ಎಪ್‌ಸ್ಟೀನ್ ಫೈಲ್ಸ್ ಈಗ ಅಮೆರಿಕದಲ್ಲಿ ಕೋಲಾಹಲ ಎಬ್ಬಿಸಿದೆ. ಪರ-ವಿರೋಧಗಳ ಚರ್ಚೆಗೆ ಈಡುಮಾಡಿದೆ. ಇಲ್ಲಿಯವರೆಗೂ ದಾಖಲೆ ಇಟ್ಟು ಮಾತಾಡಿ ಎಂದು ನುಣುಚಿಕೊಳ್ಳುತ್ತಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಬೆತ್ತಲು ಮಾಡಿದೆ.
ಅಮೆರಿಕದ ಅಧ್ಯಕ್ಷ ಸ್ಥಾನದಲ್ಲಿ ಡೊನಾಲ್ಡ್ ಟ್ರಂಪ್ ಕೂತ ಕ್ಷಣದಿಂದಲೇ ಎಪ್‌ಸ್ಟೀನ್ ಫೈಲ್‌ಗಳ ಕುರಿತ ಚರ್ಚೆಯೂ ಶುರುವಾಗಿತ್ತು. ಭಂಡರ ಗಂಡನಂತಿರುವ ಟ್ರಂಪ್, ‘ನನಗೂ ಅವನಿಗೂ ಸಂಬಂಧವಿಲ್ಲ, ನಾನು ಆ ಕೃತ್ಯದಲ್ಲಿ ಭಾಗಿಯಾಗಿಲ್ಲ. ದಾಖಲೆಗಳಿದ್ದರೆ ತೋರಿಸಿ’ ಎಂದು ಆರೋಪವನ್ನು ಅಲ್ಲಗಳೆಯುತ್ತಲೇ ಬಂದಿದ್ದರು. ಜೊತೆಗೆ ಅಮೆರಿಕದ ನ್ಯಾಯಾಂಗ ವ್ಯವಸ್ಥೆ ಎಪ್‌ಸ್ಟೀನ್ ಫೈಲ್‌ಗಳನ್ನು ಸಾರ್ವಜನಿಕಗೊಳಿಸದಿರಲು ನಿರ್ಧರಿಸಿತ್ತು.
ಆದರೆ, ಟ್ರಂಪ್ ಅವರ ಒಂದು ಕಾಲದ ಗೆಳೆಯ ಎಲಾನ್ ಮಸ್ಕ್, ಟ್ರಂಪ್‌ಗೂ ಎಪ್‌ಸ್ಟೀನ್‌ಗೂ ಇದ್ದ ಸಂಬಂಧವನ್ನು ಬಿಚ್ಚಿಟ್ಟ. ಎಲಾನ್ ಮಸ್ಕ್‌ನ ಗಂಭೀರ ಆರೋಪವೇನೆಂದರೆ, ಫೆಬ್ರವರಿ 2025ರಲ್ಲಿ, ಯುಎಸ್ ನ್ಯಾಯ ಇಲಾಖೆಯ ದಾಖಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಪ್ ಐಕಾನ್ ಮೈಕೆಲ್ ಜಾಕ್ಸನ್, ನಟ ಅಲೆಕ್ ಬಾಲ್ಡ್‌ವಿನ್ ಮತ್ತು ಚಲನಚಿತ್ರ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್ ಎಪ್‌ಸ್ಟೀನ್ ಅವರ ಸಂಪರ್ಕ ಪಟ್ಟಿಯಲ್ಲಿದ್ದ ಪ್ರಭಾವಿ ವ್ಯಕ್ತಿಗಳು ಎಂಬುದು ಬಹಿರಂಗಗೊಂಡಿತ್ತು. ಆದರೆ ತನಿಖೆಯಲ್ಲಿ ಸಿಕ್ಕಿರುವ ಮಾಹಿತಿಯನ್ನು ಸಾರ್ವಜನಿಕವಾಗಿ ಎಲ್ಲಿಯೂ ಹಂಚಿಕೊಳ್ಳದಂತೆ ತಡೆಹಿಡಿಯಲಾಗಿತ್ತು ಎಂಬುದು. ಇದಕ್ಕೆ ಪೂರಕವಾಗಿ ಮಸ್ಕ್ ಆ ಸಂದರ್ಭದಲ್ಲಿ ಟ್ರಂಪ್ ಅವರ ಆತ್ಮೀಯನಾಗಿದ್ದ. ಸರ್ಕಾರಿ ಕಡತಗಳನ್ನು ಬಲ್ಲವನಾಗಿದ್ದ. ಅಷ್ಟೇ ಅಲ್ಲ, ಆ ಪಟ್ಟಿಯಲ್ಲಿ ಟ್ರಂಪ್ ಅವರ ಮಾಜಿ ಪತ್ನಿ ಇವಾನಾ ಟ್ರಂಪ್ ಮತ್ತು ಮಗಳು ಇವಾಂಕಾ ಟ್ರಂಪ್ ಅವರ ಹೆಸರುಗಳೂ ಇದ್ದವು ಎಂದಿದ್ದ. ಅದನ್ನು ತನ್ನ ಸೋಷಿಯಲ್ ಮೀಡಿಯಾ ‘ಎಕ್ಸ್’ ಮೂಲಕ ಬಹಿರಂಗಗೊಳಿಸಿದ್ದ.
ಇದರಿಂದ ಸಿಟ್ಟಿಗೆದ್ದ ಟ್ರಂಪ್, ಆತನನ್ನು ಸರ್ಕಾರದ ಉನ್ನತ ಹುದ್ದೆಯಿಂದ ಕಿತ್ತುಹಾಕಿದ್ದರು. ಅಷ್ಟೇ ಅಲ್ಲ, ಆತನೊಂದಿಗಿನ ವ್ಯವಹಾರ-ಒಡನಾಟವನ್ನೂ ಕಡಿತಗೊಳಿಸಿಕೊಂಡಿದ್ದರು.
ಇದನ್ನು ಓದಿದ್ದೀರಾ?: ಅಮೆರಿಕಕ್ಕೆ ಬನ್ನಿ, ನಮ್ಮವರಿಗೆ ಕಲಿಸಿ, ವಾಪಸ್ ಹೋಗಿ: ಟ್ರಂಪ್‌ನ ನೂತನ H-1B ವೀಸಾ ನೀತಿ
ಏತನ್ಮಧ್ಯೆ, ನಿನ್ನೆ, ನವೆಂಬರ್ 12ರಂದು ಅಮೆರಿಕದ ನ್ಯಾಯಾಂಗ ವ್ಯವಸ್ಥೆ 20 ಸಾವಿರ ಪುಟಗಳ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಆ ದಾಖಲೆಗಳು ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ್ದು, ಅದರಲ್ಲಿ ಮೂರು ಇ-ಮೇಲ್‌ಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಪ್ರಸ್ತಾಪವಾಗಿದೆ.
ಆ ತಕ್ಷಣವೇ 20 ಸಾವಿರ ಪುಟಗಳ ದಾಖಲೆಯನ್ನು ಜಾಲಾಡಿರುವ ವಿರೋಧ ಪಕ್ಷದ- ಡೆಮಾಕ್ರಟಿಕ್ ಪಕ್ಷದ ನಾಯಕರು, ಮೂರು ಇ-ಮೇಲ್‌ಗಳಲ್ಲಿ ಅಧ್ಯಕ್ಷ ಟ್ರಂಪ್ ಹೆಸರಿರುವುದನ್ನು ಹೆಕ್ಕಿ ತೆಗೆದು, ಬಹಿರಂಗಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಬಳಸಿಕೊಂಡು ಇಡೀ ಪ್ರಪಂಚಕ್ಕೇ ಹಂಚಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ರಿಪಬ್ಲಿಕನ್ ಪಕ್ಷದ ನಾಯಕರು, ‘ಪ್ರೆಸಿಡೆಂಟ್ ಟ್ರಂಪ್‌ರನ್ನು ಕಳಂಕಿತರನ್ನಾಗಿಸಲು ನಕಲಿ ಕತೆ ಕಟ್ಟಿ, ಲಿಬರಲ್ ಮೀಡಿಯಾಗಳಿಗೆ ಆಯ್ದ ಇಮೇಲ್‌ಗಳನ್ನು ಸೋರಿಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಟ್ರಂಪ್‌ರನ್ನು ಸಮರ್ಥಿಸಿಕೊಂಡಿದ್ದಾರೆ.
ಅದಕ್ಕೆ ತಿರುಗೇಟು ನೀಡಿರುವ ಡೆಮಾಕ್ರಟಿಕ್ ಪಕ್ಷದ ನಾಯಕರು, ಎಪ್‌ಸ್ಟೀನ್ ಆಪ್ತ ಎಂದೇ ಗುರುತಿಸಿಕೊಂಡ ಗಿಸ್ಲೇನ್ ಮ್ಯಾಕ್ಸ್‌ವೆಲ್‌ನೊಂದಿಗೆ ಹಂಚಿಕೊಂಡ ಇ-ಮೇಲ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ. ಆ ಇ-ಮೇಲ್‌ಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಹೆಸರು ಪ್ರಸ್ತಾಪವಾಗಿದೆ. ಈ ಮ್ಯಾಕ್ಸ್‌ವೆಲ್ ಲೈಂಗಿಕ ದೌರ್ಜನ್ಯ ಮತ್ತು ಮಾನವ ಕಳ್ಳಸಾಗಾಣಿಕೆ ಆರೋಪದ ಮೇಲೆ ಕಳೆದ 20 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಡೆಮಾಕ್ರಟಿಕ್ ಪಕ್ಷದ ನಾಯಕರು, ಎಪ್‌ಸ್ಟೀನ್ ಮತ್ತು ಮೈಕೆಲ್ ವೋಲ್ಫ್ ನಡುವಿನ ಇ-ಮೇಲ್‌ಗಳನ್ನೂ ಬಹಿರಂಗಪಡಿಸಿದ್ದಾರೆ. ಈ ಮೈಕೆಲ್ ವೋಲ್ಫ್, ಡೊನಾಲ್ಡ್ ಟ್ರಂಪ್ ಕುರಿತು ಅನೇಕ ಪುಸ್ತಕಗಳನ್ನು ಬರೆದ ಪತ್ರಕರ್ತ ಮತ್ತು ಲೇಖಕ.
ಇದು ಈಗ ಅಮೆರಿಕದಲ್ಲಿ ಕೋಲಾಹಲವನ್ನು ಎಬ್ಬಿಸಿದೆ. ಪರ-ವಿರೋಧಗಳ ಚರ್ಚೆಗೆ ಈಡುಮಾಡಿದೆ. ಅಷ್ಟೇ ಅಲ್ಲ, ಇಲ್ಲಿಯವರೆಗೂ ದಾಖಲೆ ಇಟ್ಟು ಮಾತಾಡಿ ಎಂದು ನುಣುಚಿಕೊಳ್ಳುತ್ತಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಬೆತ್ತಲು ಮಾಡಿದೆ.

ಅಷ್ಟಕ್ಕೂ ಎಪ್‌ಸ್ಟೀನ್ ಯಾರು? ಎಪ್‌ಸ್ಟೀನ್ ಫೈಲ್ಸ್ ಅಂದರೆ ಏನು? ಎಪ್‌ಸ್ಟೀನ್‌ಗೂ ಡೊನಾಲ್ಡ್ ಟ್ರಂಪ್‌ಗೂ ಏನು ಸಂಬಂಧ?
ಜೆಫ್ರಿ ಎಪ್‌ಸ್ಟೀನ್- ಒಬ್ಬ ಕುಖ್ಯಾತ ಅಮೆರಿಕನ್ ಫೈನಾನ್ಸಿಯರ್ ಮತ್ತು ಸಾಮಾಜಿಕ ವ್ಯಕ್ತಿ. ಈತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಮಾನವ ಕಳ್ಳಸಾಗಾಣಿಕೆ ಆರೋಪಗಳಿಗೆ ಸಂಬಂಧಿಸಿದಂತೆ 2019ರಲ್ಲಿ ಬಂಧನಕ್ಕೊಳಗಾಗಿದ್ದ. ಈತನ ಮೇಲೆ, ಅಪ್ರಾಪ್ತ ಮಕ್ಕಳನ್ನು ಉನ್ನತ ಮಟ್ಟದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಬಳಿ ಕಳುಹಿಸಿದ್ದ ಗಂಭೀರ ಆರೋಪವಿದೆ. ಈತ ಖಾಸಗಿ ಕೆರೀಬಿಯನ್ ದ್ವೀಪಗಳಲ್ಲಿ ಹಾಗೂ ನ್ಯೂಯಾರ್ಕ್, ಫ್ಲೋರಿಡಾ, ನ್ಯೂ ಮೆಕ್ಸಿಕೊದಲ್ಲಿರುವ ಭವ್ಯ ಬಂಗಲೆಗಳಂತಹ ಅಡಗುತಾಣಗಳಲ್ಲಿ ‘ಎಲೀಟ್ ಬ್ರಾಥೆಲ್ ದಂಧೆ’ ನಡೆಸುತ್ತಿದ್ದ ಎಂಬ ಮಾಹಿತಿಯೂ ಇದೆ.
ಇಂತಹ ‘ಖ್ಯಾತ’ ವ್ಯಕ್ತಿಯ ಮೇಲೆ ಒಂದು ಫೈಲ್ ರಚಿಸಲಾಗಿದೆ. ಅದಕ್ಕೆ ‘ಎಪ್‌ಸ್ಟೀನ್ ಫೈಲ್ಸ್’ ಎಂದು ಕರೆಯುತ್ತಾರೆ. ‘ಎಪ್‌ಸ್ಟೀನ್ ಫೈಲ್ಸ್’ ಎಂಬುದು ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕಾನೂನು ದಾಖಲೆಗಳು, ನ್ಯಾಯಾಲಯದ ದಾಖಲೆಗಳು, ಸಾಕ್ಷ್ಯಗಳು ಮತ್ತು ಇತರ ಸಂಬಂಧಿತ ಮಾಹಿತಿಗಳ ಸಂಗ್ರಹ. ಈ ಫೈಲ್‌ಗಳು ಎಪ್‌ಸ್ಟೀನ್ ವಿರುದ್ಧದ ಕೇಸ್‌ಗಳು, ಸಾಕ್ಷಿಗಳ ಹೇಳಿಕೆಗಳು, ಗುಪ್ತಚರ ಮಾಹಿತಿ ಮತ್ತು ಅವನ ಸಾಮಾಜಿಕ ಸಂಪರ್ಕಗಳ ಬಗೆಗಿನ ಮಾಹಿತಿಯನ್ನು ಒಳಗೊಂಡಿವೆ. ಜೊತೆಗೆ ಕರೆ ದಾಖಲೆಗಳು, ಇ-ಮೇಲ್‌ಗಳು, ಚಾಟ್‌ಗಳು, ವೀಡಿಯೊಗಳು, ಅವರ ಸಹಚರರು ಮತ್ತು ಕ್ಲೈಂಟ್‌ಗಳ ಹೆಸರುಗಳನ್ನು ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ದಾಖಲಿಸಲಾಗಿದೆ.
ಈ ದಾಖಲೆಗಳು ಪ್ರತಿಷ್ಠಿತ ರಾಜಕೀಯ ನಾಯಕರು, ಶ್ರೀಮಂತ ಉದ್ಯಮಿಗಳು, ಸಮಾಜದ ಗಣ್ಯವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು, ಎಪ್‌ಸ್ಟೀನ್ ಜೊತೆಗಿನ ಸಂಬಂಧಗಳನ್ನು ಬಹಿರಂಗಪಡಿಸುತ್ತವೆ. ಆ ಕಾರಣದಿಂದಾಗಿ ‘ಎಪ್‌ಸ್ಟೀನ್ ಫೈಲ್ಸ್’ ವಿವಾದಾತ್ಮಕವಾಗಿವೆ. ಎಪ್‌ಸ್ಟೀನ್‌ನ ಚಟುವಟಿಕೆಗಳು, ವಿಶೇಷವಾಗಿ ಅವನ ಖಾಸಗಿ ದ್ವೀಪವಾದ ಲಿಟಲ್ ಸೇಂಟ್ ಜೇಮ್ಸ್‌ನಲ್ಲಿ ನಡೆದ ಆರೋಪಿತ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ, ಈ ದಾಖಲೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ.
2019ರಲ್ಲಿ ಎಪ್‌ಸ್ಟೀನ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಆತ ಆತ್ಮಹತ್ಯೆ ಮಾಡಿಕೊಂಡನೋ, ಯಾರಾದರೋ ಕೊಂದರೋ ಎನ್ನುವುದು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ. ಆತ ಸತ್ತರೂ ಆತನ ಫೈಲ್ಸ್ ಜೀವಂತವಾಗಿದೆ. ಆ ಫೈಲ್‌ಗಳಲ್ಲಿ ಏನಿದೆ, ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂಬ ಚರ್ಚೆಗಳು ಮುನ್ನೆಲೆಗೆ ಬರುತ್ತಲೇ ಇವೆ. ಅವು, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಮತ್ತು ಸುದ್ದಿ ವಾಹಿನಿಗಳ ಮೂಲಕ, ಸದ್ಯ ಅಮೆರಿಕದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ. ಆ ಸದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರತ್ತ ಗುರಿ ಮಾಡಿದೆ.
ಈ ಫೈಲ್‌ಗಳ ಬಿಡುಗಡೆಯಿಂದ ಉನ್ನತ ಮಟ್ಟದ ವ್ಯಕ್ತಿಗಳ ಭಾಗವಹಿಸುವಿಕೆ ಬಯಲಾಗಬಹುದು ಎಂದು ಹಲವರು ವಾದಿಸುತ್ತಿದ್ದಾರೆ. ಕೆಲವು ಪೋಸ್ಟ್‌ಗಳು ಡೊನಾಲ್ಡ್ ಟ್ರಂಪ್‌ರಂತಹ ರಾಜಕೀಯ ವ್ಯಕ್ತಿಗಳ ಜೊತೆ ಎಪ್‌ಸ್ಟೀನ್‌ನ ಸಂಬಂಧವನ್ನು ಫೋಟೋಸಹಿತ ಪೋಸ್ಟ್ ಮಾಡಿ ಚರ್ಚಿಸುತ್ತಿವೆ. ಅಮೆರಿಕದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕುತ್ತಿವೆ.
ದುರದೃಷ್ಟಕರ ಸಂಗತಿ ಎಂದರೆ, ಇಂತಹ ‘ಖ್ಯಾತ’ ವ್ಯಕ್ತಿಯನ್ನು ತನ್ನ ಆಪ್ತ ಸ್ನೇಹಿತ ಎಂದು ನಮ್ಮ ಪ್ರಧಾನಿ ಮೋದಿಯವರು ಹಾಡಿ ಹೊಗಳುತ್ತಾರೆ.

ಲೇಖಕ, ಪತ್ರಕರ್ತ




