ದೆಹಲಿ ಗಲಭೆ ಪ್ರಕರಣದಲ್ಲಿ ವಿದ್ಯಾರ್ಥಿ ನಾಯಕರು, ಸಾಮಾಜಿಕ ಹೋರಾಟಗಾರರು ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್ ಮತ್ತು ಸುಧಾಂಶು ಧುಲಿಯಾ ಟೀಕಿಸಿದ್ದಾರೆ. ಈ ಆದೇಶದಿಂದ “ದುಃಖವಾಗಿದೆ” ಎಂದು ನ್ಯಾಯಮೂರ್ತಿ ಲೋಕೂರ್ ಹೇಳಿದರೆ, ಈ ನಿರ್ಧಾರ “ನಿರಾಶಾದಾಯಕ” ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ. “ಆದೇಶ ಸಂಪೂರ್ಣವಾಗಿ ತಪ್ಪಾಗಿದೆ” ಎಂದು ಮಾಜಿ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಉಮರ್ ಖಾಲಿದ್ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗಿಯಾಗಿ ಸುಪ್ರೀಂ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ವಕೀಲ ದುಷ್ಯಂತ್ ದಾವೆ ಕೂಡ ಚರ್ಚೆಯಲ್ಲಿ ಭಾಗಿಯಾಗಿದ್ದರು.
ಇದನ್ನು ಓದಿದ್ದೀರಾ? ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ಗೆ ಜಾಮೀನು ನಕಾರ: ಸುಪ್ರೀಂ ಕೋರ್ಟ್ ವಕೀಲರ ತಕರಾರು
ವಿಚಾರಣೆಯಲ್ಲಿ ವಿಳಂಬ ಮತ್ತು ಮೇಲ್ಮನವಿ ಸಲ್ಲಿಸಿದವರು ದೀರ್ಘಾವಧಿಯಿಂದ ಜೈಲುವಾಸ ಅನುಭವಿಸುತ್ತಿರುವುದನ್ನು ಪರಿಗಣಿಸದಿರುವ ಈ ಆದೇಶ ತಪ್ಪಾಗಿದೆ ಎಂದು ನ್ಯಾಯಮೂರ್ತಿ ಲೋಕೂರ್ ಹೇಳಿದರು. ಖಾಲಿದ್ ಮತ್ತು ಇಮಾಮ್ ಅವರನ್ನು 2020ರಲ್ಲಿ ಬಂಧಿಸಲಾಗಿದ್ದರೂ, ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 207ರ ಅಡಿಯಲ್ಲಿ ಅವರಿಗೆ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮೂರು ವರ್ಷಗಳ ನಂತರ 2023ರಲ್ಲಿ ನೀಡಿರುವುದನ್ನೂ ಪ್ರಸ್ತಾಪಿಸಿದ್ದಾರೆ.
“ನಾನು ಆದೇಶದಿಂದ ಸ್ವಲ್ಪವೂ ಸಂತೋಷವಾಗಿಲ್ಲ. ವಿಳಂಬದ ವಿಚಾರದಲ್ಲಿ ನೀಡಿದ ಆದೇಶ ಸಂಪೂರ್ಣವಾಗಿ ತಪ್ಪಾಗಿದೆ. ದಾಖಲೆಗಳ ಹಸ್ತಾಂತರದಲ್ಲಿ ಮೂರು ವರ್ಷಗಳ ವಿಳಂಬಕ್ಕೆ ಮೇಲ್ಮನವಿ ಸಲ್ಲಿಸಿದವರನ್ನು ಹೇಗೆ ಹೊಣೆಗಾರರನ್ನಾಗಿ ಮಾಡಬಹುದು” ಎಂದು ನ್ಯಾಯಮೂರ್ತಿ ಲೋಕೂರ್ ಆಶ್ಚರ್ಯ ವ್ಯಕ್ತಪಡಿಸಿದರು.
ಹಾಗೆಯೇ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ಭಯೋತ್ಪಾದನೆ ಪ್ರಕರಣ ದಾಖಲಿಸಿರುವುದನ್ನು ನ್ಯಾಯಮೂರ್ತಿ ಲೋಕೂರ್ ಪ್ರಶ್ನಿಸಿದರು. “ಅವರು ಏನು ಮಾಡಿದರು? ಕೆಲವು ಸಭೆಗಳಲ್ಲಿ ಭಾಗವಹಿಸಿದರು. ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿದರು. ಭಾಷಣಗಳನ್ನು ಮಾಡಿದರು. ಕರಪತ್ರಗಳನ್ನು ಹಂಚಿದರು. ಇದು ಹೇಗೆ ಭಯೋತ್ಪಾದಕ ಚಟುವಟಿಕೆಯಾಗುತ್ತದೆ” ಎಂದು ನ್ಯಾಯಮೂರ್ತಿ ಲೋಕೂರ್ ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿ ಲೋಕೂರ್ ಅವರ ಅಭಿಪ್ರಾಯಗಳಿಗೆ ಪೂರಕವಾಗಿ, ನ್ಯಾಯಮೂರ್ತಿ ಧುಲಿಯಾ ಈ ತೀರ್ಪು “ಈ ದೇಶದ ನಾಗರಿಕನಾಗಿ ನನಗೆ ನಿರಾಶಾದಾಯಕವಾಗಿದೆ” ಎಂದು ಹೇಳಿದರು. ಹಾಗೆಯೇ ಯೂನಿಯನ್ ಆಫ್ ಇಂಡಿಯಾ ವರ್ಸಸ್ ಕೆಎ ನಜೀಬ್ ಪ್ರಕರಣವನ್ನು ಉಲ್ಲೇಖಿಸಿದರು. ಯುಎಪಿಎ ಸೆಕ್ಷನ್ 43 ಡಿ (5) ರ ಕಠಿಣತೆಯ ಹೊರತಾಗಿಯೂ, ದೀರ್ಘ ಸೆರೆವಾಸ ಮತ್ತು ವಿಚಾರಣೆಯನ್ನು ಮೊದಲೇ ಪೂರ್ಣಗೊಳಿಸುವ ಸಾಧ್ಯತೆಯಿಲ್ಲದ ಕಾರಣವು ಜಾಮೀನು ನೀಡಲು ಆಧಾರವಾಗಿದೆ ಎಂದು ನಜೀಬ್ ಅಭಿಪ್ರಾಯಪಟ್ಟಿದ್ದರು ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು.
ಉಮರ್ ಖಾಲಿದ್ ಪ್ರಕರಣದಲ್ಲಿ ಕೋರ್ಟ್ ದೀರ್ಘ ಸೆರೆವಾಸದ ಅಂಶವನ್ನು ಮಾತ್ರ ಪರಿಗಣಿಸಿದೆ. ಆದರೆ ವಿಚಾರಣೆಯನ್ನು ಪೂರ್ಣಗೊಳಿಸುವ ಸಾಧ್ಯತೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಜೀಬ್ ಪ್ರಕರಣದಲ್ಲಿ, 200 ಸಾಕ್ಷಿಗಳನ್ನು ವಿಚಾರಣೆ ಮಾಡಬೇಕಾಗಿತ್ತು. ಆದರೆ ಈ ಪ್ರಕರಣದಲ್ಲಿ, 900 ಸಾಕ್ಷಿಗಳನ್ನು ವಿಚಾರಣೆ ಮಾಡಬೇಕಾಗಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವುದು ಸಂಪೂರ್ಣವಾಗಿ ಅಸಾಧ್ಯ” ಎಂದರು. ಇದಕ್ಕೆ ಧ್ವನಿಗೂಡಿಸಿದ ಸಿಬಲ್ ಆರೋಪಪಟ್ಟಿ 3000 ಪುಟಗಳನ್ನು ಹೊಂದಿದ್ದು, ದಾಖಲೆಗಳು 30,000 ಪುಟಗಳನ್ನು ಮೀರಿವೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಇದೆಂಥಾ ನ್ಯಾಯ! ಅತ್ಯಾಚಾರಿಗಳಿಗೆ ಬೇಲು, ಉಮರ್‌ಗೆ ಜೈಲು
ಕೆ.ಎ. ನಜೀಬ್ ಎಂಬುವವರು 2010ರಲ್ಲಿ ಕೇರಳದ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಹಲವು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ನಜೀಬ್ ಅವರನ್ನು 2015ರಲ್ಲಿ ಬಂಧನ ಮಾಡಲಾಗಿತ್ತು. ವಿಚಾರಣೆಯು ದೀರ್ಘಕಾಲದವರೆಗೆ ವಿಳಂಬವಾಗುತ್ತಿರುವುದನ್ನು ಗಮನಿಸಿದ ಕೇರಳ ಹೈಕೋರ್ಟ್ ನಜೀಬ್‌ಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು (Union of India) ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು.
ಸುಪ್ರೀಂ ಕೋರ್ಟ್ ಹೈಕೋರ್ಟ್ ನೀಡಿದ್ದ ಜಾಮೀನನ್ನು ಎತ್ತಿ ಹಿಡಿದಿತ್ತು. ಆರೋಪಿಯ ವಿಚಾರಣೆಯು ಅತಿ ಹೆಚ್ಚು ವಿಳಂಬವಾದರೆ, ಅದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿರುವ ‘ತ್ವರಿತ ವಿಚಾರಣೆಯ ಹಕ್ಕಿನ’ ಉಲ್ಲಂಘನೆಯಾಗುತ್ತದೆ ಎಂದು ಹೇಳಿತ್ತು. ಹಾಗೆಯೇ UAPA ಕಾಯ್ದೆಯ 43D(5) ಸೆಕ್ಷನ್ ಅಡಿಯಲ್ಲಿ ಜಾಮೀನು ಪಡೆಯುವುದು ಕಷ್ಟವಾಗಿದ್ದರೂ, ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಸಾಂವಿಧಾನಿಕ ನ್ಯಾಯಾಲಯಗಳು ಜಾಮೀನು ನೀಡುವ ಅಧಿಕಾರವನ್ನು ಹೊಂದಿವೆ ಎಂದಿತ್ತು. ಈ ಆದೇಶವನ್ನು ನ್ಯಾಯಮೂರ್ತಿ ಧುಲಿಯಾ ಉಲ್ಲೇಖಿಸಿದ್ದಾರೆ.
ಹಾಗೆಯೇ ಹೊಸ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಇಮಾಮ್ ಮತ್ತು ಖಾಲಿದ್ ಮೇಲೆ ಒಂದು ವರ್ಷದ ನಿರ್ಬಂಧ ಹೇರಿದ್ದರ ಆಧಾರವನ್ನು ನ್ಯಾಯಮೂರ್ತಿ ಧುಲಿಯಾ ಪ್ರಶ್ನಿಸಿದರು. “ಇದು ಎಲ್ಲಿಂದ ಬಂತು?” ಎಂದು ಕೇಳಿದ್ದಾರೆ.
“ನ್ಯಾಯಾಧೀಶರು ಮೊದಲು ನಿರ್ಧಾರ ತೆಗೆದುಕೊಂಡಿದ್ದರು. ನಂತರ ಕಾರಣ ಹುಡುಕುವ ಪ್ರಯತ್ನ ಮಾಡಿದ್ದರು” ಎಂದು ಹಿರಿಯ ವಕೀಲ ದುಷ್ಯಂತ್ ದಾವೆ ಆರೋಪಿಸಿದ್ದಾರೆ. “ಸುಪ್ರೀಂ ಕೋರ್ಟ್ ನಿರಂತರವಾಗಿ ಅಸಮಂಜಸವಾದ ಆದೇಶ ನೀಡಿದೆ. ಮೊದಲಾಗಿ ಈ ಇಬ್ಬರು ಯುವಕರ ಬಂಧನ ಮಾಡಬಾರದಿತ್ತು. ಅವರು ಯಾವುದೇ ಬಾಂಬ್‌ಗಳು, ಸ್ಫೋಟಕಗಳನ್ನು ಬಳಸಿಲ್ಲ. ಹಿಂಸಾಚಾರ ಅಥವಾ ಸಾವಿಗೆ ಕಾರಣವಾಗಿಲ್ಲ. ಹಾಗಾದರೆ ಈ ಪ್ರಕರಣ ಯಾವ ವಿಷಯದಲ್ಲಿ” ಎಂದು ಪ್ರಶ್ನಿಸಿದರು.





