ಈ ನೋಟಿಸ್ ಬಹುತೇಕವಾಗಿ ಮೋದಿ ಸರ್ಕಾರದ ವಿರುದ್ಧವಾಗಿ ಮಾತನಾಡಿದವರಿಗೆ ಅಥವಾ ಅಲ್ಪಸಂಖ್ಯಾತರಿಗೆಯೇ ಯಾಕೆ ಬಂದಿದೆ, ಪ್ರಧಾನಿ ಮೋದಿಯನ್ನು ಟೀಕಿಸಿದವರೇ ಚುನಾವಣಾ ಆಯೋಗದ ಗುರಿಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಸದ್ಯ ದೇಶದ 12 ರಾಜ್ಯಗಳಲ್ಲಿ ನಡೆಯುತ್ತಿದೆ. ಈಗಾಗಲೇ ಈ ತರಾತುರಿಯ ಪ್ರಕ್ರಿಯೆಗೆ ಒಳಗಾದ ಬಿಹಾರದಲ್ಲಿ ವಿಧಾನಸಭೆ ಚುನಾವಣೆಯೂ ನಡೆದಿದೆ, ಫಲಿತಾಂಶ ನಿಮಗೆ ತಿಳಿದಿದೆ. ಚುನಾವಣೆಗೂ ಮುನ್ನ ಅಷ್ಟೊಂದು ತುರ್ತಾಗಿ ಎಸ್‌ಐಆರ್ ನಡೆಸುವುದರ ವಿರುದ್ಧ ಸಾಕಷ್ಟು ವಿರೋಧಗಳಿದ್ದರೂ ಪ್ರಕ್ರಿಯೆ ನಡೆದಿದೆ, 65 ಲಕ್ಷಕ್ಕೂ ಅಧಿಕ ಮಂದಿಯ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪೈಕಿ ಹೆಚ್ಚಾಗಿ ಅಲ್ಪಸಂಖ್ಯಾತರು, ಬಡವರು, ದಲಿತರು, ಮಹಿಳೆಯರನ್ನೇ ಪಟ್ಟಿಯಿಂದ ಹೊರಹಾಕಲಾಗಿದೆ. ಅದರಲ್ಲಿ ಚುನಾವಣಾ ಆಯೋಗ ಮೃತರೆಂದು ಘೋಷಿಸಿದವರು ಜೀವಂತವಾಗಿರುವುದೂ ಬೆಳಕಿಗೆ ಬಂದಿದೆ, ದಾಖಲೆ ಇಲ್ಲದ ವರ್ಗ ಮತದಾನದ ಹಕ್ಕನೇ ಕಳೆದುಕೊಂಡಿದ್ದೂ ಆಗಿದೆ.
ಇಷ್ಟೆಲ್ಲ ಗೊಂದಲದ ಗೂಡಾದರೂ, ವಿರೋಧ ವ್ಯಕ್ತವಾದರೂ ಚುನಾವಣಾ ಆಯೋಗ ಎಸ್‌ಐಆರ್‌ಅನ್ನು 12 ರಾಜ್ಯಗಳಿಗೆ ವಿಸ್ತರಿಸಿದೆ. ಇದರಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೂಡಾ ಸೇರಿವೆ. ಈ ಪ್ರಕ್ರಿಯೆಯಲ್ಲಿ ಒಟ್ಟಾರೆಯಾಗಿ 6 ಕೋಟಿಗೂ ಅಧಿಕ ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಜತೆಗೆ ಅದೆಷ್ಟೋ ಬಿಎಲ್‌ಒಗಳು ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೆಲವರು ಹೃದಾಯಾಘಾತಕ್ಕೆ ಬಲಿಯಾಗಿದ್ದಾರೆ. ಆಯೋಗ ಮಾತ್ರ ಯಾವುದೇ ಕೆಲಸದ ಹೊರೆಯಿಲ್ಲ ಎಂದು ಸಮರ್ಥನೆಗೆ ಇಳಿದಿದೆ.
ಇದನ್ನು ಓದಿದ್ದೀರಾ? ನೊಬೆಲ್ ವಿಜೇತ ಅಮರ್ತ್ಯ ಸೇನ್‌ಗೆ ನೋಟಿಸ್: ಗಾಂಧಿ ಬದುಕ್ಕಿದ್ದರೆ ಅವರಿಗೂ ಎಸ್‌ಐಆರ್ ಬುಲಾವ್ ಬರುತ್ತಿತ್ತು!
ಇವೆಲ್ಲವುದರ ನಡುವೆ ತಾವು ಇದೇ ನಾಡಿನವರು, ಮತದಾನ ಮಾಡಲು ಅರ್ಹರು ಎಂದು ಸಾಬೀತುಪಡಿಸಲು ಜನರು ಅಲೆದಾಡುವಂತಾಗಿದೆ, ಅವಮಾನಕ್ಕೆ ಒಳಗಾಗುವಂತಾಗಿದೆ. ಈ ಅವಮಾನದಿಂದ ಭಾರತ ರತ್ನ ಅಮರ್ತ್ಯ ಸೇನ್ ಕೂಡಾ ಹೊರತಾಗಿಲ್ಲ.
ಭಾರತೀಯ ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ, ಲೇಖಕ, ಭಾರತರತ್ನ ಅಮರ್ತ್ಯ ಸೇನ್ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. “ಸಮಾಜದ ಅತ್ಯಂತ ಬಡ ಮತ್ತು ಹಿಂದುಳಿದ ಜನರ ಜೀವನಮಟ್ಟವನ್ನು ಸುಧಾರಿಸುವುದು ಅರ್ಥಶಾಸ್ತ್ರದ ಮುಖ್ಯ ಗುರಿಯಾಗಬೇಕು” ಎಂದು ಹೇಳಿದವರು ಅಮರ್ತ್ಯ ಸೇನ್. ಅವರು ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಆದರೆ ಇದೀಗ ಭಾರತೀಯ ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಮರ್ತ್ಯ ಸೇನ್ ಕೂಡಾ ಮತದಾನ ಮಾಡಲು ಅರ್ಹರು ಎಂದು ಸಾಬೀತುಪಡಿಸುವಂತೆ ಹೇಳಿ ಅವಮಾನ ಮಾಡಿದೆ.
ಇತ್ತೀಚೆಗೆ ಅಮರ್ತ್ಯ ಸೇನ್‌ಗೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, ಎಸ್‌ಐಆರ್ ಪ್ರಕ್ರಿಯೆಗೆ ಹಾಜರಾಗುವಂತೆ ತಿಳಿಸಿದೆ. ಪ್ರಸ್ತುತ 92 ವರ್ಷದ ಅಮರ್ತ್ಯ ಸೇನ್ ಅವರು ವಿದೇಶದಲ್ಲಿದ್ದು ಅವರ ಕುಟುಂಬಸ್ಥರು ನೋಟಿಸ್ ಸ್ವೀಕರಿಸಿದ್ದಾರೆ. ಭಾರತ ರತ್ನ ಅಮರ್ತ್ಯ ಸೇನ್ ಅವರ ಬಳಿಯೇ ಚುನಾವಣಾ ಆಯೋಗ ಮತದಾನದ ಹಕ್ಕು ಉಳಿಸಿಕೊಳ್ಳಲು ದಾಖಲೆಗಳನ್ನು ಕೋರಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಿರುದ್ಧವಾಗಿದ್ದವರನ್ನು ಚುನಾವಣಾ ಆಯೋಗ ಗುರಿಯಾಗಿಸುತ್ತಿದೆ ಎಂಬ ಟೀಕೆಗಳೂ ಕೇಳಿಬಂದಿದ್ದವು. ಈ ಬೆಳವಣಿಗೆ ನಡುವೆ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ದೈನಿಕ್ ಭಾಸ್ಕರ್‌ಗೆ ನೀಡಿರುವ ಕಾರ್ಟೂನ್ ವೈರಲ್ ಆಗಿತ್ತು. “ಗಾಂಧಿ ಬದುಕ್ಕಿದ್ದರೆ ಅವರಿಗೂ ಎಸ್‌ಐಆರ್ ಬುಲಾವ್ ಬರುತ್ತಿತ್ತು!” ಎಂದು ಸತೀಶ್ ಆಚಾರ್ಯ ಹೇಳಿದ್ದರು.
ಇವೆಲ್ಲವುದರ ನಡುವೆ ಸಮರ್ಥನೆಗೆ ಇಳಿದ ಚುನಾವಣಾ ಆಯೋಗ ಮತದಾರರ ಪಟ್ಟಿ ನಮೂನೆಯಲ್ಲಿ ದಾಖಲಾಗಿರುವ ಮಾಹಿತಿಯಲ್ಲಿ ಕೆಲವು ವ್ಯತ್ಯಾಸಗಳಿವೆ. ಸೇನ್ ಮತ್ತು ಅವರ ತಾಯಿ ಅಮಿತಾ ಸೇನ್ ನಡುವಿನ ವಯಸ್ಸಿನ ವ್ಯತ್ಯಾಸವು 15 ವರ್ಷಕ್ಕಿಂತ ಕಡಿಮೆಯಿದೆ. ಆದ್ದರಿಂದ ನೋಟಿಸ್ ನೀಡಲಾಗಿದೆ ಎಂದು ಹೇಳಿಕೊಂಡಿದೆ. ಹಾಗೆಯೇ ಬಳಿಕ ಇದು ಆಯೋಗದ ಸಾಫ್ಟ್‌ವೇರ್ ‘ದೋಷ’ ಎಂದು ಹೇಳಿದೆ. ಆದರೆ ಆಯೋಗದ ತಪ್ಪಿಗೆ ಮತ್ತೆ ಸೇನ್ ಮನೆಗೆ ತೆರಳಿ ದಾಖಲೆಗಳನ್ನು ಕೇಳಿ ಅವಮಾನಿಸಿದೆ. ಬೋಲ್ಪುರದ ‘ಪ್ರತೀಚಿ’ ನಿವಾಸಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸೇನ್ ಅವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸಂಖ್ಯೆ, ಅವರ ತಾಯಿಯ ಮರಣ ಪ್ರಮಾಣಪತ್ರ ಮತ್ತು ಪಾಸ್‌ಪೋರ್ಟ್ ಪ್ರತಿಗಳನ್ನು ಸಂಗ್ರಹಿಸಿಕೊಂಡಿದ್ದಾರೆ.
ಇವೆಲ್ಲವೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೂ ಒಳಗಾಗುತ್ತಿದೆ. ಈ ಪ್ರಕ್ರಿಯೆ ಬಗ್ಗೆ ಅಮರ್ತ್ಯ ಸೇನ್ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಭಾರತದ ಅತ್ಯುನ್ನತ ನಾಗರಿಕ ಗೌರವ (ಭಾರತ ರತ್ನ) ಪಡೆದ ವ್ಯಕ್ತಿಗೂ ಕಿರುಕುಳ ನೀಡಲಾಗುತ್ತಿದೆ ಎಂಬ ಸಂದೇಶವನ್ನು ಆಯೋಗಕ್ಕೆ ರವಾನಿಸಲು ನಾನು ಅಧಿಕಾರಿಗಳ ಬಳಿ ವ್ಯಂಗ್ಯವಾಗಿ ಪ್ರಶ್ನಿಸಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಎಸ್‌ಐಆರ್ ಒತ್ತಡ: ಮತ್ತೋರ್ವ ಬಿಎಲ್‌ಒ ಆತ್ಮಹತ್ಯೆ
“ಈ ಪ್ರಕ್ರಿಯೆಗಳ ಅಗತ್ಯವಿದ್ದರೂ ಅವು, ಬಡ ಮತ್ತು ಶೋಷಿತ ಜನರ ಮೂಲಭೂತ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳುವಂತಿರಬಾರದು” ಎಂದು ಸೇನ್ ಎಚ್ಚರಿಸಿದ್ದಾರೆ. “ಅನೇಕ ಜನರಲ್ಲಿ ಸರಿಯಾದ ದಾಖಲೆಗಳಿರುವುದಿಲ್ಲ. ತಾಂತ್ರಿಕ ಸುಧಾರಣೆಯ ಹೆಸರಲ್ಲಿ ಜನರನ್ನು ಮತದಾನದ ಪ್ರಕ್ರಿಯೆಯಿಂದ ಹೊರಗಿಡುವುದು ಗಂಭೀರ ತಪ್ಪಾಗುತ್ತದೆ. ಒಂದು ಸಣ್ಣ ತಪ್ಪನ್ನು ಸರಿಪಡಿಸುವ ನೆಪದಲ್ಲಿ ಹಲವು ಹೊಸ ತಪ್ಪುಗಳನ್ನು ಮಾಡಿ ಜನರ ಹಕ್ಕುಗಳನ್ನು ಕಸಿಯುವುದನ್ನು ಸಮರ್ಥಿಸಲಾಗದು” ಎಂದು ಅಭಿಪ್ರಾಯಿಸಿದ್ದಾರೆ.
ಈ ನೋಟಿಸ್ ಬಹುತೇಕವಾಗಿ ಮೋದಿ ಸರ್ಕಾರದ ವಿರುದ್ಧವಾಗಿ ಮಾತನಾಡಿದವರಿಗೆ ಅಥವಾ ಅಲ್ಪಸಂಖ್ಯಾತರಿಗೆಯೇ ಯಾಕೆ ಬಂದಿದೆ, ಪ್ರಧಾನಿ ಮೋದಿಯನ್ನು ಟೀಕಿಸಿದವರೇ ಗುರಿಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ. 2013ರಿಂದಲೂ ಅಮರ್ತ್ಯ ಸೇನ್ ಅವರು ನರೇಂದ್ರ ಮೋದಿ ಅವರನ್ನು ಒಬ್ಬ ಉತ್ತಮ ಪ್ರಧಾನಿ ಅಭ್ಯರ್ಥಿ ಎಂದು ತಾವು ಪರಿಗಣಿಸುವುದಿಲ್ಲ ಎಂದು ಹೇಳಿಕೊಂಡು ಬಂದವರು. 2024ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಮುಸ್ಲಿಮರನ್ನು ‘ನುಸುಳುಕೋರರು’ ಎಂದು ಕರೆದಿದ್ದನ್ನು ಸೇನ್ ತೀವ್ರವಾಗಿ ಖಂಡಿಸಿದ್ದರು. ಪ್ರಧಾನಿಯವರು ದೇಶದ 20 ಕೋಟಿ ಮುಸ್ಲಿಂ ನಾಗರಿಕರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. 2014ರ ನಂತರ ಭಾರತವು “ತಪ್ಪು ದಿಕ್ಕಿನಲ್ಲಿ ದಾಪುಗಾಲು ಹಾಕುತ್ತಿದೆ” ಎಂದು ಸೇನ್ ಟೀಕಿಸಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಿಗಿಂತ ಕೇವಲ ಭೌತಿಕ ಬಂಡವಾಳಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಅವರಿಗೆ SIR ನೆಪದಲ್ಲಿ ಅವಮಾನಿಸಲಾಗುತ್ತಿದೆ.
ಇದನ್ನು ಹೊರತುಪಡಿಸಿ ಬೆಂಗಾಲಿ ನಟ ಮತ್ತು ಟಿಎಂಸಿ ಸಂಸದ ದೀಪಕ್ ಅಧಿಕಾರಿ ಅವರಿಗೂ ಇವರ ಕುಟುಂಬದ ಮೂವರು ಸದಸ್ಯರಿಗೂ ದಾಖಲೆಗಳ ಪರಿಶೀಲನೆಗಾಗಿ ನೋಟಿಸ್ ಜಾರಿ ಮಾಡಲಾಗಿದೆ. ಬೆಂಗಾಲಿ ಚಲನಚಿತ್ರರಂಗದ ಖ್ಯಾತ ಕಲಾವಿದೆ, ಟಿಎಂಸಿ ಬೆಂಬಲಿಗೆ ಲಾಬೋನಿ ಸರ್ಕಾರ್, ತಮ್ಮ ಹಾಡುಗಳ ಮೂಲಕ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವ್ಯಂಗ್ಯ ಮಾಡಿದ್ದ ಅನಿರ್ಬನ್ ಭಟ್ಟಾಚಾರ್ಯ ಅವರಿಗೂ ಸಹ ಎಸ್‌ಐಆರ್ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ.
ಇದನ್ನು ಹೊರತುಪಡಿಸಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ, ಲಾಬೋನಿ ಸರ್ಕಾರ್ ಪತಿ, ಬೆಂಗಾಲಿ ಚಿತ್ರರಂಗದ ಕೌಶಿಕ್ ಬಂದ್ಯೋಪಾಧ್ಯಾಯಗೂ ನೋಟಿಸ್ ನೀಡಲಾಗಿದೆ. ಜಾದವ್‌ಪುರ ಕ್ಷೇತ್ರದ ಮತದಾರರಾಗಿರುವ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಅವರ ಕುಟುಂಬ ಸದಸ್ಯರಿಗೂ ಎಸ್‌ಐಆರ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಜನಪ್ರಿಯ ವ್ಯಕ್ತಿಗಳ ಬಳಿಯೇ ಚುನಾವಣಾ ಆಯೋಗ ದಾಖಲೆ ಕೇಳಿ ಒತ್ತಡ ಹೇರುವಾಗ ಸಾಮಾನ್ಯ ಜನರ ಪರಿಸ್ಥಿತಿಯೇನು ಎಂಬ ಪ್ರಶ್ನೆಯೂ ಹುಟ್ಟಿದೆ. ಜನರು ತನ್ಮ ಕೆಲಸ ಕಾರ್ಯ ಬಿಟ್ಟು ದಾಖಲೆ ಸಂಗ್ರಹ, ವಿಚಾರಣೆಗಾಗಿ ಅಲೆದಾಡಬೇಕೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




