‘ಬಿಹಾರಿ ಅಸ್ಮಿತೆ’ಗೆ ಧಕ್ಕೆ ತಂದ ಚುನಾವಣಾ ಫಲಿತಾಂಶ; ದ್ವೇಷವನ್ನೇ ಚುನಾವಣಾ ಅಸ್ತ್ರವಾಗಿಸಿದ ಬಿಜೆಪಿ!

Date:

ನೀವು ಬಿಹಾರದ ಚಿತ್ಕೋಡ ಓವರ್​ ಬ್ರಿಡ್ಜ್​ ಕೆಳಗೆ ಒಂದು ನಿಮಿಷ ಕಾರನ್ನು ನಿಧಾನಿಸಿ ನೋಡಿ... ಕಿಲೋಮೀಟರ್‍‌ಗಟ್ಟಲೆ ಈ ರೀತಿ ನಿಧಾನವಾಗಿಯೇ ಕಾರು ಚಲಾಯಿಸಿ... ನಿಮ್ಮ ಕಾರಿನ ಹಿಂದೆಯೇ ನೂರಾರು ಜನ ಹಣ ಅಥವಾ ಊಟಕ್ಕಾಗಿ ಓಡಿ ಬರುತ್ತಿರುತ್ತಾರೆ. ಇದು ಬಿಹಾರದ ನಗರದಲ್ಲಿ ನಾವು ಕಣ್ಣಾರೆ ಕಂಡ ವಾಸ್ತವ ಚಿತ್ರಣ.

ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿದ್ದ ಮೂಲಮಂತ್ರವೇ ‘ಬಿಹಾರಿ ಅಸ್ಮಿತೆ’. ಬೈಗುಳ, ಮೂದಲಿಕೆಯ
ಪದವಾಗಿದ್ದ ‘ಬಿಹಾರಿ’ಯನ್ನು ಹೆಮ್ಮೆಯ ಪದವನ್ನಾಗಿಸಬೇಕು ಎಂಬುದೇ ಈ ಬಾರಿಯ ಚುನಾವಣೆಯ ಮುಖ್ಯ ಚರ್ಚೆಯಾಗಿತ್ತು. ಆದರೆ, 2005ರಿಂದ ಬರೋಬ್ಬರಿ 20 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಜೆಡಿಯು ಪಕ್ಷವನ್ನೇ ಜನ ಮುಂದಿನ ಸರ್ಕಾರಕ್ಕಾಗಿ ಆಯ್ಕೆ ಮಾಡಿದ್ದಾರೆ. ಬಿಹಾರ ಚುನಾವಣೆಯ ಫಲಿತಾಂಶ ಬಿಹಾರೇತರರಿಗಷ್ಟೇ ಅಲ್ಲದೇ, ಬಿಹಾರಿಗಳಿಗೂ, ಎನ್‌ಡಿಎ ನಾಯಕರಿಗೂ ಆಶ್ಚರ್ಯ ತಂದಿದೆ.

ಬಿಹಾರದಲ್ಲಿ ಆಡಳಿತ ವಿರೋಧಿ ಅಲೆ ಇದ್ದಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ನಡೆಸುತ್ತಿದ್ದ ಸಮಾವೇಶಗಳಿಗೆ ವ್ಯಕ್ತವಾಗುತ್ತಿದ್ದ ಜನಬೆಂಬಲ ನೋಡಿದ್ದವರಿಗೆ, ಇವತ್ತಿನ ಫಲಿತಾಂಶ ಹಲವು ಅನುಮಾನಗಳಿಗೆ ಕಾರಣವಾಗುತ್ತದೆ. ತೇಜಸ್ವಿ ಯಾದವ್ ಅವರು ನಾವು ಬಿಹಾರದಲ್ಲಿದ್ದಾಗ ಅಂದರೆ, ನವೆಂಬರ್ 3ರಂದು ಒಂದೇ ದಿನ 15 ಸಮಾವೇಶಗಳನ್ನು ನಡೆಸಿದ್ದರು. ಪ್ರತೀ ಸಮಾವೇಶಕ್ಕೂ ಲಕ್ಷಾಂತರ ಜನ ಸೇರಿದ್ದರು. ಬಿಜೆಪಿ, ಜೆಡಿಯು ಸಮಾವೇಶಗಳು ತೀರಾ ಸಪ್ಪೆಯಾಗಿದ್ದವು. ಸರ್ಕಾರದ ವಿರುದ್ಧದ ಆಕ್ರೋಶ ಗ್ರಾಮ ಗ್ರಾಮಗಳಲ್ಲಿತ್ತು.

ಬಿಜೆಪಿಯ ಕೇಂದ್ರ ಸರ್ಕಾರ ಮತ್ತು ಬಿಹಾರದ ನಿತೀಶ್ ಕುಮಾರ್ ಸರ್ಕಾರ ಹೇಳುವ ಅಭಿವೃದ್ಧಿ ಎಂದರೆ ಸೇತುವೆಗಳ ನಿರ್ಮಾಣ ಮಾತ್ರ. ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಏಷ್ಯಾದ ಅತಿ ಅಗಲವಾದ 6 ಪಥಗಳ ಸೇತುವೆಯನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಗಂಗಾನದಿಯ ತೀರದಲ್ಲಿ ರಸ್ತೆಯನ್ನು ನಿರ್ಮಿಸಿ, ಗಂಗಾಪಥ್​ ಎಂದು ಹೆಸರಿಟ್ಟು ಪ್ರವಾಸಿಗರನ್ನು ಆಕರ್ಷಿಸಲು ವಿದ್ಯುತ್ ದೀಪಗಳ ಅಲಂಕಾರವನ್ನು ಮಾಡಲಾಗಿತ್ತು. ಇದೆಲ್ಲವೂ ಬಿಹಾರದ ರಾಜಕೀಯ ಜಾಹೀರಾತಿಗೆ ಬಳಕೆಯಾಯಿತೇ ವಿನಹ ಬಿಹಾರ ವಾಸಿಗಳ ಸಮಸ್ಯೆಗಳಿಗೆ ಪರಿಹಾರವಾಗಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಬಿಹಾರದಲ್ಲಿ ಗೆದ್ದಿದ್ದು ಜನತಂತ್ರವೋ ಅಥವಾ ಮತಗಳ್ಳತನವೋ?

ಹತ್ತು ತಿಂಗಳಿನಿಂದ ನಡೆದ ಕೋಮು ಪ್ರಯೋಗ
ಕಾಂಗ್ರೆಸ್ ಮತ್ತು ಆರ್​ಜೆಡಿ ಪಕ್ಷವು ಮುಸ್ಲಿಂ ಮತ್ತು ಯಾದವರನ್ನು ಒಂದುಗೂಡಿಸಿ ಚುನಾವಣೆ ಎದುರಿಸುವ ಸೂತ್ರವನ್ನು ‘ಎಂವೈ’ ಸೂತ್ರವನ್ನು ಬಿಹಾರದಲ್ಲಿ ಒಡೆಯಲೇಬೇಕು ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಿತ್ತು. ಹಾಗಾಗಿ ಮುಸ್ಲಿಮರು ಮತ್ತು ಯಾದವರು ಹೆಚ್ಚಾಗಿದ್ದ ಪ್ರದೇಶಗಳಲ್ಲಿ ಕಳೆದ 10 ತಿಂಗಳಲ್ಲಿ ಕೋಮುಗಲಭೆಗಳನ್ನು ನಡೆಸಲಾಯಿತು.

ಬಿಹಾರದ ಕೋಮುಪೀಡಿತ ಪ್ರದೇಶಗಳಿಗೆ ನಾವು ಅಧ್ಯಯನ ಪ್ರವಾಸ ಕೈಗೊಂಡಾಗ, ಬಹುತೇಕ ಪ್ರಗತಿಪರರು, ಯಾದವ ಸಮುದಾಯದ ಪ್ರಗತಿಪರ ನಿಲುವಿನ ಜನಸಾಮಾನ್ಯರು ‘ಆರ್‍‌ಜೆಡಿಯ ಎಂವೈ ಸೂತ್ರವನ್ನು ಒಡೆಯಲೆಂದೇ ಬಿಜೆಪಿ ಇಲ್ಲಿ ಕೋಮುಗಲಭೆಗಳನ್ನು ನಡೆಸಿದೆ’ ಎಂಬ ಮಾಹಿತಿ ನೀಡಿದ್ದರು. ಈ ಕೋಮುಗಲಭೆಗಳಿಗೆ ಮೊಹರಂ ಮೆರವಣಿಗೆ, ಐ ಲವ್ ಮೊಹಮ್ಮದ್​ ಬ್ಯಾನರ್​ಗಳು, ಹಿಂದುತ್ವವಾದಿಗಳ ಮೆರವಣಿಗೆಯನ್ನು ಬಳಸಿಕೊಂಡಿತ್ತು.

unnamed 12

ಈ ಬಾರಿಯ ಅಂದರೆ, 2025ರ ಮೊಹರಂ ಸಮಯದಲ್ಲಿ ಬಿಹಾರದಲ್ಲಿ ಕಟಿಹಾರ್, ದರ್ಭಂಗಾ ಮತ್ತು ಮುಜಫರ್‌ಪುರ, ಮೋತಿಹಾರಿ ಸೇರಿದಂತೆ 10 ಜಿಲ್ಲೆಗಳಲ್ಲಿ ಕೋಮು ಗಲಭೆಗಳು ನಡೆದವು. ದರ್ಭಾಂಗದ ಮೆರವಣಿಗೆಯ ವೇಳೆ ಮೊಹರಂಗೆ ಸಂಬಂಧಪಡದ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಗೆ ಚೂರಿ ಹಾಕಿದ. ಇದು ಕೋಮುಗಲಭೆಗೆ ಕಾರಣವಾಗಿ ಒರ್ವ ಸಾವನ್ನಪ್ಪಿದ. ಮುಜಾಫರ್‌ಪುರದಲ್ಲಿ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಮೋತಿಹಾರಿಯಲ್ಲಿ ನಡೆದ ಗಲಭೆಯಲ್ಲಿ ಒಬ್ಬರು ಸಾವನ್ನಪ್ಪಿದರೆ ಇಬ್ಬರು ಗಾಯಗೊಂಡಿದ್ದರು. ಸಮಷ್ಟಿಪುರದಲ್ಲಿ ಮೊಹರಂ ಮೆರವಣಿಗೆಯ ವೇಳೆ ಹಲವು ಅಂಗಡಿಗಳನ್ನು ಸುಟ್ಟು ಹಾಕಲಾಯಿತು. ಭಾಗಲ್ಪುರದಲ್ಲಿ ಮೊಹರಂ ಮೆರವಣಿಗೆಯ ಸಮಯದಲ್ಲಿ ಗುಂಡು ಹಾರಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ಘರ್ಷಣೆ ಸೃಷ್ಟಿಸಲಾಯಿತು. ಈ ಕೋಮುಗಲಭೆಯು ಪಕ್ಕದ ಜಿಲ್ಲೆಗೂ ಹಬ್ಬುವ ಸಾಧ್ಯತೆ ಇರುವುದರಿಂದ ಪೊಲೀಸರು ಡ್ರೋನ್ ಬಳಸಿ ಜನರನ್ನು ಪತ್ತೆ ಹಚ್ಚಿ ಲಾಠಿಚಾರ್ಜ್ ಮಾಡಬೇಕಾಯಿತು. ಗೋಪಾಲ್‌ಗಂಜ್‌ನಲ್ಲೂ ಮೊಹರಂ ಮೆರವಣಿಗೆಯ ಸಮಯದಲ್ಲಿ ಕೋಮುಗಲಭೆ ನಡೆಯಿತು. ಅರಾರಿಯಾ, ಕಿಶನ್‌ಗಂಜ್, ಪೂರ್ಣಿಯಾ ಪ್ರದೇಶಗಳಲ್ಲೂ ಮೊಹರಂ ಮೆರವಣಿಗೆಯಲ್ಲಿ ಕೋಮುಗಲಭೆ ಸೃಷ್ಟಿಸಲಾಯಿತು. ಕಟಿಹಾರ್‍‌ನಲ್ಲಿ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ಬಜರಂಗಬಲಿ ದೇವಸ್ಥಾನದ ಬಳಿಯಿಂದ ಕಲ್ಲು ತೂರಾಟ ನಡೆದಿತ್ತು.

‘ಈ ಎಲ್ಲಾ ಕೋಮುಗಲಭೆಗಳು ಕೆಲವೇ ತಿಂಗಳುಗಳಲ್ಲಿ ಎದುರುಗೊಳ್ಳಲಿರುವ ಚುನಾವಣಾ ತಂತ್ರಗಾರಿಕೆಗಳಾಗಿವೆ ಎಂದು ಕೋಮುಗಲಭೆ ನಡೆದ ಸಂದರ್ಭದಲ್ಲೇ ಸ್ಥಳೀಯ ಬಿಹಾರಿ ಪತ್ರಿಕೆಗಳು ವರದಿ ಮಾಡಿದ್ದವು. ಮುಸ್ಲಿಮರು ಮತ್ತು ಯಾದವರು ಹೆಚ್ಚಾಗಿರುವ ಪ್ರದೇಶಗಳನ್ನೇ ಕೋಮುಗಲಭೆಗೆ ಆಯ್ಕೆ ಮಾಡಲಾಗಿತ್ತು. ತೇಜಸ್ವಿ ಯಾದವ್​ಗೆ ಯಾದವರು ಮತ್ತು ಮುಸ್ಲಿಮರ ಬೆಂಬಲ ಇರುವುದು ಕೂಡಾ ಇದಕ್ಕೆ ಕಾರಣ’ ಎಂದು ಸ್ಥಳೀಯ ಮುಸ್ಲಿಂ ಮುಖಂಡ ಅಬ್ದುಲ್ ಮಸ್ತಾನ್ ಮಾಹಿತಿ ನೀಡಿದರು.

ಮುಜಾಫರ್​ ಪುರ ಜಿಲ್ಲೆಯ ಮೀನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾದವರು ಮತ್ತು ಮುಸ್ಲಿಮರು ನಿರ್ಣಾಯಕವಾಗಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಶಾಸಕ ಮುನ್ನಾ ಯಾದವ್​ 2015ರಿಂದ 2025ರವರೆಗೆ ಅಂದರೆ ಹತ್ತು ವರ್ಷಗಳಿಂದ ಶಾಸಕರಾಗಿದ್ದಾರೆ. ಈ ಬಾರಿ ಅವರು ಆರ್​​ಜೆಡಿ ಸೇರುವ ಸೂಚನೆಯನ್ನು ಜನವರಿ ವೇಳೆಯಲ್ಲೇ ನೀಡಿದ್ದರು. ಮುಸ್ಲಿಂ – ಯಾದವರ ಚುನಾವಣಾ ಸೂತ್ರದಲ್ಲಿ ಆರ್​ಜೆಡಿಯಿಂದ ಗೆಲ್ಲುವ ಯೋಜನೆ ಹಾಕಿದ್ದರು. ಆದರೆ ಚುನಾವಣೆಗೆ ಕೇವಲ ಎರಡು ತಿಂಗಳ ಹಿಂದೆಯಷ್ಟೇ ಮೀನಾಪುರದಲ್ಲಿ ದೊಡ್ಡ ಕೋಮುಗಲಭೆ ನಡೆಯಿತು. ಮೀನಾಪುರದಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆ ಹೋಗುತ್ತಿತ್ತು. ಸಂಜೆಯ ವೇಳೆಗೆ ಮೆರವಣಿಗೆ ಮಸೀದಿ ಮುಂದೆ ಹಾದು ಹೋಗುವಾಗ ಮೆರವಣಿಗೆಗೆ ಅಪರಿಚಿತ ಜನರು ನೂರಾರು ಸಂಖ್ಯೆಯಲ್ಲಿ ಸೇರಿಕೊಂಡರು. ಏಕಾಏಕಿ ಕಲ್ಲು ತೂರಾಟ ಪ್ರಾರಂಭವಾಯಿತು. ಇಪ್ಪತ್ತಕ್ಕೂ ಹೆಚ್ಚು ಜನ ಗಾಯಗೊಂಡರು. ಆ ರಾತ್ರಿಯಿಡೀ ಮೀನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಪರಿಣಾಮವಾಗಿ ಜೆಡಿಯು ಹಾಲಿ ಶಾಸಕರಾಗಿ ಆರ್​ಜೆಡಿಯಲ್ಲಿ ಸ್ಪರ್ಧಿಸಿದ್ದ ಶಾಸಕ ಮುನ್ನಾ ಯಾದವ್ ಸೋಲಿಸಲು ನಡೆಸಿದ ಯತ್ನ ಎಂದು ಸ್ಥಳೀಯ ಪತ್ರಕರ್ತ ಬಿನೇಶ್​ ಯಾದವ್​ ಹೇಳುತ್ತಾರೆ.

ಇದನ್ನು ಓದಿದ್ದೀರಾ?: ಡಿಜಿಟಲ್‌ ಡಿಟಾಕ್ಸ್‌ | ಪರದೆಯಾಚೆಗಿನ ಬದುಕ ಬದುಕೋಣ!

ಈಗ ನೋಡಿದರೆ ಮೀನಾಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಅಂದುಕೊಂಡಂತೆ ಬಂದಿದೆ. ಎರಡು ಅವಧಿಗೆ ಜೆಡಿಯು ಶಾಸಕರಾಗಿ ಆರ್​ಜೆಡಿಗೆ ಬಂದು ಸ್ಪರ್ಧಿಸಿದ್ದ ಮುನ್ನಾ ಯಾದವ್​ ಸೋಲನ್ನಪ್ಪಿದ್ದಾರೆ. ಜೆಡಿಯುನಲ್ಲಿ ಹೊಸದಾಗಿ ಸ್ಪರ್ಧಿಸಿದ ಹೊಸ ಮುಖ ಅಜಯ್​ ಕುಮಾರ್​ ಗೆಲುವು ಸಾಧಿಸಿದ್ದಾರೆ. ಈ ಕೋಮಗಲಭೆ ಪಕ್ಕದ ಮುಜಾಫರ್​ಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ ಶಾಸಕರ ಮೇಲೂ ಪರಿಣಾಮ ಬಿದ್ದಿದೆ. ಇಲ್ಲಿ ಹಾಲಿ ಶಾಸಕರಾಗಿದ್ದ ಬಿಜೇಂದ್ರ ಚೌದರಿ ಸೋಲನ್ನಪ್ಪಿದ್ದಾರೆ.

ಬಿಹಾರದ ಕೋಮುಗಲಭೆ ಪೀಡಿತ ಪ್ರದೇಶಗಳನ್ನು ಕಾಣಲೇಬೇಕು ಎಂಬ ಹಠದಿಂದ ನಾವು ಸಮಯಾವಕಾಶದ ಕೊರತೆಯ ಮಧ್ಯೆಯೂ ಮುಜಾಫರ್​ಪುರ್ ಜಿಲ್ಲೆ​ಗೆ ಪ್ರಯಾಣ ಬೆಳೆಸಿದ್ದೆವು. ಮಂಗಳೂರಿನಂತೆ ಮುಜಾಫರ್ ಪುರ್​ ಜಿಲ್ಲೆಯಲ್ಲೂ ಕೆಲ ಪ್ರದೇಶಗಳಲ್ಲಿ ಸಂಜೆ 5 ಗಂಟೆಯ ಬಳಿಕ ಜನ ಸಂಚಾರವೇ ಇರುವುದಿಲ್ಲ. ‘ಐ ಲವ್ ಮೊಹಮ್ಮದ್’ ಬ್ಯಾನರ್ ಹರಿಯುವ ಮೂಲಕ ಹಲವು ಕಡೆ ಕೋಮುಗಲಭೆಗಳು ನಡೆದವು. ಇದು ಕೂಡಾ ಜನರಲ್ಲಿ ಭಯ ಸೃಷ್ಟಿಸಿತ್ತು. ಈ ರೀತಿಯ ಭಯದ ವಾತಾವರಣ ಎಲ್ಲಿರುತ್ತೋ ಅದು ಒಂದಲ್ಲಾ ಒಂದು ರೀತಿಯಲ್ಲಿ ಬಿಜೆಪಿ ರಾಜಕಾರಣಕ್ಕೆ ಪೂರಕವಾಗಿರುತ್ತದೆ.

ಬಿಹಾರಿ ವರ್ಸಸ್ ಮದ್ರಾಸಿ ವಿಭಜನೆ
ಬಿಹಾರಿ ಎಂಬ ಪದವನ್ನು ಹೇಗೆ ಮೂದಲಿಕೆಗೆ ಬಳಸಲಾಗುತ್ತದೆಯೋ, ಉತ್ತರ ಭಾರತದ ರಾಜ್ಯಗಳಲ್ಲಿ ದಕ್ಷಿಣ ಭಾರತದವರನ್ನು ಮದ್ರಾಸಿಗಳು ಎಂದು ಮೂದಲಿಸಲಾಗುತ್ತದೆ. ಅದರಲ್ಲೂ ಹಿಂದಿ ವರ್ಸಸ್ ದ್ರಾವಿಡ ಭಾಷಾ ಚರ್ಚೆಗಳ ಹಿನ್ನಲೆಯಲ್ಲಿ ಮದ್ರಾಸಿಗಳನ್ನು ಉತ್ತರ ಭಾರತದಲ್ಲಿ ‘ಒಂಥರಾ’ ನೋಡಲಾಗುತ್ತದೆ. ಆದರೆ ಬಿಹಾರ ಅದಕ್ಕೆ ಹೊರತಾಗಿತ್ತು. ಬಿಹಾರಿಗಳು ಜೀವನೋಪಾಯಕ್ಕಾಗಿ ದಕ್ಷಿಣ ಭಾರತವನ್ನೇ ಹೆಚ್ಚಾಗಿ ಆಯ್ಕೆ ಮಾಡುವುದರಿಂದಲೋ ಏನೋ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತೀಯರ ಬಗ್ಗೆ ಒಂಥರಾ ಗೌರವವಿದೆ. ಆದರೆ ಬಿಹಾರಿಗಳ ಮಧ್ಯೆ ಭಾಷಾ ವಿಭಜನೆಯನ್ನು ಮಾಡುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದರು.

121971625

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಹಾರ ಪ್ರವಾಸ ಆಯೋಜಿಸಿದ್ದರು. ಬಿಹಾರ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷಗಳ ಒಗ್ಗಟ್ಟಿನ ಪ್ರದರ್ಶನದ ಭಾಗವಾಗಿ ಈ ಭೇಟಿ ನಡೆಯಿತು. ಇದನ್ನೇ ಚುನಾವಣಾ ವಿಷಯವನ್ನಾಗಿಸಿದ ಪ್ರಧಾನಿ ನರೇಂದ್ರ ಮೋದಿ ‘ಸ್ಟಾಲಿನ್ ಅವರು ತಮಿಳುನಾಡಿನಲ್ಲಿ ಬಿಹಾರಿ ಮತ್ತು ಹಿಂದಿ ವಿರೋಧಿಯಾಗಿದ್ದಾರೆ’ ಎಂದಿದ್ದರು. ಇದು ಒಬ್ಬ ಪ್ರಧಾನಿ ಆಡುವ ಮಾತಲ್ಲ. ಇಡೀ ದೇಶವನ್ನು ಒಗ್ಗೂಡಿಸಬೇಕಾದ ವ್ಯಕ್ತಿಯೊಬ್ಬ ದೇಶಗಳನ್ನು ಚುನಾವಣೆಗಾಗಿ ಭಾಷೆಯ ಆಧಾರದಲ್ಲಿ ವಿಭಜಿಸುವುದು ಎಷ್ಟು ಸರಿ ಎಂದು ಚರ್ಚೆಯಾಗಬೇಕಿತ್ತು. ಆದರೆ ಬಿಹಾರಿ ವರ್ಸಸ್ ಮದ್ರಾಸಿ ಚರ್ಚೆಗಳೇ ನಡೆಯಿತು. ಜನರನ್ನು ವಿಭಜಿಸುವ ಯಾವ ವಿಷಯಗಳನ್ನೂ ಬಿಜೆಪಿ ಬಿಟ್ಟುಕೊಡಲಿಲ್ಲ.

ಬಡತನ, ಅಪೌಷ್ಟಿಕತೆಗಳ ಲಾಭ
ಜಾತಿಗಣತಿಯನ್ನು ಎನ್​ಡಿಎ ಬಹಳ ಯಶಸ್ವಿಯಾಗಿ ಚುನಾವಣೆಗೆ ಬಳಸಿಕೊಂಡಿತ್ತು. ಚುನಾವಣೆಗೆ ಒಂದು ತಿಂಗಳು ಇರುವಾಗ ಹಿಂದುಳಿದ ವರ್ಗದ ಮಹಿಳೆಯರನ್ನು ಗುರಿಯಾಗಿರಿಸಿ ಮುಖ್ಯಮಂತ್ರಿ ನಿತೀಶ್ 21 ಲಕ್ಷ ಮಹಿಳಾ ಫಲಾನುಭವಿಗಳಿಗೆ ತಲಾ ಹತ್ತು ಸಾವಿರ ರೂಪಾಯಿಗಳನ್ನು ನೇರ ಅಕೌಂಟ್​ಗೆ ಜಮೆ ಮಾಡಿದರು. ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಸ್ವಲ್ಪ ಮೊದಲು ಈ ಹಣವನ್ನು ಮಹಿಳೆಯರ ಅಕೌಂಟ್​​ಗೆ ಹಾಕಲಾಯಿತು. ಆ ಬಳಿಕ 1 ಕೋಟಿಗೂ ಹೆಚ್ಚು ಅಕೌಂಟ್​ಗಳಿಗೆ ಹತ್ತು ಸಾವಿರ ರೂ.ಗಳನ್ನು ಹಾಕಲಾಯಿತು. ಇದು ತೀರಾ ಬಡತನದಲ್ಲಿರುವವರಿಗೆ ಅನುಕೂಲವಾಯಿತು. ಅದು ಋಣಭಾರದಂತೆ ಮತವಾಗಿ ವರ್ಗಾವಣೆಯಾಯಿತು.

ಈ ರೀತಿ ಚುನಾವಣೆಗೆ ಕೆಲವೇ ದಿನಗಳಿರುವಾಗ ಒಂದು ಕಾಲು ಕೋಟಿಗೂ ಹೆಚ್ಚು ಮನೆಗಳಿಗೆ ತಲಾ ಹತ್ತು ಸಾವಿರದಂತೆ ವಿತರಿಸಿದ್ದು ಗರಿಷ್ಠ ಸಂಖ್ಯೆಯ ಅನಕ್ಷರಸ್ಥ ಮಹಿಳೆಯರನ್ನು ಎನ್​ಡಿಎ ಪರವಾಗಿ ಮತಹಾಕಿಸುವಲ್ಲಿ ಯಶಸ್ವಿಯಾಯಿತು.
ಯಾಕೆಂದರೆ, ಬಿಹಾರ ರಾಜ್ಯವು ಕರ್ನಾಟಕದ ರೀತಿ ಬೆಳೆಯಲು, ಪಾಟ್ನ ನಗರವು ಬೆಂಗಳೂರು ರೀತಿ ಬೆಳೆಯಲು ಬಹುಶಃ ಇನ್ನು 50 ವರ್ಷ ಬೇಕಾಗಬಹುದೇನೋ. ನಾವು ಸುತ್ತಿದ ಬಿಹಾರದ ರಾಜಧಾನಿ ಪಾಟ್ನ ನಗರವು ಬೆಂಗಳೂರಿನ ಯಾವುದೋ ಗಲ್ಲಿಯಂತಿದೆ. ‘ಸ್ವಚ್ಛತೆ’ ಎನ್ನುವ ಪರಿಕಲ್ಪನೆಯೇ ಇಲ್ಲದ ನಗರಗಳು. ಇದು ರಾಜ್ಯವೊಂದರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಾನಮಾನಗಳನ್ನು ಸೂಚಿಸುತ್ತದೆ. ನಮ್ಮ ಕಾಲದ ಈ ಹತ್ತು ವರ್ಷಗಳು ‘ಪ್ರಗತಿಶೀಲ ಅವಧಿ’ ಎಂದು ಕರೆಯುತ್ತೇವೆ. ಸರ್ಕಾರಗಳಿಗೆ ಇಚ್ಛಾಶಕ್ತಿ ಇಲ್ಲವೆಂದರೂ ಕನಿಷ್ಠ ಪ್ರಗತಿಯತ್ತ ನಾವು ಯಾಂತ್ರಿಕವಾಗಿ ಹೆಜ್ಜೆ ಹಾಕುತ್ತೇವೆ. ಈ ರೀತಿ ಸಹಜ ಬೆಳವಣಿಗೆಯನ್ನೂ ಬಿಹಾರ ಕಂಡಿಲ್ಲ. ಹಾಗಾಗಿ ಇವತ್ತಿನ ಚುನಾವಣಾ ಫಲಿತಾಂಶ ನೋಡಿದರೆ ಬಿಹಾರ ಅಭಿವೃದ್ದಿಗೆ ಇನ್ನೂ ನೂರು ವರ್ಷ ಬೇಕಾಗಬಹುದೇನೋ…

co 1

ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆಯ ಮನೆ ಮುಂದೆ ನಾವು ಕಾರು ನಿಲ್ಲಿಸಿದ ತಕ್ಷಣ ನಮ್ಮ ಕಾರಿಗೆ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಮುತ್ತಿಕೊಂಡರು. ಊಟ, ಹಣಕ್ಕಾಗಿ ಒತ್ತಾಯಿಸಿದ ಮಕ್ಕಳನ್ನು ಕಂಡಾಗ ಅಳುವೇ ಬಂದಿತ್ತು. ನಾವು ಸೊಮಾಲಿಯಾದ ಬಡತನದ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಿರ್ತಿವಿ. ಆದರೆ ಬಿಹಾರದಲ್ಲಿ ಸಚಿವರ ಮನೆಯ ಮುಂದೆಯೇ ನೋಡಿದೆವು. ಸೊಮಾಲಿಯಾಕ್ಕೂ ಬಿಹಾರಕ್ಕೂ ವ್ಯತ್ಯಾಸವಿಲ್ಲವೆಂಬುದನ್ನು ಖುದ್ದು ಕಂಡೆವು.

ನೀವು ಬಿಹಾರದ ಚಿತ್ಕೋಡ ಓವರ್​ ಬ್ರಿಡ್ಜ್ ಕೆಳಗೆ ಒಂದು ನಿಮಿಷ ಕಾರನ್ನು ನಿಧಾನಿಸಿ ನೋಡಿ… ಕಿಲೋಮೀಟರ್‍‌ಗಟ್ಟಲೆ ಈ ರೀತಿ ನಿಧಾನವಾಗಿಯೇ ಕಾರು ಚಲಾಯಿಸಿ… ನಿಮ್ಮ ಕಾರಿನ ಹಿಂದೆಯೇ ನೂರಾರು ಜನ ಹಣ ಅಥವಾ ಊಟಕ್ಕಾಗಿ ಓಡಿ ಬರುತ್ತಿರುತ್ತಾರೆ. ಇದು ಬಿಹಾರದ ನಗರದಲ್ಲಿ ನಾವು ಕಣ್ಣಾರೆ ಕಂಡ ವಾಸ್ತವ ಚಿತ್ರಣ. ಹಳ್ಳಿಗಳ ಸ್ಥಿತಿ ಇದಕ್ಕಿಂತ ಭೀಕರವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ನಿತೀಶ್​ ಕುಮಾರ್ ಸರ್ಕಾರ ಚುನಾವಣೆ ಘೋಷಣೆಗೆ 20 ದಿನ ಇರುವಾಗ 21 ಲಕ್ಷ ಜನರಿಗೆ ತಲಾ ಹತ್ತು ಸಾವಿರ ರೂ.ಗಳನ್ನು ಹಂಚಿದರು. ಇನ್ನೇನು ಚುನಾವಣೆ ಘೋಷಣೆಯಾಯ್ತು ಎನ್ನುವಾಗ ರಾಜ್ಯದ ಬೊಕ್ಕಸದಿಂದ 1 ಕೋಟಿಗೂ ಹೆಚ್ಚು ಜನರಿಗೆ 10 ಸಾವಿರ ರೂ.ಗಳನ್ನು ಪ್ರಧಾನಿ ಮೋದಿಯಿಂದ ವಿತರಿಸಿದರು.

ಇದು ನಾವು ಕಂಡ ಬಿಹಾರದ ಚುನಾವಣೆಯ ಬಿಡಿ ಚಿತ್ರಗಳು. ಎನ್‌ಡಿಎ ಗೆಲುವಿನ ಹಾಗೂ ಮಹಾಘಟಬಂಧನ್ ಸೋಲಿನ ಕಾರಣಗಳು.

Naveen suringe
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...