾರ್ ಕಟೀಲ್ 24 ಹಾಗೂ ಎ ನಾರಾಯಣಸ್ವಾಮಿ 25 ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ.





