ಮಾಜಿ ರೈಲ್ವೆ ಸಚಿವ, ಈ ಹಿಂದೆ ತೃಣಮೂಲ ಕಾಂಗ್ರೆಸ್(ಟಿಎಂಸಿ)ಯ ಎರಡನೇ ಉನ್ನತ ನಾಯಕ ಎನಿಸಿಕೊಂಡಿದ್ದ, ಈ ಹಿಂದೆ ಪಶ್ಚಿಮ ಬಂಗಾಳದ ‘ರಾಜಕೀಯ ಚಾಣಕ್ಯ’ ಎಂದೇ ಖ್ಯಾತಿ ಪಡೆದಿದ್ದ ಮುಕುಲ್ ರಾಯ್ ನಿಧನರಾಗಿದ್ದಾರೆ.
71 ವರ್ಷದ ಮುಕುಲ್ ರಾಯ್ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳಗಿನ ಜಾವ 1.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿದ್ದೀರಾ? ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!
“ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಸುಮಾರು 1.30ರ ಸುಮಾರಿಗೆ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿದೆ. ವೈದ್ಯರು ಎಷ್ಟು ಪ್ರಯತ್ನ ಪಟ್ಟರೂ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ” ಎಂದು ಮುಕುಲ್ ಮಗ ಸುಭ್ರಂಗ್ಶು ರಾಯ್ ಹೇಳಿದ್ದಾರೆ.
ಮುಕುಲ್ ರಾಯ್ ಮೂತ್ರಪಿಂಡದ ಸಮಸ್ಯೆಗಳು ಸೇರಿದಂತೆ ಬಹು ದೈಹಿಕ ಸಮಸ್ಯೆಗಳಿಂದಾಗಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಕಾಲಕಾಲಕ್ಕೆ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ರಾಯ್ ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಮಮತಾ ಬ್ಯಾನರ್ಜಿ ಅವರ ಆಪ್ತರು ಆಗಿದ್ದ ರಾಯ್, ಅದಕ್ಕೂ ಮೊದಲು ಕಾಂಗ್ರೆಸ್ ಸದಸ್ಯರಾಗಿದ್ದರು.
ಇದನ್ನು ಓದಿದ್ದೀರಾ? ಬಿಜೆಪಿ ವಾಷಿಂಗ್ ಮಷೀನ್‌ನ ಈ ಸ್ವಾರಸ್ಯಕರ ಕಥೆಗಳನ್ನು ಕೇಳಿದ್ದೀರಾ?
2017-2021ರ ಅವಧಿಯಲ್ಲಿ ಬಿಜೆಪಿಗೆ ಸೇರಿದ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳದಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2021ರ ಚುನಾವಣೆಯ ನಂತರ ಬಿಜೆಪಿ ತೊರೆದು ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಮರಳಿದ್ದರು.
ಎರಡನೇ ಯುಪಿಎ ಸರ್ಕಾರದ ಅವಧಿಯಲ್ಲಿ ಹಡಗು ಸಚಿವಾಲಯ ಮತ್ತು ನಂತರ ರೈಲ್ವೆ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮುಕುಲ್ 2021ರಲ್ಲಿ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಬಳಿಕ ಮತ್ತೆ ಟಿಎಂಸಿಗೆ ಸೇರಿದರು. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಸದ್ಯ ದೀರ್ಘಕಾಲದ ಅನಾರೋಗ್ಯದಿಂದ ರಾಜಕೀಯದಿಂದ ದೂರವಿದ್ದರು.





