ಸಿರಿಯಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಬರೀ ದಾಳಿಯಾಗಿ ನೋಡದೆ, ಹಿನ್ನೆಲೆಯನ್ನು ಅರಿಯುವುದು ಮುಖ್ಯವಾಗಿದೆ. ಅಲ್ಲಿ ಇಸ್ರೇಲಿನ ಯುದ್ಧದಾಹವಿದೆ, ಟರ್ಕಿಯ ಸಾಮ್ರಾಜ್ಯ ವಿಸ್ತರಣೆಯಿದೆ...
ಜುಲೈ 16, 2025ರಂದು ಇಸ್ರೇಲ್, ಸಿರಿಯಾದ ರಾಜಧಾನಿ ದಮಸ್ಕಸ್‌ನ ಮೇಲೆ ಬಾಂಬ್ ದಾಳಿ ನಡೆಸಿದೆ. ಇದು ಮೇಲ್ನೋಟಕ್ಕೇ ಇಸ್ರೇಲ್ ಸಿರಿಯಾದ ಮೇಲೆ ನಡೆಸಿದ ದಾಳಿ ಎಂದು ಕಂಡುಬಂದರೂ, ಇದರ ಹಿಂದೆ ಮಧ್ಯಪ್ರಾಚ್ಯ ದೇಶಗಳಲ್ಲಾಗುತ್ತಿರುವ ರಾಜಕೀಯ ಸ್ಥಿತ್ಯಂತರಗಳನ್ನು ಹೊರಹಾಕುತ್ತದೆ. ಹಾಗೂ ಇಸ್ರೇಲಿನ ಯುದ್ಧದಾಹವನ್ನು, ಟರ್ಕಿಯ ಅವಕಾಶವಾದಿತನವನ್ನು ಬಹಿರಂಗಗೊಳಿಸುತ್ತದೆ.
ಹಾಗಾಗಿ ಇಂದು ಇಸ್ರೇಲ್ ನಡೆಸಿದ ದಾಳಿಯನ್ನು ಬರೀ ದಾಳಿ ಮಾತ್ರವಾಗಿ ನೋಡದೆ, ಹಿನ್ನೆಲೆಯನ್ನು ಅರಿಯುವುದು ಮುಖ್ಯವಾಗಿದೆ. ಆ ಹಿನ್ನೆಲೆಯನ್ನು ಅರಿತರೆ, ಖಳನಾಯಕರು ಯಾರು, ಯಾತಕ್ಕಾಗಿ ದಾಳಿ ಎನ್ನುವುದು ಅರ್ಥವಾಗುತ್ತದೆ.
ನವೆಂಬರ್ 2024ರಲ್ಲಿ ಐಎಸ್‌ಐಎಸ್ ಮುಖ್ಯಸ್ಥ ಅಬು ಮೊಹಮ್ಮದ್ ಅಲ್-ಜುಲಾನಿ (ಅಹ್ಮದ್ ಅಲ್-ಶರಾ) ನೇತೃತ್ವದ ಸಿರಿಯಾದ ಅಲ್-ಖೈದಾ ವಿಭಾಗ ಅಸ್ಸಾದ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿ ಯಶಸ್ವಿಯಾಗಿತ್ತು. ಇದಕ್ಕೆ ಕತಾರ್‍ನ ಹಣ, ಟರ್ಕಿಯ ತರಬೇತಿ ಪಡೆದ ಸೈನಿಕರು, ಅಮೆರಿಕಾದ ಬೇಹುಗಾರಿಕೆ ಮತ್ತು ಇಸ್ರೇಲ್ ಪ್ರಾಪಗ್ಯಾಂಡದ ಬೆಂಬಲವಿತ್ತು. 11 ವರ್ಷಗಳ ಅಂತರ್ಯುದ್ಧದ ನಂತರ ಸಿರಿಯಾದ ಸೇನೆ ದುರ್ಬಲವಾಗಿತ್ತು. ಕಡಿಮೆ ಸಂಬಳ, ಗಗನಕ್ಕೇರಿದ್ದ ಬೆಲೆಗಳು, ಮತ್ತು ಕೆಲವು ಅಧಿಕಾರಿಗಳು ಕತಾರದಿಂದ ಲಂಚ ಪಡೆದು ತಟಸ್ಥರಾಗಿದ್ದು, ಅದಕ್ಕೆ ಕಾರಣವಾಗಿತ್ತು. ರಷ್ಯಾದ ವಾಯುಪಡೆ ಜಿಹಾದಿಗಳ ವಿರುದ್ಧ ಹೋರಾಡಿತು, ಆದರೆ ನೆಲದ ಮೇಲೆ ಸೈನ್ಯವಿಲ್ಲದೆ ಅಂತರ್ಯುದ್ಧವನ್ನು ತಡೆಯಲಾಗಿರಲಿಲ್ಲ. ಇರಾನ್, ಇರಾಕ್‌ನಿಂದ ಶಿಯಾ ಸೈನಿಕರನ್ನು ಕಳುಹಿಸಿತು, ಆದರೆ ಅಮೆರಿಕಾದ ಯುದ್ಧವಿಮಾನಗಳು ಗಡಿ ದಾಟುವಾಗ ದಾಳಿ ಮಾಡಿತು. ಕೊನೆಗೆ ಅಸ್ಸಾದ್‌ಗೆ ಸಂಭಾಳಿಸಲಾಗದೆ ಓಡಿಹೋದ. ಆ ನಂತರ ಮೂಲಭೂತವಾದಿಗಳು ಡಮಾಸ್ಕಸ್ ಆಕ್ರಮಿಸಿಕೊಂಡು ಆಡಳಿತ ನಡೆಸತೊಡಗಿದರು.
ಇದನ್ನು ಓದಿದ್ದೀರಾ?: ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್ ಮತ್ತು ಅಮೆರಿಕ: ಏನದು ಎಪ್‌ಸ್ಟೀನ್ ಫೈಲ್ಸ್?
ಪ್ರತಿರೋಧವೇ ಇಲ್ಲದೆ ಇಸ್ರೇಲ್, ಸಿರಿಯಾದ ಅಳಿದುಳಿದ ಆಯುಧಗಳ ಮೇಲೆ ದಾಳಿ ಮಾಡಿತು. ಸುಮಾರು 7 ಲಕ್ಷ ದ್ರೂಜ್ ಜನರು, ಡಮಾಸ್ಕಸ್‌ನ ದಕ್ಷಿಣ ಪೂರ್ವ ಮತ್ತು ಇಸ್ರೇಲ್ ಆಕ್ರಮಿತ ಗೋಲನ್ ಪ್ರದೇಶಗಳಲ್ಲಿ ವಾಸಿಸುತ್ತಾರೆ (ದ್ರೂಜ್ ಶಿಯಾ ಇಸ್ಲಾಂನ ಒಂದು ಶಾಖೆಯಾದರೂ ಸಾಮಾನ್ಯವಾಗಿ ಮುಸ್ಲಿಂ ಎಂದು ಸ್ವೀಕಾರಾರ್ಹವಲ್ಲ). ಅಲ್-ಖೈದಾ ಅಧಿಕಾರಕ್ಕೆ ಬಂದ ನಂತರ ಇಸ್ರೇಲ್ ಗೋಲನ್ ಸಮೀಪದ ಹೆಚ್ಚು ಭೂಮಿ ವಶಪಡಿಸಿಕೊಂಡಿತು ಮತ್ತು ದ್ರೂಜ್‌ಗಳನ್ನು ತನ್ನ ಕಡೆಗೆ ತರಲು ಪ್ರಯತ್ನಿಸಿತು. ಅಸ್ಸಾದ್ ಸರ್ಕಾರ ಕುಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಾಡರ್‌ನ ದ್ರೂಜ್ ಜನರು ಇಸ್ರೇಲ್ ಆಳ್ವಿಕೆಯನ್ನು ಬಯಸುತ್ತಾರೆ ಎಂದು ಸುದ್ದಿ ಹಬ್ಬಿಸಿತು. ಆದರೆ ಇದು ಒಬ್ಬ ವ್ಯಕ್ತಿಯ ಅಭಿಪ್ರಾಯದ, ದೃಢೀಕರಣವಿಲ್ಲದ ವೀಡಿಯೋ ಆಧಾರಿತವಾಗಿತ್ತು. ಸ್ಥಳೀಯ ನಾಯಕರು ಡಿಸೆಂಬರ್ 13, 2024ರಂದು ಇದನ್ನು ಖಂಡಿಸಿ ಇಸ್ರೇಲ್ ಆಕ್ರಮಣವನ್ನು ವಿರೋಧಿಸಿದರು. ದ್ರೂಜ್ ನಾಯಕ ಶೇಖ್ ಹಿಕ್ಮತ್ ಅಲ್-ಹಿಜ್ರಿ ಸಿರಿಯಾವನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು.
ಕಳೆದ ವಾರ ಅಧಿಕಾರದಲ್ಲಿರುವ ಜಿಹಾದಿ ಸರ್ಕಾರ ಮತ್ತು ದ್ರೂಜ್ ಸೇನೆಯ ನಡುವೆ ಸಂಘರ್ಷ ಹೆಚ್ಚಿತು, ಎರಡೂ ಕಡೆ ನಷ್ಟವಾಯಿತು. ಇಸ್ರೇಲ್ ಸೇನೆ ಸಿರಿಯಾದ ಭಾರೀ ಉಪಕರಣಗಳ ಮೇಲೆ ದಾಳಿ ಮಾಡಿತು. ಇದು ದ್ರೂಜ್ ಮತ್ತು ಜಿಹಾದಿಗಳ ನಡುವೆ ಇಸ್ರೇಲ್ ದಾಳಿಯಿಂದ ಉಂಟಾದ ಸಂಘರ್ಷವೆಂದು ಭಾವಿಸಲಾಗಿದೆ. ಇದರಿಂದ ಸಿರಿಯಾದಲ್ಲಿ ಹೆಚ್ಚು ಭೂಮಿಯನ್ನು ಆಕ್ರಮಿಸಿಕೊಳ್ಳುವ ಮತ್ತು ಲೆಬನಾನ್ ವಶಪಡಿಸಿಕೊಳ್ಳುವ ಇಸ್ನೇಲ್‌ನ ಯೋಜನೆಯಾಗಿದೆ.
ಈ ನಡುವೆ ಇಸ್ರೇಲ್ ರಕ್ಷಣಾ ಸಚಿವ, “ಡಮಾಸ್ಕಸ್ ಮೇಲಿನ ಶಾಂತಿಯುತ ಮಾತುಕತೆಗಳು ಮುಗಿದಿವೆ, ಈಗ ದಾಳಿಗಳು ಆರಂಭವಾಗುತ್ತವೆ. ದ್ರೂಜ್‌ಗಳ ಮೇಲೆ ದಾಳಿ ನಿಲ್ಲುವವರಿಗೂ ನಾವು ದಾಳಿ ನಡೆಸುತ್ತೇವೆ. ದ್ರೂಜ್ ಸಹೋದರರೇ ಇಸ್ರೇಲ್ ನಿಮ್ಮೊಂದಿಗಿದೆ. ನಿಮ್ಮ ಸಿರಿಯಾದ ಸಹೋದರರನ್ನು ಸಂರಕ್ಷಿಸಲು ಇಸ್ರೇಲ್ ರಕ್ಷಣಾ ಸೇನೆಯ ಮೇಲೆ ನಂಬಿಕೆ ಇಡಿ” ಎಂದು ಹೇಳಿದ್ದಾರೆ. ಇಸ್ರೇಲ್ ವಾಯುಪಡೆ ಸಿರಿಯಾದ ರಕ್ಷಣಾ ಸಚಿವಾಲಯ, ರಾಷ್ಟ್ರಪತಿ ಅರಮನೆಯ ಸಮೀಪ ಮತ್ತು ಡಮಾಸ್ಕಸ್‌ನ ಮಧ್ಯಭಾಗದ ಉಮಯ್ಯದ ಚೌಕದ ಮೇಲೆ ಬಾಂಬ್ ದಾಳಿ ನಡೆಸಿದೆ.
ಈ ದಾಳಿಗಳು ಇಸ್ರೇಲ್ ಭದ್ರತಾ ಇಲಾಖೆಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಇದು ನೆತನ್ಯಾಹು, ಕಾಟ್ಜ್, ಲಿಕುದ್, ಬೆನ್ ಗ್ವಿರ್, ಸ್ಮೋಟ್ರಿಚ್‌ನ ಅಥವಾ ಒಟ್ಟಾರೆಯಾಗಿ ಹೇಳುವುದಾದರೆ ಇಸ್ರೇಲಿನ ಶಾಶ್ವತ ಯುದ್ಧದಾಹದ ಭಾಗವಾಗಿದೆ. ಮತ್ತು ‘ಗ್ರೇಟರ್ ಇಸ್ರೇಲ್’ ಎಂಬ ದುರಾಲೋಚನೆಯ ಭಾಗವೂ ಆಗಿದೆ.
ಇಸ್ರೇಲ್ ಸರ್ಕಾರದ ನಿಜವಾದ ಗುರಿ ದ್ರೂಜ್‌ಗಳನ್ನು ಸಂರಕ್ಷಿಸುವುದು ಅಥವಾ ಸಿರಿಯಾದ ಜಿಹಾದಿ ಸರ್ಕಾರವನ್ನು ಉರುಳಿಸುವುದಲ್ಲ. ಬದಲಿಗೆ ಜಯೋನಿಸ್ಟ್ ವಿಚಾರಧಾರೆಯನ್ನು ವಿಸ್ತರಿಸುವುದಾಗಿದೆ. ಹಾಗೂ ಟರ್ಕಿಯೊಂದಿಗೆ ಯುದ್ಧಕ್ಕೆ ತಯಾರಾಗುವುದಾಗಿದೆ.
ಇದಕ್ಕೆ ಪೂರಕವಾಗಿ, ಅರಬ್ ದೇಶಗಳಲ್ಲಿ ಬ್ಯಾಲೆನ್ಸ್ ಒಫ್ ಪವರ್ ಬದಲಾಗುತ್ತಿದೆ. ಒಂದು ಕಡೆಯಿಂದ ಇರಾನ್ ಶಕ್ತಿ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದು ಕಡೆಯಿಂದ ಇಸ್ರೇಲ್ ಮತ್ತು ಟರ್ಕಿ ಗೇಮ್ ಪ್ಲಾನ್‌ಗಳು ಮತ್ತು ಶಕ್ತಿ ಪ್ರದರ್ಶನಗಳು ಮುನ್ನೆಲೆಗೆ ಬರುತ್ತಿವೆ. ಟೆಲ್ ಅವೀವ್ ಮತ್ತು ಅಂಕಾರಾ ನಡುವೆ ತೀವ್ರ ಸ್ಪರ್ಧೆ, ಮುಂದಿನ ದಿನಗಳಲ್ಲಿ ಸಿರಿಯಾದಲ್ಲಿ ನಡೆಯಬಹುದಾದ ಪರೋಕ್ಷ ಸಂಘರ್ಷಗಳ ಮುನ್ಸೂಚನೆ ನೀಡುತ್ತಿವೆ. ಪರೋಕ್ಷ ಯುದ್ಧಗಳು ನಡೆಯುವುದೇ ಹೀಗೆಯೇ.
ಒಂದು ರೀತಿ ಭಾರತ ಮತ್ತು ಪಾಕಿಸ್ತಾನದ ಪರೋಕ್ಷ ಯುದ್ಧಗಳು ಹೇಗೆ ಅಫ್ಘಾನಿಸ್ತಾನದಲ್ಲಿ, ಬಲೂಚಿಸ್ತಾನದಲ್ಲಿ ಮತ್ತು ಕಾಶ್ಮೀರದಲ್ಲಿ ನಡೆಯುತ್ತೇವೆಯೋ ಹಾಗೆ. ಇಸ್ರೇಲ್ ತನ್ನ ಭದ್ರತೆಯನ್ನು ಕೇವಲ ತನ್ನ ಶಕ್ತಿಯುತ ಸೇನೆಯಿಂದಲೇ ಸೃಷ್ಟಿಸಲು, ಗಾಜಾ ಮಾರಣಹೋಮ, ಲೆಬನಾನ್ ಮತ್ತು ಇರಾನ್ ಮೇಲಿನ ದಾಳಿಗಳ ಮೂಲಕ ತೋರುತ್ತಿದೆ. ಅದೇ ಪ್ರದೇಶಗಳಲ್ಲಿ ಟರ್ಕಿ ಮತ್ತೆ ತನ್ನ ಪ್ರಭಾವವನ್ನು ಹೆಚ್ಚಿಕೊಳ್ಳುತ್ತಿರುವುದರಿಂದ, ಇಸ್ರೇಲ್-ಟರ್ಕಿಗಳ ನಡುವೆ ಈ ಮುಸುಕಿನ ಯುದ್ಧವೂ ನಡೆಯುತ್ತಿದೆ.

ಟರ್ಕಿ ವಿದೇಶಾಂಗ ಸಚಿವಾಲಯವು, “ಡಮಾಸ್ಕಸ್‌ನ ಕೇಂದ್ರದ ಮೇಲೆ ಇಸ್ರೇಲ್ ದಾಳಿಗಳು ಸಿರಿಯಾದ ಶಾಂತಿ, ಸ್ಥಿರತೆ ಮತ್ತು ಭದ್ರತೆಯ ಪ್ರಯತ್ನಗಳನ್ನು ಧ್ವಂಸ ಮಾಡುವ ಪ್ರಯತ್ನವಾಗಿದೆ. ಈ ಅವಕಾಶವನ್ನು ಬೆಂಬಲಿಸುವ ಎಲ್ಲಾ ಸಂಬಂಧಿಗಳು ಸಿರಿಯಾ ಸರ್ಕಾರದ ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ಕೊಡುಗೆ ನೀಡಬೇಕು” ಎಂದಿದೆ. ಇಂದಿನ ಸಿರಿಯಾ ಟರ್ಕಿಯ ಪರೋಕ್ಷ ರಾಜ್ಯವಾಗಿದ್ದು, ಅಲ್-ಜುಲಾನಿ ಟರ್ಕಿಯ ನಿಯಂತ್ರಣದಲ್ಲಿ ಆಡಳಿತ ನಡೆಸುತ್ತಿದ್ದಾರೆ.
ಒಟ್ಟೋಮನ್ ಸಾಮ್ರಾಜ್ಯ ಮರುಕಳಿಸುವ ಕನಸು ಕಾಣುತ್ತಿರುವ ಟರ್ಕಿಯ ಸುಲ್ತಾನ್ ಎರ್ಡೋಗಾನ್, ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರುದ್ಧ ಮಾತನಾಡಿದರೂ, ತೈಲ ಮತ್ತು ಇತರ ಸರಕುಗಳನ್ನು ಒದಗಿಸುವ ಮೂಲಕ ಇಸ್ರೇಲ್ ನಡೆಸುತ್ತಿರುವ ಮಾರಣಹೋಮದ ಭಾಗವೇ ಆಗಿದ್ದಾರೆ. ಇವೆಲ್ಲದರ ಲಾಭ ಪಡೆಯಬಹುದೆಂದು ಭಾವಿಸಿದ್ದ ಎರ್ಡೋಗಾನ್, ಲೆವೆಂಟ್‌ನಲ್ಲಿ ಟರ್ಕಿ ಮತ್ತು ಇಸ್ರೇಲ್ ಯೋಜಿಸುತ್ತಿರುವ ವಿಸ್ತರಣಾವಾದಿ ನೀತಿಗಳಿಂದ ಉಂಟಾಗುವ ಸ್ಪರ್ಧೆಯನ್ನು ಮರೆತಿದ್ದರು ಅನಿಸುತ್ತಿದೆ. ಈಗ ಡಮಾಸ್ಕಸ್ ಮೇಲಿನ ದಾಳಿಗಳು ಅವರ ಲೆಕ್ಕಾಚಾರವನ್ನು ಬದಲಾಯಿಸಬಹುದು.




